ಸೀಳಿದ ಬಿಂದಿಗೆ!

January 26, 2009

pots

ಸೀಳಿದ ಬಿಂದಿಗೆ

ಸುಂದರ ಹಸಿರು ಬೆಟ್ಟಗಳು. ರಸ್ತೆಯ ಅಕ್ಕ ಪಕ್ಕದಲ್ಲಿ ನಳನಳಿಸುವ ಗಿಡ ಮರ ಬಳ್ಳಿಗಳು. ಎಲ್ಲಿಂದಲೋ ಕೇಳಿ ಬರುವ ಪಕ್ಷಿಗಳ ಚಿಲಿಪಿಲಿ ನಿನಾದ. ಚೀನಾದ ಅಜ್ಜಿ ಬಿದಿರು ಕೋಲಿನ ಎರಡು ಕೊನೆಗಳಿಗೆ ಹಗ್ಗ ಕಟ್ಟಿ, ಹಗ್ಗಕ್ಕೆ ಮಣ್ಣಿನ ಎರಡು ಹೊಸ ಬಿಂದಿಗೆಗಳನ್ನು ಕಟ್ಟಿಕೊಂಡು, ಬಿದಿರು ಕೋಲನ್ನು ಹೆಗಲ ಮೇಲೆ ಇಟ್ಟುಕೊಂಡು, ನೀರಿಗೆ ಹೋಗುತ್ತಿದ್ದಳು.
ಪ್ರಕೃತಿ ಮಡಿಲಿನಲ್ಲಿ ಪ್ರಶಾಂತವಾಗಿರುವ ತನ್ನ ಮನೆಯಿಂದ ಆ ಅಜ್ಜಿ ಪ್ರತಿ ದಿನವೂ ಹೀಗೆ ಕೋಲಿಗೆ ನೇತುಬಿದ್ದ ಮಡಿಕೆಗಳನ್ನು ಹೊತ್ತುಕೊಂಡು ಹತ್ತಿರದ ನದಿಗೆ ನೀರು ತರಲು ಹೋಗುತ್ತಿದ್ದುದು ತಪಸ್ಸಿನಂತಿತ್ತು.
ಅದೊಂದು ದಿನ ಅಜ್ಜಿ ಎರಡು ಹೊಸ ಬಿಂದಿಗೆಗಳನ್ನು ತಂದಳು. ಜುಳು ಜುಳು ಹರಿಯುವ ನದಿಗೆ ಅತ್ಯಂತ ಸಂಭ್ರಮದಿಂದ ಇಳಿದು ಹೊಸ ಬಿಂದಿಗೆಗಳನ್ನು ನೀರು ತುಂಬಲು ಅಜ್ಜಿ ಮುಂದಾದಳು. ಆದರೆ, ಆಶ್ಚರ್ಯ! ಆಗಲೇ ಒಂದು ಬಿಂದಿಗೆ ಸ್ವಲ್ಪ ಸೀಳಿ ಬಿಟ್ಟಿದೆ. ಅದನ್ನು ಆಚೆ ಈಚೆ ಹೊರಳಿಸಿ, ನಿರ್ವಿಕಾರ ಭಾವನೆಯಿಂದ ನೋಡಿದ ಅಜ್ಜಿ ಏನೂ ಲೊಚಗುಡಲಿಲ್ಲ. ಬಿಂದಿಗೆಗಳನ್ನು ತುಂಬುವಾಗ ಡುಬು ಡುಬು ನೀರಿನ ಸದ್ದು ಕೇಳಿ ಮತ್ತಷ್ಟು ಉಲ್ಲಸಿತಳಾಗಿ ಎರಡೂ ಬಿಂದಿಗೆಗಳನ್ನು ತುಂಬಿಕೊಂಡು ತನ್ನ ಕೋಲಿಗೆ ಅವುಗಳನ್ನು ಕಟ್ಟಿಕೊಂಡು ಎಡ-ಬಲಕ್ಕೆ ಬರುವಂತೆ ಹೆಗಲ ಮೇಲಿಟ್ಟುಕೊಂಡು ಹೊರಟಳು. ಸ್ವಲ್ಪ ಸೀಳಿದ್ದ ಬಿಂದಿಗೆಯನ್ನು ತನ್ನ ಎಡಡೆಗೆ ಬರುವಂತೆ ನೋಡಿಕೊಂಡಿದ್ದಳು.
ನದಿಯಿಂದ ಮನೆಗೆ ಬರುವಷ್ಟರಲ್ಲಿ ಸೀಳಿದ್ದ ಬಿಂದಿಗೆಯಿಂದ ಅರ್ಧಕ್ಕರ್ಧ ನೀರು ಸೋರಿ ಹೋಗಿತ್ತು. ಆದರೆ, ಇನ್ನೊಂದು ಬಿಂದಿಗೆಯ ತುಂಬ ಒಂದು ಹನಿ ನೀರು ಬಿದ್ದಿರಲಿಲ್ಲ.
ಅಜ್ಜಿ ಮತ್ತು ಈ ಬಿಂದಿಗೆಗಳ ಸಹವಾಸ ಹೀಗೆಯೇ ಮುಂದುವರಿಯಿತು. ಅಜ್ಜಿ ಎಂದೂ ಸೀಳಿದ್ದ ಬಿಂದಿಗೆಯನ್ನು ಕಡಿಮೆ ಎಂದು ಭಾವಿಸಲಿಲ್ಲ. ತನ್ನ ಬಿದಿರು ಕೋಲಿನ ತಕ್ಕಡಿಯಲ್ಲಿ ಎರಡೂ ಬಿಂದಿಗೆಗಳಿಗೂ ಸಮಾನ ಅವಕಾಶ ಕೊಟ್ಟಿದ್ದಳು. ಸೋರಿ ಹೋಗುವ ಕೊಡ ಅರ್ಧ ಮಾತ್ರ ನೀರನ್ನು ಕೊಡುತ್ತದೆ ಎಂದು ಅರ್ಧ ನೀರನಷ್ಟೇ ಅದರಲ್ಲಿ ತುಂಬುತ್ತಿರಲಿಲ್ಲ. ಪೂರ್ತಿ ನೀರನ್ನು ತುಂಬುತ್ತಿದ್ದಳು. ಸೋರಿದರೆ ಸೋರಲಿ- ಏನೀಗ? ಎಂಬಂಥ ಭಾವ ಅಜ್ಜಿಯದು.
ಆದರೆ, ಎರಡೂ ಬಿಂದಿಗೆಗಳ ನಡುವೆ ಮೇಲು ಕೀಳುತನ ಬೆಳೆಯಿತು. ಪೂರ್ತಿ ನೀರನ್ನು ತುಂಬಿಕೊಂಡು ಹೋಗುತ್ತಿದ್ದ ಬಿಂದಿಗೆ ಹೆಮ್ಮೆಯಿಂದ ಬೀಗುತ್ತಿತ್ತು. ಅರ್ಧ ಮಾತ್ರ ನೀರನ್ನು ಮನೆವರೆಗೆ ಕೊಂಡೊಯ್ಯುತ್ತಿದ್ದ ಬಿಂದಿಗೆ ಅವಮಾನದಿಂದ ಕುಗ್ಗುತ್ತಿತ್ತು. ಅದು ನಾಚಿಕೆಯಿಂದ ತಲೆ ತಗ್ಗಿಸಿಕೊಳ್ಳುತ್ತಿತ್ತು. ತಾನು ಇಡೀ ಕೊಡದ ತುಂಬ ನೀರನ್ನು ತರಲು ನಿರ್ಮಾಣಗೊಂಡಿದ್ದೇನೆ. ಆದರೆ, ಕೇವಲ ಅರ್ಧ ನೀರನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಇದು ನನಗೆ ಅವಮಾನ! ನನ್ನ ಕುಲಕ್ಕೆ ಅವಮಾನ! ಎಂದು ಆ ಸೀಳಿಹೋಗಿದ್ದ ಬಿಂದಿಗೆ ವೇದನೆ ಪಡುತ್ತಿತ್ತು.
ಅಂದು ಅಜ್ಜಿ ನೀರು ತರಲೆಂದು ಹೆಜ್ಜೆ ಇಡುತ್ತಿದ್ದಳು. ಪಕ್ಕದಲ್ಲಿ ಯಾರೋ ನಿಧಾನವಾಗಿ ಮಾತಾಡಿದ ಹಾಗಾಯಿತು. ಅಜ್ಜಿ ಅತ್ತಿತ್ತ ನೋಡಿದಳು. ಆದರೆ, ಯಾರೂ ಹತ್ತಿರದಲ್ಲಿ ಕಾಣಿಸಲಿಲ್ಲ. ಮತ್ತೆ ಧ್ವನಿ ಬಂದತ್ತ ನೋಡಿದಳು. ತನ್ನ ಎಡ ಪಕ್ಕದ ಬಿಂದಿಗೆ ಮಾತಾಡುತ್ತಿತ್ತು. ಅದು ನಿಧಾನಕ್ಕೆ ಹೇಳಿತು- ಅಜ್ಜಿ, ನಾನು ಸೀಳಿ ಹೋದ ಬಿಂದಿಗೆ. ನಾನು ತುಂಬ ನೀರನ್ನು ತೆಗೆದುಕೊಂಡು ಹೋಗಲು ಅಶಕ್ತ. ನನ್ನಿಂದ ನೀರಿನಲ್ಲಿ ಅರ್ಧದಷ್ಟು ಸೋರಿ ಹೋಗುತ್ತದೆ. ಇದು ನನಗೆ ಹಿಂಸೆ ಎನಿಸುತ್ತದೆ. ಆದರೂ ನೀನು ಯಾಕೆ ಛಲ ಬಿಡದ ತ್ರಿವಿಕ್ರಮನಂತೆ ನನ್ನನ್ನೇ ಹೊತ್ತುಕೊಂಡು ಹೋಗುತ್ತೀಯಾ?
ಅಜ್ಜಿ ನಸು ನಕ್ಕಳು. ಬಿಂದಿಗೆಗೆ ಇನ್ನೂ ಅವಮಾನವಾದಂತಾಯಿತು. ಅಜ್ಜಿ ಬಿಂದಿಗೆಗಳನ್ನು ಕೆಳಗೆ ಇಳಿಸಿ, ಸೀಳಿ ಹೋದ ಬಿಂದಿಗೆಯತ್ತ ನೋಡುತ್ತ ’ದಾರಿಯಲ್ಲಿ ನೋಡಿದೆಯಾ? ನೀನಿರುವ ಕಡೆಯಲ್ಲಿ ಎಷ್ಟೊಂದು ಹೂವುಗಳು ಬೆಳೆದಿವೆಯಂತ? ಇನ್ನೊಂದು ಕಡೆಯ ರಸ್ತೆ ಬದಿಯಲ್ಲಿ ನೋಡು ಅಲ್ಲಿ ಹೂವುಗಳೇ ಬೆಳೆದಿಲ್ಲ.’
ಸೀಳು ಬಿಂದಿಗೆ ಮೂಕವಿಸ್ಮಿತವಾಯಿತು. ಹೌದಲ್ಲ! ಎಂದುಕೊಂಡಿತು. ಅಜ್ಜಿ ಮಾತು ಮುಂದುವರಿಸಿದಳು. ’ನನಗೆ ಮೊದಲ ದಿನವೇ ನೀನು ಸೀಳು ಬಿಂದಿಗೆ ಎಂಬುದು ಗೊತ್ತಾಯಿತು. ಆದ್ದರಿಂದ ಮರು ದಿನದಿಂದಲೇ ನೀನಿರುವ ಕಡೆ ಹೂವಿನ ಸಸಿಗಳನ್ನು ನೆಡಲು ಪ್ರಾರಂಭಿಸಿದೆ. ಪ್ರತಿ ದಿನ ನಾನು ನಿನ್ನನ್ನು ಹೊತ್ತುಕೊಂಡು ಹೋಗುವಾಗ ನಿನ್ನಿಂದ ನೀರು ಸೋರಿ ಆ ಗಿಡಗಳಿಗೆ ಬಿದ್ದಿದೆ. ಅವುಗಳೆಲ್ಲ ನೀನು ಪ್ರತಿ ದಿನವೂ ಸುರಿಸುವ ನೀರಿಗಾಗಿಯೇ ಭಗೀರಥನಂತೆ ಕಾಯುತ್ತಿದ್ದವು. ನೀನುಣಿಸಿದ ನೀರನ್ನುಂಡು ಅವುಗಳೆಲ್ಲ ಎಷ್ಟೊಂದು ಸೊಗಸಾಗಿ ಬೆಳೆದಿವೆ ನೋಡು. ಅವುಗಳಲ್ಲಿ ಈಗ ಸಾಕಷ್ಟು ಹೂವುಗಳು ಬೆಳೆದಿವೆ. ಆ ಸುಂದರ, ಸುಗಂಧಭರಿತ ಹೂವುಗಳನ್ನು ನಾನು ದಿನವೂ ತೆಗೆದುಕೊಂಡು ಹೋಗಿ ಮನೆಯಲ್ಲಿ ಅಲಂಕರಿಸುತ್ತೇನೆ. ಇಷ್ಟು ದಿನಗಳಿಂದಲೂ ಅವು ನನಗೆ ಅಪಾರ ಸಂತಸ ನೀಡುತ್ತಿವೆ. ನೀನು ಕೂಡ ಉತ್ತಮ ಕೊಡವೇ ಆಗಿದ್ದು, ಒಂದಿನಿತೂ ನೀರನ್ನು ಚೆಲ್ಲದೇ ಹೋಗಿದ್ದರೆ, ಇಲ್ಲಿ ಈ ಹೂವುಗಳೇ ತಲೆ ಎತ್ತುತ್ತಿರಲಿಲ್ಲ. ನಾನು ಅವುಗಳನ್ನು ಪ್ರತಿದಿನವೂ ಮನೆತುಂಬ ಅಲಂಕರಿಸುತ್ತಲೂ ಇಲ್ಲ’.

’ಪ್ರತಿಯೊಬ್ಬರಿಗೂ ಅವರದೇ ಆದ ಕುಂದು ಕೊರತೆ ಇರುತ್ತದೆ. ನಿನಗೆ ಅದು ಆ ಸೀಳಿನ ರೂಪದಲ್ಲಿ ಇದೆ. ಇನ್ನೂ ಅನೇಕರಿಗೆ ಬೇರೆ ಬೇರೆ ರೂಪದಲ್ಲಿರುತ್ತದೆ. ಇಂತಹ ಸೀಳು, ಅಂತಹ ಕೊರತೆಗಳೇ ನಮ್ಮನ್ನು ಅತ್ಯಂತ ವಿಶಿಷ್ಟವನ್ನಾಗಿ ಮಾಡುತ್ತವೆ; ಅವುಗಳೇ ನಮಗೆ ಸಾಕಷ್ಟು ಪುರಸ್ಕಾರಗಳನ್ನು ಮರ್ಯಾದೆಯನ್ನು ತಂದುಕೊಡುತ್ತವೆ ಎಂಬುದನ್ನು ಮರೆಯಬೇಡ’

ಅಜ್ಜಿಯ ಮಾತಿನಿಂದ ಆನಂದ ತುಂದಿಲವಾದಂತೆ ಕಂಡು ಬಂದ ಬಿಂದಿಗೆಯು ಅಜ್ಜಿಯನ್ನು ಆದರತೆಯಿಂದ ನೋಡುತ್ತಿತ್ತು. ಅಜ್ಜಿ ಮಾತು ಮುಂದುವರಿಸಿದಳು.
’ನಾವು ಪ್ರತಿಯೊಬ್ಬ ವ್ಯಕ್ತಿಗಳನ್ನು ಅವರೇನಾಗಿದ್ದಾರೆ ಮತ್ತು ಅವರಲ್ಲಿ ಯಾವ ಒಳ್ಳೆಯ ಗುಣಗಳಿವೆ ಎಂಬುದನ್ನು ಹುಡುಕಬೇಕು. ಒಳ್ಳೆಯತನವನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹಿಸಬೇಕು’ ಎಂದು ಹೇಳುತ್ತಿದ್ದಂತೇ ಸೀಳು ಬಿಂದಿಗೆ ಕೂಗಿ ಹೇಳಿತು- ’ಓ ನನ್ನೆಲ್ಲ ಸೀಳು ಬಿಂದಿಗೆಗಳೇ, ನಮಗಿರುವುದು ಒಂದು ಕೊರತೆ ಎಂದು ಭಾವಿಸಬೇಡಿ. ಅದು ನಮ್ಮ ವಿಶೇಷ ಗುಣ. ಇಂತಹ ಒಳ್ಳೆಯ ಮತ್ತು ವಿಶೇಷ ಗುಣಗಳನ್ನು ಇತರಲ್ಲಿದ್ದರೆ ಅವುಗಳನ್ನು ಪತ್ತೆ ಹಚ್ಚಿರಿ ಮತ್ತು ಅದಕ್ಕೆ ಪ್ರೋತ್ಸಾಹವನ್ನು ನೀಡಿರಿ. ಬಿಂದಿಗೆಯಲ್ಲಿ ಸೀಳಿದ್ದರೆ ಅದರಿಂದ ಒಳ್ಳೆಯ ಹೂವುಗಳು ಬರಲು ಸಾಧ್ಯವಿದೆ, ಎಲ್ಲರೂ ಉತ್ತಮ ಸುಗಂಧವನ್ನು ಸವಿಯಲು ಸಾಧ್ಯವಿದೆ’!
ಆ ಕ್ಷಣದಲ್ಲಿ ಎಲ್ಲೆಲ್ಲಿಯೋ ಅಡಗಿದ್ದ ಕುಂದು ಕೊರತೆಗಳಿದ್ದ ನೂರಾರು ಬಿಂದಿಗೆಗಳು ಅಲ್ಲಿ ಸೇರಿದವು. ತಮ್ಮತನವನ್ನು ಸಾರಲು ಅವು ಎಲ್ಲ ದಿಕ್ಕುಗಳಿಗೂ ಹೊರಟವು.

* * *
ಇದು ಇಂಟರ್ ನೆಟ್ ಕತೆ

e mail: veerannakumar@gmail.com


ಇ-ಮೇಲ್ ಇಲ್ಲದ ಯುವಕ

January 26, 2009

mail ಆ ಯುವಕನ ಮನೆಯ ತುಂಬೆಲ್ಲ ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆಗಳು. ಕಾಲು ಚಾಚಿದರೆ ತೊಡರುಕೊಳ್ಳುತ್ತಿದ್ದವು. ಅಂಥವುಗಳಿಂದ ಹೊರ ಬರಬೇಕೆಂದರೆ ಒಂದೇ ದಾರಿ- ಅದು ಉದ್ಯೋಗವನ್ನು ಹುಡುಕುವುದು ಎಂದು ನಿರ್ಧರಿಸಿದ ಆತ ಅಂದಿನ ಪತ್ರಿಕೆಗಳ ’ಸಿಚುವೇಷನ್ ವೆಕೆಂಟ್’ ಕಾಲಂನತ್ತ ಕಣ್ಣು ಹಾಯಿಸಿದ. ವಿಶ್ವ ವಿಖ್ಯಾತ ಮೈಕ್ರೊಸಾಫ್ಟ್ ಕಂಪೆನಿಯಲ್ಲಿ ’ಆಫೀಸ್ ಬಾಯ್’ ಹುದ್ದೆಗೆ ಕರೆ ಮಾಡಿದ್ದರು. ತಕ್ಷಣ ಅದಕ್ಕೆ ಅರ್ಜಿ ಗುಜರಾಯಿಸಿದ.
ಅಲ್ಲಿನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮ್ಯಾನೇಜರ್ ಉದ್ಯೋಗಾಕಾಂಕ್ಷಿಯನ್ನು ಅಡಿಯಿಂದ ಮುಡಿಯವರೆಗೆ ನೋಡಿದ. ಹಲವಾರು ಪ್ರಶ್ನೆಗಳನ್ನು ಕೇಳಿದ. ಕಚೇರಿಯ ನೆಲವನ್ನು ಗುಡಿಸಿ ಒರೆಸಲು ಹಚ್ಚಿದ. ಯುವಕನ ಕೆಲಸದಲ್ಲಿನ ತನ್ಮಯತೆ ಮತ್ತು ಅಚ್ಚುಕಟ್ಟುತನಗಳನ್ನು ಕಂಡು ಮೆಚ್ಚುಗೆ ಕಂಗಳಂದಿ ಆತನನ್ನು ನೋಡಿದ.
’ನಿನ್ನನ್ನು ನಮ್ಮ ಕಚೇರಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಮ್ಯಾನೇಜರ್ ಹೇಳಿದ. ’ನೀನು ನಿನ್ನ ಇ ಮೇಲ್ ವಿಳಾಸ ಕೊಡು. ಕೂಡಲೇ ನಾನು ನಿನಗೆ ಅರ್ಜಿ ಫಾರ್‍ಮ್ ಕಳುಹಿಸಿಕೊಡುತ್ತೇನೆ. ನೀನು ಅದರಲ್ಲಿಯೇ ಅರ್ಜಿ ಭರ್ತಿ ಮಾಡಿಕೊಡಬೇಕು. ನಂತರ ನಾನು ನಿನಗೆ ಇ ಮೇಲ್‌ನಲ್ಲಿ ನೇಮಕಾತಿ ಪತ್ರ ಕಳುಹಿಸಿಕೊಡುತ್ತೇನೆ. ಅದರಲ್ಲಿ ನೀನು ಯಾವತ್ತಿನಿಂದ ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ದಿನಾಂಕ ಮತ್ತು ವೇಳೆಯನ್ನು ನಮೂದಿಸಿರುತ್ತೇವೆ. ಆ ದಿನ ಬಂದು ಕೆಲಸಕ್ಕೆ ಹಾಜರಾದರೆ ಸಾಕು’ ಎಂದ.
’ಆದರೆ… ’, ಆ ಯುವಕ ತಡವರಿಸಿ ಹೇಳಿದ. ’ಆದರೆ, ನನ್ನ ಬಳಿ ಕಂಪ್ಯೂಟರೂ ಇಲ್ಲ; ಇಮೇಲೂ ಇಲ್ಲ’ ಎಂದ.
’ಹಾಗಿದ್ದರೆ ಕ್ಷಮಿಸು’ ಎಂದಬಿಟ್ಟ ಮ್ಯಾನೇಜರ್.
’ನಿನ್ನ ಬಳಿ ಒಂದು ಇ ಮೇಲ್ ಐಡಿ ಇಲ್ಲ ಅಂದರೆ ನೀನು ಈ ಭೂಮಿಯಲ್ಲಿ ಬದುಕಿಲ್ಲವೆಂದೇ ಅರ್ಥ ಅಥವಾ ನಿನ್ನ ಅಸ್ತಿತ್ವವೇ ಇಲ್ಲ ಎಂದರ್ಥ. ಯಾರ ಅಸ್ತಿತ್ವವು ಈ ಭೂಮಿಯಲ್ಲಿ ಇರುವುದಿಲ್ಲವೋ ಅವರಿಗೆ ನಮ್ಮ ಸಂಸ್ಥೆಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ನೀನಿನ್ನು ಹೋಗಬಹುದು’ ಎಂದು ಖಡಾಖಂಡಿತವಾಗಿ ಹೇಳಿದ.
ಆ ಯುವಕ ಕೆಲಸ ಸಿಗುವುದೆಂಬ ತನ್ನ ಆಶಾ ಗೋಪುರ ಕಳಚಿ ಬಿದ್ದುದಕ್ಕಾಗಿ ತೀವ್ರ ದುಃಖಿತನಾಗಿ ಅಲ್ಲಿಂದ ಮನಸ್ಸಿಲ್ಲದ ಮನಸ್ಸಿನಿಂದ ಹೊರಗೆ ಬಂದ. ಎಲ್ಲಿ ಹೋಗುವುದು? ಏನು ಮಾಡುವುದು? ಎಂದು ಚಿಂತಿಸುತ್ತ ಜೇಬಿನಲ್ಲಿ ಹಣಕ್ಕಾಗಿ ತಡಕಾಡಿದ. ೧೦ ಡಾಲರಿನ ಒಂದು ನೋಟು ಇದ್ದುದು ಲಕ್ಷ್ಯಕ್ಕೆ ಬಂದಿತು. ಮತ್ತೆ ಮತ್ತೆ ಅದನ್ನು ಮುಟ್ಟಿ ಮುಟ್ಟಿ ನೋಡಿದ. ಹೌದು ತನ್ನ ಬಳಿ ೧೦ ಡಾಲರ್ ಹಣ ಇದೆ ಎಂದು ಖುಷಿಯಿಂದ ಅಲ್ಲಿಂದ ಹೊರ ಬಂದು, ಹತ್ತಿರದ ಒಂದು ಮಾರುಕಟ್ಟೆಗೆ ಬಂದ. ಟೊಮೆಟೊ ಹಣ್ಣು ತುಂಬಿದ ಕ್ರೆಟ್‌ಗಳು ಕಂಡುಬಂದವು. ತನ್ನ ೧೦ ಡಾಲರ್‌ಗೆ ಎಷ್ಟು ಟೊಮೆಟೊ ಬರುತ್ತದೆ ಎಂದು ಕೇಳಿದ. ೧೦ ಕೆ.ಜಿ. ಟೊಮೆಟೊಗಳ ಒಂದು ಕ್ರೆಟ್ ಸಿಗುತ್ತದೆ ಎಂದು ವಿಚಾರ ಗೊತ್ತಾದ ಕೂಡಲೇ ತನ್ನ ದುಡ್ಡನ್ನೆಲ್ಲ ಕೊಟ್ಟು ಆ ಟೊಮೆಟೊ ಕ್ರೆಟ್ ಕೊಂಡುಕೊಂಡ.
ಆ ಟೊಮೆಟೊ ಕ್ರೆಟ್ ಹಿಡಿದು ಮನೆ ಮನೆ ಅಲೆದು ಟೊಮೆಟೊವನ್ನೆಲ್ಲ ಮಾರಿದ. ಕೇವಲ ಎರಡು ಘಂಟೆಯಲ್ಲಿ ಹತ್ತು ಕೆ.ಜಿ. ಟೊಮೆಟೊ ಮಾರಿದ್ದ. ಅದರಿಂದ ೨೦ ಡಾಲರ್ ಹಣ ಬಂದಿತ್ತು. ತನ್ನ ಬಂಡವಾಳ ಒಂದಿದ್ದದ್ದು ಎರಡು ಪಟ್ಟು ಆಗಿತ್ತು. ಅದೇ ದಿನ ಮತ್ತೆ ಎರಡು ಬಾರಿ ಒಂದೊಂದೊ ಕ್ರೆಟ್ ಟೊಮೆಟೊ ಖರೀದಿಸಿದ. ಒಟ್ಟಾರೆಯಾಗಿ ೬೦ ಡಾಲರ್ ಮತ್ತು ಮೂರು ಖಾಲಿ ಕ್ರೆಟ್‌ಗಳನ್ನು ಸಂಪಾದಿಸಿ ಮನೆಗೆ ನಡೆದ. ರಾತ್ರಿ ಮನೆಯಲ್ಲಿ ಮಲಗಿದಾಗ ತುಂಬ ಸಮಾಧಾನವಾಗಿ ಯೋಚಿಸಿದ. ಈ ರೀತಿ ಮಾಡಿದರೆ ತಾನು ಬದುಕಬಹುದು ಎಂದುಕೊಂಡ. ಕಾಲು ಚಾಚಿದಾಗ ಸಮಸ್ಯೆಗಳೆಲ್ಲ ಸ್ವಲ್ಪ ದೂರ ಹೋಗಿವೆ ಎಂದೆನಿಸಿತು. ಕಣ್ಣು ಮುಚ್ಚಿ ನಿದ್ದೆಹೋದ.
ನೋಡನೋಡುತ್ತಿದ್ದಂತೆಯೇ ತನ್ನ ಈ ವಹಿವಾಟನ್ನು ವಿಸ್ತರಿಸಿದ. ಪ್ರತಿದಿನವೂ ಬೆಳಿಗ್ಗೆ ಬೇಗ ಹೋಗುತ್ತಿದ್ದ. ಸಂಜೆ ತಡವಾಗಿ ಮನೆಗೆ ವಾಪಸಾಗುತ್ತಿದ್ದ. ಪ್ರತಿದಿನವೂ ಆತನ ಹಣ ಎರಡು ಪಟ್ಟು ಮೂರು ಪಟ್ಟು ಹೆಚ್ಚಾಗತೊಡಗಿತು.
ಸ್ವಲ್ಪ ದಿನದಲ್ಲಿಯೇ ಆತ ಒಂದು ಬಂಡಿ ಖರೀದಿಸಿದ. ಅದರಿಂದ ವ್ಯಾಪಾರ ಮಾಡತೊಡಗಿದ. ನಂತರದ ದಿನಗಳಲ್ಲಿ ಒಂದು ಲಾರಿ. ಆಮೇಲೆ ಅಂಥ ಹಲವಾರು ವಾಹನಗಳನ್ನು ಖರೀದಿಸಿ ತನ್ನ ವ್ಯಾಪಾರವನ್ನು ಇಡೀ ನಗರದಾದ್ಯಂತ ವಿಸ್ತರಿಸಿದ. ಆ ಮೇಲೆ ಪಕ್ಕದ ನಗರಗಳಿಗೂ. ಐದು ವರ್ಷಗಳ ನಂತರ ಆತ ಅಮೆರಿಕದ ದೊಡ್ಡ ಆಹಾರ ಉತ್ಪನ್ನಗಳ ರಿಟೇಲರ್‌ಗಳಲ್ಲಿ ಒಬ್ಬನೆನಿಸಿದ.
ಒಂದು ದಿನ ತನ್ನ ಕುಟುಂಬ ಜೀವನವನ್ನು ಅತ್ಯಂತ ಯೋಜನಾಭದ್ಧವಾಗಿ ನಡೆಸಬೇಕು ಎಂದು ತೀರ್ಮಾನಿಸಿ ಜೀವ ವಿಮೆ ಮಾಡಿಸಬೇಕು ಎಂದು ಆತ ಯೋಚಿಸಿ, ಒಬ್ಬ ವಿಮಾ ಏಜೆಂಟ್‌ನನ್ನು ಕರೆಯಿಸಿದ. ಏಜೆಂಟ್‌ನೊಂದಿಗೆ ಯಾವ ಪ್ಲಾನು ಬೇಕೆಂದು ಚರ್ಚಿಸಿ ತೀರ್ಮಾನಿಸಿದ. ಎಲ್ಲ ಮಾತುಕತೆಗಳು ಮುಗಿದ ನಂತರ, ಏಜೆಂಟನು, ನಿಮ್ಮ ಇ ಮೇಲ್ ಐಡಿ ಹೇಳಿ, ವಿವರಗಳನ್ನೆಲ್ಲ ಕಳುಹಿಸುತ್ತೇನೆ’ ಎಂದ. ಅದಕ್ಕೆ ಯುವಕ ’ನನ್ನ ಬಳಿ ಇ-ಮೇಲ್ ಐಡಿ ಇಲ್ಲ’ ಎಂದ.
’ನಿಮ್ಮ ಬಳಿ ಇ ಮೇಲ್ ಐಡಿ ಇಲ್ವಾ? ಮತ್ತೆ ಹೇಗೆ ಇಷ್ಟೊಂದು ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದಿರಿ? ಕೇವಲ ಒಂದು ಇ-ಮೇಲ್ ಐಡಿ ಇಲ್ಲದೆಯೂ ನೀವು ಇಷ್ಟೊಂದು ಹಣ ಸಂಪಾದನೆ ಮಾಡಿದ್ದೀರಿ ಎಂದರೆ ನಂಬಲು ಸಾಧ್ಯವಾಗುವುದಿಲ್ಲ’ ಎಂದು ತನ್ನ ಆಶ್ಚರ್ಯವನ್ನು ತಡೆಯಲಾಗದೇ ಆ ಏಜೆಂಟ್ ಕೇಳಿದ.
ಯುವಕ ತಣ್ಣನೆಯ ದನಿಯಲ್ಲಿ, ’ನನ್ನ ಬಳಿ ಇ-ಮೇಲ್ ಐಡಿ ಇದ್ದಿದ್ದರೆ ನಾನು ಮೈಕ್ರೊಸಾಫ್ಟ್ ಕಚೇರಿಯಲ್ಲಿ ಒಬ್ಬ ’ಆಫೀಸ್ ಬಾಯ್’ ಆಗಿರುತ್ತಿದ್ದೆ. ಅದು ಇಲ್ಲದಿದ್ದುದರಿಂದಲೇ ನಾನು ಇಷ್ಟೆಲ್ಲ ಸಂಪಾದನೆ ಮಾಡಲು ಸಾಧ್ಯವಾಯಿತು’ ಎಂದ. ಏಜೆಂಟ್‌ಗಾದ ಅಚ್ಚರಿಯಿಂದ ಆತನ ಬಾಯಿ ತೆರೆದೇ ಇತ್ತು.

ಇದು ಇಂಟರ್ ನೆಟ್ ಕತೆ
***
e mail: veerannakumar@gmail.com


ಕುಕೀಸ್ ಪ್ಯಾಕೆಟ್

January 26, 2009

ಇದು ಇಂಟರ್ ನೆಟ್ ಕತೆ! ಸುಮ್ಕೆ ನಿಮಗಾಗಿ

ರಸ್ತೆಯ ಅಪಾರ ವಾಹನ ದಟ್ಟಣೆಯಲ್ಲಿ ಹೇಗೆ ಹೇಗೋ ನುಸುಳಿಕೊಂಡು ಬಂದ್ ಆ ಕಾರ್ ಏರ್‌ಪೋರ್ಟ್ ತಲುಪಿತು. ಅದರೊಳಗಿಂದ ಅತ್ಯಂತ ಮೋಹಕವಾದ ತೆಳ್ಳನೆಯ ಬೆಳ್ಳನೆಯ ನೀಳಕಾಯದ ಸುಸಂಸ್ಕೃತ ಚೆಲುವೆಯೊಬ್ಬಳು ಕೆಳಗಿಳಿದು, ಭಾರವಾದ ತನ್ನ ಬ್ಯಾಗೇಜ್‌ಗಳನ್ನು ಡ್ರೈವರ್‌ನ ಸಹಾಯದಿಂದ ಟ್ರಾಲಿಯಲ್ಲಿ ಇಟ್ಟುಕೊಂಡು ಕಷ್ಟ ಪಟ್ಟು ಅದನ್ನು ನೂಕಿಕೊಂಡು, ಇತ್ತ ಅವಸರವೂ ಅಲ್ಲದ ಅತ್ತ ಗಂಭೀರವೂ ಅಲ್ಲದ ನಡಿಗೆಯಲ್ಲಿ ಏರ್‌ಪೋರ್ಟ್‌ನ ಒಳಕ್ಕೆ ಹೋದಳು. ಅವಳ ನೀಳವಾದ ಜಡೆ ಪೃಷ್ಠದ ಆ ಕಡೆ ಈ ಕಡೆ ಹೊರಳಾಡುತ್ತ ಅವಳ ನಡಿಗೆಗೊಂದು ವಿಶಿಷ್ಟ ಸೌಂದರ್ಯ ತಂದುಕೊಟ್ಟಿತ್ತು. ಕೌಂಟರ್‌ನಲ್ಲಿ ತನ್ನ ಟಿಕೆಟ್ ತೋರಿಸಿ ಒಳಗೆ ಹೋಗಿ, ವಿಮಾನದ ಬೋರ್ಡಿಂಗ್ ಪಾಸ್‌ನ ಮುಂಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತಳು. ತನ್ನ ಸಣ್ಣದಾದ ಹ್ಯಾಂಡ್‌ಬ್ಯಾಗನ್ನು ಮಾತ್ರ ಇಟ್ಟುಕೊಂಡು ಉಳಿದೆಲ್ಲ ಸರಂಜಾಮುಗಳನ್ನು ಅವರಿಗೊಪ್ಪಿಸಿ, ಬೋರ್ಡಿಂಗ್ ಪಾಸ್ ತೆಗೆದುಕೊಂಡಳು. ವಿಮಾನ ಹೊರಡುವುದಕ್ಕೆ ಇನ್ನೂ ಸಾಕಷ್ಟು ಸಮಯ ಇತ್ತು. ತಾನು ತುಂಬ ಬೇಗನೇ ತಲುಪಿಬಿಟ್ಟಿದ್ದೇನೆ ಎಂದು ಸ್ವಲ್ಪ ವ್ಯಾಕುಲಗೊಂಡಂತಾಗಿ, ಅತ್ತಿತ್ತ ನೋಡಿದಳು. ಅಲ್ಲಿನ ತಿಂಡಿ ತಿನಿಸುಗಳ ಮಳಿಗೆಯಲ್ಲಿ ಒಂದಕ್ಕೆರಡು ಬೆಲೆಯ ಥರಾವರಿ ವಸ್ತುಗಳನ್ನು ಇಟ್ಟಿದ್ದರು. ಹಲವರು ಕಾಫೀ ಹೀರುತ್ತಿದ್ದರೆ, ಇನ್ನಷ್ಟು ಜನರು, ವೇಟಿಂಗ್ ಲಾಂಜ್‌ನಲ್ಲಿ ಕುಳಿತಿದ್ದರು- ಮುದ್ದಿನ ಹೆಂಡತಿ ಕಳೆದುಕೊಂಡ ವಿದುರರಂತೆ, ಚಿಂತಾಕ್ರಾಂತರಾಗಿ!!

ವಿಮಾನ ನಿಲ್ದಾಣದಲ್ಲಿ ಅಷ್ಟೊಂದು ಗದ್ದಲ ಇರಲಿಲ್ಲ. ಹೊಟ್ಟೆ ಹಸಿದಂತೆನಿಸಿತು. ಬೆಳಿಗ್ಗೆಯ ಸಣ್ಣ ಉಪಾಹಾರ ಬಿಟ್ಟರೆ ಏನನ್ನೂ ತಿಂದಿಲ್ಲ ಎಂಬುದನ್ನು ಹೊಟ್ಟೆ ನೆನಪಿಸುತ್ತಿತ್ತು. ಆ ಉಪಾಹಾರದ ಮಳಿಗೆಗೆ ಹೋಗಿ ತಿನ್ನಲೆಂದು ಕುಕೀಸ್‌ನ ಒಂದು ಪ್ಯಾಕೆಟ್ ಕೊಂಡುಕೊಂಡಳು. ಒಂದು ಅಹ್ಲಾದಭರಿತ ಕಾಫಿಯನ್ನು ಹೀರಿ, ಮುಂಗುರಳನ್ನು ಹಿಂದಕ್ಕೆ ಸರಿಸುತ್ತಾ, ನಿಧಾನಕ್ಕೆ ಬಂದು ಖಾಲಿ ಇದ್ದ ಒಂದು ಆಸನದಲ್ಲಿ ಕುಳಿತುಕೊಂಡಳು. ಪಕ್ಕದ ಒಂದು ಸೀಟು ಖಾಲಿ ಇತ್ತು. ಅದರ ನಂತರದ ಸೀಟಿನಲ್ಲಿ ವ್ಯಕ್ತಿಯೊಬ್ಬ ಕುಳಿತು ದಿನ ಪತ್ರಿಕೆಯಲ್ಲಿ ತನ್ನ ಮುಖ ಹುದುಗಿಸಿಕೊಂಡಿದ್ದ. ಈಕೆ ತನ್ನ ಕೈಚೀಲದಿಂದ ಒಂದು ಇಂಗ್ಲೀಷ್ ಕಾದಂಬರಿಯನ್ನು ಹೊರತೆಗೆದು ಓದುವುದರಲ್ಲಿ ಮಗ್ನಳಾದಳು. ಸ್ವಲ್ಪ ಸಮಯದ ನಂತರ ಹೊಟ್ಟೆ ಹಸಿದಂತಾಗಿ, ಪಕ್ಕದ ಆಸನದ ಮೇಲಿಟ್ಟಿದ್ದ ಕುಕೀಸ್‌ನ ಪ್ಯಾಕೆಟ್‌ನೊಳಗಿಂದ ಒಂದನ್ನು ತೆಗೆದು ತಿಂದಳು. ಮತ್ತೆ ಕಾದಂಬರಿಯೊಳಕ್ಕೆ ಮಗ್ನಳಾದಳು. ಮತ್ತೆ ಇನ್ನೊಂದು ಕುಕಿಯನ್ನು ತೆಗೆದು ತಿಂದಳು. ಆ ಕಡೆ ಪೇಪರ್‌ನೊಳಕ್ಕೆ ತಲೆ ಹಾಕಿದ್ದ ವ್ಯಕ್ತಿ ತಾನೂ ಕೈ ಹಾಕಿ ನಿಧಾನಕ್ಕೆ ಒಂದು ಕುಕಿಯನ್ನು ತೆಗೆದುಕೊಂಡು ತಿಂದನು!

ಈಕೆ ಓರೆಗಣ್ಣಿನಿಂದಲೇ ಅದನ್ನು ನೋಡಿದಳು- ತನ್ನ ಕುಕೀಸ್ ಅನ್ನು ಅಪರಿಚಿತನೊಬ್ಬನು ತಿನ್ನುವುದನ್ನು ಸಹಿಸಿಕೊಳ್ಳಲಾಗದಂತೆ! ಸ್ವಲ್ಪ ಸಮಯದ ನಂತರ ಮತ್ತೆ ಇನ್ನೊಂದನ್ನು ಎತ್ತಿಕೊಂಡು ತಿಂದಳು. ಆತನೂ ಇನ್ನೊಂದನ್ನು ಎತ್ತಿಕೊಂಡು ತಿಂದನು. ಇದನ್ನು ನೋಡಿ ಅವಳಿಗೆ ಸ್ವಲ್ಪ ಜಾಸ್ತಿಯೇ ಇರುಸು ಮುರುಸಾಯಿತು. ಆತನೆಡೆಗೆ ಕಣ್ಣನ್ನು ದೊಡ್ಡದಾಗಿ ಅಗಲಿಸಿ ನೋಡಿದಳು. ಆತ ಕುಕಿ ತಿನ್ನುತ್ತ ಪೇಪರ್‌ನೊಳಕ್ಕೆ ತಲೆ ಹಾಕಿದ್ದ. ಏನೂ ಮಾತಾಡದೇ ಸುಮ್ಮನೇ ಪುಸ್ತಕ ಓದುವುದರಲ್ಲಿ ಗಮನ ಹರಿಸಿದಳು.

ಈ ಬಾರಿ ಮತ್ತೆ ಆತನೇ ಇನ್ನೊಂದು ಕುಕಿ ತೆಗೆದು ತಿಂದನು. ಇವಳಿಗೆ ಮೈ ಉರಿದು ಹೋಯಿತು. ತಾನು ತಂದ ಕುಕೀಸ್ ಅನ್ನು ಆತ ಎಗ್ಗಿಲ್ಲದೇ ತಿನ್ನುವುದು ಕಂಡು ಅಸಹ್ಯಪಟ್ಟುಕೊಂಡಳು. ಎಂಥ ಅಸಂಸ್ಕೃತ ಜನರಿವರು ಎಂದುಕೊಂಡು ಕೆಂಡಾಮಂಡಲಳಾದಳು. ಆದರೂ ಸಾರ್ವಜನಿಕ ಸ್ಥಳದಲ್ಲಿ ಹಾಗೆಲ್ಲ ಕೋಪ ತೋರಿಸಿಕೊಳ್ಳಬಾರದು. ಅಷ್ಟಕ್ಕೂ ಕೇವಲ ಒಂದು ಪ್ಯಾಕೆಟ್‌ನಲ್ಲಿನ ಕೆಲವು ಕುಕೀಸ್‌ಗಾಗಿ- ಎಂದುಕೊಂಡು ಸುಮ್ಮನಾದಳು. ಅವಳಿಗೆ ಪುಸ್ತಕ ಓದಲಿಕ್ಕೆ ಸಾಧ್ಯವಾಗಲಿಲ್ಲ. ಕೇವಲ ಪಕ್ಕದಲ್ಲಿದ್ದ ವ್ಯಕ್ತಿಯ ನಡವಳಿಕೆಯ ಬಗ್ಗೆಯೇ ಚಿಂತೆ ಮಾಡತೊಡಗಿದಳು. ಅಷ್ಟರಲ್ಲಿ ಆತ ಮತ್ತೊಂದು ಕುಕಿ ತೆಗೆದುಕೊಂಡು ತಿಂದುಬಿಟ್ಟ. ಈಗ ಈಕೆ ಕುಕೀಸ್ ಪ್ಯಾಕೆಟ್ ಎತ್ತಿ ನೋಡಿದಳು. ಅದರಲ್ಲಿ ಇನ್ನು ಕೇವಲ ನಾಲ್ಕು ಮಾತ್ರ ಬಾಕಿ ಇದ್ದವು. ಹೀಗಾಗಿ ಅದರಲ್ಲಿನ ಎರಡು ಕುಕೀಸ್ ಎತ್ತಿಕೊಂಡು ತಿಂದಳು. ಉಳಿದ ಎರಡರಲ್ಲಿ ಆತ ಒಂದನ್ನು ಎತ್ತಿಕೊಂಡು ತಿಂದು, ಇನ್ನೊಂದನ್ನು ಇವಳೇ ತಿನ್ನಲಿ ಎಂದೊ ಏನೋ ಸುಮ್ಮನಾದನು. ವಾಚಿನತ್ತ ನೋಡಿಕೊಂಡು ಮತ್ತೆ ದಿನ ಪತ್ರಿಕೆ ಓದುವುದರತ್ತ ಮಗ್ನನಾದನು.

ಎಂಥ ಅನಾಗರಿಕ ಜನ ಇವರು. ವಿದ್ಯಾವಂತರಾದರೂ ಇನ್ನೊಬ್ಬರ ತಿಂಡಿ ತಿನಿಸುಗಳನ್ನು ಹೀಗೆ ಬಲವಂತವಾಗಿ ತಿನ್ನಬಾರದು ಎಂಬ ವಿವೇಕ ಬೇಡವೇ? ಈಗವನಿಗೆ ನಾನು ತಂದ ಕುಕೀಸ್ ತಿನ್ನು ಎಂದು ಆಹ್ವಾನಿಸಿದ್ದೇನೆಯೇ? ಈ ಗಂಡಸರೆಲ್ಲ ಇಷ್ಟೆ. ಒಂಟಿ ಹೆಂಗಸು ಸಿಕ್ಕರೆ ಗೋಳು ಹುಯ್ದುಕೊಳ್ಳುವುದೇ ಇವರ ಚಾಳಿ ಎಂದುಕೊಂಡು ಮುನಿಸಿನಿಂದ ಸ್ವಲ್ಪ ಈ ಕಡೆಗೆ ತಿರುಗಿ ಕುಳಿತುಕೊಂಡಳು.

ಸ್ವಲ್ಪ ಸಮಯದಲ್ಲಿ ಸ್ಪೀಕರ್‌ನಿಂದ ಅನೌನ್ಸ್‌ಮೆಂಟ್ ಕೇಳಿ ಬಂದಿತು. ’ಇಂಡಿಯನ್ ಏರ್‌ಲೈನ್ಸ್‌ನ ಐಸಿ ೭೦೩ ವಿಮಾನಕ್ಕೆ ಹೋಗುವ ಪ್ರಯಾಣಿಕರು ಕೂಡಲೇ ಐದನೇ ಗೇಟ್ ಮೂಲಕ ಒಳಗೆ ಹೋಗಬೇಕು’ ಎಂಬರ್ಥದ ಮೃದುವಾದ ಹೆಣ್ಣು ದನಿಯ ಕರೆ ಕೇಳಿ ಬಂತು. ಕುಕೀಸ್ ತಿನ್ನುತ್ತ, ಪುಸ್ತಕ ಓದುತ್ತ ಆಸನದಲ್ಲಿ ಕುಳಿತಿದ್ದ ಆಕೆ ಲಗು ಬಗೆಯಿಂದ ತನ್ನ ಬ್ಯಾಗ್ ಮತ್ತು ಪಕ್ಕದಲ್ಲಿದ್ದ ಕುಕೀಸ್ ಪ್ಯಾಕೆಟ್ ಎತ್ತಿಕೊಂಡು ಹೊರಟಳು.

ವಿಮಾನ ಹತ್ತಿದ ನಂತರ ಸ್ವಲ್ಪ ಸಮಯಕ್ಕೆ ಅದು ನಿಧಾನಕ್ಕೆ ರನ್‌ವೇನತ್ತ ಚಲಿಸತೊಡಗಿತು. ಗಗನಸಖಿ ಬಂದು ಸೀಟ್ ಬೆಲ್ಟ್ ಹಾಕಿಕೊಳ್ಳಲು ವಿನಂತಿಸಿದಳು. ಈಕೆ ಸೀಟ್ ಬೆಲ್ಟ್ ಹಾಕಿಕೊಂಡು ಕುಕೀಸ್ ಪ್ಯಾಕೆಟ್‌ನಲ್ಲಿ ಕೊನೆಯದಾಗಿ ಉಳಿದಿದ್ದ ಒಂದನ್ನು ಬಾಯಿಗೆ ಹಾಕಿಕೊಂಡು, ತನ್ನ ಕೈಚೀಲದಲ್ಲಿದ್ದ ನೀರಿನ ಬಾಟಲಿಗೆಂದು ಕೈ ಹಾಕಿದಳು.

ಅರೆ… ಆಶ್ಚರ್ಯ!!!

ಚೀಲದಲ್ಲಿ ನೀರಿನ ಬಾಟಲಿಯೊಂದಿಗೆ ಇನ್ನೊಂದು ಪ್ಯಾಕೆಟ್ ಕೈಗೆ ಹತ್ತಿದಂತಾಯಿತು. ಬ್ಯಾಗ್ ಅನ್ನು ಅಗಲಿಸಿ ನೋಡಿದರೆ, ಅಲ್ಲಿ ತಾನು ಕೊಂಡುತಂದಿದ್ದ ಕುಕೀಸ್‌ನ ಪ್ಯಾಕೆಟ್ ಹಾಗೆಯೇ ಇದೆ. ಅದನ್ನು ಹೊರ ತೆಗೆದು ಒಂದೆರಡು ಬಾರಿ ಆಚೆ ಈಚೆ ತಿರುಗಿಸಿ ನೋಡಿದಳು. ಹೌದು ನಾನೇ ಕೊಂಡುಕೊಂಡ ಕುಕೀಸ್ ಪ್ಯಾಕೆಟ್ ಇದು. ಅನುಮಾನವೇ ಇಲ್ಲ. ಕಾಫೀ ಕುಡಿಯುವಾಗ ಚೀಲದಲ್ಲಿಟ್ಟದ್ದು.

ಮತ್ತೆ… ಅಲ್ಲಿ ಲಾಂಜ್‌ನಲ್ಲಿ ಕುಳಿತಾಗ ತಿಂದದ್ದು?!

ಆ ಕುಕೀಸ್ ಪ್ಯಾಕೆಟ್ ಪಕ್ಕದಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದ ವ್ಯಕ್ತಿಯದೇ ಆಗಿತ್ತು.

ಆತ ತಾನು ತಿನ್ನಲೆಂದು ಪಕ್ಕದ ಆಸನದ ಮೇಲಿಟ್ಟು ಹಾಯಾಗಿ ತನ್ನ ಪಾಡಿಗೆ ತಾನು ಪೇಪರ್ ಓದುತ್ತ ಕುಳಿತಿದ್ದ- ಎಂಬುದನ್ನು ನೆನಪಿಸಿಕೊಂಡು ನಾಚಿಕೆಯಾದಂತೆನಿಸಿತು.

ಛೇ! ನಾನು ಆ ವ್ಯಕ್ತಿಯ ಪರವಾನಗಿ ಇಲ್ಲದೇ ಅವನ ಕುಕೀಸ್ ಅನ್ನು ತಿಂದದ್ದು ಅಲ್ಲದೇ, ಅವನ ಮೇಲೆ ಕೋಪ ಬೇರೆ ಮಾಡಿಕೊಂಡಿದ್ದೆ. ಕೊನೆಗೆ ಆ ಪ್ಯಾಕೆಟ್ ಅನ್ನು ಎತ್ತಿಕೊಂಡೂ ಬಂದುಬಿಟ್ಟೆ. ನಾನು ಆತನ ಕುಕೀಸ್ ತಿಂದರೂ ಆತ ಏನನ್ನೂ ಹೇಳದೇ, ತಾನೂ ಸಹ ಆಗಾಗ ಒಂದೊಂದು ಕುಕಿ ತಿಂದು ಏನೂ ಆಗದವರಂತೆ ಸುಮ್ಮನಿದ್ದ- ಎಂಬುದನ್ನು ನೆನಪಿಸಿಕೊಂಡು ಅವಳ ಜೀವ ನಾಚಿಕೆಯಿಂದ ಕುಗ್ಗಿ ಹಿಡಿಯಷ್ಟಾಯಿತು. ಮುಖ ಬಾಡಿದಂತಾಯಿತು.

ಅವಳು ಅಪಾರ ಪಶ್ಚಾತಾಪ ಪಟ್ಟುಕೊಂಡಳು.

ಎಪಿಲಾಗ್:
ನಾವು ತಿಳಿಯದೇ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆದರೂ ನಾವೇ ಸರಿ ಎಂದು ವಾದಿಸುತ್ತಿರುತ್ತೇವೆ. ನಮ್ಮ ತಪ್ಪನ್ನು ತಿದ್ದಿಕೊಂಡು, ’ತನ್ನಂತೆ ಪರರು’ ಎಂಬುದನ್ನು ರೂಢಿಸಿಕೊಂಡರೆ ಮಾತ್ರ ಜೀವನ ಸಹನೀಯವಾದೀತು.
*****
e mail: veerannakumar@gmail.com


ಕಿಟಕಿಯಾಚೆಯ ಜಗತ್ತು!

January 26, 2009

ಕಿಟಕಿಯಾಚೆಯ ಜಗತ್ತು

ಯಾವುದೇ ಸದ್ದುಗದ್ದಲಗಳಿಲ್ಲದ ಆಸ್ಪತ್ರೆಯ ಕೊಠಡಿ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ’ಫ’ ಮತ್ತು ’ಬ’ ಇಬ್ಬರೇ ಕೊಠಡಿಯಲ್ಲಿ ಮಲಗಿಕೊಂಡಿದ್ದರು. ತಾವು ಮಲಗಿರುವ ಈ ಕೊಠಡಿ ಎಷ್ಟನೇ ಮಹಡಿಯೋ. ರಸ್ತೆಯಲ್ಲಿ ವಾಹನಗಳ ಓಡಾಟ, ಮಕ್ಕಳ ಕಿರುಚಾಟಗಳ ಸದ್ದು ದೂರದಲ್ಲೆಲ್ಲೊ ಎಂಬಂತೆ ಕೇಳುತ್ತಿತ್ತು.

ಆಸ್ಪತ್ರೆಗೆ ಇಬ್ಬರನ್ನೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ತಂದು ಸೇರಿಸಿದ್ದರು. ಅವರ ಸಂಬಂಧಿಕರು ಆಗಾಗ ಬಂದು ಹೋಗುತ್ತಿದ್ದರು. ನಿಯಮಿತವಾಗಿ ನರ್ಸ್‌ಗಳು ಬಂದು ಔಷಧಿಯ ಸೂಜಿ ಚುಚ್ಚಿ, ಔಷಧಿಯನ್ನು ಕೊಟ್ಟು ಹೋಗಿ ಬಿಡುತ್ತಿದ್ದರು. ಡಾಕ್ಟರ್‌ಗಳು ಆಗಾಗ ಬಂದು ಇವರನ್ನು ಪರೀಕ್ಷಿಸಿ, ನರ್ಸ್ ಜೊತೆಗೆ ಕುಲು ಕುಲು ನಗುತ್ತಾ, ಏನೇನೋ ಸೂಚನೆಗಳನ್ನು ನೀಡಿ ಫಟಾಫಟ್ ಕೆಲಸ ಮುಗಿಸಿ ಮಾಯವಾಗುತ್ತಿದ್ದರು.

ಕೊಠಡಿಯಲ್ಲಿ ಎರಡೇ ಎರಡು ಬೆಡ್‌ಗಳು. ಒಂದು ಕಿಟಕಿಯ ಸಮೀಪ ಇದ್ದರೆ, ಇನ್ನೊಂದು ಕಿಟಕಿಯಿಂದ ದೂರ ಇತ್ತು. ’ಫ’ನಿಗೆ ಲಂಗ್ಸ್ ತೊಂದರೆ ಇದ್ದುದರಿಂದ ಅದರಿಂದ ಹರಿಯುವ ರಸಗಳನ್ನು ಒಣಗಿಸಿಕೊಳ್ಳಲು ಕಿಟಕಿಯ ಬಿಸಿಲಿನಲ್ಲಿ ಮಧ್ಯಾಹ್ನ ಒಂದು ಘಂಟೆ ಕಾಲ ಕುಳಿತುಕೊಳ್ಳಲು ವೈದ್ಯರು ಅವಕಾಶ ನೀಡಿದ್ದರು. ಕೊಠಡಿಯ ಏಕೈಕ ಕಿಟಕಿಯ ಪಕ್ಕದಲ್ಲಿ ’ಫ’ನ ಬೆಡ್ ಇತ್ತು. ಹೀಗಾಗಿ ಅವನಿಗೆ ಕಿಟಕಿಯ ಬಳಿ ಕುಳಿತುಕೊಂಡು ಬಿಸಿಲು ಕಾಯಿಸಿಕೊಳ್ಳುವುದು ಒಂದು ರೀತಿಯಲ್ಲಿ ಖುಷಿ ನೀಡುವ ವಿಚಾರವಾಗಿತ್ತು.

’ಬ’ ಯಾವಗಲೂ ಮಲಗಿಯೇ ಇರಬೇಕಾಗಿತ್ತು. ಅವನು ಏಳುವಂತೆ ಇರಲಿಲ್ಲ. ಮಲಗಿದ್ದಲ್ಲಿಯೇ ಎಲ್ಲವೂ ನಡೆಯುತ್ತಿತ್ತು. ನರ್ಸ್‌ಗಳು ಆಗಾಗ ಸಿಡುಕುತ್ತಿದ್ದರೂ ಎಲ್ಲವನ್ನೂ ಪ್ರೀತಿಯಿಂದಲೇ ಮಾಡುತ್ತಿದ್ದರು. ಕೊಠಡಿಯಲ್ಲಿರುವ ಇಬ್ಬರೇ ಇಬ್ಬರು ವ್ಯಕ್ತಿಗಳು- ಮೊದಮೊದಲು ತಮ್ಮ ಮನೆ, ಕಚೇರಿ, ತಮ್ಮ ಹೆಂಡತಿಯರು, ತಮ್ಮ ಬಾಲ್ಯ, ಬಾಲ್ಯದ ಗೆಳೆಯರು, ಗೆಳತಿಯರು, ತಮ್ಮ ಹದಿಹರೆಯದ ಪ್ರೇಮ ಪ್ರಕರಣಗಳು, ಮೊದಲ ಪ್ರೇಯಸಿ, ತಾವು ಸೇನೆಗೆ ಸೇರಿದ್ದು, ರಜಾ ದಿನಗಳನ್ನು ಸಂತಸದಿಂದ ಕಳೆದದ್ದು….. ಮುಂತಾದ ವಿಚಾರಗಳ ಬಗ್ಗೆ ದಿನವೂ ಗಂಟೆ ಗಟ್ಟಲೇ ಮಾತಾಡಿಕೊಳ್ಳುತ್ತಿದ್ದರು.

ಕಿಟಕಿಯ ಬಳಿಯ ಹಾಸಿಗೆಯಲ್ಲಿನ ’ಫ’ನು ಪ್ರತಿದಿನವೂ ಮಧ್ಯಾಹ್ನ ಒಂದು ಘಂಟೆಯ ಕಾಲ ಬಿಸಿಲು ಕಾಯಿಸಿಕೊಳ್ಳಲು ಕುಳಿತುಕೊಳ್ಳುತ್ತಿದ್ದನಲ್ಲ? ಆ ಒಂದು ಘಂಟೆಯ ಸಮಯದಲ್ಲಿ ತಮ್ಮ ಏಕತಾನತೆಯನ್ನು ಮರೆಯಲು ಕಿಟಕಿಯಿಂದ ಹೊರಗೆ ಕಾಣುವ ವಿದ್ಯಮಾನಗಳನ್ನೆಲ್ಲ ’ಬ’ಗೆ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ. ನಿಧಾನಕ್ಕೆ ಮಲಗಿದಲ್ಲಿಂದಲೇ ತನಗರಿವಿಲ್ಲದೇ ’ಬ’ ಹೊರ ಜಗತ್ತಿನ ಜೊತೆ ಬದುಕಲಾರಂಭಿಸಿದ. ಎಲ್ಲವೂ ಸಹನೀಯ ಎನಿಸತೊಡಗಿತು. ನರ್ಸ್ ನೀಡುವ ಔಷಧಿಗಳನ್ನು ಯಾವುದೇ ಕ್ಯಾತೆ ತೆಗೆಯದೇ ಕುಡಿಯಲಾರಂಭಿಸಿದ. ದಿನವೂ ಆ ಒಂದು ಘಂಟೆಯ ಶುಭ ಘಳಿಗೆಗಾಗಿ ಕಾಯತೊಡಗಿದ. ತನ್ನ ರೂಮ್‌ಮೇಟ್ ’ಫ’ ವಿವರಿಸುತ್ತಿದ್ದ ಹೊರ ಜಗತ್ತಿನ ವಿವರಗಳು ಅವನನ್ನು ತನ್ನ ದುಃಖ ಮತ್ತು ಏಕತಾನತೆಯ ಮಡುವಿನಿಂದ ಮೇಲೆತ್ತಲು ಸಹಕಾರಿಯಾಗಿದ್ದವು.

’ಫ’ ಕೂಡುತ್ತಿದ್ದ ಆ ಕಿಟಕಿಯ ಎದುರು ಒಂದು ಪಾರ್ಕ್ ಇತ್ತು. ಪಾರ್ಕ್‌ಗೆ ಹೊಂದಿಕೊಂಡಂತೆಯೇ ಒಂದು ವಿಶಾಲವಾದ ಕೊಳವಿತ್ತು. ಆ ಕೊಳದಲ್ಲಿ ಬಾತುಗಳು, ಪೆಲಿಕಾನ್‌ಗಳು, ನೀರಗೋಳಿಗಳು ಉಲ್ಲಾಸದಿಂದ ನಲಿಯುತ್ತಿದ್ದವು. ಪ್ರಶಾಂತ ಕೊಳದಲ್ಲಿ ಮಕ್ಕಳು ದೋಣಿಗಳಲ್ಲಿ ಸುತ್ತುತ್ತಾ ವಿಹರಿಸುತ್ತಿದ್ದರು. ಆ ನೀರಿನಲ್ಲಿ ಚಿನ್ನಾಟವಾಡುತ್ತಿದ್ದರು. ಯುವ ಪ್ರೇಮಿಗಳು ಕೊಳದ ಪಕ್ಕದ ವಿಶಾಲ ಉದ್ಯಾನದಲ್ಲಿ ಕೈ-ಕೈ ಹಿಡಿದು ಒಬ್ಬರಿಗೊಬ್ಬರು ಅಂಟಿಕೊಂಡು, ತಮ್ಮದೇ ಬಣ್ಣ ಬಣ್ಣದ ಕನಸುಗಳ ಲೋಕದಲ್ಲಿ ವಿಹರಿಸುತ್ತಿದ್ದರು. ಉದ್ಯಾನದ ದಿಗಂತದಲ್ಲಿ ನೀಲಾಗಸ. ಎಲ್ಲಿಂದಲೋ ಕೇಳಿಬರುವ ಹಕ್ಕಿಗಳಿಂಚರ.

ಅದನ್ನೆಲ್ಲ ’ಫ’ ಕಣ್ಣಿಗೆ ಕಟ್ಟುವಂತೆ ’ಬ’ಗೆ ವಿವರಿಸುತ್ತಿದ್ದ. ಕಿಟಕಿಯಿಂದ ಹೊರ ನೋಡಲಾಗದ ’ಬ’ ತನ್ನ ಕಣ್ಣುಗಳನ್ನು ಮುಚ್ಚಿಕೊಂಡು ’ಫ’ ಹೇಳುವುದನ್ನೇ ಕೇಳಿಸಿಕೊಂಡು, ಸುಂದರವಾದ ಚಿತ್ರಗಳನ್ನು ಕಲ್ಪಿಸಿಕೊಂಡು ಸಂತಸಪಡುತ್ತಿದ್ದ. ತಾನೂ ಹೊರ ಜಗತ್ತಿನ ಸಹವಾಸದಲ್ಲಿದ್ದೇನೆ, ತಾನಿನ್ನೂ ಈ ಸುಂದರ ಲೋಕದಲ್ಲಿ ಬದುಕಿದ್ದೇನೆ ಎಂದು ಆತ ಭಾವಿಸುತ್ತಿದ್ದ. ತನ್ನ ಏಕತಾನತೆಯನ್ನು ದೂರ ಮಾಡಿಕೊಳ್ಳುತ್ತಿದ್ದ.

ಒಂದು ದಿನ ಬೆಚ್ಚನೆಯ ಮಧ್ಯಾಹ್ನದಂದು ಕಿಟಕಿಯಾಚೆಯ ರಸ್ತೆಯಲ್ಲಿ ಒಂದು ಪಥಸಂಚಲನ ಹೋಗುತ್ತಿತ್ತು. ಅದನ್ನು ’ಫ’ ಸಾದ್ಯಂತವಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ. ಪರೇಡ್‌ನಲ್ಲಿನ ವಾದ್ಯ ಸಂಗೀತ ’ಬ’ನ ಕಿವಿಗೆ ಬೀಳದಿದ್ದರೂ ಅಲ್ಲಿ ಹೋಗುವ ಪರೇಡ್ ಅನ್ನು ’ಬ’ ತನ್ನ ಒಳಗಣ್ಣಿನಿಂದಲೇ ನೋಡಬಲ್ಲವನಾಗಿದ್ದ- ಅಷ್ಟು ಚೆನ್ನಾಗಿ ’ಫ’ ರನ್ನಿಂಗ್ ಕಾಮೆಂಟ್ರಿ ಕೊಡುತ್ತಿದ್ದ.

ಹೀಗೆಯೇ ಎಷ್ಟೋ ದಿನಗಳು, ವಾರಗಳು ಕ್ರಮಿಸಿದವು.

ಒಂದು ಬೆಳಿಗ್ಗೆ ನರ್ಸ್, ’ಫ’ ಮತ್ತು ’ಬ’ನ ಸ್ನಾನಕ್ಕೆಂದು ನೀರು ತಂದಿಟ್ಟಳು. ವಾಡಿಕೆಯಂತೆ ಮೊದಲು ’ಫ’ನನ್ನು ಎಬ್ಬಿಸಲು ಹೋದಳು. ಆತನ ದೇಹ ತಣ್ಣಗಾಗಿ ಹೋಗಿತ್ತು. ಶ್ವಾಸ ನಿಂತಿತ್ತು. ಆತ ನಿದ್ದೆಯಲ್ಲಿಯೇ ಶಾಂತವಾಗಿ ಪ್ರಾಣ ತ್ಯಜಿಸಿದ್ದ. ಎಷ್ಟೋ ದಿನಗಳಿಂದ ತನ್ನ ಜೀವನದ ಒಂದು ಭಾಗವೇ ಆಗಿದ್ದ ಈ ’ಫ’ನ ಬಗ್ಗೆ ನರ್ಸ್ ದುಃಖಿಸಿದಳು. ಕೂಡಲೇ ವಾರ್ಡ್‌ಬಾಯ್‌ಗಳನ್ನು ಕರೆದು, ದೇಹವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗಲು ಆಕೆ ಸಿದ್ಧಮಾಡಿ, ಭಾರವಾದ ಹೃದಯದಿಂದ ಮಹಡಿಯಿಳಿದು ಹೊರಟು ಹೋದಳು.

ದಿನಗಳುರುಳಿದವು.

’ಬ’ನ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತು. ’ಫ’ನ ಸಾವಿನಿಂದಾಗಿ ಆತ ದಿನವೂ ಕುಳಿತುಕೊಳ್ಳುತ್ತಿದ್ದ ಕಿಟಕಿಯ ಬಳಿಯ ಜಾಗ ಈಗ ಖಾಲಿಯಾಗಿತ್ತು. ಈತನ ಮನಸ್ಸೂ ಕೂಡ. ’ಬ’ ತನ್ನ ಆರೋಗ್ಯ ಸ್ವಲ್ಪ ಸುಧಾರಣೆಯಾದ ನಂತರ ಆ ನರ್ಸ್ ಬಳಿ ಕೇಳಿದ- ತಾನು ’ಫ’ ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಸ್ವಲ್ಪ ಕಾಲ ಕುಳಿತುಕೊಳ್ಳಬಹುದೇ? ಎಂದು. ಇದರಿಂದ ಸಂತಸಗೊಂಡ ಆಕೆ ಅದಕ್ಕೆ ಬೇಕಾದ ಏರ್ಪಾಟನ್ನು ಮಾಡಿ, ಕಿಟಕಿಯ ಹತ್ತಿರ ತಂದು ’ಬ’ನನ್ನು ಏಕಾಂಗಿಯಾಗಿ ಬಿಟ್ಟು ಹೊರಟುಹೋದಳು.

’ಬ’ ನಿಧಾನಕ್ಕೆ ತನ್ನ ಕೈಗಳ ಮೇಲೆ ಭಾರ ಹಾಕಿದ. ಅಸಾಧ್ಯ ನೋವು. ಆದರು ಲೆಕ್ಕಿಸದೇ ಮೇಲಕ್ಕೆದ್ದು ನಿಧಾನಕ್ಕೆ ತಲೆ ಎತ್ತರಿಸಿ, ತಾನು ಇಷ್ಟು ದಿನವೂ ಮಲಗಿದ್ದಲ್ಲಿಂದ (ತನ್ನ ಒಳಗಣ್ಣುಗಳಿಂದ) ನೋಡಿದ ಹೊರ ಜಗತ್ತಿನತ್ತ ಕಣ್ಣು ಹಾಯಿಸಿದ.

ನಿಧಾನಕ್ಕೆ ಆದರೆ, ಕಾತರದಿಂದ ಕಿಟಕಿಯತ್ತ ಕಣ್ಣು ನೆಟ್ಟ.

ಆದರೆ,

ಆದರೆ, ಕಿಟಕಿಯಾಚೆ ಒಂದು ಖಾಲಿ ಖಾಲಿ ಗೋಡೆ ಮಾತ್ರ ಇತ್ತು.

ಅದರಿಂದ ಹೊರಗೆ ವಿಶಾಲ ಕೊಳವಿರಲಿಲ್ಲ! ದೊಡ್ಡ ಉದ್ಯಾನವೂ ಇರಲಿಲ್ಲ. ಮಕ್ಕಳಾಟವು, ಹಕ್ಕಿಗಳ ಹಾರಾಟವೂ ಕಾಣುತ್ತಿರಲಿಲ್ಲ. ಕಿಟಕಿಯಿಂದಾಚೆಗೆ ಬರೀ ಒಂದು ಗೋಡೆ ಮಾತ್ರ ಇತ್ತು. ಅದು ಮಾತ್ರ ಈ ಕಿಟಕಿಯಿಂದ ಕಾಣುತ್ತಿತ್ತು.

ನರ್ಸ್ ಬಂದ ಕೂಡಲೇ ಆಕೆಯನ್ನು ’ಬ’ ಕೇಳಿದ. ’ಈ ಕಿಟಕಿಂದಾಚೆ ಪ್ರತಿ ದಿನವೂ ನಡೆಯುತ್ತಿದ್ದ ಹಲವಾರು ಸುಂದರ ಸಂಗತಿಗಳನ್ನು ’ಫ’ ನನಗೆ ವಿವರಿಸುತ್ತಿದ್ದ. ಈಗ ಆ ಸುಂದರ ಜಗತ್ತು ಎಲ್ಲಿ ಮಾಯವಾಯಿತು?’

’ಬ’ನ ಮಾತುಗಳಿಂದ ಅಚ್ಚರಿಗೊಳಗಾದ ನರ್ಸ್ ವಿವರಿಸಿದಳು- ’ಫ’ ಒಬ್ಬ ಕುರುಡನಾಗಿದ್ದ. ಆವನಿಗೆ ಕಿಟಕಿಂದಾಚೆಗಿನ ಬಣ್ಣಬಣ್ಣದ ಜಗತ್ತಿರಲಿ, ಕಿಟಕಿಯಿಂದಾಚೆಗಿನ ಗೋಡೆಯೂ ಕೂಡ ಕಾಣುತ್ತಿರಲಿಲ್ಲ’ ಎಂದಳು.

’ಆದರೆ, ಆತ ನಿನ್ನನ್ನು ಜೀವನ್ಮುಖಿಯನ್ನಾಗಿಸಲು, ನಿನ್ನಲ್ಲಿ ಜೀವನೋತ್ಸಾಹ ತುಂಬಲು ಆತ ಪ್ರಯತ್ನಿಸುತ್ತಿದ್ದ ಎನಿಸುತ್ತದೆ. ಅದಕ್ಕಾಗಿ ಆತ ನಿನಗೆ ಪ್ರೋತ್ಸಾಹ ನೀಡುತ್ತಿದ್ದ. ಹೊರಗಿನ ಜಗತ್ತನ್ನು ಕಲ್ಪಿಸಿಕೊಂಡು ವಿವರಣೆ ನೀಡುತ್ತಿದ್ದ ಎನಿಸುತ್ತದೆ. ಎಂಥ ವನುಭಾವ ಅವನು?’ ಎಂದು ಆಕೆ ವಿವರಿಸಿ, ಕಣ್ಣಂಚಿನಲ್ಲಿ ಉಂಟಾದ ನೀರ ಹನಿಯನ್ನು ಒರೆಸಿಕೊಂಡು ಹೊರಟು ಹೋದಳು.
ಕೊನೆ ಹನಿ:

ನಮ್ಮ ಪರಿಸ್ಥಿತಿ ಚೆನ್ನಾಗಿಲ್ಲದಿದ್ಯಾಗ್ಯೂ ಇನ್ನೊಬ್ಬರನ್ನು ಸಂತಸಗೊಳಿಸುವುದರಲ್ಲಿ ಅಪಾರ ಸಂತಸ ಅಡಗಿರುತ್ತದೆ. ನೋವನ್ನು ಹಂಚಿಕೊಂಡರೆ ಕಡಿಮೆಯಾಗುವುದಿಲ್ಲ. ಆದರೆ, ಸಂತಸವನ್ನು ಹಂಚಿಕೊಂಡರೆ ಅದು ದ್ವಿಗುಣಗೊಳ್ಳುತ್ತದೆ. ಈ ದಿನ ಎಂಬುದು ಒಂದು ದೊಡ್ಡ ಕೊಡುಗೆ. ಹೀಗಾಗಿಯೇ ಅದು ವರ್ತಮಾನ ಎನ್ನಿಸಿಕೊಳ್ಳುತ್ತದೆ. ಇಂದು ಮತ್ತು ಎಂದೆಂದಿಗೂ ನೀವು ಇತರನ್ನು ಸಂತಸವಾಗಿಡಬಲ್ಲಿರಾ?

*****
ಇದು ಇಂಟರ್ ನೆಟ್ ಕತೆ

e mail: veerannakumar@gmail.com


ಪ್ರೇಮ ಪರೀಕ್ಷೆ

January 26, 2009

ಇಂಟರ್‌ನೆಟ್ ಕಥೆ

ಪ್ರೇಮ ಪರೀಕ್ಷೆ!

ವೇಗದ ಬೈಕ್. ಹದಿಹರೆಯವೇ ಮೈವೆತ್ತಂತೆ ಓಡುತ್ತಿದೆ- ಕಾಡುಕುದುರೆಯಂತೆ, ಗುರಿಯಿಟ್ಟು ಬಿಟ್ಟ ಬಾಣದಂತೆ, ಸಿಡಿದ ಗುಂಡಿನಂತೆ, ಗಮ್ಮತ್ತಿನಂತೆ! ಸಪೂರ ದೇಹದ ಕೆನೆಯುವ ಕೆಂಗೂದಲ ಚೆಲುವೆ. ಹುಡುಗನೋ ವೈಯ್ಯಾರದ ಹೀರೋ. ಹುಡುಗ ಹುಡುಗಿಯರ ಆಮೋದಕ್ಕೆಲ್ಲಿದೆ ಲಂಗು ಲಗಾಮು. ಮೈಗೆ ಮೈ ಒತ್ತಿ ಬೈಕ್ ಮೇಲೆ ಫಿಕ್ಸಾಗಿದ್ದ ಆ ಪ್ರೇಮಿಗಳ ಜೋಡಿ ಅದೋ ಓಡುತ್ತಿತ್ತು ದೂರ, ದೂರ. ಇನ್ನೂ ದೂರ.

’ಬೇಡ. ಇಷ್ಟು ವೇಗವಾಗಿ ಗಾಡಿ ಓಡಿಸಬೇಡ. ನಿಧಾನ ಮಾಡು’ ಎಂದು ಕೂಗಿದಳು ಕೆಂಗೂದಲ ಚೆಲುವೆ.

’ಅಯ್ಯೋ ನಂಗೆ ಭಯವಾಗುತ್ತೆ. ನಿಧಾನಕ್ಕೆ ಓಡಿಸು’ ಎಂದು ಕಿರುಚಿದಳು. ಆದರೆ, ಹುಡುಗನಿಗೆ ಅದೆಲ್ಲಿಯದೋ ಉತ್ಸಾಹ. ಬೈಕ್‌ನ ಮೂಗುದಾರ ಹಿಡಿಯುತ್ತಿಲ್ಲ ಆತ. ರೊಯ್ಯೆಂದು ಹೋಗುತ್ತಿದೆ ಬೈಕ್ ಪ್ರತಿ ಘಂಟೆಗೆ ೧೦೦ ಕಿ.ಮೀ. ವೇಗದಲ್ಲಿ.

’ನನ್ನ ಮೇಲೆ ನಿನಗೆ ಪ್ರೀತಿ ಇದೆಯಾ?’ ಎಂದು ಕೂಗಿದ ಆತ ಇದ್ದಕ್ಕಿದ್ದಂತೆ.

ಬೀಸುವ ಬಿರುಗಾಳಿಯ ನಡುಗೆ ಸೀಳಿಕೊಂಡು ಬಾಣದಂತೆ ಚಿಮ್ಮುತ್ತಿದ್ದ ಬೈಕಿನಲ್ಲಿ ತನ್ನ ಹಿಂದೆ ಬೈಕ್‌ಮೇಲೆ ಕುಳಿತಿರುವ ತನ್ನ ಪ್ರೇಯಸಿಗೆ ತನ್ನ ಮಾತುಗಳು ಕೇಳುತ್ತಿಲ್ಲವೋ ಏನೋ ಎಂದು ಇನ್ನಷ್ಟು ಜೋರಾಗಿ ಕೇಳಿದ- ಬೈಕಿನ ಶಬ್ದವನ್ನೂ ಮೀರಿದ ದನಿಯಲ್ಲಿ- ’ನನ್ನನ್ನು ಪ್ರೀತಿಸುತ್ತೀಯಾ?’

ಹುಡುಗಿ, ಗಾಳಿಗೆ ಹಾರಾಡುತ್ತಿದ್ದ ತನ್ನ ಅಪಾರ ಕೆಂಗೂಲ ರಾಶಿಯನ್ನು ಹಿಂದಕ್ಕೆ ಸರಿಸಿಕೊಳ್ಳುತ್ತ, ಆರ್ದ್ರ ಹೃದಯಿಯಾಗಿ- ’ಹೂಂ. ನಿನ್ನನ್ನು ಪ್ರೀತಿಸುತ್ತೇನೆ. ಯಾಕೆ ಅನುಮಾನವಾ?’ ಎಂದೆನ್ನುತ್ತ ಆತ ಬೆನ್ನಿಗೆ ಗುದ್ದಿದಳು.

’ನನ್ನನ್ನು ನೀನು ಪ್ರೀತಿಸುವುದು ನಿಜವೇ ಆಗಿದ್ದರೆ ಒಂದು ಬಾರಿ ನನ್ನನ್ನು ಬಿಗಿಯಾಗಿ ತಬ್ಬಿಕೊ’ ಎಂದು ಹೇಳಿದ. ’ಅರೆ, ನಿನಗೇನು ಹುಚ್ಚಾ?’ ನಾನು ಪ್ರೀತಿಸುವುದನ್ನು ನಿನಗೆ ಬಿಗಿಯಾಗಿ ಅಪ್ಪಿ ತೋರಿಸಬೇಕಾ? ಎಂದುಕೊಂಡ ಹುಡುಗಿ, ’ಆಯಿತು. ಐ ಲವ್ ಯೂ’ ಎಂದು ಕಿರುಚುತ್ತ ಬಿಗಿಯಾಗಿ ಅಪ್ಪಿಕೊಂಡಳು. ಆ ಬಿಸಿ ಅಪ್ಪುಗೆಯಲ್ಲಿ ಪ್ರೇಮಿಗಳ ಜೋಡಿ ಅಮಿತಾನಂದ ಪರವಶವಾಯಿತು.

ಮತ್ತೆ ಹುಡುಗ ಹೇಳಿದ- ’ನೀನು ನನ್ನನ್ನು ಪ್ರೀತಿಸುವುದು ನಿಜವೇ ಆಗಿದ್ದರೆ ನನಗೊಂದು ಮುತ್ತು ಕೊಡು’ ಎಂದ. ಆಕೆ ಬೈಕ್‌ನ ಫುಟ್‌ರೆಸ್ಟ್ ಮೇಲೆ ಬಿಗಿಯಾಗಿ ಕಾಲಿಟ್ಟು, ಓಡುತ್ತಿದ್ದ ಬೈಕ್‌ನಿಂದಲೇ ಎದ್ದು ನಿಂದು ಆತನ ಬಲಗೆನ್ನೆಗೆ ಬಿಗಿಯಾಗಿ ಮುತ್ತಿಟ್ಟಳು. ಎಡಗೆನ್ನೆಯನ್ನು ಮೃದುವಾಗಿ ಚಿವುಟಿದಳು. ಅವನಿಗೆ ಹಾಯೆನಿಸಿದಂತಾಯಿತು.

ಅವಳು ತನ್ಮಯತೆಯಿಂದ ಕಕ್ಕುಲತೆಯಿಂದ ಅಭಿಮಾನದಿಂದ ಅವನ ಕೊರಳ ಬಳಸಿ, ಬಗ್ಗಿ ಅವನ ಮುಖವನ್ನೇ ನೋಡುತ್ತ ಕೂಗಿದಳು- ’ಆಯಿತಾ ನಿನ್ನ ಪ್ರೇಮ ಪರೀಕ್ಷೆ?’

’ಇಲ್ಲ’ ಎಂದುಬಿಟ್ಟ ಆ ಕಟುಕ ಪ್ರೇಮಿ.

’ನೀನು ನನ್ನನ್ನು ನಿಜಕ್ಕೂ ಪ್ರೀತಿಸುವುದೇ ಆಗಿದ್ದರೆ ನನ್ನ ತಲೆಯ ಮೇಲಿನ ಹೆಲ್ಮೆಟ್ ತೆಗೆದುಕೊಂಡು ನೀನು ಹಾಕಿಕೋ ನೋಡೋಣ’ ಎಂದ. ಇದೇನು ಮಹಾ ಕೆಲಸ ಹೇಳುತ್ತಿ ಮಾರಾಯಾ. ಕೊಡು ಹಾಕಿಕೊಳ್ಳುತ್ತೇನೆ ಎಂದು ಅವಳು ಆತನ ಹೆಲ್ಮೆಟ್ ತೆಗೆದುಕೊಂಡು ಹಾಕಿಕೊಂಡಳು.

’ಸರಿಯಾಗಿ ಹಾಕಿಕೊಂಡೆಯಾ?’ ಎಂದು ಮತ್ತೆ ಕೇಳಿದ. ಅವಳು ಹೂಂ ಎಂದು ಅವನನ್ನು ಬಿಗಿಯಾಗಿ ಅಪ್ಪಿಕೊಂಡು ತನ್ಮಯತೆಯಿಂದ ಕಣ್ಣು ಮುಚ್ಚಿ ಆತನ ಬೆನ್ನಿಗೆ ಒರಗಿದಳು. ವೇಗವಾಗಿ ಗಾಡಿ ಓಡುತ್ತಿರುವ ಜೋಷ್ ಅನುಭವಿಸುತ್ತಿದ್ದಳು.

ಕೆಂಗೂದಲ ಹುಡುಗಿ ಪ್ರೇಮದ ಮತ್ತಿನಲ್ಲಿ ಕಣ್ಣು ಮುಚ್ಚಿ ಕೆಲ ಕ್ಷಣಗಳು ಕಳೆದಿರಬಹುದು!

ಏನೋ ಭೀಕರ ಸದ್ದಾದಂತಾಯಿತು. ಕರಕ್… ಕಟ್… ಢಂ…!!!!

ಕಣ್ಣು ತೆರೆದು ನೋಡುವಷ್ಟರಲ್ಲಿ ಭೀಕರ ಅಪಘಾತವಾಗಿ ಹೋಗಿತ್ತು. ತನ್ನ ತಲೆಗೆ ಹೆಲ್ಮೆಟ್ ಇದ್ದುದರಿಂದ ತನಗೆ ಏನೂ ಆಗಿರಲಿಲ್ಲ. ಆದರೆ, ಆತನಿಗೆ ಹೆಲ್ಮೆಟ್ ಇಲ್ಲದ್ದರಿಂದ ತಲೆಗೆ ಭೀಕರ ಗಾಯವಾಗಿ ರಕ್ತ ಸೋರುತ್ತಿತ್ತು.

ನಂತರ ಎಲ್ಲವೂ ನಿಚ್ಚಳವಾಯಿತು. ಬೈಕ್‌ನ ಬ್ರೇಕ್‌ಫೇಲ್ ಆಗಿತ್ತು. ನಿಧಾನಕ್ಕೆ ಓಡಿಸು ಎಂದರೂ ಆತನಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ತಮ್ಮ ಬೈಕ್ ಅಪಘಾತಕ್ಕೆ ಈಡಾಗುವುದು ನಿಶ್ಚಿತವೆಂದು, ಸಾಯುವುದು ಖಚಿತವಾದ ನಂತರ, ತನ್ನ ಪ್ರೇಯಸಿ ಬದುಕಲಿ ಎಂಬ ಉದ್ದೇಶದಿಂದ ಹುಡುಗ ಹಾಗೆ ಮಾಡಿದ್ದ. ಬ್ರೇಕ್ ಫೇಲ್ ಆದದ್ದನ್ನು ಆಕೆಗೆ ತಿಳಿಸದೇ, ಆಕೆಯಿಂದ ಕೊನೆಯದಾಗಿ ಒಂದು ಬಿಸಿ ಅಪ್ಪುಗೆ ಪಡೆದ. ಹಾಗೆಯೇ ಒಂದು ಬಿಸಿ ಮುತ್ತನ್ನೂ ಕೂಡ. ತಾನು ಸತ್ತರೂ ಪರವಾಗಿಲ್ಲ- ತನ್ನ ಪ್ರೇಯಸಿಯ ಜೀವ ಉಳಿಯಲಿ ಎಂದು ಆಕೆಗೆ ಬಲವಂತವಾಗಿ- ಪ್ರೇಮ ಪರೀಕ್ಷೆಯ ರೂಪದಲ್ಲಿ ಹೆಲ್ಮೆಟ್ ತೊಡಿಸಿದ. ನಂತರ ಅವನು ಎಣಿಸಿದಂತೆಯೇ ಬೈಕ್ ಅಪಘಾತಕ್ಕೆ ಈಡಾಯಿತು. ತಾನು ಪ್ರಾಣ ತೆತ್ತ. ತನ್ನ ಪ್ರೇಯಸಿ ಬದುಕಿದಳು.

’ಪ್ರೀತಿ ಅಮರ. ಪ್ರೇಮ ಎಂದರೆ ಸ್ವಾರ್ಥವಲ್ಲ. ಪ್ರೇಮ ಎಂದರೆ ತ್ಯಾಗ ಎಂಬುದನ್ನು ಆತ ತನಗಾಗಿ ಮಾಡಿ ತೋರಿಸಿದನಲ್ಲ!’
ಹುಡುಗಿಯ ಕಂಗಳಲ್ಲಿ ಧಾರಾಕಾರ ನೀರು!!

* * *

ಇದು ಇಂಟರ್ ನೆಟ್ ಕತೆ
******


ಕಾಣದಂತೆ ಮಾಯವಾದಳು!

January 26, 2009

ಹೀಗೊಂದು ಸಣ್ಣ ಕತೆ: ಸುಮ್ನೆ ಓದಿ ಬಿಡಿ- ವೀರಣ್ಣ
picture

ಅಪ್ಪ ಅದನ್ನು ಒಂದು ವಸ್ತುವೆಂದು ಪರಿಗಣಿಸಿರಲೇ ಇಲ್ಲ. ಅದು ಅಪ್ಪನ ಅತ್ಯಂತ ಪ್ರೀತಿಯದ್ದಾಗಿತ್ತು. ಆತನಿಗೆ ಜೀವವೇ ಆಗಿತ್ತು. ಅದರ ಮೇಲಿನ ಅಪ್ಪನ ಪ್ರೀತಿಗೆ ನಾವೆಲ್ಲ ಕರುಬುತ್ತಿದ್ದೆವು. ಅಮ್ಮ ಮೊದಲ ಬಾರಿಗೆ ಅಪ್ಪನನ್ನು ನೋಡಲು ಬಂದಾಗ ತಂದ ವಾಚಂತೆ ಅದು. ಚಿನ್ನದಿಂದ ಮಾಡಿದ ಆ ವಾಚಿಗೆ ಅಪ್ಪ ತಾವಿಬ್ಬರೂ ಮದುವೆಯಾದ ನಂತರ ಇನ್ನಷ್ಟು ವಜ್ರಗಳನ್ನು ಸೇರಿಸಿದ್ದರು- ಅಮ್ಮನ ಇಚ್ಛೆಯಂತೆ! ಅಮ್ಮ ಹೋದ ಮೇಲೆ ಅಪ್ಪ ಅದನ್ನೇ ಅಮ್ಮನೆಂದು ತಿಳಿದಿದ್ದರು. ಅದನ್ನು ಅತಿಯಾಗಿ ಪ್ರೀತಿಸುತ್ತಿದ್ದರು! ಎಲ್ಲಕ್ಕೂ ಮಿಗಿಲಾಗಿ!! ಅದು ಅಮ್ಮನ ಪ್ರತಿರೂಪವಾಗಿತ್ತು.
 ಇಂಥ ಅಮೋಘ ವಾಚೊಂದು ಅದೊಂದು ದಿನ ಕಾಣೆಯಾಗಿ ಹೋಯಿತು. ಅಪ್ಪ ಆಕಾಶ ಭೂಮಿ ಒಂದು ಮಾಡಿಬಿಟ್ಟರು. ಮನೆಯನ್ನೆಲ್ಲ ಇಂಚಿಂಚು ಹುಡುಕಿದೆವು. ಯಾವೆಲ್ಲ ದೇವರಿಗೂ ಕಾಯಿ ಕೊಟ್ಟೆವು. ಊಹೂಂ, ಆದರೆ ಅದು ಸಿಗಲೇ ಇಲ್ಲ. ಮನೆಯಲ್ಲಿ ಅಪ್ಪ, ಮನೆಯ ನಾಯಿ ಪಿಲ್ಲು, ನಾನು ಮತ್ತು ಹರಿಣಿ ಇಷ್ಟೇ ಜನ. ಜೊತೆಗೆ ಆಕೆಯೊಬ್ಬಳಿದ್ದಳು- ಕೆಲಸದಾಳು. ಹೆಸರು ರುಕುಮಿ. ಇಷ್ಟು ಜೀವಗಳನ್ನು ಬಿಟ್ಟರೆ ಮನೆಯಲ್ಲಿ ಬೇರೆ ಯಾರೂ ಇಲ್ಲ. ನಾಯಿ ನಮ್ಮ ಮನೆಯಲ್ಲಿಯೇ ಮುದುಕನಾಗಿತ್ತು. ರುಕುಮಿ ಈ ಮನೆಯಲ್ಲಿ ಅಮ್ಮ ಹೊಸದಾಗಿ ಬಂದಂದಿನಿಂದಲೂ ಕೆಲಸ ಮಾಡುತ್ತಿದ್ದಳು. ಅವಳನ್ನು ನಾವು ಬೇರೆಯವಳು ಎಂದು ತಿಳಿದೇ ಇರಲಿಲ್ಲ. ಅವಳೂ ಅಷ್ಟೇ. ಈ ಮನೆ ಬಿಟ್ಟರೆ ತನಗೆ ಅಸ್ತಿತ್ವವೇ ಇಲ್ಲವೇನೋ ಎಂದು ತಿಳಿದುಕೊಂಡಿದ್ದಳು. ಎಂದೂ ಎರಡು ಮಾತಾಡಿದವಳಲ್ಲ. ತಾನಾಯಿತು- ತನ್ನ ಕೆಲಸವಾಯಿತು. ಮನೆಯನ್ನು ನಿತ್ಯ ಸಹನೀಯವಾಗಿಸುವವಳು ರುಕುಮಿಯೇ. ನಾವು ಎಂದೂ ಆಕೆಯನ್ನು ನಮ್ಮ ಕೆಲಸದಾಳು ಎಂದು ತಿಳಿದಿರಲಿಲ್ಲ.
 ವಾಚು ಕಳೆದ ಮೂಡಿನಲ್ಲಿ ಎಲ್ಲರೂ ಮೂಢರಾಗಿದ್ದೆವು. ಎಲ್ಲೂ ಸಿಗದಾದಾಗ ಎಲ್ಲರನ್ನೂ ಸಂಶಯಿಸುವಂತಾಯಿತು. ಕೊನೆಗೆ ಈ ಕೆಲಸದವಳೇ ತೆಗೆದುಕೊಂಡಿರಬೇಕು ಎಂದು ಯಾರೋ ರುಕುಮಿಯ ಮೇಲೆ ಗೂಬೆ ಕೂರಿಸಿದರು.
ಅದೇ ಕೊನೆ! ರುಕುಮಿ ಮನೆ ಬಿಟ್ಟು ಹೋದಳು!!
 ಒಂದು ವರ್ಷ ಕಳೆದಿರಬಹುದು. ನಮ್ಮ ತಂದೆ ತನ್ನ ವಾಚನ್ನು ತಮ್ಮ ಕಚೇರಿಯ ಅಲ್ಮೇರಾದಲ್ಲಿ ಮರೆತು ಬಂದಿದ್ದು, ಅದು ಫೈಲುಗಳಡಿ ಹೂತು ಹೋಗಿತ್ತು. ವರ್ಷದ ನಂತರ ಅದು ಸಿಕ್ಕಿತು. ಅಲ್ಲಿ ಇಟ್ಟದ್ದನ್ನು ಅವರು ಮರೆತೇ ಬಿಟ್ಟಿದ್ದರು.
ವಾಚು ಹುಡುಕಿದಂತೆ ರುಕುಮಿಯನ್ನೂ ಹುಡುಕಿದೆವು. ಮನೆಯನ್ನಲ್ಲ! ಊರ ತುಂಬ. ಊರೂರು ಹುಡುಕಿದೆವು.
ವಾಚೇನೋ ಸಿಕ್ಕಿತು. ಆದರೆ, ಆದರೆ ರುಕುಮಿ ಮಾತ್ರ ಸಿಗಲೇ ಇಲ್ಲ!
ಕಾಣದಂತೆ ಮಾಯವಾದಳು!
ತಪ್ಪು ಯಾರದು? ಇಷ್ಟು ವರ್ಷಗಳಾದರೂ ಆ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಲೇ ಇದೆ!!
* * *


ಇನ್ನೆಲ್ಲಿಯ ಕನಸು?

September 6, 2008

ಆಗ ಫೋನಿರಲಿಲ್ಲ

ಮೊಬೈಲಿನ ರಿಂಗಣವಿರಲಿಲ್ಲ

ಬೈಕಿರಲಿಲ್ಲ

ಕಾರಿರಲಿಲ್ಲ!

ಧನ, ದೌಲತ್ತು, ಅಂತಸ್ತು

ಇವ್ಯಾವವೂ ಇರಲಿಲ್ಲ!!

ಆದರೆ, ಬಣ್ಣ ಬಣ್ಣದ ಕನಸುಗಳಿದ್ದವು

ಅವುಗಳಿಗೆ ರೆಕ್ಕೆಗಳಿದ್ದವು

ನೀಲಿ ಆಗಸದಲಿ, ಹುಚ್ಚು ಹೊಳೆಯಲಿ,

ಎಲ್ಲೆಂದರಲ್ಲಿ ಅವು ಹಾರಾಡುತ್ತಿದ್ದವು

ಮತ್ತು ಹಿಡಿದಂತೆ!!

ಆದರೆ, ಆ ಕನಸುಗಳು ಅರಳುವ ಸಮಯದಲ್ಲಿ

ಅಲ್ಲಿ ನೀನರಲಿಲ್ಲ. ನಿನ್ನ ಸೊಲ್ಲಿರಲಿಲ್ಲ!!!

 

ಈಗ ಕಾರಿದೆ

ಬೈಕಿದೆ, ಬ್ರೇಕಿದೆ

ನೀನು ಇದ್ದೀಯಾ,

ನಿನ್ನ ಸೊಬಗು, ಹೊಳಪು ವೈಯ್ಯಾರ ಎಲ್ಲವೂ ಇದೆ!

ಆದರೆ, ಕನಸುಗಳಿಲ್ಲ

ಅವುಗಳಿಗೆ ರೆಕ್ಕೆ- ಪುಕ್ಕಗಳಿಲ್ಲ

ಹಾರಲು ಶಕ್ತಿಯಿಲ್ಲ!

ಎಲ್ಲವೂ ಕೋಶಿ ಪ್ರವಾಹದಲಿ,

ಜೈಪುರ, ಅಹ್ಮದಾಬಾದ್  ಬಾಂಬುಗಳಲಿ

ಅಮರನಾಥನ ಜಮೀನಿನಲಿ, ಜಮ್ಮುವಿನ ಜೀವದಲಿ

ಕಾವೇರಿಯ ನೀರಿನಲಿ

ಪರಮಾಣು ಒಪ್ಪಂದದಲಿ

ರೈತರ ಆತ್ಮಹತ್ಯೆಗಳಲಿ

ಮಾರುಕಟ್ಟೆಯ ಬಣ್ಣದ ಪ್ಯಾಕೆಟುಗಳಲಿ

ಕಳೆದು ಹೋಗಿವೆ ಗೆಳತಿ!!

ಕಳೆದು ಹೋಗಿವೆ!!!


ಕಥೆ-1

August 10, 2008

ಇನ್ನೂ ಯಾಕ ಬರಲಿಲ್ಲವ್ವಾ..!?
ವೀರಣ್ಣ ಕಮ್ಮಾರ

ಮಟ ಮಟ ಮಧ್ಯಾನ ಆಗಿತ್ತು. ಲಡಕಾಸಿ ಬಸ್ ನಿಲ್ದಾಣದೊಳಗ ಬಂದು ನಿಂತು ಧೂಳ ಎಬ್ಬಿಸಿತ್ತು. ಅಲ್ಲಿಂದ ಜನತಾ ಪ್ಲ್ಯಾಟ್‌ಗೋಳು ಎಲ್ಲೆದಾವಂತ ಕೇಳಿಕೋಂತ ಹೋಗುದ್‌ರೊಳಗ್‌ಅ ದೂರದ ಗುಡದಾಗ ಮನಿಗೋಳು ಸಾಲಕ ಡಬ್ಬಿಗೋಳನ್ನ ಒಂದರ ಪಕ್ಕ ಒಂದನ್ನ ಇಟ್ಟಂಗ ಕಂಡವು. ರಸ್ತೆ ಬಾಜೂಕ ತೆಂಬಿಗಿ ತಗೊಂಡ ಕುಂತಿದ್ದ ಗುರುತುಗೋಳಿದ್ದು, ಆ ಹೇಸಿಗಿ ಮ್ಯಾಲ ಕಾಲಿಡಲಾರದಂಗ ಎಚ್ಚರಿಕಿಯಿಂದ ನಡಕೋತ ಹ್ವಾದರ, ದೂರದಾಗ ಚಿಗವ್ವ ಮನಿ ಬಾಜೂಕ ಎಮ್ಮಿ ಮೈ ತೊಳಿತಿದ್ದದ್ದ ಕಂಡು ಆ ಕಡೆ ಹೆಜ್ಜೆ ಹಾಕಿನ್ನಿ. ನಾ ಬಂದದ್ ನೋಡಿ ಆಕಾಶದಾಗಿನ ಮೋಡಗಳೆಲ್ಲ ಒಂದದಪಾ ಧಬಾ ಧಬಾ ಮಳಿ ಸುರದಷ್ಟು ಸಂತೋಷಗೊಂಡ ಚಿಗವ್ವ ಓಡಿ ಹೋಗಿ ಕೈ ಕಾಲು ತೊಳಕೊಂಡ, ಮಾಸಿದ್ದ ತನ್ನ ಸೀರಿನ ಛಲೋತಮಗೆ ಹೊತಗೊಂಡ ನಿಂತ್ಲು. ಬಾಗಲದಾಗಿನ ಎಮ್ಮಿಯನ್ನು ಹಿಂದಗಡೆಕ ಹೊಡಕೊಂಡೋಗಿ ಇರಪಕ್ಸಿ ಕಟ್ಟಿಬಂದ. ಇವೇಕಾನಂದ, ಅಡಿವೆಪ್ಪ ಎಲ್ಲಾರೂ ಓಡಿಬಂದ್ ಕೈಯಾನ ಬ್ಯಾಗ್ ಇಸಗೊಂಡು ದುಡುದುಡು ಮನಿ ಒಳಗ ಹ್ವಾದರು.
 ಏನಬೇ, ಮನ್ಯಾಗ ಎಮ್ಮಿ ಸಾಕೂದಲ್ದ ಆಡಾನೂ ಸಾಕೀದಿಯಲ್ಲ? ಅಂತ ಕೇಳಿದಾಗ, ’ಆಡಾ ಅಷ್ಟ ಯಾಕಪಾ ಆ ಕಡೆ ನೋಡ- ಕೋಳೀನೂ ಸಾಕೀನ. ಈಗ ೪೨ ಕೋಳಿ ಅದಾವು, ಸದ್ದೇಕ ಮೂರು ಕೋಳಿಗಳು ಮರಿಗಿ ಕುಂತಾವು, ಅವಷ್ಟು ಬಂದೂವಂದ್ರ ಒಂದ ನೂರು ಕೋಳಿಗಳಕ್ಕಾವು’ ಅಂತ ಚಿಗವ್ವ ಹೇಳೂವಾಗ ಅಕಿ ಮುಖದಾಗ ಒಂದೀಟ ಹೆಮ್ಮೆ ಹಣಿಕಿ ಹಾಕತಿತ್ತ.
* * *
ಊಟಕ್ಕ ಕುಂತಾಗ ಚಿಗವ್ವ ತನ್ನ ಗಂಡ, ಅಂದ್ರ ಕಾಕಾನ ಮಾತ್ ತಗದ್ಲು.
’ಅಂವಾ ಹೋಗಿ ಒಂಬತ್ ವರ್ಸ್ ಆಗಾಕ ಬಂತ್ ನೋಡಪಾ, ಇನ್ನತಕಾ ಅಂವಾ ಬಂದಿಲ್ಲ’ ಅಂತ ಚಿಗವ್ವ ಹೇಳುವಾಗ ಆಕಿ ಕಣ್ಣಂಚಿನಾಗ ನೀರಹನಿ ಮಿಂಚಾಕಹತ್ತಿತ್ತ.
ಮದಿವಿ ಆಗಿ ಆರು ಮಕ್ಕಳನ್ನು ಕೊಟ್ಟು ಊರು ಬಿಟ್ಟು ಅದೆಲ್ಲಿಗೋ ಓಡಿ ಹೋಗಿ ಒಂಬತ್ತು ವರ್ಷ ಆದರೂ, ತನ್ನ ಹೆಂಡತಿ ಮಕ್ಕಳ ಬಗ್ಗೆ ಚಕಾರ ಎತ್ತದ, ಸೋಮಪ್ಪ ಮಲ್ಲಪ್ಪ ಕಲ್ಯಾಣಪುರಕರ್ ಎಂಬ ದರವೇಸಿ ಗಂಡನ ಬಗ್ಗೆ ಚಿಗವ್ವಗ ಇನ್ನೂ ಯಾಕಲತೆ ಬಿಟ್ಟಿಲ್ಲ ನೋಡ- ಅಂತ ನನಗ ಮನಸಿನ್ಯಾಗ ಕೊರ್‍ಯಾಕ ಹತ್ತಿತು. ಊಟ ನಿಧಾನಾತು.
’ನೀ ಅರಾಮ ಅದಿ ಇಲ್ಲಬೇ. ಅಂವ್ನ ಚಿಂತಿ ಬಿಟ್ಟಬಿಡ. ನಿನ್ನ ಮಕ್ಕಳ ಅಂತ ನಾವದೇವಲ್ಲ, ನಾವು, ನಿನ್ನನ್ನ ಚಲೋತಮಾಗಿ ನೋಡ್ಕೂತೇವಿ. ನೀಯೇನೂ ಚಿಂತಿ ಮಾಡಬ್ಯಾಡಬೇ. ಭಾಳ ದಿನದ ಮ್ಯಾಲ ಅಣ್ಣಾ ಊರಿಂದ ಬಂದಾನ ಪಾಪ. ಅಂವ್ನ ಮುಂದ ಎಲ್ಲಾನೂ ತಗೀಬ್ಯಾಡ’ ಎಂದು ಎರಡನೇ ಮಗ ಇರಪಕ್ಸಿ ಹೇಳಿದರೂ ಚಿಗವ್ವನ ಕಣ್ಣೆಂಬೋ ಗೋಕಾಕ ಫಾಲ್ಸ್‌ನಿಂದ ದಬಾ ದಬಾ ನೀರು ಬೀಳೋದು ಮಾತ್ರ ನಿಲ್ಲಲಿಲ್ಲ.
 ’ಈ ಒಂಬತ್ತ ವರ್ಷದಾಗ ಏನೇನೆಲ್ಲ ಆಗಬೇಕಿತ್ತೋ ಅದೆಲ್ಲಾ ಆಗಿ ಹೋತು. ಆರನೇ ಮಗಾ ಸಂದೀಪ ಇನ್ನಾ ತೊಟ್ಟಲಾಗ ಇದ್ದ. ಒಂದ ರಾತ್ರಿ ಇದ್ದಕ್ಕಿಂದಂಗ ಎಚ್ಚರ ಆತು. ಎದ್ದ ಹೊರಗ ಹೋಗಿ ಒಂದಕ್ಕ ಕುಂತ ಬಂದ್ನಿ. ಅಯ್ಯ ಶಿವನ, ಎಸ್ಟ್ ಟೈಮ್ ಆಗೇತಿ; ಇಂವ ಎದ್ದು ಆಗ ಹೊರಗಡೆಕ ಹೋಗ್ಯಾನಲ್ಲ? ಅನಿಸಿತ್ತ. ಅಂದೂ ದಿನಾ ಬೆಳಕಾಗೂವಂಗ ಬೆಳಕಾತು. ಆದರ, ನನ್ನ ಬಾಳಿಗೆ ಮಾತ್ರ ಅಂದಿನಿಂದ ಇನ್ನತನಕಾ ಬೆಳಕ ಆಗಿಲ್ಲ. ಆ ರಾತ್ರಿ ಅಂವಾ ಎದ್ದ ಹೋದಾಂವ ಎಲ್ಲಿ ಹ್ವಾದ್ನೋ ಏನೋ; ಒಂದೂ ಗೊತ್ತಾಗವಲ್ತ.
 ’ಅಂವಾ ಹ್ವಾದ ಮ್ಯಾಲ ನಿಮ್ಮ ಸಣ ಮಾಮಾ ಇಡೀ ಬೆಳಗಾಂವ ಜಿಲ್ಲಾ, ಹುಬ್ಬಳ್ಳಿ ಧಾರವಾಡಾ, ವಿಜಾಪೂರ, ಗುಲಬರಗಾ, ಬೀದರ, ಸಾಂಗ್ಲಿ, ಈಚಲಕರಂಜಿ, ಕಡೀಕ ಪುನಾ ತಂಕಾ ಹೋಗಿ ಹುಡುಕಿ ಬಂದ. ಸಾವಿರಾರು ರೂಪೈ ಬಸ್ ಚಾರ್ಜ್ ಸುರದಾ. ತಂಗಿ ಬಾಳೆ ನೆಟ್ಟಗಾಗಲಿ ಅಂತ ಅಂವಾ ಏನೆಲ್ಲಾ ಮಾಡಿದಾ. ಆದ್ರೂ ಎಲ್ಲಿ ಎತ್ತ ಅಂತ ಅಂವಂದು ಪತ್ತೆ ಹತ್ತಲಿಲ್ಲ. ಆದ್ರ ಕೊಲ್ಲಾಪುರದಾಗ ಕಟಗಿ ಅಡ್ಡೆದಾಗ ಕೆಲಸಾ ಮಾಡಿಕೋತ ಅದಾನಂತ ಒಂದ್‌ಸಲ ಸುದ್ದಿ ಬಂದಿತ್ತ. ಅದ್‌ಅ ಸುದ್ದಿ ಎಳೀ ಹಿಡಕೊಂಡ ನಿಮ್ಮ ಮಾಮಾ ಹೋಗಿ ಅಂವ್ನ ಬೆಟ್ಟಿ ಮಾಡಿ ಬಂದಾನ. ಇನ್ನಾ ಯೌಳ್ ತಿಂಗ್ಳಕ್ಕ ಆಗೂವಸ್ಟ ಕೆಲಸೈತಿ; ಅದನ್ನ ನಾನ ಮುಗಸಾಗ ಬೇಕಾಗೇತಿ; ಮುಗಿಸಿದ ಮ್ಯಾಲ ನಾನ್‌ಅ ಬರತೀನಿ, ನೀವ್ಯಾರೂ ಕರ್‍ಯಾಕ ಬರಬ್ಯಾಡರಿ’ ಅಂತ ಎರಡ್ ಸಲ ಹೇಳಿದ್ದಂತ. ಇದಾಗಿ ಈಗ ಐದ್ ವರ್ಷ ಆಗಾಕ ಬಂದೈತಿ. ಈಗ ಮತ್ತ ಸುದ್ದಿ ಬಂದೈತಿ. ಅಂವಾ ಕೊಲ್ಲಾಪೂರದಾಗೋ, ಸಾಂಗ್ಲಿ ಒಳಗೋ ಅದಾನಂತ. ನೀನರೆ ಒಂದೀಟ ಪ್ರಯತ್ನ ಮಾಡಿ ಕರಕೊಂಡ್ ಬಂದರ ಛಲೋ ಆಗತೈತಿ. ನಿನಗ ಪುಣ್ಯ ಬರತೈತಿ’. ಚಿಗವ್ವನ ಕಣ್ಣಿನಲ್ಲಿನ ನೀರಿನ ಧಾರಿ ಜೋರಾತ. ತಾಟಿನ್ಯಾಗ್ ಕೈ ತೊಳದ್ ಎದ್ನಿ.
***
ಈಗ ೧೬-೧೭ ವರ್ಷದ ಹಿಂದ ಬೆಳಗಾಂವ್ ಜಿಲ್ಲಾದ ಒಂದು ಸಣ್ಣ ಊರಿಗೆ ಚಿಗವ್ವನ್ನ ಮದಿವಿ ಮಾಡಿಕೊಟ್ಟಿದ್ರು. ನಮ್ಮವ್ವನ ಮನ್ಯಾಗ ಇಕಿನೇ ಆರನೇದಾಕಿ. ಕೊನೆಯವಳೂ ಹೌಂದು. ಮುದ್ದಿನಂಥಾ ಮಗಳು. ಎಲ್ಲರಿಗಿಂತಲೂ ತುಸು ಚೆಂದ. ಆಕಿ ಮ್ಯಾಲ ಎಲ್ಲರದೂ ಭಾಳ ಅಂದ್ರ ಭಾಳ ಪಿರಿತಿ. ಇಬ್ಬರು ಅಣ್ಣಂದಿರು ತಂಗಿಯ ಮಾತಿನ ಲಕ್ಷ್ಮಣ ರೇಖಾ ದಾಟವರಲ್ಲ. ಅಕಿ ಹೇಳಿದ್ದ್‌ಆ ಲಾಸ್ಟ್ ಜಜ್‌ಮೆಂಟ್. ರಾಜಕುಮಾರಿ.., ರಾಜಕುಮಾರಿ ಹಂಗ ಬೆಳೆದಾಕಿ. ಮನಿಗೆ ಸತತ ಬೆಳದಿಂಗಳ್‌ಅ ಆಗಿದ್ದಾಕಿ.
 ಮದಿವಿ ಆಗಿ ಹ್ವಾದ ಮ್ಯಾಲ ಗಂಡನ ಮನಿಗೂ ಬೆಳದಿಂಗಳನ್‌ಅ ಆದಳ. ವರ್ಷ ತುಂಬುದರೊಗ ಮುತ್ತಿನಂಥ ಗಂಡ ಮಗನ್ನ ಹಡದ್ಲು. ಆದ್ರ ಮೊದಲ್ನೇ ಹುಡ್ಗ ಇನ್ನ ದೀಡ ವರ್ಷದಾಂವ ಆಗೂದಾರಗನ್‌ಅ ಇನ್ನೊಬ್ಬ ಹುಟ್ಟದ. ಹೀಂಗ ಎಂಟು ವರ್ಷದಾಗ ಪುತ ಪುತ ಅಂತ ಆರು ಮಕ್ಕಳನ್ನ ಹೆತ್ತ ಮಹಾ ತಾಯಿ ಅನಿಸಿಕೊಂಡ್ಳು. ಮಕ್ಕಳಿಲ್ಲದವ್ರು ಚಿಗವ್ವನ ಮಾರಿ ನೋಡಿ ಹೊಗತಿದ್ರು, ತಮಗೂ ಮಕ್ಕಳಾಗ್ತಾವಂತ ತಿಳದ. ಆದ್ರ ಗಂಡ ಅನ್ನುವ ಪ್ರಾಣಿ ಎಷ್ಟರೇ ದುಡಿದ್ರೂ ಮಕ್ಕಳ ತುತ್ತಿನ ಚೀಲಾ ತುಂಬೋದು ಕಠಿಣ ಆಗಾಕ ಹತ್ತಿತು.
 ಇಂಥಾ ಕಷ್ಟದ ವ್ಯಾಳ್ಯಾದಾಗನ್‌ಅ ಕಾಕಾ ಮನಿ ಬಿಟ್ಟ ನಡದ್‌ಬಿಟ್ಟ. ಇಂದ್ ಬರತಾನ, ನಾಳೆ ಬರತಾನ ಅಂತ ಎಲ್ಲರೂ ಕಾದೇ ಕಾದರು. ಊರೂರಿಗೆ ಹೇಳಿ ಕಳಿಸಿದ್ರು. ಎಲ್ಲೆರೆ ಸಿಕ್ಕಂದ್ರ ಊರಿಗೆ ಬಾ ಅಂತ ಹೇಳ್ರಪಾ, ನಿಮಗ ಕಾಲಿಗೆ ಬೀಳ್ತೀನಿ ಅಂತ ಎಲ್ಲಾರಿಗೂ ಚಿಗವ್ವ ಬೇಡಿಕೊಂಡಿದ್ದಕ್ಕ ಎಲ್ಲರೆ ಲೆಕ್ಕ ಐತೇನು? ’ಮಲಪರಬಾ ಹೊಳಿ ದಂಡ್ಯಾಗ ನಿಂತ ಜಳಕಾ ಮಾಡಾಕತ್ತಿದ್ದಂತ’ ಅಂತ ಒಬ್ರು ಹೇಳಿದ್ರ, ’ಪ್ಯಾಟ್ಯಾಗ ಜಟಗಾ ಗಾಡ್ಯಾಗ ಕುಂತ ಎಲಿ ಅಡಿಕಿ ತಿನಕೋಂತ ಹೋಗೂದನ್ನ ನಾನ್‌ಅ ನೋಡಿನ್ನಿ’ ಅಂತ ಇನ್ನೊಬ್ಬ ಹೇಳಿದ್ರೇ ಹೊರ್ತು ಯಾರೂ ನಕ್ಕಿಯಾಗಿ ಏನೂ ಹೇಳ್‌ಲಿಲ್ಲ. ಸಣ್ಣ ಮಾಮಾ ಹೋಗಿ ಎಲ್ಲಾಕಡೆ ಹುಡುಕಾಡಿ ಬಂದ. ಬೀಗರು-ಬಿಜ್ಜರ ಮನಿಗೆಲ್ಲಾ ಹೋಗಿ ಕೇಳ್ಯಾಡಿ ಬಂದರು.
***
 ಕಾಕಾ ಮನಿ ಯಾಕ ಬಿಟ್ಟ ಹ್ವಾದ ಅನ್ನೂದು ನನಗಂತೂ ಒಂದ್ ದೊಡ್ಡ ಯಕ್ಷ ಪ್ರಶ್ನ್ ಆಗಿತ್ತ. ಕಾಕಾ ದುಡದ್ ದುಡದ್ ಸಾಕಷ್ಟು ತಂದ್ ಹಾಕ್‌ತಿದ್ದ. ಆದ್ರ ಆರು ಮಕ್ಕಳನ್ನ ಸಾಕೋದು ದೊಡ್ಡ ಹೊರಿ ಆದಂಗಾಗಿ ಏನೇನೋ ಕಸರತ್ತು ಮಾಡಾಕತ್ತಿದ್ದ. ಕಟಗಿ ಅಡ್ಡೆ ಮಾಡಬೇಕಂತೇಳಿ ಒಂದಿಬ್ಬರ ಹಂತೇಕ ಬಡ್ಡಿ ಸಾಲಾ ತಂದ. ಕಟಗಿ ಅಡ್ಡೆ ಚಾಲೂ ಮಾಡಿದಾ. ಆದ್ರ ಅವನ ನಶೀಬು ಭಾಳ ಸುಮಾರಿತ್ತ. ಕಟಗಿ ಅಡ್ಡೆ ಉದ್ದಾರ ಆಗಿಲಿಲ್ಲ. ಸಾಲ ಮೈಮ್ಯಾಗ ಬಂತು. ಸಾಲಗಾರರ ಕಾಟಾ ತಾಳಲಾರ್‍ದ ಮನಿ ಬಿಟ್ಟ ಹೊಂಟ ಅಂತ ಒಂದು ವರ್ಶನ್ ಸಿಕ್ಕಿತು. ಆದ್ರ, ಕಾಕಾನ ವಿಚಾರದಲ್ಲಿ ಅದು ಅಷ್ಟೇನೂ ಸರಿ ಅಲ್ಲ ಅನಿಸ್ತು.
ಇನ್ನೊಂದು ವರ್ಶನ್ ಬ್ಯಾರೇನ ಇತ್ತು.
ಚಿಗವ್ವ ಮೂಲಿಮನಿ ಬಾಳಪ್ಪನ ಹೇಣ್ತಿ ಸತ್ಯವ್ವನ ಹೆಸರ್ ಹೇಳ್ದಲೇ ಅಕಿನ್ನ ಎಪರಾ ತಪರಾ ಬೈತಿದ್ಳು. ಅಕಿಯಿಂದಾಗೆನ್‌ಅ ತನಗಂಡ ಊರು ಬಿಟ್ಟು ಹೋಗುವಂಗ ಆಗೇತಿ ಅಂತಿದ್ಲು. ಈ ಜಾಡ ಹಿಡದ್ ಬೆನ್ನ ಹತ್ತಿದಾಗ ಹೊಸ ಸುಳಿವೊಂದ್ ಸಿಕ್ಕಿತು.
 ಅದೇನಪಾ ಅಂತಂದ್ರ ಬಾಳಪ್ಪನ ಚೆಂದಾನ ಚೆಲ್ವಿ ಹೆಂಡ್ತಿಯಂಬೋ ಹೆಂಡ್ತೀಗೂ ಕಾಕಾಗೂ ಏನೋ ಮಜಕೂರ ನಡದಿತ್ತಂತ. ಮದಿವಿ ಆಗಿ ಏಳೆಂಟು ವರುಸ ಆದ್ರೂ ಮಕ್ಕಳಾಗದ ಬಾಳಪ್ಪನ ಸತಿಮಣಿ ಸತ್ಯವ್ವಗೂ ಕಾಕಾ ಅಂದ್ರ ಬಾಳ ಪಿರಿತಿ ಉಕ್ಕಿಬಂದಿತ್ತು. ಅದು ಯಾಡಮೂರ ಸಲ ಸಾಬೀತನೂ ಆಗಿತ್ತ… ಆದ್ರ ದೊಡ್ಡ ಮನಿತಣಸ್ಥನಾದ ಬಾಳಪ್ಪ, ಎಲ್ಲಿ ತನ್ನ ಮನಿ ಮರ್ಯಾದೆ ಹರಾಜ್ ಆಗಿ ಹೊಕ್ಕತೇನೋ ಅಂತ ಹೆದರಿಕ್ಯಾರ ತನ್ನ ಹೆಂಡ್ತೀನ ದನಕ್ಕ ಬಡದಂಗ ಬಡದ, ತನ್ನ ಹದ್ದಬಸ್ತ್‌ನ್ಯಾಗ ಇಟಕೊಳ್ಳಾಕ ನೋಡಿದ. ಆದರ, ಕಾಕಾಗೂ ಸತ್ಯವ್ವಗೂ ಇದ್ದ ಫ್ರೆಂಡ್‌ಶಿಪ್‌ಗೆ ಮಾತ್ರ ಏಟೇಟೂ ಮುಕ್ಕಾಗಲಿಲ್ಲ. ಅದು ಹೊಳಿದಂಡಿ ಮ್ಯಾಲಿನ ಕರಿಕಿ ಕುಡಿಯಂಗ ಹಬ್ಬತಾ…ನ ಹೋತು.
ಹಿಂಗಾಗಿ ಲಾಸ್ಟ್‌ಗೆ ಕಾಕಾನ ಓಡ್ಯಾಡಿಸಿ ಬಡಿಗಿ ತಗೊಂಡ ಬಡ್ಯಾಕ ಅವರೆಲ್ಲಾ ಹೊಂಚ್ ಹಾಕಿದ್ರೆಂಬೋ ಸುದ್ದೀನೂ ಇತ್ತ. ಆದ್ರ ಆದು ಸಾಧ್ಯವಾಗದೇ ಇದ್ದಾಗ ಲೋಕಲ್ ಗೂಂಡಾಗಳನ್ನು ಬಿಟ್ಟ, ಅವರಿಗೊಂದಿಷ್ಟ ಸೆರೆ ಕುಡಿಸಿ, ಕಿಸೆ ತುಂಬೋವಷ್ಟ ರೊಕ್ಕಾ ತುಂಬಿ, ಇಂವನ್ನ ಹೊಡಸಾಕಂತ ನೋಡಿದಾರ. ಅದ್ಯಾವುದಕ್ಕೂ ಕಾಕಾ ಮಣಿಲಿಲ್ಲ. ಕಾಕಾನ್ನ ಖೂನೀನ ಮಾಡಬೇಕಂತ ಮೂರನಾಕ ಸರ್ತೆ ಕುಡುಗೋಲು ಮಸದ್‌ಬಿಟ್ಟಿದಾನ ಬಾಳಪ್ಪ. ಕತ್ತಲದಾಗ ಅಡಿಗಿಕೊಂಡ್ ಕಾದ್ ನೋಡಿದಾನ. ಆದ್ರ ಖಿಲಾಡಿ ಕಾಕಾ ಸಿಕ್ಕಿಲ್ಲ. ಆಗ ಅಂವಗ ಬೇರೆ ದಾರಿ ತೋರದೇ, ತನ್ನ ಬಂದೂಕನ್ನ ಹೆಗಲಿಗೆ ಹಾಕ್ಕೊಂಡ ಹೊರಟಾನ. ಕಾಕಾ ಸಿಕ್ಕಾಗ ಗುಂಡ್ ಹಾರಿಸಿದಾನ. ತಪ್ಪಿಸಿಕೊಂಡ ಕಾಕಾ ಬಚಾವಾಗ್ಯಾನ. ಆ ಮ್ಯಾಲ ಸುದ್ದಿ ದೊಡ್ಡ ಅಜ್ಜಾಗ ಗೊತ್ತಾಗಿ ’ಸೂಳಿ ಮಗನ್‌ಅ ಎಲ್ಲೆರೆ ಹಾಳಾಗಿ ಹೋಗ್; ಜೀಂವಾ ಉಳಿಸಿಗೋ; ಇಲ್ಲಾಂದ್ರ ನಾನ್‌ಅ ನಿನ್ನ ಕಾಲ್ಮರಿ ತಗೊಂಡ್ ಹೊಡೀಬೇಕಾಗ್ತದ’ ಅಂತ ಬೈದಾಗ, ಕಾಕಾನ ಸ್ವಾಭಿಮಾನಕ್ಕ ಧಕ್ಕಿ ಬಂದಾಂಗಾಗಿ ಮನಿ ಬಿಟ್ಟಾನ’ ಎಂಬುದು ಇಲ್ಲಿ ವರೆಗೆ ತಿಳಿದುಬಂದ ಇನ್ನೊಂದು ವರ್ಶನ್.
***
 ’ನಿಮ್ಮ ಕಾಕಾ ಮನಿ ಬಿಟ್ಟ ಹೋಗೂದಷ್ಟ ತಡಾ; ಸಾಲ ಕೊಟ್ಟ ಶೂರರೆಲ್ಲ ಮನಿ ಮುಂದ ಕುಣ್ಯಾಕ ಹತ್ತಿದ್ರು. ಕಾಲ ಕೆದರಿ ಜಗಳಕ್ಕ ನಿಂತ್ರು. ಆದ್ರ, ನಾ ಯಾವುದಕ್ಕೂ ಹೆದರಲಿಲ್ಲ. ನೀವೇನ್ ನನ್ನ ಕೇಳಿ ಸಾಲಾ ಕೊಟ್ಟಿರಿ? ಸಾಲಾ ಕೊಟ್ಟಿದ್ದಕ ಸಾಕ್ಷಿ ಎಲ್ಲೈತಿ? ಹೆಚ್ಚೂ ಕಡಿಮಿ ಆತಂದ್ರ ನಾ ಟೇಶನ್ ಮೆಟ್ಟಲಾ ಹತ್ತಾಕಿ ಅದೇನು ಅಂತ- ನಾಕ್ ಮಂದಿ ಮುಂದ್ ಹೇಳಿದಾಗ; ಈ ಹೆಣಮಗಳ ಅಸನರಿ ಇಲ್ಲ ಬಿಡ್ ಅಂತ ಒಂದೀಟ್ ಮಂದಿ ಸುಮ್ಮನಾದರ. ನನಗ ಗೊತ್ತ್ ಇದ್ದವರ ಸಾಲಾನೆಲ್ಲ ತೀರಸಾಕಂತೇಳಿ ನನ್ನ ಗಂಡನ ಪಾಲಿನ ನಾಕ್ ಎಕರೆ ಹೊಲಾನ್ನ ನನ್ನ ಕಬ್ಞಾಕ್ಕ ತಗೊಂಡಿನಿ. ಅದರಾಗ ಮೂರ್ ಎಕರೆ ಮಾರಿ ಯಾರ್‍ಯಾರು ಬರ್‍ತಾರೋ ಅವರದೆಲ್ಲ ಸಾಲಾ ಕೊಟ್ಟ, ಇನ್ನ ಈ ಕಡೆ ಏನರೆ ಹಾದರೆಂದರ ಪಾಡ ಹರ್‍ಯಾಕಿಲ್ಲ ನೋಡ್ರಿ ಅಂತ ತಾಕೀತು ಮಾಡಿದ್ನಿ. ಆ ಮ್ಯಾಲ ಯಾರೂ ನಮ್ಮ ಸನೇಕ ಬರಲಿಲ್ಲ.
’ಆದ್ರ, ಬಾಳಪ್ಪ ಅನ್ನೋ ಖೊಟ್ಟಿ ಮುಂಡೆ ಮಗ ಸುಮ್ಮನಿರಬೇಕಲ್ಲ. ಏನೇನೂ ಪಿತೂರಿ ಮಾಡಿ ನಮ್ಮ ಮನಿಗೆ ಬಹಿಷ್ಕಾರ ಹಾಕಬೇಕಂತೇಳಿ ಹೊಂಟಿದ್ರು. ಆದ್ರ ದೊಡ್ಡ ಅಜ್ಜಾ ರಾಜಿಕೀದಾಗ ಅದಾನಲ್ಲ; ಅವನ ವಝನ್‌ನಿಂದಾಗಿ ಯಾರೂ ಅಂಥಾ ಕೆಟ್ಟ ಕೆಲಸಕ್ಕ ಕೈ ಹಾಕಲಿಲ್ಲ ಎಂದು ಹೇಳುತ್ತಲೇ ಚಿಗವ್ವ, ಸಂಜೆ ಆದದ್ದು ನೆನಪಾಗಿ, ತನ್ನ ಮನೆ ಎಂಬ ಜನತಾ ಪ್ಲ್ಯಾಟಿನ ಕುಬ್ಜ ಪಡಖಾನೆಯೊಳಗ ಜ್ವಾಳಾ ಹರವಿಕೊಂಡು ಕೇರಾಕ ಶುರು ಮಾಡಿದಳು.
***
ಚಿಗವ್ವ ಈಗ ಕಲ್ಲು ಆಗಿದಾಳ. ಸಾಲ ಹರಿದು ಹೋತು. ಅದರ ಜತಿಗೆ ಹೊಲನೂ ಹೋತು. ಇರೋ ಹೊಲದಾಗ ಪೀಕ ಬರೂದ್‌ಅ ಕಷ್ಟ. ಅಲ್ಲದ, ಅದನ್ನ ನೋಡವರ್‍ಯಾರು? ಹೊಲಕ್ಕ ಹೋಗಬೇಕಂದ್ರ ಮನ್ಯಾಗ ಸಣ್ಣ ಮಕ್ಕಳು. ಇದ್ದದ್ದರಾಗ ಅಟೀಟು ಬರುವ ಜ್ವಾಳಾ, ಕಾಳಿಂದ ಜೀವನ ನಡೀತಿತ್ತು. ತಿನ್ನುವ ಹೊಟ್ಟೆಗಳು ಬಾಳ ಇದ್ದದ್ದರಿಂದ ದೊಡ್ಡ ಮಗನನ್ನ ತಮ್ಮನ ಊರಿಗೆ ಕಳಿಸಿದ್ಳು. ಅಲ್ಲೆರೆ ಸ್ವಲ್ಪ ಸಾಲಿಗೆ ಹೋಗಿಕೋಂತ, ಏನರೆ ಕೆಲಸಾನಾರಾ ಕಲಿತಂದ್ರ ಚಲೋ ಆಕ್ಕೈತಿ ಅಂತ. ಜನತಾ ಮನಿಗೆ ಅರ್ಜಿ ಹಾಕಿದ್ಲ. ಅದೂ ಮಂಜೂರಾಗಿ ಬಂತು. ದೂರದ ಬೆಂಗಳೂರಾಗಿದ್ದ ಅಕ್ಕನ ಮಗನಿಗೆ ಕಾಗದ ಬರದ ಹಾಕಿ, ಜನತಾ ಮನಿ ಕಟ್ಟಸಾಕ ಸೊಲ್ಪ ರೊಕ್ಕಾ ಕೊಡಪಾ ಅಂದ್ಲು. ಆಂವಾ ದೊಡ್ಡ ಮನಸ ಮಾಡಿ ಒಂದೆಂಟು ಸಾವಿರ ರೂಪಾಯಿ ಕೊಟ್ಟ. ಉಳಿದಿದ್ದನ್ನ ಸರ್ಕಾರ ಹಾಕಿ ಮನಿ ಕಟ್ಟಿಸಿಕೊಟ್ಟಿತು. ಬ್ಯಾಂಕಿನ ಸಾಲದ ಮ್ಯಾಲ ಒಂದ್ ಎಮ್ಮಿ ತಂದುಕೊಂಡಳು. ಇದ್ದ ಒಂದೆಕ್ರೆ ಹೊಲದಾಗ ಎಮ್ಮಿ ಮೇಯಿಸಿಕೋಂತ ಹಾಲನ್ನ ಡೇರಿಗೆ ಹಾಕಾಕ ಶುರು ಮಾಡಿದ್ಲ. ಹಾಲಿನ ರೊಕ್ಕದಾಗ ಸಂತಿ ನಡ್ಯಾಕ ಹತ್ತಿತು. ಆದ್ರ…
ಮನ್ಯಾಗ ಐದು ಮಕ್ಕಳು. ಅವರ ಬೇಡಿಕೆ ದಿನಾ ದಿನಾ ಹೆಚ್ಚಾಗಾಕ ಹತ್ತಿತ. ತಾಯಿ ದುಡದದ್ದು ಸಾಲಲಿಲ್ಲ. ಮೂರನೇ ಮಗನನ್ನ ಹುಬ್ಬಳ್ಯಾಗ ಅಕ್ಕನ ಮನ್ಯಾಗ ಬಿಟ್ ಬಂದ್ಲು. ಆದ್ರ ಒಂದ್ ವರ್ಷ್ ತುಂಬೂದ್ರಾಗನೇ ಇಬ್ಬರೂ ಊರಿಗೆ ವಾಪಸ್ ಬಂದ್ ಬಿಟ್ರು. ಹುಬ್ಬಳ್ಯಾಗಿದ್ದ ರಾಜಾ, ದಿನಾ ಮುಸಲರ ಹುಡುಗರ ಜೋಡಿ ಜಗಳಾ ಮಾಡಿ, ಅವರ ಕೈಯಾಗ ಹೊಡಿಸಿಕೊಂಡ್ ಬರತಿದ್ದ. ಹಿಂಗಾಗಿ ಅಕ್ಕ ಅಂವನನ್ನ ನಿಮ್ಮೂರಿಗೆ ಹೋಗ್ ಅಂತೇಳಿ ಬಸ್ ಹತ್ತಿಸಿ, ಕೈಯಾಗ ಐವತ್ ರೂಪಾಯಿ ಕೊಟ್ಟ ಕಳಿಸಿಬಿಟ್ಟಿದ್ಲ. ಇತ್ತ ತಮ್ಮನ ಮನ್ಯಾಗಿದ್ದ ದೊಡ್ಡ ಮಗಾ ಸಿದ್ದ ಮಾವನ ಹೆಂಡತಿ ಕಾಟಾ ತಾಳದೇ ಓಡಿ ಬಂದಿದ್ದ. ಅತ್ತಿಗೆ ದಿನಾಲೂ ಎರಡೆರಡ್ ಕೊಡಾ ಹೊತ್ತ ನೀರ್ ತಂದ್ ಹಾಕತಿದ್ದ. ಅಕೀ ಮಕ್ಕಳ ಮುಕಳಿ ತೊಳದ್, ಅಂಗಿ ತೊಡಿಸಿ ಸಾಲಿಗೆ ಕಳಿಸ್‌ತಿದ್ದ. ಮನಿ ಎಲ್ಲಾ ಕಸ ಹೊಡದು ಝಳ ಝಳ ಮಾಡತಿದ್ದ. ಕಿರಾಣಿ ಅಂಗಡಿಗೆ ಹೋಗೋದು, ಗಿರಣಿಗೆ ಬೀಸಾಕ ಹೋಗೋದು- ಹೀಂಗ್ ಎಲ್ಲಾ ಕೆಲಸಾನೂ ಇವನ ಮ್ಯಾಲ ಬಿದ್ದವು. ದಿನಾಲೂ ಎಲ್ಲಾ ಕಡೆಗೂ ಅಡ್ಯಾಡಿ ಕಾಲ್ ಸವದ್ರೂ ಚೆಪ್ಪಲ್ ಇರಲಿಲ್ಲ. ಒಂದಿನ ತನ್ನ ಮಗನಿಗೆ ಸರಿಯಾಗಿ ಮುಕಳಿ ತೊಳಿಲಿಲ್ಲ ಅಂತೇಳಿ ಮಾವನ ಹೆಂಡತಿ ಕಪಾಳಕ್ಕ ಹೊಡದ್‌ಬಿಟ್ಲು. ಆ ಬರಸಿಡಿಲಿನಂಗ್ ಬಿದ್ದ ಹೊಡತಕ್ಕ ಕಿಂವ್ಯಾಗ್ ರಗುತ ಬಳಾಬಳಾ ಅಂತ ಬೀಳಾಕ್ಹತ್ತಿತ. ಅಂದಿನಿಂದ ಆ ಕಿಂವಿ ಕೇಳೂದ್‌ಅ ಬಂದ್ ಆತು. ಅಂದ್‌ಅ ಕಡಿ, ಅಂವಾ ಆ ಊರ್ ಬಿಟ್ಟ. ಮಾವ ಬರೂದರೊಳಗ ಬಸ್ ಹತ್ತಿ ತಮ್ಮೂರಿಗೆ ಬಂದ್ ಬಿಟ್ಟಿದ್ದ.
ಇಂಥಾ ದುರ್ಬರ ಘಟನೆಗಳು ನಡೆಯುತ್ತಿದ್ದಾಗನ್‌ಅ ಕೊನೆ ಮಗ ಸಂದೀಪು ವಿಪರೀತ ಕಾಲು ನೋವಿನಿಂದ ಬಳಲಾಕ ಹತ್ತಿತ್ತು. ಕಾಲಿಗೆ ಗಾಯ ಆಗಿ ಅದು ಸೋರಾಕ ಹತ್ತಿತ್ತು. ಹೊರಗಿನವರು ಇರ್‍ಲಿ, ಮನ್ಯಾಗಿನವರೇ ಅವನನ್ನ ಮುಟ್ಟಿಸಿಕೊಳ್ಳದಷ್ಟು ಗಬ್ಬು ನಾತ ಹೊಡೀತಿತ್ತು. ಅದನ್ನ ಡಾಕ್ಟರ್ ಹತ್ತಿರ ತೋರಿಸಬೇಕು ಅಂತಂದ್ರ ಚಿಗವ್ವನ ಹಂತೇಕ ರೊಕ್ಕನ ಇರಲಿಲ್ಲ. ಊರಿನ ಡಾಕ್ಟರ್‌ಗೆ ತೋರಿಸಿದರೆ, ಅವನು ತನ್ನ ಕೈಲಾದ ಔಷಧಿ ಕೊಟ್ಟ. ಆದ್ರ, ಈಗ ಸದ್ದೇ ಬೆಳಗಾಂವದ ಸಿವೋಲ್ ದವಾಖಾನಿಗೆ ತಗೊಂಡ್ ಹೋಗ್ರಿ ಅಂತ್ ಹೇಳಿದ. ಅವರಿವರ ಹಂತೇಕ ಒಂದಷ್ಟು ರೊಕ್ಕಾ ಹೊಂದಿಸಿಕೊಂಡ ಸಿವೋಲ್‌ಕ ತಗೊಂಡ್ ಹೋಗೂದ್ರೊಳಗ ಸಂದೀಪುನ ಜೀವದ ದೀಪ ಆರಿ ಹೋಗಿತ್ತು. ಚಿಗವ್ವನ ಜೀವನ ನೌಕೆಗೆ ದೊಡ್ಡ ತೂತ್ ಆಗಿತ್ತು. ಕಂಗಾಲಾದ ಚಿಗವ್ವ ಹಾಸಿಗೆ ಹಿಡಿದ್‌ಬಿಟ್ಟಳು. ಗಂಡ ಮನಿಬಿಟ್ಟ ಓಡಿ ಹ್ವಾದ್ರೂ ಅಷ್ಟ ಚಿಂತಿ ಮಾಡದಾಕಿ ತನ್ನ ಆರನೇ ಮಗ, ಸಂದೀಪು ಸತ್ತಮ್ಯಾಲ ಅಕೀಗೆ ದಿಕ್ಕ್ ತಿಳಿದಂಗಾತು.
***
ಓಡಿ ಹೋಗಿ ಮುಖೇಡಿಯಾದ ಗಂಡನ ನೆನಪಿನಿಂದ ದೂರ ಇದ್ದು, ದೃಢ ಮನಸ್ಸಿನಿಂದ ಚಿಗವ್ವ ಸಂಸಾರ ಮಾಡಾಕ್ಹತ್ತಿದ್ಲ. ಊರೂ ಕೂಡ ಕಾಕಾನ್ನ ಮರತ್ ಬಿಟ್ಟಿತ್ತ. ಚುನಾವಣೆ ನಡದ್ರ ಭಾಷಣಾ ಮಾಡಕ್ ಅಂವ ಬೇಕಾಗಿದ್ದ. ಯಾರ್‍ದರೆ ಮದಿವಿ ನಡೀತಂದ್ರ ಮುಂದ್ ನಿಂತ ಕೆಲಸಾ ಮಾಡಾಕ ಎಲ್ಲಾರೂ ಅಂವ್ನ ಕರೀತಿದ್ರ. ಎಲ್ಲೆರೆ ಯಾರರೆ ಸತ್ತರ ಏನೇನು ಕ್ರಿಯಾ ಕರ್ಮ ಮಾಡಬೇಕಂತ ಕರಾರುವಕ್ಕಾಗಿ ಹೇಳಾಕೂ ಅಂವಾ ಬೇಕಾಗಿದ್ದ. ಏಳೆಂಟು ವರ್ಷದಾಗ ಆರಂದ್ರ ಆರೂ ಗಂಡ್ ಮಕ್ಕಳನ್ನ ಹಡದು, ದೊಡ್ಡ ಮನಿಶ್ಯಾ ಆಗಿಬಿಟ್ಟಿದ್ದ. ಅಂಥ ಸೋಮಪ್ಪ ಮಲ್ಲಪ್ಪ ಕಲ್ಯಾಣಪುರಕರ್ ಅಂತೊಬ್ಬ ಮನುಷ್ಯ ಈ ಊರಾಗ ಬದುಕಿದ್ದ ಅನ್ನೂದ ಜನರ್ ಮನಸಿನಿಂದ ದೂರ ಆಗಿ ಹೋಗಿತ್ತು. ಅಂತಾ ಸಂದರ್ಭದಲ್ಲಿಯೇ ಇನ್ನೊಂದು ಬಿಸಿ ಸುದ್ದಿ ಊರ ತುಂಬ ಹಬ್ಬಿ; ಎಲ್ಲರ ಬಾಯ್ಯಾಗೂ ಎಲಿ ಅಡಿಕಿ ಆಗಿ ಹೋತ್.
ಕಾಕಾನ ಊರ ಬಿಡಸಾಕ ಒಂದ ರೀತಿಯಲ್ಲಿ ಕಾರಣ ಆದ ಬಾಳಪ್ಪನ ಸತಿಮಣಿ ಸತ್ಯವ್ವ ಯಾರೋ ಹೊಸಾ ಗೆಳ್ಯಾನಗೂಡ ಓಡಿ ಹ್ವಾದ್ಲು ಅನ್ನೂದ ಆ ಸುದ್ದಿ. ಪಾಪ ದೇವರಂಥ ಮನಿಶ್ಯಾನ ಮ್ಯಾಲ ಎಲ್ಲಾರೂ ಏನಕೇನರೆ ಹೇಳಿ ಅಂವ್ನ ಊರ ಬಿಡಿಸಿಬಿಟ್ರ ಅಂತ ಕೆಲವರು ಕಾಕಾನ ಮ್ಯಾಲ ತಮ್ಮ ಕಕ್ಕುಲಾತಿ ತೋರಿಸಿದ್ರು. ಇನ್ನೊಂದಿಷ್ಟ್ ಮಂದಿ, “ಅಕಿ ಗುಣಾನ ಹಂತಾದೈತಳ. ಆಗ ಆ ಸ್ವಾಮ್ಯಾ ಬೇಕಾಗಿದ್ದ; ಅಂವಾ ಊರ್‌ಬಿಟ್ಟ ಓಡಿ ಹ್ವಾದ ಮ್ಯಾಲ ಇನ್ನೊಬ್ಬ ಯಾಂವರೆ ಬೇಕಾಗಿದ್ದ- ಅಂತಂದಿತು ಜನಾ. ಇಕಿನ್ನ ಓಡಿಸಿಕೊಂಡ ಹೋಗಾಕ ಅಂವಗ ಧೈರ್ಯ ಇರಲಿಲ್ಲ- ಅದಕ್ಕ ಅಂವ್ನ ಓಡಿ ಹ್ವಾದ. ಈಗ ಇವನ್ಯಾವನೋ ದೊಡ್ಡ ಕುಳ ಅಂತ ಕಾಣಸತೈತಿ- ಗದಿಮಿಕೊಂಡ್ ಹೋಗ್ಯಾನ” ಎಂಬ ಮಾತಗೋಳು ಧಾರವಾಡ ಆಕಾಶವಾಣಿ ಟೇಶನ್ನಿನಾಗ ಪ್ರಸಾರ ಆದಂಗ ಆಗಿಬಿಟ್ವು.
ಹೆಂಗ್ ಓಡಿಸಿಕೊಂಡ್ ಹ್ವಾದ್ನಂತ್‌ಅ? ಗಾಡಿ ತಂದ್ನಿನೇನೋ? ನಸಿಕಿನ್ಯಾಗ ಎದ್ದ್ ಚೆರಿಗಿ ತಗೊಂಡ್ ಹೋಗೂ ನೆಪದಾಗ ಅಕಿ ಓಡಿ ಹೋಗ್ಯಾಳ; ಎಲ್ಯೋ ದೂರದಾಗ ಒಂದ್ ಪಟಪಟಿ ತಂದ್ ನಿಲ್ಲಿಸಿದ್ರಂತ. ಚೆರಿಗಿನ ಅಲ್ಲೇ ಕಂಟ್ಯಾಗ ಒಗದ ಪಟಪಟಿ ಹತ್ತಿ ಓಡಿ ಹ್ಯಾದಳಂತ- ಹೀಂಗ ನೂರಾರು ಅಂತ- ಕಂತ ರೂಮರ್‌ಗಳು ಹಬ್ಬಿ ಮತ್ತ ಕಾಕಾನ ಹೆಸರು ಬೀದಿಗೆ ಬಂದ್ ಬಿಡ್ತು.
ಆದ್ರ, ಆಕಿನ್ನ ಯಾರ, ಯಾಕ ಓಡಿಸಿಕೊಂಡ್ ಹ್ವಾದ್ರು, ಎಲ್ಲಿಗ್ ಹ್ವಾದ್ರು, ಯಾವೂರಿಗೆ ಹ್ವಾದ್ರು ಅನ್ನೂದ್ ಮಾತ್ರ ಗೊತ್ತಾಗಲಿಲ್ಲ. ಬಾಳಪ್ಪ ಅಂದಿನಿಂದ ಊರ ಬಿಟ್ಟ ಗೋಕಾಕ ಸೇರಿದ.
***
ಅಪಾ, ನನ್ ಮಗ್ನ, ನೀ ಹೆಂಗರೆ ಮಾಡ್. ಅಂವಾ ಸೊಲ್ಲಾಪುರದಾಗೋ, ಕೊಲ್ಲಾಪುರದಾಗೋ ಯಾವ್ದೋ ಸಾ ಮಿಲ್‌ನ್ಯಾಗ ಕೆಲಸಾ ಮಾಡ್ತಾನಂತ. ಅಲ್ಲಿಗೆ ಒಂದ್‌ಬರೆ ಹೋಗಿ ನೋಡಿಕೊಂಡ್ ಬಾ. ಅಂವಾ ಎಲ್ಲೆದನಾಂತ ನೀ ಒಂದೀಟ್ ಪತ್ತೆ ಹಚ್ಚಿ ಬಿಡ. ನಾನ್‌ಅ ಬಂದ್ ಅವನನ್ನ ಕರಕೊಂಡ್ ಬರತೇನಿ. ನನ್ನ ಮಾರಿ ಬ್ಯಾಡ; ನಿನ್ನ ಮಕ್ಕಳ ಮಾರಿ ನೋಡ್ಯರೆ ಊರಿಗೆ ಬಾ. ನಿನಗ ಏನೂ ತೊಂದರೆ ಆಗದಂಗ್ ನಾವು ನೋಡಿಕೋತೀವಿ. ಊರಾಗಿನ ’ದೆವ್ವ’ಗಳೆಲ್ಲ ಈಗ ಊರ ಬಿಟ್ಟ ಪರಾರಿ ಆಗ್ಯಾವು. ನೀಯೇನ್ ಚಿಂತಿ ಮಾಡಬ್ಯಾಡ ಅಂತ ನಾ ಹೇಳತೇನಿ. ನನ್ನ ಮಾತ್ ಕೇಳದಿದ್ರ ಇರಪಕ್ಸಿನ್ನ ಕರಕೊಂಡ್ ಹೋಗೂನು. ಇರಪಕ್ಸಿ ಅಂದ್ರ ಅಂವಗ ಭಾಳ ಪ್ರೀತಿ. ಸಣ್ಣಂವ ಇದ್ದಾಗ ಇರಪಕ್ಸಿ ಸತ್ತ್ ಬದಿಕ್ಯಾನ. ಅಂವನ ತೊಡಿಮ್ಯಾಗ ಹಾಕ್ಕೊಂಡ್ ಓಸ್ದಿ ಕುಡಸ್‌ತಿದ್ದ. ಎಸ್ಟೋ ಸಲ ರಾತರ್‌ನ್ಯಾಗ ದವಾಖಾನಿಗಿ ಕರಕೊಂಡ ಹೋಗ್ಯಾನ. ಇಂವ ಉಳಿಲಿ ಅಂತ ಗುಡ್ಡದ ಯಲ್ಲಮ್ಮಗ ಹರಿಕಿ ಹೊತಗೊಂಡಿದ್ದ. ಈಗ ಇರಪಕ್ಸಿ ದೊಡ್ಡಂವ ಆಗ್ಯಾನ ಮತ್ತ್ ಕುಸ್ತಿ ಆಡಾಕ ಹತ್ಯಾನ; ದಿನಾಲೂ ಎಮ್ಮಿ ಹಾಲ ಕುಡದ್ ಕೋಳಿ ತತ್ತಿ ತಿಂದ್ ಗರಡಿ ಮನಿಗಿ ಹೊಕ್ಕಾನ; ಅಂವ್ನ ಮೈ ಭಾಳ ದಾಡಿಸಿ ಆಗೇತಿ, ಮನ್ನಿ ಮನ್ನಿ ದಸರಾದಾಗ ಕುಸ್ತಿ ಒಗದ ಬೆಳ್ಳಿ ಕಡಗಾ ತಂದಾನ ಅನ್ನೂದು ಅಂವಗ ಗೊತ್ತಾದರ ಓಡಿ ಬಂದ್ ಬಿಡತಾನ. ನಡೀ ಮಗನ; ನೀನ ನನ್ನ ದೊಡ್ಡ ಮಗಾ. ನಿಮ್ಮ ಕಾಕಾನ್ನ ಹೆಂಗರೆ ಮಾಡಿ ಹುಡಿಕಿಕೊಂಡ್ ಬಾ. ನನಗಾಗಿ ಅಲ್ಲ; ನಿನ್ ತಮಗೋಳಿಗಾಗಿ, ನನಗೀಗ ಅಂವ್ನ ಅವಶ್ಯಕತಾ ಇಲ್ಲ. ನನ್ನ ಬಾಳ ಮುಗದೈತಿ; ನಿನ್ ತಮಗೋಳಿಗೆ ಅಂವ್ನ ಆಸರಾ ಬೇಕಾಗೇತಿ.. .. .. ಚಿಗವ್ವನ ಮಾತಿನ ಲಹರಿ ಹೀಂಗ್‌ಅ ಮುಂದ್‌ವರಿದಿತ್ತ.
***
ಹಿಂದಿನ ದಿನ ಮಾಮಾ ಫೋನಿನ್ಯಾಗ ಕೆಲ ಸಂಗತಿಗಳನ್ನ ಹೇಳಿದ್ದ. ಅಂವಾ ಹೇಳಿದ ಅಂದಾಜಿನ ಮ್ಯಾಲ, ಕಾಕಾ ಬಾಳಂದ್ರ ಪುಣಾದಾಗ ಇರತಾನ. ಇಲ್ಲಂದ್ರ ಕೊಲ್ಲಾಪುರದಾಗ ಅಥ್ವಾ ಸೊಲ್ಲಾಪುರ. ಹಿಂದಿನ ಸಲ ಮಾಮಾ, ಕಾಕಾನನ್ನ ಭೇಟಿ ಮಾಡಿದ ಕೊಲ್ಲಾಪುರದ ಸಾ ಮಿಲ್‌ನ ಅಡ್ರೆಸ್ ಬರಕೊಂಡ್ ಕಿಸೆದಾಗ ತುರಿಕಿನಿ. ’ನಾ ಒಬ್ಬ ಮದ್ಲ ಹೋಗಿ ಹುಡಿಕಿ ಬರತೇನಿ. ಅಂವಾ ಸಿಕ್ಕಂದ್ರ ಎಲ್ಲಾರೂ ಹೋಗಿ ಕರಕೊಂಡು ಬರೂಣಂತ. ಈಗ್‌ಅ ಇಬ್ಬರು, ಮೂರ್ ಮಂದಿ ಅಂತ ಹ್ವಾದರ ಭಾಳ ಚಲೋ ಆಗೂದಿಲ್ಲ. ಅದೂ ಅಲ್ದ ಈಗ ಬಸ್ ಚಾರ್ಜ್ ಭಾಳೈತಿ. ರಾತ್ರಿ ಆತಂದ್ರ ಇಳಕೊಳ್ಳೂದೆಲ್ಲಿ ಅನ್ನೋ ಪ್ರಶ್ನೆ ಬರ್‍ತದ. ಅದಕ್ಕ ನಾ ಒಬ್ನ ಹೋಗಿ ಬರತೇನಿ ಅಂದ್ರೂ ಚಿಗವ್ವ ಕೇಳಲಿಲ್ಲ. ಇರಪಕ್ಸಿನ ಕರಕೊಂಡ್ ಹೋಗ್. ಒಬ್ಬರ್‌ಕಿಂತ ಇಬ್ಬರ್ ಇರೂದ್ ಬೇಸಿ ಅಂತ ಅಂವನನ್ನೂ ಜತೀಗೆ ಹಚಿಗೊಟ್ಳು.
 ಕೊಲ್ಲಾಪುರದಾಗ ಬಸ್ ಇಳದಾಗ ನಸಿಕಿನ್ಯಾಗ ಯೌಳ್ ಗಂಟೆ ಆಗಿತ್ತ. ಚಾದಂಗಡಿಗಿ ಹೋಗಿ ಮಾರಿ ತೊಳದ, ಒಂದ್‌ಕಪ್ ಚಾ ಕುಡದ ಮಾಮಾ ಕೊಟ್ಟಿದ್ದ ಅಡ್ರೆಸ್ ಹುಡಕೋತ ದ್ವಾದ್ವು. ಯಾವ್ದೋ ಒಬ್ಬ ಪುಣ್ಯಾತ್ಮ ಸಾ ಮಿಲ್ ತೋರಿಸ್ದ.
 ಕಾಕಾ ಈಗ ಯಾಡ ವರ್ಷದ ಹಿಂದ್‌ಅ ಅಲ್ಲಿಂದ ಬಿಟ್ಟ ಹ್ವಾದ ಅಂತ ಗಾಬರಿ ಬೀಳಿಸುವಂತ ಸುದ್ದಿ ತಿಳೀತು. ಎಲ್ಲಿ ಹೋಗಿರಬೌದು ಅಂತ ಅವರನ್ನ ಕೇಳಿದಾಗ ಮುಂಬೈಕ ಅಂತ ಹೇಳಿದ್ದ. ಗೋರೆಗಾಂವದಾಗಿನ ಒಂದ್ ಫ್ಯಾಕ್ಟರ್‍ಯಾಗ ದಗದ ಸಿಕ್ಕೈತಿ ಅಂತ ಹೇಳಿ ಹೋಗಿದ್ದ- ಅಂತೇಳಿ ಅವರು ಆ ಫ್ಯಾಕ್ಟರಿ ಹೆಸರು, ವಿಳಾಸವನ್ನು ಸೊಲುಪ ಸೊಲುಪಾಗಿ ಹೇಳಿದ್ರು. ಇನ್ನ ನಿರ್ವಾನ್‌ಅ ಇಲ್ಲಂತ ಹೇಳಿ, ಮುಂಬೈಕ ರೈಲ್ ಹತ್ತಬೇಕಾತು.
 ಗೊರೆಗಾಂವದಾಗ ಕುಸುಮಾ ಚಿಕ್ಕಿ ಅದಾಳ. ಮದಲ ಅಕಿ ಮನಿಗೆ ಹೋಗಬೇಕಂತೇಳಿ ಕುಸುಮಾ ಚಿಕ್ಕಿಗೆ ಫೋನ್ ಮಾಡಿ, ಅಕಿ ಅಡ್ರೆಸ್ ತಗೊಂಡ್ ಅವರ ಮನಿಗೆ ಹೆಂಗೋ ಹ್ವಾದ್ವಿ. ಭಾಳ್ ವರ್ಷದ್ ಮ್ಯಾಲ ನಮ್ಮನ್ನ ನೋಡಿದ ಚಿಕ್ಕಿ ಮತ್ತ ಗೋಪು ಕಾಕಾಗ ಭಾಳ ಸಂತೋಸ ಆಗಿಬಿಟ್ತ್. ಅವ್ರಿಗೆ ಎಲ್ಲಾ ವಿಚಾರ ಹೇಳಿ ಅಡ್ರೆಸ್ ಚೀಟಿ ತೋರಿಸಿದ್ವು. ಚಿಕ್ಕಿ ತಾನೂ ನಮ್ಮ ಜತಿಗೆ ಬರೂದಾಗಿ ಹೇಳಿದ್ಲು. ತನ್ನ ಎನ್‌ಜಿಓ ಗೆಳತಿಗೆ ಫೋನ್ ಮಾಡಿ ಎಲ್ಲಾ ವಿಚಾರ ಹೇಳಿ, ಹೆಲ್ಪ್ ಮಾಡಬೇಕಂತೇಳಿ ಕೇಳಿಕೊಂಡ್ಳು. ಅಕೀಗೆ ಇಂತಾ ಕಡೆ ಬಂದ್ ನಿಂದರ್; ನಾವ್‌ಅ ಅಲ್ಲಿಗೆ ಬರ್‍ತೇವಿ ಅಂತೇಳಿ; ಹೊಟ್ಟಿ ತುಂಬ ನಾಷ್ಟಾ ತಿನ್ನಾಕ ಕೊಟ್ಟ ನಮ್ಮನ್ನ ಹೊರಡಿಸಿಬಿಟ್ಳು. ಲೋಕಲ್ ಟ್ರೇನ್ ಇಳದ್ ಮ್ಯಾಲ, ಗೆಳತಿನ್ನ ಕರಕೊಂಡ್, ರೀಕ್ಷಾದಾಗ ಕುಂತ್‌ಗೊಂಡ್ ಯಾವ್‌ಯಾವ್‌ದೋ ಚಾಳಿನ್ಯಾಗ, ಗಲ್ಲಿ ಒಳಗ್ ಏಳೂವರಿ ಕಿಲೋ ಮೀಟರ್ ದೂರಕ್ಕ ರೀಕ್ಷಾ ಹೋಗಿ ನಿಂತಿತ್. ಹೊಲಸ್ ಗಬ್ಬ ನಾರ್‌ತಿದ್ದ ಗಟಾರ್. ಅಲ್ಲೇ ಸುತ್ತಿ ಸುಳಿದಾಡ್‌ತಿದ್ದ ಹಂದಿಗೋಳು. ಸಣ್ಣ ಸಣ್ಣ ಪಂಜರದಾಗ ಕುಂತ, ಕೊಕ್ಕಕೊಕ್ಕಕೋ ಎಂದು ಕೂಗ್‌ತಿದ್ದ ಕೋಳಿಗಳು. ಅಲ್ಲಿ ಚಿಕ್ಕಿ ಗೆಳತಿ ಹೋಗಿ ಏನೇನೋ ಕೇಳಿದ್ಳು.
 ಊಂಹುಂ. ಅಲ್ಲೂ ನಮಗ್ ಒಳ್ಳೆ ಸುದ್ದಿ ಸಿಗಲಿಲ್ಲ್. ಸೋಮಪ್ಪ ಮಲ್ಲಪ್ಪ ಕಲ್ಯಾಣಪುರಕರ್ ಅಂಬೋ ವ್ಯಕ್ತಿ ಮತ್ತು ಅಂವನ ಜೋಡಿ ಒಬ್ಬಾಕಿ ಹೆಣಮಗಳು- ಇಲ್ಲಿ ಒಂದ್ ವರಸ್- ಆರ್ ತಿಂಗಳಿದ್ರು. ಸಾಂಗಲಿ ಕಡೆ ಅವರ್ ಕಡೆಯವರು ಒಬ್ಬರು ಬಂದ್ ಅವರನ್ನ ಕರಕೊಂಡ್ ಹೋಗ್ಯಾರ- ಅಂತ ಕೇಳಿದಾಗ ಆಕಾಶ ಮ್ಯಾಲ ಬೀಳಬಾರದಾ ಅಂತ ಅನಸಾಕ ಹತ್ತಿತ.
 ಇಂವೇನ್ ಸಿಗೂ ಮಾತಲ್ಲ ತಗಿ. ಇನ್ನ್ ಹಿಂದಕ್ ಹೋಗೂದ್‌ಅ ಬೇಸಿ ಅಂತೇಳಿ ವಿಚಾರ ಮಾಡಿ, ಚಿಕ್ಕಿ ಮನೀಗೆ ಬಂದ, ಅಲ್ಲಿಂದ ರಾತ್ರಿ ಟ್ರೇನ್‌ನ್ಯಾಗ ಕುಂತ್ ಬೆಳಗಾಂವದತ್ತ ಹೋಗಬೇಕು ಅಂತ ಲೆಕ್ಕಾ ಹಾಕಿದ್ವು.
 ಆದ್ರ ಚಿಕ್ಕಿ ನಮ್ಮನ್ನ ಸುಮ್ಮನ ಬಿಡಲಿಲ್ಲ. ಸಾಂಗಲಿ ಆದ್ರ ಚುಲೋ ಆತು. ಅಲ್ಲಿ ನಮ್ಮ ದೊಡ್ಡಪ್ಪ ಪೊಲೀಸ್ ಪೋಜದಾರ್ ಅದಾನ್. ಅಂವಗ ಒಂದ್ ಮಾತ್ ಹೇಳಿದ್ರ ಅಂವ ಹುಡುಕಿ ಕೊಡ್ತಾನ ಅಂತ ಹೇಳಿ ಆಶೆ ಹುಟ್ಟಿಸಿದಳು. ಇದೂ ಒಂದ್ ಆಗಿ ಬಿಡಲಿ ಅಂತ ಇರಪಕ್ಸಿ, ನಾನು ನಿರ್ಧಾರ ಮಾಡಿ, ಮರುದಿನ ಸಾಂಗಲಿಗೆ ಹೋದ್ವು.
 ಚಿಕ್ಕಿ ಹೇಳಿದ ಪೊಲೀಸ್ ಟೇಶನ್‌ಗೆ ಹೋಗಿ ಕೇಳಿದಾಗ ಪೋಜದಾರ ಶಿವಪ್ಪ ಕಣಿವಿಕರೀನ್‌ಕೊಪ್ಪ ರಾತ್ರಿ ಪಾಳೇಕ ಬರತಾರ ಅಂತ ತಿಳೀತು. ನಾವು ಹಿಂಗಿಂಗ್ ಅಂತ್ ಹೇಳಿದಾಗ ಒಬ್ಬ ಪೊಲೀಸ್ ಬಂದು, ತಮ್ಮ ಕ್ವಾಟರ್‍ಸ್‌ನ ಅಡ್ರೆಸ್ ಹೇಳಿ ಕಳಿಸಿದ. ಅಲ್ಲಿ ಹೋಗಿ ಪೋಜದಾರ್ ಶಿವಪ್ಪ ಕಣಿವಿಕರೀನ್‌ಕೊಪ್ಪನ ಮನಿ ಹುಡುಕೋದೇನೂ ತ್ರಾಸ್ ಆಗಲಿಲ್ಲ.
 ಚಿಕ್ಕಿ ಹೆಸರೇಳಿದಾಗ ಪೋಜದಾರ್ ತನ್ನ ಗತ್ತನ್ನ ಬಿಟಗೊಟ್ಟ ಸರೇ ಮನಿಶ್ಯಾ ಆಗಿಬಿಟ್ಟ. ಮೀಸಿ ಮ್ಯಾಗ ಕೈ ಹಾಕಿ, ನಮ್ಮನ್ನ ಕರಕೊಂಡ್ ಹೊಂಟ. ’ಸಿಕ್ಕರ ಅಂವಾ ಕಟಗಿ ಅಡ್ಡೆಗೊಳಾಗ ಸಿಗತಾನ’ ಅಂತ ಚಿಗವ್ವ ಹೇಳಿದ್ದನ್ನ ಪೋಜದಾರ ಸಾಹೇಬ್ರಿಗೂ ಹೇಳಿದೆವು. ಪೋಜ್‌ದಾರ್ ತಮ್ಮ ಟೇಶನ್‌ನ್ಯಾಗ ಕುಂತ ಎಲ್ಲಾ ಸಾ ಮಿಲ್‌ಗಳ ಫೋನ್ ನಂಬರ್ ತಗದು ಸರ್ಕಾರಿ ಫೋನ್‌ನ್ಯಾಗ ರಿಂಗ್ ಮಾಡಾಕ ಹತ್ತಿದ. ಐದಾರು ಫೋನ್ ಮಾಡೂದ್ರಾಗ ಪೋಜದಾರ್ ಸಾಹೆಬ್ರಿಗೆ ಸಿಟ್ಟು ಬಂದ್ ಬಿಟ್ಟಿತು. ಹಿಂಗಾಗಿ ನಾನ ಫೋನ್ ನಂಬರ್‌ಗೋಳ್ನ ತಗೊಂಡು ಫೋನ್ ಬೂತ್‌ಗೋಗಿ ಕೇಳಾಕ ಶುರು ಮಾಡಿದ್ನಿ.
 ಏನೂ ಪ್ರಯೋಜನಾ ಆಗಲಿಲ್ಲ. ಆ ದಿನಾ ಪೂರ್‍ತ ವೇಸ್ಟ್ ಆತು. ಮರುದಿನಾನೂ ಹಿಂಗ್‌ಅ ಆತು. ಮೂರು ನಾಕು ದಿನಗಳು ಕಳದ್ ಹ್ವಾದ್ವು. ನಾವ್ ತಂದಿದ್ದ ರೊಕ್ಕಾನೆಲ್ಲಾ ತೀರಿ ಹೋಗಿದ್ದರಿಂದ ಮತ್ ಅಲ್ಲೇ ಎಟಿಎಂಗೆ ಹೋಗಿ ರೊಕ್ಕಾ ತರಬೇಕಾತು. ಪೋಜ್‌ದಾರ್ ಒಂದ್ ನೈಟ್ ಡ್ಯೂಟಿ ಮಾಡಿ ಬೆಳಿಗ್ಗೆ ಬಂದ್ ನಿದ್ದೆ ಮಾಡುತ್ತಿದ್ದಾಗ ನಾವಿಬ್ಬರೂ ಕೂಡಿ ಸಾ ಮಿಲ್‌ಗಳ ವಿಳಾಸ ಹಿಡದ್ ಹೋದ್ವಿ. ಸಂಜಿ ಹೊತ್ತಿಗೆ ಶ್ರಿ ಕಾಳಿಕಾದೇವಿ ಸಾ ಮಿಲ್ ಎಂಬೊಂದು ಕನ್ನಡಿಗರ ಕಟಗಿ ಅಡ್ಡೆ ಸಿಕ್ಕಿತು. ಅಲ್ಲಿ ಹೋಗಿ ವಿಚಾರಿಸಿದಾಗ, ಅಲ್ಲಿಂದ ಐದಾರ್ ಓಣಿ ದಾಟಿ ಇರುವ ಮೂರನೇ ಕಟಗಿ ಅಡ್ಡೆದಾಗ ಸೋಮಪ್ಪ ಮಲ್ಲಪ್ಪ ಕಲ್ಯಾಣಪುರಕರ್ ಎಂಬ ಹೆಸರಿನ ಒಬ್ಬ ಮನಿಶ್ಯಾ ಇದ್ದಂಗೈತಿ ಎಂಬ ಹುಲ್ಲಿನ ಆಸರೆ ಸಿಕ್ಕಿತು.
ಕಾಕಾನ ಬಗ್ಗೆ ಅಲ್ಲೆ ಹೋಗಿ ಕೇಳಿದಾಗ ಮರಾಠಿ ಒಳಗ ’ಅದೊ ನೋಡ್ರಿ ಅದ್‌ಅ ಅವುರ್ ಮನಿ’ ಅಂತ ಒಬ್ಬ ವ್ಯಕ್ತಿ ತೋರಸ್ದ. ಆತ ಹೇಳೂದು ತಡಾ ಇಲ್ದಲೇ ಇರಪಕ್ಸಿ ಓಡಿ ಮನಿಗೆ ಹೋಗಿ ದಡಾ ದಡಾ ಬಾಗಲಾ ಬಡದ. ಎಷ್ಟೋ ವರ್ಷಗಳಿಂದ ಬರೇ ನೆನಪಾಗಿ ಇದ್ದ ಅಪ್ಪ ಈಗ ಕಣ್ಣಮುಂದ್ ಬರೂ ಅದ್ಭತ ದೃಶ್ಯಕ್ಕಾಗಿ ಕಾತರದಿಂದ್ ಕಣ್ಣ ಬಿಟ್ಟ ಕಾಯಾಕಹತ್ತಿದ.
ಆದ್ರ, ಕಾಕಾನ ಬದಲಾಗಿ ಒಬ್ಬಾಕಿ ಹೆಣಮಗಳು ಬಂದು ಬಾಗಲಾ ತಗದ್ಳು; ಏನರೆ ಹೇಳಬೇಕಂದ್ರ ಅಂವನ ಬಾಯಿಂದ ಮಾತ್ ಹೊರಡವಲ್ದು. ಬಲೇ ಅಚ್ಚರಿಯಿಂದ ಅಕಿ ಮಕಾನ ನೋಡಿಕೋತ ನಿಂತ್‌ಬಿಟ್ಟ. ಅಕೀನ.. ’ಇರಪಕ್ಸಿ..’ ಅಂತ ಇಂವ್ನ ಮೈದವಿ ಮಾತಾಡ್ಸಿದ್ರೂ ಇರಪಕ್ಸಿ ಮಾತಾಡ್‌ವಲ್ಲ. ಅಷ್ಟರಾಗ, ಹಿಂದಿನಿಂದ ಒಬ್ಬ ಗಣಮಗ ಬಂದ. ಅವನನ್ನು ನೋಡಿ, ಅಯ್ಯ! ಹೌದಲ್ಲ..? ಇಂವ್ನ ನಮ್ಮ ಕಾಕಾ ಅಂತ್ ಅನ್ನೂದರಾಗನ್‌ಅ….
’ಅಪ್ಪಾ.. … …’ ಅಂತ ಇರಪಕ್ಸಿ ಹೋಗಿ ತೆಕ್ಕಿ ಬಡದು ಅಳಾಕ ಹತ್ತಿದ. ಕಾಕಾ ಅಂತ್‌ಅ ನಾನೂ ಓಡಿ ಹೋಗಿ ಅವನನ್ನು ಬಿಗಿದಪ್ಪಿ ಹಿಡಿದೆವು; ಸಿನಿಮಾದಾಗ ಬಿಗಿದಪ್ಪಿ ಹಿಡಿತಾರಲ್ಲ? ಹಂಗ. ನಮ್ಮನ್ನ ನೋಡಿ ಏನೂ ಗೊತ್ತಾಗದ ಕಾಕಾ ಪಿಕಿ ಪಿಕಿ ನೋಡ್‌ತಿದ್ದ. ಆ ಮ್ಯಾಲ ನಾವ್ಯಾರೂಂತ ಗೊತ್ತಾದ ಮ್ಯಾಲ “ಇರಪಕ್ಸಿ?” ಅಂತ ಪಿರೀತಿಯಿಂದ ಅವನ ತಲಿ ಸವರಾಕ ಹತ್ತಿದ. ತಂದಿಯನ್ನ ಬಿಗಿದಪ್ಪಿ ಅತ್ತು ಸಾಕಾಗಿ ಇರಪಕ್ಸಿ ಬಿಟ್ಟು, ಆ ಹೆಣಮಗಳ ಕಡೆ ನೋಡಿದ. ಈಗ ಅಂವನ ಕಣ್ಣೆಂಬೊ ಕಣ್ಣುಗಳಲ್ಲಿ ಆಶ್ಚರ್ಯ ಇರಲಿಲ್ಲ. ಬದಲಾಗಿ ಕೆಂಪನೇ ಕಿಚ್ಚು ತೊಂಬಿತ್ತು. ಅವು ಬೆಂಕಿ ಉಂಡಿ ಆದಾಂಗಾದವು. ಮೈ ಕೈ ಎಲ್ಲ ಥರ ಥರ ನಡಗಾಕ ಹತ್ತಿತು. ಮೈತುಂಬಾ ಬೆವರು ಬಂದು ನೀರಿಳಿಯಾಕ ಶುರು ಮಾಡಿದ್ವು. ಅದೆಲ್ಲಿತ್ತೋ ಅವನ ಸಿಟ್ಟು, ಸಿಟ್ಟಿನಿಂದ ಜೋರಾಗಿ ಹೂಂಕರಿಸುತ್ತ—
”ಇಕಿನವ್ವನ್ ಇಲ್ಯಾಕ್ ಬಂದಾಳಿಕಿ? ಇಲ್ಯಾಕ್ ಬಂದಾಳಿಕಿ? ಇಕೇನ ಸತ್ಯವ್ವ. ಇಕೀನ ಕುತಿಗಿ ಹಿಚಕತೀನಿ ಇಕಿನ್ನ” ಅಂತೇಳಿ ಇರಪಕ್ಸಿ ನುಗ್ಗಿದ.
 ಹಾಂ, ಸತ್ಯವ್ವಾ? ಅಂದು ಅನ್ನುದರೊಳಗಾಗಿ ಅಕಿ ಕುತಿಗಿ ಹಿಡದ್ ಹಿಚಕಾಕ ಹತ್ತಿದ್ದ. ನಾನು, ಕಾಕಾ ಓಡಿ ಹೋಗಿ ಬಿಡಸ್‌ಬೇಕಾತು. ’ಏ ನಾಲಾಯಕ್; ಹುಚ್ಚದಿಯೇನ್’ ಅಂತ್ ಚೀರಿದಾಗ ಇರಪಕ್ಸಿ ಎಂಬೋ ೧೫ ವರ್ಷದ ಪೈಲ್ವಾನ ಸತ್ಯವ್ವನ ಕುತಗಿಯ ಕೈ ತೆಗದ. ಕಾಕಾ ಮತ್ತು ಸತ್ಯವ್ವ ಭಯಭೀತರಾಗಿ ನಮ್ಮನ್ನ ನೋಡ್‌ತಿದ್ರು.
ಮನಿ ಒಳಗಿನಿಂದ ಸಣ್ಣ ಹೆಣ್ಣು ಮಗುವೊಂದು ಚೀರಿ ಚೀರಿ ಅಳುವ ಧ್ವನಿ ಕೇಳಿಬಂತು.
*******


ಕಥೆ-2

August 10, 2008

ಮಯೂರಿ

ವೀರಣ್ಣ ಕಮ್ಮಾರ

ಆ ಗ್ರೀನ್ ರೂಮಿನ ತುಂಬೆಲ್ಲ ಕಿಲಕಿಲ ಕಲರವ ತುಂಬಿಕೊಂಡಿತ್ತು. ಭರತನಾಟ್ಯದ ಸೀರೆಯ ಹುಡುಗಿಯರು ತಮ್ಮ ಕಾಲ್ಗೆಜ್ಜೆ ನಾದದಿಂದ ಕಲಕಲ ಎಬ್ಬಿಸಿದ್ದರು. ಅವರ ನಡೆಯಲ್ಲಿ ಸಂತಸ ಚಿಮ್ಮುತ್ತಿತ್ತು. ಮುಖದ ತುಂಬೆಲ್ಲ ಆಕಾಶ ಬುಟ್ಟಿಯಂತಹ ರಂಗು ಥಳಥಳಿಸುತ್ತಿತ್ತು.
ಅದಾವ ಚಿತ್ತ ಚೋರನಿಗಾಗಿ ಈ ಅಲಂಕಾರ? ಯಾವ ಮೋಹನ ಮುರಳಿಗಾಗಿ ಈ ಆಮೋದ?
ಇನ್ನೇನು ಕಾರ್ಯಕ್ರಮ ಆರಂಭವಾಗಬೇಕು.
ಮೂರನೇ ಬೆಲ್‌ಗಾಗಿ ಎಲ್ಲರೂ ಗ್ರೀನ್ ರೂಮಿನಲ್ಲಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಮಯೂರಿ ತನ್ನ ಮೇಕಪ್ ಇನ್ನೊಮ್ಮೆ ತೀಡಿಕೊಳ್ಳುತ್ತ, ತುಟಿ ರಂಗು ಸರಿಪಡಿಸಿಕೊಳ್ಳುತ್ತಿದ್ದಳು.
ಮೂರನೇ ಬೆಲ್ ಮೊಳಗಿಯೇ ಬಿಟ್ಟಿತು!!
ಮಯೂರಿಯ ಮೈಯಲ್ಲಿ ಅದೆಂಥದೋ ಶಕ್ತಿ ಪ್ರವಹಿಸಿದಂತಾಗಿ ರಂಗದ ಮೇಲೆ ನಿಧಾನಕ್ಕೆ ಒಂದೊಂದೇ ಅಡಿ ಇಟ್ಟಳು. ಇಡೀ ತಂಡದ ಹುಡುಗಿಯರು ಹಿಂಬಾಲಿಸಿದರು. ನೃತ್ಯದ ಲಾಲಿತ್ಯ, ಸಂಯೋಜನೆ, ಬಾಗು, ಬಳುಕುಗಳು ಎಲ್ಲರಿಗೂ ಮೋಡಿ ಮಾಡಿಬಿಟ್ಟವು. ಅಂದಿನ ಕಾರ್ಯಕ್ರಮ- ಪ್ರೇಕ್ಷಕರು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು.
ಕಾರ್ಯಕ್ರಮ ಮುಗಿದಾಗ ದೀರ್ಘ ಕರತಾಡನ.
ಮಯೂರಿಗೆ ಕಂಗ್ರಾಟ್ಸ್ ಹೇಳಲು ಗ್ರೀನ್ ರೂಮಿನತ್ತ ಧಾವಿಸಿದೆ.
’ಫೆಂಟಾಸ್ಟಿಕ್- ಕಂಗ್ರಾಜುಲೇಷನ್, ವೆಲ್‌ಡನ್ ವೆಲ್‌ಡನ್’ ಎಂದೆ. ಯಾಕೊ….. ಅವಳ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು!
ದೀರ್ಘ ಮೌನ, ಬಿಕ್ಕಳಿಕೆ….!
’ಆತ ಬರಲೇ ಇಲ್ಲ’ ಎಂದು ಸುತ್ತಮುತ್ತಲೂ ನೋಡಿದಳು.
’ಬಂದೇ ಬರ್‍ತಾರೆ ಅಂತ ನನ್ನ ಒಳಮನಸ್ಸು ಹೇಳುತ್ತಿತ್ತು. ಆದರೆ, ಬರಲೇ ಇಲ್ಲ….’ ಯಾರಾದರೂ ನೋಡಿಯಾರೆಂದು ಅತ್ತಿತ್ತ ನೋಡಿ ಕೂಡಲೇ ಕಣ್ಣು ಒರೆಸಿಕೊಂಡಳು.
ಯಾರು ಆತ? ನೂರಾರು ಪ್ರಶ್ನೆಗಳು. ಈಕೆಗೆ ಇನ್ನೊಬ್ಬ ಬಾಯ್‌ಫ್ರೆಂಡ್ ಇರಬೇಕು…. ಅವನು ಬರದೇ ಹೋದದ್ದಕ್ಕೆ ಇಷ್ಟೊಂದು ಬೇಸರಪಟ್ಟುಕೊಂಡಿದ್ದಾಳೆ! ಛೇ!! ಇಂಥ ಯಾವನೋ ಒಬ್ಬನ ಪ್ರೇಯಸಿಗಾಗಿ ನಾನು ಇಷ್ಟೊಂದು … ಎಂದೆಲ್ಲ ಯೋಚನೆ… ಅಲ್ಲಲ್ಲ… ಚಿಂತೆ ಶುರುವಾಯಿತು.
ಯಾರಾತ? ಎಂಬ ಮಾತು ಅದೆಷ್ಟೊ ಬಾರಿ ಕೇಳಿದಂತಾಯಿತು.
’ಆತ, ಆ … ಆತ ….!!!’ ಎನ್ನುತ್ತಿದ್ದಂತೆಯೆ…..
 ’ಏನಿಲ್ಲ ಬಿಡು… ನನಗೆ ತಡವಾಗುತ್ತೆ…’ ಎಂದು ಹೇಳಿದವಳೆ, ವಾಶ್‌ಬೇಸಿನ್ ಹತ್ತಿರ ಹೋಗಿ ಮುಖಕ್ಕೆ ನೀರು ಚಿಮುಕಿಸಿಕೊಂಡು ನಡೆದೆ ಬಿಟ್ಟಳು!
* * * * *
 ಮಯೂರಿ ಇಂಥದ್ದೇ ಒಂದು ಕಾರ್ಯಕ್ರಮದಲ್ಲಿ ಹಿಂದೆ ನನಗೆ ಪರಿಚಯವಾಗಿದ್ದಳು. ಅವಳ ಡ್ಯಾನ್ಸ್ ಕ್ಲಾಸ್ ಬಗ್ಗೆ ಆಗಾಗ ಹೇಳುತ್ತಿದ್ದಳು. ಕೆಲ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದಳು. ನಾನು ಅವಳ ಎಲ್ಲ ಕಾರ್ಯಕ್ರಮಗಳ ಖಾಯಂ ಪ್ರೇಕ್ಷಕನಾದೆ. ಉತ್ತಮ ಫೋಟೊಗಳು, ವ್ಯಕ್ತಿ ಚಿತ್ರಣ, ಪರಿಶ್ರಮ, ಎಲ್ಲಕ್ಕಿಂತ ಮಿಗಿಲಾಗಿ ಕಲೆಗಾಗಿ ಆಕೆ ಪಡುತ್ತಿರುವ ಶ್ರಮದ ಬಗ್ಗೆ ವಿಸ್ತೃತವಾಗಿ ಲೇಖನವೊಂದನ್ನು ಬರೆದಿದ್ದೆ. ’ಸಮಕಾಲೀನ ನೃತ್ಯಕ್ಕಾಗಿ ಒಂದು ಅಕಾಡೆಮಿ ಸ್ಥಾಪಿಸುವ ಮಹತ್ತರ ಕನಸನ್ನು ಹೊತ್ತಿರುವ ಮಯೂರಿ, ತಮ್ಮ ಕನಸನ್ನು ನನಸು ಮಾಡುವುದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಎಲ್ಲರ ಸಹಾಯ ಸಿಕ್ಕರೆ ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಒಂದು ದೊಡ್ಡ ಆಸ್ತಿಯಾಗುವಲ್ಲಿ ಸಂದೇಹವಿಲ್ಲ’ ಎಂದೊಮ್ಮೆ ಬರೆದಿದ್ದೆ.
ಪರಿಚಯ ಸ್ನೇಹಕ್ಕೆ ತಿರುಗಿತ್ತು.
 ಒಂದು ದಿನ ಬೆಳಿಗ್ಗೆ ಏಳು ಗಂಟೆಗೆಲ್ಲ ಫೋನ್ ಮಾಡಿ ’ಈವತ್ತು ನಿನಗೊಂದು ಸರ್‌ಪ್ರೈಜ್’ ಎಂದಳು. ಏನು, ಎತ್ತ ಎಂದು ವಿಚಾರಿಸುವ ಮೊದಲೇ, ’ನಿಮ್ಮ ಮನೆಗೆ ಬರ್‍ತಾ ಇದ್ದೇನೆ’ ಎಂದುಬಿಟ್ಟಳು. ’ನಾನೀಗಲೇ ಹೊರಟಿದ್ದೇನೆ- ಅರ್ಧ ಘಂಟೆಯಲ್ಲಿ ಅಲ್ಲಿರುತ್ತೇನೆ. ಬೀ ರೆಡಿ’ ಎಂದು ಫೋನಿಟ್ಟಳು. ನಾನು ಸ್ನಾನದ ಮನೆಗೋಡಿದೆ. ಧಡಭಡ ಸ್ನಾನ ಮುಗಿಸಿ ಹೊರ ಬಂದೆ. ಮನೆಯ ವಸ್ತುಗಳನ್ನೆಲ್ಲ ನೀಟಾಗಿ ಜೋಡಿಸಿ, ಹಿಂದಿನ ಮನೆಯ ಸುಂದರ ಮೈಕಟ್ಟಿನ ಜಾರ್ಜಿಯಾ ಆಂಟಿಗೆ ಮನೆ ಕೆಲಸದವಳನ್ನು ಕಳುಹಿಸಲು ಹೇಳಿದೆ. ಕೆಲಸದವಳು ಬಂದು ಬಿಸಿ ಬಿಸಿ ಕಾಫಿ ಮಾಡಿಕೊಟ್ಟಳು. ಅದನ್ನು ಕುಡಿಯುತ್ತ ಪೇಪರ್ ಮೇಲೆ ಕಣ್ಣಾಡಿಸುತ್ತ ಕುಳಿತಿದ್ದೆ.
ಜೋರಾಗಿ ಕಾರ್‌ನ ಹಾರ್ನ್ ಹೊಡೆದುಕೊಳ್ಳತೊಡಗಿತು.
ತಿರುಗಿ ನೋಡಿದರೆ ಮಯೂರಿ ಕಾರಿಳಿದು ಓಡಿ ಬರುತ್ತಿದ್ದಳು. ಅವಳ ಮುಖ ಖುಷಿಯಿಂದ ಹುಣ್ಣಿಮೆ ಚಂದ್ರನಂತಾಗಿತ್ತು.
’ಬೇಗ ಹೊರಡು. ಜಯನಗರ ಗಣಪತಿ ದೇವಸ್ಥಾನಕ್ಕೋಗಿ ಪೂಜೆ ಮಾಡಿಸಿಕೊಂಡು ಬರೋಣ’ ಎಂದು ಅವಸರ ಮಾಡಿದಳು. ಇಬ್ಬರೂ ಹೊರಟೆವು.
ಕಾರು ಜಯನಗರದ ಗಣಪತಿ ದೇವಸ್ಥಾನದತ್ತ ಓಡುತ್ತಿತ್ತು.
 ’ಸಿಪ್ರೊ ಎಂಬ ಕಂಪೆನಿ ನನ್ನನ್ನು ಬ್ರಾಂಡ್ ಅಂಬಾಸಿಡರ್ ಮಾಡಿಕೊಂಡಿದೆ. ಅದಕ್ಕಾಗಿ ಕಂಪೆನಿಯವರು ಐದು ಲಕ್ಷ ರೂಪಾಯಿ ಅಡ್ವಾನ್ಸ್ ನೀಡಿದ್ದಾರೆ. ಅಲ್ಲದೇ ಪ್ರತಿ ತಿಂಗಳೂ ಐವತ್ತು ಸಾವಿರ ರೂಪಾಯಿ ಗೌರವ ಧನ. ನಮ್ಮ ತಂಡದ ಹುಡುಗಿಯರೆಲ್ಲ ತುಂಬ ಖುಷಿಯಾಗಿದ್ದಾರೆ. ಅಲ್ಲದೇ ಇನ್ನೊಂದು ಕಂಪೆನಿಯ ಜತೆ ಆಗಲೇ ನೆಗೋಷಿಯೇಷನ್ ನಡೆಸಿದ್ದೇನೆ. ಅದೆಲ್ಲ ಸರಿ ಹೋದರೆ ಮುಂದಿನ ವರ್ಷ ನಾವು ವಿಶ್ವದ ಪ್ರಮುಖ ಆರು ದೇಶಗಳಲ್ಲಿ ಅವರ ಕಂಪೆನಿ ಪರವಾಗಿ ಪ್ರವಾಸ ಮಾಡುತ್ತೇವೆ’ ಎಂದೆನ್ನುವಾಗ ಅವಳ ಧ್ವನಿಯಲ್ಲಿ ಆನಂದಾವೇಗ ತುಂಬಿತ್ತು.

ಕಾರು ದೇವಸ್ಥಾನದ ಮುಂದೆ ನಿಂತಿತ್ತು.
 ಪೂಜೆ ಸಾಂಗವಾಗಿ ನೆರವೇರಿತು. ಅರ್ಚಕರ ತಟ್ಟೆಗೆ ಸಾಕಷ್ಟು ದಕ್ಷಿಣೆ ಹಾಕಿದ ಮಯೂರಿ, ದೇವರಿಗೆ ದೀರ್ಘವಾಗಿ ನಮಸ್ಕರಿಸಿದಳು.

 ಮಯೂರಿ ಯಾವುದೋ ಜನ್ಮದ ಗೆಳತಿಯಂತೆ ಆಗಿದ್ದಳು.
ಅವಳ ದಿನನಿತ್ಯದ ಓಡಾಟದಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮದ ರೂಪುರೇಷೆ, ಸಂಘಟನೆ, ಪ್ರದರ್ಶನ, ಹಣಕಾಸು ವ್ಯವಹಾರ… ಹೀಗೆ ಎಲ್ಲದರಲ್ಲೂ ನನಗೆ ಪಾತ್ರ ನೀಡಿದಳು. ಪ್ರತಿಯೊಂದು ಕ್ಷಣದಲ್ಲೂ ಅವಳ ಪಕ್ಕದಲ್ಲಿರಬೇಕು. ನನ್ನ ಮತ್ತು ಅವಳ ಮನೆಯ ನಡುವಿನ ದಾರಿ ಕಿರಿದಾಯಿತು. ನಮ್ಮ ನಡುವಿನ ಅಂತರವೂ ಕಡಿಮೆಯಾಯಿತು.
’ಅವಳು ನನ್ನನ್ನು….. ಅಥವಾ ನಾನು ಅವಳನ್ನು…..’ ಎಂದು ಮನಸ್ಸು ಅವಳ ಬಗ್ಗೆ ಮಧುರವಾಗಿ ಯೋಚಿಸುತ್ತಿತ್ತು. ಆದರೆ, ತಲೆ ಮಾತ್ರ ಲೆಕ್ಕಾಚಾರ ಹಾಕಿ… ’ಇಲ್ಲ ಆ ಇನ್ನೊಬ್ಬ! ಅದೇ ಆವತ್ತು ಡ್ಯಾನ್ಸ್ ಕಾರ್ಯಕ್ರಮಕ್ಕೆ ಬರಲಿಲ್ಲವೆಂದು ಕಾಯುತ್ತಿದ್ದಳಲ್ಲ? ಆತನ ಮೇಲೆಯೇ ಅವಳ ಪ್ರೀತಿಯೆಲ್ಲ! ನಿನ್ನ ಜೊತೆ ಬರೀ ವ್ಯವಹಾರ ಮಾತ್ರ’ ಎಂದು ಹೇಳುತ್ತಿತ್ತು.
* * * * *
 ಮಯೂರಿ ಮನೆಯ ಮಹಡಿ ಏರಿ ಬೆಲ್ ಮಾಡಿದೆ.
ಅವಳಿಗೆ ಹೇಳದೇ ಬಂದುಬಿಟ್ಟಿದ್ದೆ. ಮೂರು ನಾಲ್ಕು ಬಾರಿ ನನ್ನ ಮೊಬೈಲ್‌ಗೆ ಆಕೆ ಫೋನ್ ಮಾಡಿದ್ದರೂ ಬೇಕೆಂದೇ ಸಿಕ್ಕಿರಲಿಲ್ಲ. ಇಂದು ಅವಳು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಪ್ರೊಗ್ರಾಮ್‌ಗೆ ಹೋಗಿದ್ದಾಳೆ ಎಂಬುದು ಗೊತ್ತಿದ್ದೂ ಅವಳ ಮನೆಗೆ ಬಂದಿದ್ದೆ.
 ಅವರಜ್ಜಿ ದೊಡ್ಡ ನಗುವಿನೊಂದಿಗೆ ಬಂದು ಬಾಗಿಲು ತೆರೆದರು. ಅವರ ಮುಖದ ನೆರಿಗೆಗಳು, ಹಣ್ಣಾದ ಕೂದಲುಗಳಿಂದ ಒಂದು ಸಾತ್ವಿಕ ಕಳೆ ಬಂದಿತ್ತು.
’ಐಐಸಿಗೆ ನೀನು ಹೋಗಲಿಲ್ವಾ?’
’ಇಲ್ಲಜ್ಜಿ. ನಂಗೆ ಇಲ್ಲೇ ಹತ್ರದಲ್ಲಿ ಬೇರೆನೋ ಕೆಲ್ಸ ಇತ್ತು- ಬಂದಿದ್ದೆ. ಆದ್ರೆ ಬಂದ್ ಕೆಲ್ಸಾನೂ ಆಗಲಿಲ್ಲ. ಅದ್ಕೆ ಇಲ್ಲಿಗೆ ಬಂದೆ’ ಎಂದು ಏನೋ ಮನಸ್ಸಿಗೆ ಬಂದ ಸಮಜಾಯಿಷಿ ಹೇಳಿದೆ.
 ’ಓ ಹಾಗಾ?’ ಎಂದು ರಾಗ ಎಳೆದರು ಅಜ್ಜಿ.
 ’ನಾನು ಎಷ್ಟ್ ಹೇಳ್ತೀನಿ, ಇದೆಲ್ಲಾ ಬೇಡ ಹುಡುಗೀ- ನಿಮ್ಮಪ್ಪನ ಆಸ್ತಿ ನೋಡ್ಕೊಂಡು ಹಾಯಾಗಿದ್ದುಬಿಡು ಎಂದು. ಆದ್ರೆ ಕೇಳೊಲ್ಲ. ಅದಕ್ಕೆ ಸರಿಯಾಗಿ ನೀನೊಬ್ಬ ಇದ್ದೀಯಾ! ಇನ್ನೂ ೨೪ ವರ್ಷದ ಚಿಕ್ಕ ಹುಡುಗಿ. ಎಲ್ಲೆಂದರಲ್ಲಿ ಒಬ್ಬಳೇ ಓಡಾಡಬೇಡ ಅಂತ ಹೇಳ್ತೀನಿ’.
 ’ಈಗಿನ ಹುಡುಗಿಯರು ಜೋರಾಗಿ ಇರಬೇಕು ಬಿಡಿ ಅಜ್ಜಿ. ಎಲ್ಲದ್ಕೂ ಹೆದ್ರಿಕೊಂಡು ಕೂತ್ಕೊಂಡ್ರೆ ಏನೂ ಸಾಧಿಸೋಕೆ ಆಗೋಲ್ಲ. ಅಲ್ದೆ ಒಳ್ಳೇ ಕಲಾವಿದೆ ಬೇರೆ. ಈಗ ಓಡಾಡದೇ ಇನ್ಯಾವಾಗ ಹೇಳಿ’ ಎಂದೆ.
 ’ಏನೋಪ್ಪ ಬೇಗ ಒಂದು ಮದ್ವೆ ಅಂತಾದ್ರೆ ಸಾಕು. ನಂಗೂ ಸಾಕಾಗಿದೆ. ಈ ಮಗೂನ ನಾನು ಎಷ್ಟೂಂತ ಸಾಕಲಿ. ನನಗೂ ವಯಸ್ಸಾಗಿ ಹೋಯಿತು…’ ಅಂತ ಸ್ವಲ್ಪ ಹೊತ್ತು ನಿಲ್ಲಿಸಿದರು ಅಜ್ಜಿ.

’ಇಲ್ಲಿ ಬಾ ನಿನಗೊಂದು ಫೋಟೊ ತೋರಿಸ್ತೀನಿ. ಯಾವುದೋ ಒಬ್ಬ ಹುಡುಗನ ಫೋಟೊ ಹಾಕ್ಕೊಂಡಿದಾಳೆ ತನ್ನ ವಾರ್ಡ್‌ರೋಬ್‌ನಲ್ಲಿ- ಆ ಫೋಟೊದಲ್ಲಿರೋನನ್ನೇ ಮದ್ವೆ ಆಗ್ತೀನಿ ಅಂತ ಹೇಳ್ತಿರ್‌ತಾಳೆ!’ ಎಂದು ಅಜ್ಜಿ ಕುತೂಹಲ ಕೆರಳಿಸಿದರು.

ವಾರ್ಡ್‌ರೋಬ್ ತೋರಿಸಿದರು.

ಆಶ್ಚರ್ಯ ಕಾದಿತ್ತು. ಅಲ್ಲಿ ನನ್ನ ಫೋಟೊ ಇತ್ತು. ಅದರ ಕೆಳಗೆ ’ಐ ಲವ್ ಯು!’ ಎಂಬ ಅಕ್ಷರಗಳು!

’ಅರೆ, ಇದು ನನ್ನ ಫೋಟೊ ಅಲ್ವಾ …..’ ಎಂದು ಉದ್ಘಾರಿಸಿದೆ!

ಅಜ್ಜಿ ಬದಲಾಗುತ್ತಿದ್ದ ಮುಖಭಾವವನ್ನೇ ನೋಡುತ್ತಿದ್ದರು.

ಮೂಕ ವಿಸ್ಮಿತನಾಗುವ ಸರದಿ ನನ್ನದಾಗಿತ್ತು.

ನನಗೆ ಒಂದು ಕ್ಷಣ ಆಶ್ಚರ್ಯ ಜೊತೆಗೆ ಸಂತೋಷವೂ ಆಯಿತು.

’ನಿನ್ನನ್ನೇ ಮದ್ವೆ ಆಗ್ತೀನಿ ಅಂತ ಹೇಳ್ತಿರ್‌ತಾಳೆ. ನೀನೂ ನಮ್ ಹುಡುಗನೇ ಅಂತ ಗೊತ್ತಾಯಿತು. ಅದಕ್ಕೆ ನಾನೂ ಹೂಂ ಅಂದಿದ್ದೀನಿ. ಆದ್ರೆ ನಿಮ್ಮ ಅಪ್ಪಾ ಅಮ್ಮ ಒಪ್ಪಬೇಕಲ್ಲಪ್ಪಾ’ ಎಂದು ಅಜ್ಜಿ ಪ್ರೀತಿಯಿಂದ ಬೆನ್ನು ತಟ್ಟಿದರು.

 ಮನಸ್ಸು ಎಲ್ಲೋ ಏನೋ ಯೋಚಿಸುತ್ತಿತ್ತು. ಅವಳೆಡೆಗಿನ ಒಲವು- ನನ್ನೆದೆಯೊಳಗಿನ ಪ್ರೀತಿಯ ಚಿಲುಮೆಯ ಬುಗ್ಗೆಯೇ? ಅವಳ ಸಾಂಗತ್ಯದರ್ಥ ನನ್ನರಿವಿಗೆ ಬಾರದ ಪ್ರೇಮದುನ್ಮಾದವೇ? ಎಂದು ಕೇಳಿಕೊಳ್ಳುವುದರೊಳಗೇ…..

 ….. ಅಂದು ಕಾರ್ಯಕ್ರಮ ಮುಗಿದ ಮೇಲೆ ಯಾರೋ ಒಬ್ಬ ಬರ್‍ತಾನೆ ಅಂತ ಕಾಯ್ತಿದ್ದಳಲ್ಲ? ಅವನು ಯಾರು? ಈಗ ನನ್ನನ್ನು ಮದ್ವೆ ಆಗ್ತೀನಿ ಅಂದ್ರೆ ಏನು? ಎಂದು ತಲೆ ಲೆಕ್ಕಾಚಾರ ಹಾಕತೊಡಗಿತು.
 ಮೌನ ಮುರಿದು ಕೇಳಿದೆ-
 ’ಅಜ್ಜಿ ಒಂದ್ ವಿಷಯ ಕೇಳ್ಬೇಕು’ ಎಂದು ಪೀಠಿಕೆ ಹಾಕಿದೆ.
 ’ಯಾಕೆ? ಮಯೂರಿ ನಿಂಗೆ ಇಷ್ಟ ಇಲ್ವೊ?’ ಎಂದರು ಅಜ್ಜಿ.
 ’ಅದಲ್ಲ. ಮಯೂರಿ ಅಪ್ಪ ಅಮ್ಮಾ ಎಲ್ಲಿರತಾರೆ?’
ಅಜ್ಜಿ ದೀರ್ಘ ಶ್ವಾಸ ತೆಗೆದುಕೊಂಡರು. ಯಾಕೋ ಅವರಿಗಿಷ್ಟವಿಲ್ಲದ ಪ್ರಶ್ನೆಯೇನೋ ಅನ್ನಿಸತೊಡಗಿತು.
 ಸ್ವಲ್ಪ ಹೊತ್ತಿನ ನಂತರ- ’ಅದೊಂದು ದೊಡ್ ಕತೆ’ ಎಂದರು ಅಜ್ಜಿ- ಹೇಳಲು ಇಷ್ಟವಿಲ್ಲದವರಂತೆ!
 ನಾನೂ ಸುಮ್ಮನಾಗಿ ಬಿಟ್ಟೆ. ಕೆಲಸದ ಹುಡುಗಿ ಕಾಫಿ ಕೊಟ್ಟಳು. ಯಾಂತ್ರಿಕವೆಂಬಂತೆ ಕಪ್ಪು ತೆಗೆದುಕೊಂಡು ಒಂದು ಗುಟುಕು ಕುಡಿದೆ. ತಲೆಯಲ್ಲಿ ಏನೇನೋ ಯೋಚನೆಗಳು.
’ದೊಡ್ಡ ಕತೆ ಅಂದ್ರೆ ಏನು?’ ಎಂದು ಯೋಚಿಸಿದೆ. ಛೆ! ಹೀಗೆಲ್ಲ ಪತ್ತೆದಾರಿ ಮಾಡುವುದು ಸರಿಯಲ್ಲ. ನೇರವಾಗಿ ಇದರ ಬಗ್ಗೆ ಮಯೂರಿಯನ್ನೇ ಕೇಳುವುದು ಒಳಿತು ಎಂದು ಒಮ್ಮೆ ಅನಿಸಿತು. ಅವಳನ್ನು ಮದುವೆಯಾಗುವ ಬಯಕೆ ನನ್ನಲ್ಲಿ ಮೊದಲೇ ಉಂಟಾಗಿತ್ತೇ? ಅಥವಾ ನಾನೇ ಅವಳನ್ನು ಹೆಂಡತಿಯಾಗಿ ಸ್ವೀಕರಿಸಲು ಸಿದ್ಧವಾಗಿದ್ದೆನಾ? ಬಯಸಿದ್ದರೆ ನೇರವಾಗಿ ಮದುವೆ ಬಗ್ಗೆ ಕೇಳಬಹುದಾಗಿತ್ತಲ್ಲ? ಅಥವಾ ಅವಳೇ….?
-ಎಂಬ ಪ್ರಶ್ನೆಗಳು ಮೂಡಿದವು. ಒಡನೆಯೇ- ಇದು ಇನ್ನೂ ಅಪಕ್ವ ಕಾಲ ಎನಿಸಿರಬೇಕು. ಹೀಗಾಗಿ ಅವಳು ಕೇಳಿರಲಿಕ್ಕಿಲ್ಲ. ಅಲ್ಲದೇ ಮದುವೆಯಾದ ನಂತರ ಇಂಥ ಕಲಾವಿದರಾದವರಿಗೆ ಬೇಡಿಕೆ ಕುಗ್ಗುವುದುಂಟು. ಅದಕ್ಕಾಗಿ ಅವಳು ಹಾಗೆ ಮಾಡಿರಬೇಕು. ನಾನಂತೂ ಅವಳನ್ನು ಮದುವೆಯಾಗುವ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ. ಹೀಗಿರುವಾಗ ಇಷ್ಟೆಲ್ಲಾ ಪ್ರಶ್ನೆಗಳು…? ಎನಿಸಿ ಮೈ ಬೆವರಿದಂತಾಯಿತು.
’ನಿನ್ನ ಪ್ರೀತಿಸ್ತಿದೀನಿ’ ಅಂತ ಅವಳು ನನಗೆ ಯಾಕ್ ಹೇಳಲಿಲ್ಲ? ಎಂಬ ಅನುಮಾನ ಶುರುವಾಯಿತು. ನಾನಾದರೂ ಹೇಳಬಹುದಾಗಿತ್ತು. ಆದ್ರೆ ನಾನ್ಯಾಕೆ ಹೇಳಲಿಲ್ಲ? ಎಂದು ಕೇಳಿಕೊಂಡರೆ, ಅಂದು ಕಾರ್ಯಕ್ರಮ ಮುಗಿದ ಮೇಲೆ ಗ್ರೀನ್‌ರೂಮಿನಲ್ಲಿ- ’ಆತ ಬರಲೇ ಇಲ್ಲ’ ಎಂದು ಅವಳು ಅತ್ತದ್ದು ನೆನಪಾಗಿ, ಅವಳು ನನ್ನನ್ನು ಪ್ರೀತಿಸುವುದಿಲ್ಲ ಎಂದುಕೊಂಡಿದ್ದೆ ಎಂಬ ಪರಿಹಾರ ಹೊಳೆಯಿತು.

’ಅಜ್ಜಿ ನನ್ನ ಪ್ರಶ್ನೆಯಿಂದ ನಿಮಗೆ ಬೇಸರ ಆಗಿದ್ದರೆ ಕ್ಷಮಿಸಿ’ ಎಂದೆ. ಅಜ್ಜಿ ದೀರ್ಘ ಉಸಿರು ಎಳೆದುಕೊಂಡು-
’ಮಯೂರಿ ಅಮ್ಮ ಗೌರಿ ಅಂತ. ಆಕೆ ನನ್ನ ಒಬ್ಬಳೇ ಮಗಳು. ಒಂದಿನ ಬೈಕ್‌ನಲ್ಲಿ ನಂದಿಬೆಟ್ಟಕ್ಕೋಗಿ ಬರುವಾಗ ಬ್ರೇಕ್‌ಫೇಲಾಗಿ ಗೌರಿ ಮತ್ತು ಆಕೆ ಗಂಡ ಇಬ್ಬರೂ ಸತ್ತು ಹೋದರು. ನಮ್ಮ ಅಳಿಯ ಸ್ಥಳದಲ್ಲೇ ಸತ್ರೆ, ಗೌರಿ ಮೂರ್ ದಿನ ಬದುಕಿದ್ದು, ಆಮೇಲೆ ಆಸ್ಪತ್ರೆಲಿ ಸತ್ತುಹೋದ್ಳು. ಅದೆಲ್ಲ ನಮ್ಮ ಕರ್ಮ. ಏನ್ ಮಾಡೋದು…..’ ಎಂದರು ಅಜ್ಜಿ.
’ಈಗೆಷ್ಟು ವರ್ಷಾಯಿತು?’ ಸ್ವಲ್ಪ ಮೌನದ ನಂತರ ಕೇಳಿದೆ.
’ಮಯೂರಿ ಇನ್ನೂ ಆರು ವರ್ಷದವಳಿದ್ದಳು. ಆಗಿನಿಂದ್ಲೂ ನಾನೇ ಇವಳನ್ನ ಸಾಕ್ತೀದ್ದೀನಿ. ಇವರಪ್ಪನ ಆಸ್ತಿಯೆಲ್ಲಾ ಇವಳಿಗೆ ಬಂದಿದೆ. ನನಗೆ ಒಬ್ಬ ಮಗನಿದ್ದಾನೆ. ಮಯೂರಿ ಆಸ್ತಿನೆಲ್ಲ ಅವನೇ ನೋಡ್ಕೋತಾನೆ. ಆದ್ರೆ ಯಾಕೋ ಅವನೂ ಈಗೀಗ ಜಗಳ ಮಾಡ್ತಾನೆ. -ಈಗ ಹದಿನೆಂಟು ವರ್ಷದಿಂದ ಇಡೀ ಆಸ್ತಿಯನ್ನು ಒಂದು ಚೂರೂ ಮುಕ್ಕಾಗದಂತೆ ನೋಡಿಕೊಂಡು ಬಂದಿದ್ದೀನಿ. ನಾನೇ ಅವಳನ್ನ ಮದ್ವೆ ಮಾಡ್ಕೊತೀನಿ, ಈ ಆಸ್ತಿಯೆಲ್ಲ ನಮ್ಗೇ ಉಳೀತದೆ- ಅಂತಾನೆ. ಆದ್ರೆ ಇವ್ಳು ಕೇಳೋದಿಲ್ಲ. ಇಬ್ರಿಗೂ ಯಾವಾಗ್ಲೂ ಜಗಳ ಆಗ್ತಿರತ್ತದೆ. ಈ ಆಸ್ತಿಯಿಂದಾಗಿ ನನಗೆ ಜೀವನವೇ ಬೇಸರ ಆಗಿ ಬಿಟ್ಟಿದೆ. ಧರ್ಮಸ್ಥಳದ ಮಂಜುನಾಥನ ಹೆಸರಿಗೆ ಎಲ್ಲಾ ಆಸ್ತೀನು ಬರ್‍ದು ಬಿಡು ಅಂತ ಹೇಳಾಣ ಅನ್ಸತ್ತದೆ’ ಎಂದು ಅಜ್ಜಿ ಕಣ್ಣಲ್ಲಿ ನೀರು ತಂದರು.
ಓ ಈತನೇ ಇರಬಹುದು- ಮಯೂರಿಯ ಗುಪ್ತ ಪ್ರಿಯಕರ; ಆದ್ರೆ ಅಜ್ಜಿ ಹೀಗೆ ಹೇಳ್ತಿದ್ದಾರಲ್ಲ? ಅಥ್ವಾ ಬೇರೆ ಯಾರನ್ನೋ ಮದ್ವೆ ಆಗುವುದಾಗಿ ಹೇಳಿರಬೇಕು. ಆದ್ರಿಂದ ಮಯೂರಿಯ ಸೋದರಮಾವ ತಾನೇ ಮದುವೆಯಾಗುವುದಾಗಿ ಹೇಳುತ್ತಿರಬೇಕು- ಎಂದು ಯೋಚನಾ ಲಹರಿ ಹರಿಯಿತು. ಛೇ! ಇದೊಳ್ಳೆ ಬಿಡಿಸಲಾರದ ಗಂಟಾಯಿತಲ್ಲ ಎಂದುಕೊಂಡೆ!

* * * * *
ಮಯೂರಿ- ನನ್ನ ನಿಶ್ಚಿತಾರ್ಥ ಸಾಂಗವಾಗಿ ನೆರವೇರಿತು.
ತನ್ನ ಸೋದರ ಮಾವನ ವಿರೋಧದ ನಡುವೆಯೂ ನನ್ನನ್ನೇ ಮದುವೆಯಾಗುವುದಾಗಿ ಹಠ ಹಿಡಿದಳು. ಅಲ್ಲದೇ, ’ಮದುವೆಯಂತ ಏನಾದರೂ ಆದರೆ ನಾನು ಆತನನ್ನೇ! ಇಲ್ಲದೇ ಹೋದರೆ ನನ್ನ ಹೆಣಕ್ಕೆ ತಾಳಿ ಕಟ್ಟಬೇಕಾಗುತ್ತದೆ’ ಎಂದು ಸೋದರಮಾವನನ್ನು ಹೆದರಿಸಿಬಿಟ್ಟಳು. ಐದೆಕ್ರೆ ಜಮೀನು ಬೇಕಾದ್ರೆ ಕೊಡ್ತೀನಿ. ಆದ್ರೆ ಮದ್ವೆ ಆಗೋ ಕನಸು ಕಾಣಬೇಡ- ಎಂದು ತನಗಿಂದಲೂ ೧೫ ವರ್ಷ ಹಿರಿಯನಾದ ಸೋದರಮಾವನಿಗೆ ಖಡಾಖಂಡಿತವಾಗಿ ಹೇಳಿಬಿಟ್ಟಳು ಮಯೂರಿ.
ನನ್ನಪ್ಪ ಅಮ್ಮ ನಮ್ಮ ವಿವಾಹಕ್ಕೆ ಒಪ್ಪಿದರು ಮತ್ತು ಮಯೂರಿ ಸೋದರಮಾವನಿಗೆ ತಿಳಿಸಿ ಹೇಳಿದರು. ಅದರಿಂದ ಅವನು ತೆಪ್ಪಗೆ ಹಿಂದಕ್ಕೆ ಸರಿದುಕೊಂಡ.
ಮದುವೆಯ ದಿನ. ಎರಡೂ ಕುಟುಂಬಗಳಲ್ಲಿ ಸಡಗರ ಸಂಭ್ರಮ.
ಸಂಭ್ರಮದ ಮದುವೆ ಸಮಾರಂಭ.
ಸ್ವತಃ ನಾಟ್ಯರಾಣಿಯಾದ ಮಯೂರಿ, ಅಕ್ಷರಶಃ ರಂಭೆಯಂತೆ ಕಾಣುತ್ತಿದ್ದಳು. ಗುಲಾಬಿ ಬಣ್ಣದ ಸೀರೆಯುಟ್ಟು, ನೀಳ ಜಡೆಗೆ ಮೈಸೂರು ಮಲ್ಲಿಗೆ ದಂಡೆ ಹಾಕಿಕೊಂಡು ತೆಳು ಬಳುಕಿನ ದೇಹಸಿರಿಯಲ್ಲಿ ಬಂದು ಪಕ್ಕದಲ್ಲಿ ಕುಳಿತಾಗ ಒಳಗೊಳಗೇ ಹೆಮ್ಮೆಯಿಂದ ಬೀಗುತ್ತಿದ್ದೆ.
ಸರಳವಾಗಿ ಮದುವೆ ಶಾಸ್ತ್ರ ಮುಗಿಯಿತು. ತಾಳಿ ಕಟ್ಟುವಾಗ ಅರೆಕ್ಷಣ ಕಣ್ಣುಗಳು ಪರಸ್ಪರ ಸಂಧಿಸಿದವು. ಅದೇನೋ ಇಷ್ಟು ದಿನ ನೋಡಿದ್ದರೂ ಇಂದು ಆಕೆ ಭಿನ್ನವಾಗಿ ಕಾಣುತ್ತಿದ್ದಳು.
ಮದುವೆ ಕಾರ್ಯಗಳು ಮುಗಿದು ಸ್ನೇಹಿತರ ನಡುವೆ ಹರಟೆ ಹೊಡೆಯುತ್ತ ನಿಂತಿದ್ದಾಗ ಕಾಕೂ ಬಂದು ನನ್ನನ್ನು ಪಕ್ಕಕ್ಕೆ ಕರೆದು ಕಿವಿಯಲ್ಲಿ ಪಿಸುಗುಟ್ಟಿದರು- ’ರೂಮಲ್ಲಿ ಮಯೂರಿ ಯಾಕೋ ಕಣ್ಣಿರು ಹಾಕ್ತಿದ್ದಾಳೆ ನೋಡು’.
ಆಕೆಯ ರೂಮಿಗೆ ತೆರಳಿದೆ. ಮುಖ ಮುಚ್ಚಿಕೊಂಡು ಬಿಕ್ಕಳಿಸುತ್ತಿದ್ದಳು. ನಾನು ಹೋದೊಡನೇ ಬಿಗಿಯಾಗಿ ತಬ್ಬಿಕೊಂಡು ಜೋರಾಗಿ ಅಳತೊಡಗಿದಳು. ಸ್ವಲ್ಪ ಅತ್ತು ಬಿಡಲಿ- ದುಗುಡ ಕಡಿಮೆಯಾದೀತು ಎಂದು ಬೆನ್ನ ಮೇಲೆ ಕೈಯಾಡಿಸಿದೆ.
ಬಹಳ ಹೊತ್ತು ಬಿಕ್ಕಿದ ಮೇಲೆ ನನ್ನತ್ತ ನೋಡಿದಳು. ಮತ್ತೆ ಬಳಬಳ ಕಣ್ಣೀರು ಉದುರತೊಡಗಿದವು. ನನ್ನ ಕಣ್ಣುಗಳು ಆಗಲೇ ಆರ್ತತೆಯಿಂದ ’ಯಾಕೆ?’ ಎಂದು ಪದೇ ಪದೇ ಕೇಳುತ್ತಿದ್ದವು. ಅವುಗಳಿಗೆ ಆ ಕಡೆಯ ಕಣ್ಣುಗಳಿಂದ ನೀರುಗಳದ್ದೇ ಉತ್ತರ.
’ಮದುವೆಗಾದ್ರೂ ಬಾ ಅಂತ ಎಷ್ಟೊಂದು ಸಲ ಹೇಳಿದ್ದೆ. ಆದ್ರೆ ಆತ ಬರಲೇ ಇಲ್ಲ…..’ ಎಂದು ಮತ್ತೆ ಬಿಕ್ಕಿದಳು.
’ಯಾವನಾತ?’ ಎಂದು ರೇಗಿ-ಕೂಗಿ ಕೇಳಬೇಕೆನಿಸಿತು. ಹಾಗೆಲ್ಲ ರೇಗಿದರೆ- ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಯಾಗಿರುವ ಹುಡುಗಿಗೆ ಇನ್ನೆಷ್ಟು ನೋವಾದೀತೋ ಎಂದು ಸುಮ್ಮನಾದೆ. ’ಯಾರಾತ?’ ಎಂದು ತನಿಖೆ ಮಾಡುವ ಮನಸ್ಸು ಬರಲಿಲ್ಲ. ಯಾರೋ ಪ್ರೀತಿಸಿ ಕೈಕೊಟ್ಟ ಹುಡುಗನಿರಬೇಕು. ತನ್ನ ಜೀವನದ ಮಹತ್ವದ ದಿನದಂದು ಅವನು ಬರಲಿ ಎಂಬ ಆಸೆ ಇರಬಹುದು. ಈಕೆ ಇಷ್ಟೊಂದು ಪ್ರೀತಿಯಿಂದ ಕರೆದರೂ ಆತ ಬಂದಿಲ್ಲ! ಹೀಗಾಗಿ ಪಾಪ ನೊಂದುಕೊಂಡಿದ್ದಾಳೆ ಎಂದು ಅವಳ ಮುಗ್ಧ ಮನಸ್ಥಿತಿಗೆ ಕನಿಕರ ಉಂಟಾಗಿ, ’ಯಾರು ಬರದಿದ್ದರೇನು ಬಿಡು. ನಾನಿದ್ದೇನಲ್ಲ?’ ಎಂದು ಬಿಗಿಯಾಗಿ ಅಪ್ಪಿಕೊಂಡೆ.
ಸ್ವಲ್ಪ ಸಮಯದ ನಂತರ-
’ಅರೆ, ಇದು ನಮ್ಮ ಮೊಟ್ಟಮೊದಲ ಅಪ್ಪುಗೆ. ಖುಷಿಯಾದ- ಬಿಸಿಯಾದ ಹಗ್ಗಿಂಗ್ ಆಗಬೇಕಿತ್ತು. ಆದರೆ, ನಿನ್ನ ಕಣ್ಣೀರಿನಿಂದಾಗಿ ಹೀಗಾಯಿತು ನೋಡು’ ಎಂದೆ.
’ನಿಮ್ಗೆ ಎಲ್ಲಾನೂ ತಮಾಷೆನೆ’ ಎಂದು ಬಹುವಚನ ಉಪಯೋಗಿಸಿದಳು.
’ಅರೆ, ಮೆಡಮ್ ಸಾಹೇಬರು ಬಹುವಚನ ಉಪಯೋಗಿಸ್ತಾ ಇದ್ದಾರಲ್ಲ?’
’ಮಯೂರಿ- ಹಾಗೆಲ್ಲಾ ನಿಮಗೆ ತಮಗೆ ಅಂತ ಕರೀಬೇಡ. ಮೊದಲಿನಂತೆಯೆ ಹೋಗೊ ಬಾರೋ ಅಂತಾನೇ ಹೇಳು. ನಾವಿಬ್ರೂ ಎಂದಿದ್ದರೂ ಸ್ನೇಹಿತರಂತೆಯೇ ಇರೋಣ. ನಡಿ ಏಳು. ಎಲ್ರೂ ಕಾಯ್ತಿದ್ದಾರೆ. ಊಟ ಮಾಡೋಣ’ ಎಂದು ಕರೆದುಕೊಂಡು ಹೊರಟೆ.
* * * * *
ಮದುವೆಯ ಮರುದಿನ.
ಬೇಗನೆ ಎದ್ದು ಅಭ್ಯಂಜನ ಮುಗಿದ ಮೇಲೆ ದೇವಸ್ಥಾನಗಳಿಗೆ ಹೋಗಬೇಕು ಎಂದು ಅಮ್ಮ ಎಲ್ಲ ಸಿದ್ಧತೆ ಮಾಡುತ್ತಿದ್ದಳು. ಅಷ್ಟರಲ್ಲಿ ’ಆಕಾಶ್- ಒಂದ್ನಿಮಿಷ’ ಎಂದು ಮಯೂರಿ ಕರೆದಳು. ಮತ್ತೆ ಅದೇ ಸುಂದರ ಅಲಂಕಾರ. ಮಲ್ಲಿಗೆಯ ಘಮ್ಮೆನ್ನುವ ಸುವಾಸನೆ ಜೊತೆಗೆ ಎಂಥದೋ ಮೈಯ ವಾಸನೆ ಮೂಗಿಗಡರಿ ಅವಳನ್ನು ಅಲ್ಲೇ ತಬ್ಬಿಕೊಂಡು ಬಿಡಬೇಕು ಎನ್ನಿಸಿತು.
’ಬಾ ಬೇಗ! ಇಲ್ಲೇ ಹೋಗಿ ಬರೋಣ’ ಎಂದು ಅಕ್ಷರಶಃ ಕೈ ಹಿಡಿದು ಎಳೆದುಕೊಂಡು ಹೊರಟೇ ಬಿಟ್ಟಳು. ತಾನೇ ಕಾರು ಸ್ಟಾರ್ಟ್ ಮಾಡಿ ವೇಗವಾಗಿ ಓಡಿಸತೊಡಗಿದಳು. ಬೆಳಗಿನ ಹೊತ್ತಾದ್ದರಿಂದ ಮತ್ತು ಅಂದು ಯಾವುದೋ ಸರ್ಕಾರಿ ರಜಾ ದಿನವಾದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಸ್ತಿ ಇರಲಿಲ್ಲ.
ಕಾರು ಹೆಬ್ಬಾಳದ ಕಡೆ ಓಡಲಾರಂಬಿಸಿತು. ಅಲ್ಲಿಂದ ರಿಂಗ್‌ರೋಡ್‌ನಲ್ಲಿ ವೈಟ್‌ಫೀಲ್ಡ್‌ನತ್ತ ಸಾಗಿತು.
’ಇಷ್ಟು ದೂರ ಎಲ್ಲಿಗೆ ಹೋಗ್ತಾ ಇದ್ದೀವಿ?’ ಎಂದು ಮೂರು ನಾಲ್ಕು ಬಾರಿ ಕೇಳಿದೆ.
ಸ್ವಲ್ಪ ಹೊತ್ತಿನ ನಂತರ ವೈಟ್‌ಫೀಲ್ಡ್‌ನ ಒಂದು ದೊಡ್ಡ ಮನೆಯ ಮುಂದೆ ಕಾರು ನಿಲ್ಲಿಸಿದಳು. ನನ್ನತ್ತ ಗಂಭೀರ ನೋಟ ಬೀರಿದಳು.
’ಒಂದ್ ನಿಮಿಷ ಇಳಿದು ಬಾ’ ಎಂದು ಕೈ ಹಿಡಿದು ಕರೆದಳು.
ಆ ಮನೆಯ ಮೆಟ್ಟಿಲೇರಿದೆವು. ಬೆಲ್ ಮಾಡಿದಳು. ನಾನು ಮನೆಯ ಬಾಗಿಲಿನ ಚಿತ್ತಾರ, ಹೂಕುಂಡ ಗಮನಿಸುತ್ತಾ- ಯಾರ ಮನೆಯಿದು? ಇಷ್ಟು ಗುಟ್ಟಿನಿಂದ ಯಾಕೆ ಕರೆ ತಂದಳು? ಎಂದು ದಿಗಿಲುಗೊಂಡಿದ್ದೆ.
ಅಷ್ಟರಲ್ಲಿ ೧೦-೧೨ ವರ್ಷದ ಹುಡುಗಿಯೊಬ್ಬಳು ಬಾಗಿಲು ತೆಗೆದಳು. ನಂತರ ಒಳಗೋಡಿ ಹೋಗಿ-
’ಅಪ್ಪಾ ಮಯೂರಕ್ಕಾ ಬಂದಿದ್ದಾಳೆ’ ಎಂದಳು. ಇಬ್ಬರೂ ಮನೆಯ ಒಳಗಡಿ ಇಟ್ಟೆವು.

ಬೆಳ್ಳನೆಯ, ತುಸು ಎತ್ತರದ ವ್ಯಕ್ತಿಯೊಬ್ಬರು ಹೊರಗೆ ಬಂದರು.
ಮಯೂರಿ ಕೂಡಲೇ ಬಾಗಿ ಅವರ ಕಾಲಿಗೆ ನಮಸ್ಕರಿಸಲು ಮುಂದಾದಳು. ಇಬ್ಬರೂ ನಮಿಸಿದೆವು. ಬೆನ್ನ ಮೇಲೆ ಕೈಯಿಟ್ಟು ಆಶೀರ್ವದಿಸಿದರು.

ಮಯೂರಿಯನ್ನು ಬಿಗಿದಪ್ಪಿ ಒಂದು ಕ್ಷಣ ಕಣ್ಣು ಮುಚ್ಚಿದರು. ಇವಳ ಕಣ್ಣೀರ ಧಾರೆ ಹರಿಯತೊಡಗಿತು. ’ನೀನು ಕೊನೆಗೂ ಬರಲಿಲ್ಲವಲ್ಲಪ್ಪಾ?’ ಎಂದಳು. ಅವರ ಕಣ್ಣುಗಳೂ ನೀರಾಡುತ್ತಿದ್ದವು. ಅವರಿಗೆ ದುಃಖ ತಡೆಯಲಾಗದೇ ಕುಸಿದರು.
’ನೀನು ಬರಲಿಲ್ಲಾಂತ ನಾವೇ ಇಲ್ಲಿಗೆ ಬಂದಿದ್ದೇವೆ- ನಿನ್ನ ಆಶಿರ್ವಾದ ಪಡೆಯಲು. ಎಷ್ಟೊಂದು ಹೇಳಿದ್ದೆ ನಿನಗೆ. ನಿನ್ನ ಕರುಳ ಬಳ್ಳಿಗೆ ಯಾಕೆ ಹೀಗೆ ಮೋಸ ಮಾಡಿದಿರಿ ಅಪ್ಪಾ? ಅಮ್ಮಾ ನಿಮಗೆ ಮೋಸ ಮಾಡಿರಬಹುದು. ಹಾಗಂತ ನೀವೂ ಕೂಡ ಹೀಗೆ ಮಾಡುವುದಾ? ಅದೂ ಸ್ವಂತ ಮಗಳ ಮದುವೆಗೇ ಬಾರದೇ ನೀವು ಏನು ಸಾಧಿಸಿದಿರಿ? ಹೇಳಿ ಅಪ್ಪಾ ಹೇಳಿ’ ಎಂದು ಬಿಕ್ಕಿ ಅಳತೊಡಗಿದಳು.
ಅವರು ಆರ್ತತೆಯಿಂದ ಮಗಳತ್ತ ನೋಡಿದರು! ಮತ್ತೊಮ್ಮೆ ಮಗಳನ್ನು ಹತ್ತಿರಕ್ಕೆಳೆದುಕೊಂಡು ಹಣೆಗೆ ಮುತ್ತಿಕ್ಕಿ- ’ಸುಖವಾಗಿರು ಮಗಳೆ…’ ಎಂದವರೇ ಒಳಗೆ ಹೋಗಿ ಬಿಟ್ಟರು.
ಅವಳನ್ನು ಸಂತೈಸಲು ಬೆನ್ನ ಮೇಲೆ ಕೈಹಾಕಿ ಸವರಿದೆ.

* * * * *
ರಾತ್ರಿ ಮಲಗಿದಾಗ- ಇನ್ನೂ ಮಯೂರಿ ಅನ್ಯ ಮನಸ್ಕಳಾಗಿದ್ದಳು. ಅವಳನ್ನು ಏನು ಕೇಳುವುದು? ಏನನ್ನು ಬಿಡುವುದು? ಇಷ್ಟು ದಿನಗಳ ತಂದೆ ತಾಯಿ ಇಲ್ಲದ ತಬ್ಬಲಿ ಎಂದುಕೊಂಡಿದ್ದೆನಲ್ಲ? ಅಜ್ಜಿ ಯಾಕೆ ಹಾಗೆ ಹೇಳಿದರು? ಎಂಬ ನೂರಾರು ಪ್ರಶ್ನೆಗಳು ಕೊರೆಯುತ್ತಿದ್ದವು. ಅವುಗಳನ್ನೆಲ್ಲ ಬಾಯಿ ಬಿಟ್ಟು ಕೇಳಬಾರದು. ಅವಳಿಗೆ ಇನ್ನಷ್ಟು ನೋವಾದೀತು ಎಂದು ಸುಮ್ಮನೇ ಮಲಗಿದ್ದೆ.
ದೀರ್ಘ ಮೌನದ ನಂತರ…
’ನನ್ನ ಮೊದಲ ಡ್ಯಾನ್ಸ್ ಪ್ರೊಗ್ರಾಮ್‌ಗೆ ಬರೋದಕ್ಕೆ ಅಪ್ಪನಿಗೆ ಹೇಳಿದ್ದೆ- ಅವರು ಬರಲಿಲ್ಲ. ನಮ್ಮ ಎಂಗೇಜ್‌ಮೆಂಟ್‌ಗೂ ಬರಲಿಲ್ಲ. ಕೊನೆಗೆ ನಮ್ಮ ಮದುವೆಗಾದರೂ ಬರುತ್ತಾರೆ ಎಂದುಕೊಂಡಿದ್ದೆ. ಅದಕ್ಕಾಗಿ ನಾನೇ ಸ್ವತಃ ಮನೆಗೆ ಹೋಗಿ ಕರೆದಿದ್ದೆ. ಆದರೆ, ಅಪ್ಪ ಬರಲೇ ಇಲ್ಲ’.
’ಅವರು ನಿನ್ನ ಅಪ್ಪನೇ?’ ಇಷ್ಟು ದಿನಗಳ ಕುತೂಹಲ ಇಂದು ತಡೆಯದೇ ಕೇಳಿದೆ.
’ಹೌದು. ನನ್ನಪ್ಪ’
’…………………’
’ನಮ್ಮಪ್ಪ- ಅಮ್ಮ ಯಾವುದೋ ಆಕ್ಸಿಡೆಂಟ್‌ನಲ್ಲಿ ಸತ್ತು ಹೋದರು ಎಂದು ನೀನು ಕೇಳಿರಬೇಕು. ಆದರೆ, ಅವರು ಸತ್ತು ಹೋಗಿಲ್ಲ. ಇಬ್ಬರೂ ಬದುಕಿದ್ದಾರೆ. ಆದರೆ, ನನ್ನದೇ ದೌರ್ಭಾಗ್ಯ- ಅವರು ಬದುಕಿದ್ದೂ ಅನಾಥೆಯಂತೆ ಬದುಕುತ್ತಿದ್ದೇನೆ. ಅಮ್ಮನಿಗೆ ನನ್ನಪ್ಪನೊಂದಿಗಿನ ಮದುವೆ ಇಷ್ಟ ಇರಲಿಲ್ಲವಂತೆ. ಅಮ್ಮ ವೈದ್ಯ ವೃತ್ತಿ ಮಾಡುತ್ತಿದ್ದರೂ ಅದನ್ನು ಅಪ್ಪ ಬಲವಂತವಾಗಿ ಬಿಡಿಸಿದರಂತೆ. ಮನೆಯಲ್ಲಿಯೇ ಕ್ಲಿನಿಕ್ ನಡೆಸು ಎಂದು ಅಪ್ಪನ ಒತ್ತಾಯ. ದಿನಾ ಇಬ್ಬರಲ್ಲೂ ಜಗಳ- ಹೊಡೆದಾಟ. ಅಪ್ಪ ಕುಡಿದು ಬರಲಾರಂಭಿಸಿದ. ಆತನ ಬಿಸಿನೆಸ್‌ನಲ್ಲಿ ಇಳಿಕೆ ಶುರುವಾಯಿತು. ಸಿಕ್ಕಾಪಟ್ಟೆ ಲಾಸ್ ಆಗಲಾರಂಭಿಸಿತು. ಇಬ್ಬರ ಬದುಕೂ ಅಸಹನೀಯವಾಯಿತು. ಒಂದು ದಿನ ಬೆಳಿಗ್ಗೆ ಹೇಳದೇ ಕೇಳದೇ ಅಮ್ಮ ನಾಪತ್ತೆಯಾಗಿ ಬಿಟ್ಟಳು.
ಒಂದು ದಿನ ಕಾಗದವೊಂದು ಬಂದಿತು. ಅಮ್ಮ ಅಪ್ಪನಿಗೆ ಡೈವೋರ್ಸ್ ಕೊಟ್ಟಿದ್ದಳು. ಬರ್ಮಿಂಗ್‌ಹ್ಯಾಮ್‌ಗೆ ಹೋಗಿ ತನ್ನ ಜೊತೆಯಾಗಿ ಕೆಲಸ ಮಾಡುತ್ತಿದ್ದ ಡಾಕ್ಟರ್‌ನೊಟ್ಟಿಗೆ ಮದುವೆಯಾಗಿದ್ದಳು. ಆ ವೇಳೆಗಾಗಲೇ ಮೂರು ವರ್ಷದ ಪಾಪದ ಕೂಸಾಗಿದ್ದ ನನ್ನನ್ನು ತನ್ನೊಂದಿಗೆ ಕರೆದೊಯ್ಯಲು ಆ ಹೊಸ ಗಂಡ ಒಪ್ಪಲಿಲ್ಲ. ಹೀಗಾಗಿ ನನ್ನನ್ನು ಅಜ್ಜಿಯ ಹತ್ತಿರ ಬಿಟ್ಟಳು.
ಇತ್ತ ಅಪ್ಪ ಕುಡಿದು ಕುಡಿದು ಹಾಳಾದ. ಎಷ್ಟೋ ದಿನಗಳ ನಂತರ ಸಂಬಂಧಿಕರ್‍ಯಾರೋ ಒತ್ತಾಯಿಸಿ ತಮ್ಮ ಕಡೆಯ ಹುಡುಗಿಯನ್ನು ನೋಡಿ ಎರಡನೇ ಮದುವೆ ಮಾಡಿದರು. ಅದರೊಂದಿಗೆ ಅಪ್ಪ ಅಮ್ಮ ನನ್ನ ಪಾಲಿಗೆ ಸತ್ತು ಹೋದರು. ತಾನು ಎರಡನೇ ಮದುವೆಯಾಗುವ ಮುನ್ನವೇ ಅಪ್ಪ ನನಗೆ ಒಂದಷ್ಟು ಆಸ್ತಿಯನ್ನು ಬರೆದಿದ್ದ. ಅದರ ಬಲದಿಂದ ಅಜ್ಜಿ, ಸೋದರಮಾವ ನನ್ನನ್ನ ಸಾಕಿದರು. ಇಲ್ಲದೇ ಹೋಗಿದ್ದರೆ, ನಾನು ಇಂದು ಯಾವುದೋ ಅನಾಥಾಶ್ರಮದಲ್ಲೊ, ಇನ್ನೆಲ್ಲೊ ಇರಬೇಕಾಗುತ್ತಿತ್ತು.
ನಿನ್ನ ಪರಿಚಯವಾಯಿತು. ನೀರೇ ಇಲ್ಲದೆ ವರ್ಷಗಟ್ಟಲೆ ಹಸಿದು ಒಣಗಿದ ನೆಲಕ್ಕೆ ತಂಪಿನ ಮಳೆಗರೆದಂತಾಯಿತು. ಒಣಗಿದ ನನ್ನ ಬಾಳಿಗೆ ನೀನು ಜೀವ ಕಳೆ ತಂದೆ. ತಂದೆ ತಾಯಿಯರಿಂದ ಸಿಗದ ಪ್ರೀತಿ, ಪ್ರೇಮ ಭದ್ರತೆಯನ್ನ ನಿನ್ನಲ್ಲಿ ಕಂಡೆ. ನಾನು ಅನಾಥಳು ಎಂದು ಗೊತ್ತಿದ್ದೂ ಪ್ರೀತಿಸಿ ಮದುವೆಯಾದೆ! …… ಐ ಲವ್ ಯು ಆಕಾಶ್- ಐ ರಿಯಲಿ ಲವ್ ಯು’.
ಈಗವಳ ಕಣ್ಣಲ್ಲಿ ನೀರಿರಲಿಲ್ಲ. ಧನ್ಯತೆಯ ಭಾವವಿತ್ತು. ಅವಳನ್ನು ಬಾಚಿ ತಬ್ಬಿಕೊಂಡೆ. ಬಿಸಿಯುಸಿರ ತಾಕಲಾಟಗಳ ನಡುವೆ ಮಂದಹಾಸ ಬೀರಿದಳು.
ಇದು ನಮ್ಮ ಜನ್ಮಜನ್ಮಾಂತರಗಳ ಬಂಧವಾ?
*****
(ಮುಗಿಯಿತು)


ನೀ ಯಾರೆಂದು ಹೇಳಲಿ?

June 27, 2008

ನೀ ನಾಟ್ಯರಾಣಿ

ನೃತ್ಯ ಮಯೂರಿ

ನಯನ ಮನೋಹರಿ

ಮಧುರ ಮಾತಿನ ಮನೋನ್ಮಣಿ

ಸಕಲ ಶುಭಂಕರಿ

ಅರಿ ಭಯಂಕರಿ!

 

ಶಾರದೆ, ಅವಿರತ ವಿಶಾರದೆ

ರಂಜನಿ, ಮನೋನಂದನಿ

ನೀ ಮೋಹಕ ಮನ ಚುಂಬಕ

ತುಂಬಿದೆದೆಯ ತಲ್ಲಣ

ಸಿಂಹಕಟಿಯ ಸಂಕಟ

ಸೊಬಗಿನ ಸಿರಿ ಮೈಮಾಟ|

 

ನುಣುಪು ಪಾದಗಳ ಆಟಕೆ

ನೂಪುರಗಳ ರಿಂಗಣಕೆ

ಅರೆಬಿರಿದ ಕಣ್ಗಳ ನೋಟಕೆ

ಮಣಿವ ಮೈಯ ಕುಣಿಸಾಟಕೆ

ಹರಿವ ಎದೆಯ ಇರಿದಾಟಕೆ

ಸಾಟಿ ಯಾಕೆ? ಸರಿಸಾಟಿ ಯಾಕೆ?

 

ಅದಾವ ಶಿಲ್ಪದ ಕೃತಿ ನೀನು?

ಆವ ಶಿಲ್ಪಿಯ ಕೈಚಳಕ?

ಯಾವ ಮೋಹನ ಮುರಳಿ ಮಾಯೆ?

ಅದೆಂಥ ಒಲುಮೆಯ ಬಗೆ?

ಅದಾವ ಕೃತಿಯ ಮುಖಪುಟ?

ಆವ ಚಿತ್ರಗಾರನ ಕಾಣ್ಕೆ?

ಯಾವ ಕವಿಯ ಬೆರಗು?

ಆರ ಕನಸಿನರಮನೆಯ ಚಿತ್ತಾರ?

 

ಚೆಂಬೆಲರ ಚೆಂಗುಲಾಬಿ

ಚಿಗುರು ಬಳ್ಳಿಯ ಕುಡಿ

ಸೊಬಗ ಮೆರೆವ ಸಿಂಗಾರ ಸಿರಿ

ಪ್ರೀತಿಯೊಲುಮೆಯ ಸಿಹಿ|

 

ಸರಿಗಮ ಸರಿಸಮ

ಎಲ್ಲವೂ ಸಮಸಮ

ಅನುಪಮೆ, ಅನುರೂಪಮೆ

ಸವಂ ಶಿವ ರೂಪಮೆ!!

      -0-