ನೀ ಯಾರೆಂದು ಹೇಳಲಿ?

ಜೂನ್ 27, 2008

ನೀ ನಾಟ್ಯರಾಣಿ

ನೃತ್ಯ ಮಯೂರಿ

ನಯನ ಮನೋಹರಿ

ಮಧುರ ಮಾತಿನ ಮನೋನ್ಮಣಿ

ಸಕಲ ಶುಭಂಕರಿ

ಅರಿ ಭಯಂಕರಿ!

 

ಶಾರದೆ, ಅವಿರತ ವಿಶಾರದೆ

ರಂಜನಿ, ಮನೋನಂದನಿ

ನೀ ಮೋಹಕ ಮನ ಚುಂಬಕ

ತುಂಬಿದೆದೆಯ ತಲ್ಲಣ

ಸಿಂಹಕಟಿಯ ಸಂಕಟ

ಸೊಬಗಿನ ಸಿರಿ ಮೈಮಾಟ|

 

ನುಣುಪು ಪಾದಗಳ ಆಟಕೆ

ನೂಪುರಗಳ ರಿಂಗಣಕೆ

ಅರೆಬಿರಿದ ಕಣ್ಗಳ ನೋಟಕೆ

ಮಣಿವ ಮೈಯ ಕುಣಿಸಾಟಕೆ

ಹರಿವ ಎದೆಯ ಇರಿದಾಟಕೆ

ಸಾಟಿ ಯಾಕೆ? ಸರಿಸಾಟಿ ಯಾಕೆ?

 

ಅದಾವ ಶಿಲ್ಪದ ಕೃತಿ ನೀನು?

ಆವ ಶಿಲ್ಪಿಯ ಕೈಚಳಕ?

ಯಾವ ಮೋಹನ ಮುರಳಿ ಮಾಯೆ?

ಅದೆಂಥ ಒಲುಮೆಯ ಬಗೆ?

ಅದಾವ ಕೃತಿಯ ಮುಖಪುಟ?

ಆವ ಚಿತ್ರಗಾರನ ಕಾಣ್ಕೆ?

ಯಾವ ಕವಿಯ ಬೆರಗು?

ಆರ ಕನಸಿನರಮನೆಯ ಚಿತ್ತಾರ?

 

ಚೆಂಬೆಲರ ಚೆಂಗುಲಾಬಿ

ಚಿಗುರು ಬಳ್ಳಿಯ ಕುಡಿ

ಸೊಬಗ ಮೆರೆವ ಸಿಂಗಾರ ಸಿರಿ

ಪ್ರೀತಿಯೊಲುಮೆಯ ಸಿಹಿ|

 

ಸರಿಗಮ ಸರಿಸಮ

ಎಲ್ಲವೂ ಸಮಸಮ

ಅನುಪಮೆ, ಅನುರೂಪಮೆ

ಸವಂ ಶಿವ ರೂಪಮೆ!!

      -0-


ಎಲ್ಲವೂ ದೂರ

ಜೂನ್ 27, 2008

ದೂರ ದೂರ

ಆಳದಲ್ಲೆಲ್ಲೊ ಮೊಳಗುತಿದೆ

ಕೆರಳುತಿದೆ ಕರಗುತಿದೆ

ಬಾರದ ದೂರಕೆ ಕರೆದೊಯ್ಯುತಿದೆ

 

ಹುಯ್ಯುತಿದೆ ಹುಯಿಲೆಬ್ಬಿಸುತಿದೆ

ಹೋರುತಿದೆ ದೂರಕೆ ಹೊರಡುತಿದೆ

ಅಮರದುನ್ಮಾದ ಆರದ ನಿನಾದ

ಅಗೋ ಮೊರೆಯಿಡುತಿದೆ

ಮರುಗುತಿದೆ

 

ದೂರ ದೂರ

ಎಲ್ಲವೂ ದೂರ

-0-


ಏಕ ಅನೇಕಗಳನು ದಾಟಿ

ಜೂನ್ 27, 2008

ಇದು ಯಾವ ದಾರಿ?

ಎಲ್ಲಿಂದ ಶುರು ಮಾಡಲಿ?

 

ಅನೂಹ್ಯ  ಆಮೋದದ  ಅಪರೂಪವೇ?

ಆನಂದ  ಅದ್ಭುತಗಳ ಸಂಗಮವೇ?

ಹೊನ್ನ ಹೊಂಗನಸುಗಳ ಹೆಗ್ಗುರುತುಗಳೇ?

ಹೊಂಬಾಳಿನ ಹೊರಮೈನ ಬ್ರಹ್ಮಾಂಡವೇ?

ಇದು ಎಂಥ ದಾರಿ?

ಎಲ್ಲಿಂದ ಬಂತು ತೂರಿ?

 

ಹಿರಿಕಿರಿ ಹೃದ್ಗಂಥಗಳ ಪಠಣದ ಪಯಣವೇ?

ಬೆದಕಿ ಬಸವಳಿದು ಹುಡುಕಿದ ಹೊಸ ರೂಪವೇ?

ಉನ್ಮಾದಿಸಿ ಝೇಂಕರಿಸಿ, ಠೇಂಕರಿಸಿ ಉದಿಸಿದ ಘಾಟೆ?

ಹುಟ್ಟುತ್ತಲೇ ಬಾಯಗಲಿಸಿ, ಕೈಯೆತ್ತಿ ನಿಂತ ಕಿಮ್ಮತ್ತಗೇಡಿಯೇ?

ಇದು ಎಂಥ ಮಾರಿ?

ಎಲ್ಲಿತ್ತು ಈ ವರೆಗೂ ಜಾರಿ?

 

ರೂಪರೂಪದಿ ಬಂದು ವ್ಯೋಮಗಳನೇ ಕೆಡವುತಿದೆ

ಅನತಿ ರೂಪದಿ ಅನುರೂಪಗಳ ಹೆಣೆಯುತಿದೆ

ಎಲ್ಲ, ಇದೆಲ್ಲ ಎನ್ನದೆಂದೇ ಮೆರೆಯುತಿದೆ

ಬಯಲು, ಎಲ್ಲವೂ ಬಟಾಬಯಲು ಎಂಬ

ಅರಿವಿದ್ದೂ ನೊಣೆಯುತಿದೆ, ಕೆನೆಯುತಿದೆ

ಬೆವರುತಿದೆ, ಬಸವಳಿಯುತಿದೆ

ಹರ ಸಾಹಸಗೈಯುತಿದೆ- ಅದೇ ಸಂತಸ,

ಅದೇ ಪರಮಾನಂದ ಎಂಬ ಭ್ರಮೆಯಲಿ

 

ಅಗೋ ಗೋಚರಿಸುತಿದೆ ಆಗಸದಲೊಂದು ಕ್ಷಿತಿಜ

ಬೆಳ್ಳಿ ಕಿರಣಗಳು, ಹೊಂಬೆಳಕಿನ ಕಣಗಳು

ಮೂಡುತಿವೆ ಮೂಡುತಿವೆ ಹೊಂಗಿರಣ

ಅನೇಕ ನಾಕಗಳಾಚೆಯೂ ಜಗತ್ತಿದೆ!

ಹುಯಿಲಿದೆ, ಅದರ ಕಾವಿದೆ, ಹುರುಪಿದೆ !!


ಚೀಯರ್ ಚೀಯರ್ಸ್

ಜೂನ್ 24, 2008

ಮೈ ಮಾಟದ ಮೊನಚುಗಳಿಗೆ

ಬೆಲೆವೆಣ್ಣುಗಳ ಬಣ್ಣಗಳಿಲ್ಲ

ಕೈ ಕಾಲುಗಳ  ಆಕ್ರೊಬ್ಯಾಟ್ ಗೆ

ಶೃಂಗಾರದ ಹಂಗಿಲ್ಲ

 

ಕೂಗಿ ಕೆರಳಿಸೊ ನಗುವಿಗೆ

ಕೊರಳ ಹೂಂಕಾರಕ್ಕೆ

ಬಣ್ಣ ಬಣ್ಣದ ಪೋಷಾಕಿಗೆ

ತುಂಡು ಲಂಗದ ಅಧಾ೵ಗಸಕೆ

ಬೌಂಡರಿಗೋಡುವ ಚೆಂಡಿನ ಖುಷಿಯಿಲ್ಲ!!

 

ಬಾಲ್ ಎಸೆವ ತಿರುಗಣಿಗೆ

ಬ್ಯಾಟ್ ಬೀಸುವ ಸುನಾಮಿಗೆ

ಸ್ಪಂದಿಸುವ ಭರದಲ್ಲಿದ್ದರೆ

ಈ ನುಣುಪು ಮೈ-ದಾನಗಳ

ಗಾನ ಕೋಲಾಹಲ ಚಿಮ್ಮುತ್ತಿದೆ

ಟಿ.ವಿ. ಪರದೆಯ ತುಂಬ!!

 

ಕುಣಿವ ರಭಸಕೆ ಸೆಟೆವ ಎದೆ

ಕಟಿಯ ಹೊರಳಾಟಕೆ ಏರುವ ಹೆದೆ

ಬಳುಬಳುಕುವ ಮೋಹದ ಬಲೆ

ಈ ಸೆಳವಿಗೆ ಸಿಕ್ಕ ಆಟದ ಕಗ್ಗೊಲೆ!!

 

ಆಟದ ಮಾಟದಲಿ ಇನ್ನೊಂದಾಟ

ತುಂಡು ಲಂಗದ ತುಂಡು ತುಂಟಾಟ

ಯಾರದೋ ಥೈಲಿ ತುಂಬಿಸೊ ಆಟ

ಇದೋ ಬಂದಿದೆ ಹೊಸ ಪರಿಪಾಠ

-0-


ಮುಗಿಲಗಲ ದಿಗಿಲು

ಜೂನ್ 19, 2008

ಎಲ್ಲಿ ಏನದು?
ಏಕೆ ಹೇಗದು?
ಎಂಬೋ ಕಣ್ಣುಗಳು
ಹರಿಣದ ದಿಗಿಲು

ಅದು ಏನು?
ಇದು ಯಾಕೆ?
ಎಂದು ಮುಟ್ಟಿ ನೋಡುವ ತವಕ
ಹೀಗದು ಎಂದರೆ,
ಹಾಗೇಕೆ?
ಹಾಗೆಂದರೆ,
ಹೀಗೇಕೆ ಎಂಬ ಪ್ರಶ್ನಾಥ೵ಕ ಚಿಹ್ನೆ!

ಎಲ್ಲದಕೂ ನಗುಮೊಗದ ಒಲವು
ಯಾವುದಕೂ ಅಳುವಿನ ಸೋಬಾನೆ
ಇದೆಂದರೆ ಅದು
ಅದೆಂದರೆ ಇದು
ಅದು ಇದು ಯಾವುದು ಇದೆಲ್ಲಾ?


ಯಾಕೆ ಹೀಗೆಲ್ಲ?

ಜೂನ್ 19, 2008

ಮಳೆಯ  ಅಬ್ಬರ
ಮಿಂಚು ಮಿಂಚಿನ ವೇಗ
ಗಾಳಿಯ ಗಿಳಿವಿಂಡು
ಮೋಡಗಳ ಮಾಂತ್ರಿಕತೆ
ಹೂಗಳ ಬಣ್ಣ ಬಣ್ಣದ ಮೇಳ
ದುಂಬಿಗಳ ದುಂಬಾಲು
ಯಾಕೆ ಹೀಗೆಲ್ಲ?

ಕೋಗಿಲೆ ಗಾನದಿಂಪು
ತೆಂಗು ಬಾಳೆಗಳ ಬಾಗು ಬಳುಕು
ಮಾವು ಮೊಲ್ಲೆಗಳ ಕಂಪು
ಅಲೆ ಅಲೆಗಳ ಭೋಗ೵ರೆತ
ಯಾರಿಗಾಗಿ ಇವೆಲ್ಲ?

ಮುಂಜಾನೆಯ ಮಂಜಿನ ಮಕರಂದ
ಶಕ್ತ ನೇಸರನ ಕಿರಣಗಳು
ಸಿಹಿ ಸುರಿವ ಸವಿ ಜೇನು
ಅದೋ ಆಗಸದಲಿ ಚುಕ್ಕೆಗಳ ಚಿತ್ತಾರ
ಯಾಕಾಗಿ ಇವೆಲ್ಲ?

ಮುಂದಿನ ಜೀವಗಳಿಗುಳಿಯಲಿ
ಈ ಕುತೂಹಲ, ಆರದಿರಲಿ ಜೀವದುನ್ಮಾದ
–0–


ಇನ್ನೆಲ್ಲಿಯ ನೆನಪು?

ಜೂನ್ 19, 2008

ಗೆಳತಿ,
ಕಡುರಾತ್ರಿಯಾಗಿದೆ
ಮುದ ನೀಡಲೊಲ್ಲದು ಬೆಳದಿಂಗಳು
ಸುಳಿ ಸುಳಿದು ಬೀಸುವ ತಂಗಾಳಿ
ಅಲೆ ಅಲೆಯ ಮೊರೆತಗಳಲಿ
ಬರಲೊಲ್ಲದು ನಿನ್ನ ನೆನಪು!

ಮೌನ ಗಭಱದಲಿ ಹುದುಗಿದ
ನಿನ್ನ ಸ್ಮೃತಿಗಳ ಮೇಲೆ
ಬರೆಹಾಕಿ ಬಿಟ್ಟಿವೆ
ಹಾಗಱರೆವ ವಿಮಾನಗಳಭಱಟ
ಸಿಡಿಗುಂಡುಗಳ ಸದ್ದು
ಲಾಠಿ ಬೂಟುಗಳ ಕಕಱಶ ಶಬ್ಧ!

ಎಲ್ಲೋ ಚೀತ್ಕರಿಸಿದ
ಇನ್ನೆಲ್ಲೋ ಪೂತ್ಕರಿಸಿದ
ಗೋರಿಯಲ್ಲೂ ನಡುಗುವ
ಹೆಣಗಳ ನಡುವೆ
ಒಣಗಿದೆ ಬಿಸಿಯುಸಿರ ರಕ್ತ

ಪೊತ್ತು ಹೆತ್ತವರನೇ ಇರಿವ
ಕೂಡಿ ಆಡಿದವರನೊರೆವ
ಕಲ್ಲು ಕಬ್ಬಿಣ ಸಿಮೆಂಟ್ ಗಾರೆಯ
ಧಮನಿಗಳಿ ಹರಿಯುತಿದೆ ವಿತ್ತ ರಕ್ತ

ಎಲ್ಲೂ ಕಾಣಿಸುತ್ತಿಲ್ಲ ಮುಖ ಮಾಣಿಕ್ಯ
ಬರೀ ಕೈಕಾಲು, ನಾಲಿಗೆ
ಧಕ ಥೈ ಥೈ ತೊನೆವ ಓಳಾಟ
ತೆರೆ ಸರಿದ ಬಿರು ಬಿರಿದ ರಾತ್ರಿಗಳಲಿ…
ಇನ್ನೆಲ್ಲಿಯ ನಿನ್ನ ನೆನಪು