ಇನ್ನೂ ಯಾಕ ಬರಲಿಲ್ಲವ್ವಾ..!?
ವೀರಣ್ಣ ಕಮ್ಮಾರ
ಮಟ ಮಟ ಮಧ್ಯಾನ ಆಗಿತ್ತು. ಲಡಕಾಸಿ ಬಸ್ ನಿಲ್ದಾಣದೊಳಗ ಬಂದು ನಿಂತು ಧೂಳ ಎಬ್ಬಿಸಿತ್ತು. ಅಲ್ಲಿಂದ ಜನತಾ ಪ್ಲ್ಯಾಟ್‌ಗೋಳು ಎಲ್ಲೆದಾವಂತ ಕೇಳಿಕೋಂತ ಹೋಗುದ್‌ರೊಳಗ್‌ಅ ದೂರದ ಗುಡದಾಗ ಮನಿಗೋಳು ಸಾಲಕ ಡಬ್ಬಿಗೋಳನ್ನ ಒಂದರ ಪಕ್ಕ ಒಂದನ್ನ ಇಟ್ಟಂಗ ಕಂಡವು. ರಸ್ತೆ ಬಾಜೂಕ ತೆಂಬಿಗಿ ತಗೊಂಡ ಕುಂತಿದ್ದ ಗುರುತುಗೋಳಿದ್ದು, ಆ ಹೇಸಿಗಿ ಮ್ಯಾಲ ಕಾಲಿಡಲಾರದಂಗ ಎಚ್ಚರಿಕಿಯಿಂದ ನಡಕೋತ ಹ್ವಾದರ, ದೂರದಾಗ ಚಿಗವ್ವ ಮನಿ ಬಾಜೂಕ ಎಮ್ಮಿ ಮೈ ತೊಳಿತಿದ್ದದ್ದ ಕಂಡು ಆ ಕಡೆ ಹೆಜ್ಜೆ ಹಾಕಿನ್ನಿ. ನಾ ಬಂದದ್ ನೋಡಿ ಆಕಾಶದಾಗಿನ ಮೋಡಗಳೆಲ್ಲ ಒಂದದಪಾ ಧಬಾ ಧಬಾ ಮಳಿ ಸುರದಷ್ಟು ಸಂತೋಷಗೊಂಡ ಚಿಗವ್ವ ಓಡಿ ಹೋಗಿ ಕೈ ಕಾಲು ತೊಳಕೊಂಡ, ಮಾಸಿದ್ದ ತನ್ನ ಸೀರಿನ ಛಲೋತಮಗೆ ಹೊತಗೊಂಡ ನಿಂತ್ಲು. ಬಾಗಲದಾಗಿನ ಎಮ್ಮಿಯನ್ನು ಹಿಂದಗಡೆಕ ಹೊಡಕೊಂಡೋಗಿ ಇರಪಕ್ಸಿ ಕಟ್ಟಿಬಂದ. ಇವೇಕಾನಂದ, ಅಡಿವೆಪ್ಪ ಎಲ್ಲಾರೂ ಓಡಿಬಂದ್ ಕೈಯಾನ ಬ್ಯಾಗ್ ಇಸಗೊಂಡು ದುಡುದುಡು ಮನಿ ಒಳಗ ಹ್ವಾದರು.
ಏನಬೇ, ಮನ್ಯಾಗ ಎಮ್ಮಿ ಸಾಕೂದಲ್ದ ಆಡಾನೂ ಸಾಕೀದಿಯಲ್ಲ? ಅಂತ ಕೇಳಿದಾಗ, ’ಆಡಾ ಅಷ್ಟ ಯಾಕಪಾ ಆ ಕಡೆ ನೋಡ- ಕೋಳೀನೂ ಸಾಕೀನ. ಈಗ ೪೨ ಕೋಳಿ ಅದಾವು, ಸದ್ದೇಕ ಮೂರು ಕೋಳಿಗಳು ಮರಿಗಿ ಕುಂತಾವು, ಅವಷ್ಟು ಬಂದೂವಂದ್ರ ಒಂದ ನೂರು ಕೋಳಿಗಳಕ್ಕಾವು’ ಅಂತ ಚಿಗವ್ವ ಹೇಳೂವಾಗ ಅಕಿ ಮುಖದಾಗ ಒಂದೀಟ ಹೆಮ್ಮೆ ಹಣಿಕಿ ಹಾಕತಿತ್ತ.
* * *
ಊಟಕ್ಕ ಕುಂತಾಗ ಚಿಗವ್ವ ತನ್ನ ಗಂಡ, ಅಂದ್ರ ಕಾಕಾನ ಮಾತ್ ತಗದ್ಲು.
’ಅಂವಾ ಹೋಗಿ ಒಂಬತ್ ವರ್ಸ್ ಆಗಾಕ ಬಂತ್ ನೋಡಪಾ, ಇನ್ನತಕಾ ಅಂವಾ ಬಂದಿಲ್ಲ’ ಅಂತ ಚಿಗವ್ವ ಹೇಳುವಾಗ ಆಕಿ ಕಣ್ಣಂಚಿನಾಗ ನೀರಹನಿ ಮಿಂಚಾಕಹತ್ತಿತ್ತ.
ಮದಿವಿ ಆಗಿ ಆರು ಮಕ್ಕಳನ್ನು ಕೊಟ್ಟು ಊರು ಬಿಟ್ಟು ಅದೆಲ್ಲಿಗೋ ಓಡಿ ಹೋಗಿ ಒಂಬತ್ತು ವರ್ಷ ಆದರೂ, ತನ್ನ ಹೆಂಡತಿ ಮಕ್ಕಳ ಬಗ್ಗೆ ಚಕಾರ ಎತ್ತದ, ಸೋಮಪ್ಪ ಮಲ್ಲಪ್ಪ ಕಲ್ಯಾಣಪುರಕರ್ ಎಂಬ ದರವೇಸಿ ಗಂಡನ ಬಗ್ಗೆ ಚಿಗವ್ವಗ ಇನ್ನೂ ಯಾಕಲತೆ ಬಿಟ್ಟಿಲ್ಲ ನೋಡ- ಅಂತ ನನಗ ಮನಸಿನ್ಯಾಗ ಕೊರ್‍ಯಾಕ ಹತ್ತಿತು. ಊಟ ನಿಧಾನಾತು.
’ನೀ ಅರಾಮ ಅದಿ ಇಲ್ಲಬೇ. ಅಂವ್ನ ಚಿಂತಿ ಬಿಟ್ಟಬಿಡ. ನಿನ್ನ ಮಕ್ಕಳ ಅಂತ ನಾವದೇವಲ್ಲ, ನಾವು, ನಿನ್ನನ್ನ ಚಲೋತಮಾಗಿ ನೋಡ್ಕೂತೇವಿ. ನೀಯೇನೂ ಚಿಂತಿ ಮಾಡಬ್ಯಾಡಬೇ. ಭಾಳ ದಿನದ ಮ್ಯಾಲ ಅಣ್ಣಾ ಊರಿಂದ ಬಂದಾನ ಪಾಪ. ಅಂವ್ನ ಮುಂದ ಎಲ್ಲಾನೂ ತಗೀಬ್ಯಾಡ’ ಎಂದು ಎರಡನೇ ಮಗ ಇರಪಕ್ಸಿ ಹೇಳಿದರೂ ಚಿಗವ್ವನ ಕಣ್ಣೆಂಬೋ ಗೋಕಾಕ ಫಾಲ್ಸ್‌ನಿಂದ ದಬಾ ದಬಾ ನೀರು ಬೀಳೋದು ಮಾತ್ರ ನಿಲ್ಲಲಿಲ್ಲ.
’ಈ ಒಂಬತ್ತ ವರ್ಷದಾಗ ಏನೇನೆಲ್ಲ ಆಗಬೇಕಿತ್ತೋ ಅದೆಲ್ಲಾ ಆಗಿ ಹೋತು. ಆರನೇ ಮಗಾ ಸಂದೀಪ ಇನ್ನಾ ತೊಟ್ಟಲಾಗ ಇದ್ದ. ಒಂದ ರಾತ್ರಿ ಇದ್ದಕ್ಕಿಂದಂಗ ಎಚ್ಚರ ಆತು. ಎದ್ದ ಹೊರಗ ಹೋಗಿ ಒಂದಕ್ಕ ಕುಂತ ಬಂದ್ನಿ. ಅಯ್ಯ ಶಿವನ, ಎಸ್ಟ್ ಟೈಮ್ ಆಗೇತಿ; ಇಂವ ಎದ್ದು ಆಗ ಹೊರಗಡೆಕ ಹೋಗ್ಯಾನಲ್ಲ? ಅನಿಸಿತ್ತ. ಅಂದೂ ದಿನಾ ಬೆಳಕಾಗೂವಂಗ ಬೆಳಕಾತು. ಆದರ, ನನ್ನ ಬಾಳಿಗೆ ಮಾತ್ರ ಅಂದಿನಿಂದ ಇನ್ನತನಕಾ ಬೆಳಕ ಆಗಿಲ್ಲ. ಆ ರಾತ್ರಿ ಅಂವಾ ಎದ್ದ ಹೋದಾಂವ ಎಲ್ಲಿ ಹ್ವಾದ್ನೋ ಏನೋ; ಒಂದೂ ಗೊತ್ತಾಗವಲ್ತ.
’ಅಂವಾ ಹ್ವಾದ ಮ್ಯಾಲ ನಿಮ್ಮ ಸಣ ಮಾಮಾ ಇಡೀ ಬೆಳಗಾಂವ ಜಿಲ್ಲಾ, ಹುಬ್ಬಳ್ಳಿ ಧಾರವಾಡಾ, ವಿಜಾಪೂರ, ಗುಲಬರಗಾ, ಬೀದರ, ಸಾಂಗ್ಲಿ, ಈಚಲಕರಂಜಿ, ಕಡೀಕ ಪುನಾ ತಂಕಾ ಹೋಗಿ ಹುಡುಕಿ ಬಂದ. ಸಾವಿರಾರು ರೂಪೈ ಬಸ್ ಚಾರ್ಜ್ ಸುರದಾ. ತಂಗಿ ಬಾಳೆ ನೆಟ್ಟಗಾಗಲಿ ಅಂತ ಅಂವಾ ಏನೆಲ್ಲಾ ಮಾಡಿದಾ. ಆದ್ರೂ ಎಲ್ಲಿ ಎತ್ತ ಅಂತ ಅಂವಂದು ಪತ್ತೆ ಹತ್ತಲಿಲ್ಲ. ಆದ್ರ ಕೊಲ್ಲಾಪುರದಾಗ ಕಟಗಿ ಅಡ್ಡೆದಾಗ ಕೆಲಸಾ ಮಾಡಿಕೋತ ಅದಾನಂತ ಒಂದ್‌ಸಲ ಸುದ್ದಿ ಬಂದಿತ್ತ. ಅದ್‌ಅ ಸುದ್ದಿ ಎಳೀ ಹಿಡಕೊಂಡ ನಿಮ್ಮ ಮಾಮಾ ಹೋಗಿ ಅಂವ್ನ ಬೆಟ್ಟಿ ಮಾಡಿ ಬಂದಾನ. ಇನ್ನಾ ಯೌಳ್ ತಿಂಗ್ಳಕ್ಕ ಆಗೂವಸ್ಟ ಕೆಲಸೈತಿ; ಅದನ್ನ ನಾನ ಮುಗಸಾಗ ಬೇಕಾಗೇತಿ; ಮುಗಿಸಿದ ಮ್ಯಾಲ ನಾನ್‌ಅ ಬರತೀನಿ, ನೀವ್ಯಾರೂ ಕರ್‍ಯಾಕ ಬರಬ್ಯಾಡರಿ’ ಅಂತ ಎರಡ್ ಸಲ ಹೇಳಿದ್ದಂತ. ಇದಾಗಿ ಈಗ ಐದ್ ವರ್ಷ ಆಗಾಕ ಬಂದೈತಿ. ಈಗ ಮತ್ತ ಸುದ್ದಿ ಬಂದೈತಿ. ಅಂವಾ ಕೊಲ್ಲಾಪೂರದಾಗೋ, ಸಾಂಗ್ಲಿ ಒಳಗೋ ಅದಾನಂತ. ನೀನರೆ ಒಂದೀಟ ಪ್ರಯತ್ನ ಮಾಡಿ ಕರಕೊಂಡ್ ಬಂದರ ಛಲೋ ಆಗತೈತಿ. ನಿನಗ ಪುಣ್ಯ ಬರತೈತಿ’. ಚಿಗವ್ವನ ಕಣ್ಣಿನಲ್ಲಿನ ನೀರಿನ ಧಾರಿ ಜೋರಾತ. ತಾಟಿನ್ಯಾಗ್ ಕೈ ತೊಳದ್ ಎದ್ನಿ.
***
ಈಗ ೧೬-೧೭ ವರ್ಷದ ಹಿಂದ ಬೆಳಗಾಂವ್ ಜಿಲ್ಲಾದ ಒಂದು ಸಣ್ಣ ಊರಿಗೆ ಚಿಗವ್ವನ್ನ ಮದಿವಿ ಮಾಡಿಕೊಟ್ಟಿದ್ರು. ನಮ್ಮವ್ವನ ಮನ್ಯಾಗ ಇಕಿನೇ ಆರನೇದಾಕಿ. ಕೊನೆಯವಳೂ ಹೌಂದು. ಮುದ್ದಿನಂಥಾ ಮಗಳು. ಎಲ್ಲರಿಗಿಂತಲೂ ತುಸು ಚೆಂದ. ಆಕಿ ಮ್ಯಾಲ ಎಲ್ಲರದೂ ಭಾಳ ಅಂದ್ರ ಭಾಳ ಪಿರಿತಿ. ಇಬ್ಬರು ಅಣ್ಣಂದಿರು ತಂಗಿಯ ಮಾತಿನ ಲಕ್ಷ್ಮಣ ರೇಖಾ ದಾಟವರಲ್ಲ. ಅಕಿ ಹೇಳಿದ್ದ್‌ಆ ಲಾಸ್ಟ್ ಜಜ್‌ಮೆಂಟ್. ರಾಜಕುಮಾರಿ.., ರಾಜಕುಮಾರಿ ಹಂಗ ಬೆಳೆದಾಕಿ. ಮನಿಗೆ ಸತತ ಬೆಳದಿಂಗಳ್‌ಅ ಆಗಿದ್ದಾಕಿ.
ಮದಿವಿ ಆಗಿ ಹ್ವಾದ ಮ್ಯಾಲ ಗಂಡನ ಮನಿಗೂ ಬೆಳದಿಂಗಳನ್‌ಅ ಆದಳ. ವರ್ಷ ತುಂಬುದರೊಗ ಮುತ್ತಿನಂಥ ಗಂಡ ಮಗನ್ನ ಹಡದ್ಲು. ಆದ್ರ ಮೊದಲ್ನೇ ಹುಡ್ಗ ಇನ್ನ ದೀಡ ವರ್ಷದಾಂವ ಆಗೂದಾರಗನ್‌ಅ ಇನ್ನೊಬ್ಬ ಹುಟ್ಟದ. ಹೀಂಗ ಎಂಟು ವರ್ಷದಾಗ ಪುತ ಪುತ ಅಂತ ಆರು ಮಕ್ಕಳನ್ನ ಹೆತ್ತ ಮಹಾ ತಾಯಿ ಅನಿಸಿಕೊಂಡ್ಳು. ಮಕ್ಕಳಿಲ್ಲದವ್ರು ಚಿಗವ್ವನ ಮಾರಿ ನೋಡಿ ಹೊಗತಿದ್ರು, ತಮಗೂ ಮಕ್ಕಳಾಗ್ತಾವಂತ ತಿಳದ. ಆದ್ರ ಗಂಡ ಅನ್ನುವ ಪ್ರಾಣಿ ಎಷ್ಟರೇ ದುಡಿದ್ರೂ ಮಕ್ಕಳ ತುತ್ತಿನ ಚೀಲಾ ತುಂಬೋದು ಕಠಿಣ ಆಗಾಕ ಹತ್ತಿತು.
ಇಂಥಾ ಕಷ್ಟದ ವ್ಯಾಳ್ಯಾದಾಗನ್‌ಅ ಕಾಕಾ ಮನಿ ಬಿಟ್ಟ ನಡದ್‌ಬಿಟ್ಟ. ಇಂದ್ ಬರತಾನ, ನಾಳೆ ಬರತಾನ ಅಂತ ಎಲ್ಲರೂ ಕಾದೇ ಕಾದರು. ಊರೂರಿಗೆ ಹೇಳಿ ಕಳಿಸಿದ್ರು. ಎಲ್ಲೆರೆ ಸಿಕ್ಕಂದ್ರ ಊರಿಗೆ ಬಾ ಅಂತ ಹೇಳ್ರಪಾ, ನಿಮಗ ಕಾಲಿಗೆ ಬೀಳ್ತೀನಿ ಅಂತ ಎಲ್ಲಾರಿಗೂ ಚಿಗವ್ವ ಬೇಡಿಕೊಂಡಿದ್ದಕ್ಕ ಎಲ್ಲರೆ ಲೆಕ್ಕ ಐತೇನು? ’ಮಲಪರಬಾ ಹೊಳಿ ದಂಡ್ಯಾಗ ನಿಂತ ಜಳಕಾ ಮಾಡಾಕತ್ತಿದ್ದಂತ’ ಅಂತ ಒಬ್ರು ಹೇಳಿದ್ರ, ’ಪ್ಯಾಟ್ಯಾಗ ಜಟಗಾ ಗಾಡ್ಯಾಗ ಕುಂತ ಎಲಿ ಅಡಿಕಿ ತಿನಕೋಂತ ಹೋಗೂದನ್ನ ನಾನ್‌ಅ ನೋಡಿನ್ನಿ’ ಅಂತ ಇನ್ನೊಬ್ಬ ಹೇಳಿದ್ರೇ ಹೊರ್ತು ಯಾರೂ ನಕ್ಕಿಯಾಗಿ ಏನೂ ಹೇಳ್‌ಲಿಲ್ಲ. ಸಣ್ಣ ಮಾಮಾ ಹೋಗಿ ಎಲ್ಲಾಕಡೆ ಹುಡುಕಾಡಿ ಬಂದ. ಬೀಗರು-ಬಿಜ್ಜರ ಮನಿಗೆಲ್ಲಾ ಹೋಗಿ ಕೇಳ್ಯಾಡಿ ಬಂದರು.
***
ಕಾಕಾ ಮನಿ ಯಾಕ ಬಿಟ್ಟ ಹ್ವಾದ ಅನ್ನೂದು ನನಗಂತೂ ಒಂದ್ ದೊಡ್ಡ ಯಕ್ಷ ಪ್ರಶ್ನ್ ಆಗಿತ್ತ. ಕಾಕಾ ದುಡದ್ ದುಡದ್ ಸಾಕಷ್ಟು ತಂದ್ ಹಾಕ್‌ತಿದ್ದ. ಆದ್ರ ಆರು ಮಕ್ಕಳನ್ನ ಸಾಕೋದು ದೊಡ್ಡ ಹೊರಿ ಆದಂಗಾಗಿ ಏನೇನೋ ಕಸರತ್ತು ಮಾಡಾಕತ್ತಿದ್ದ. ಕಟಗಿ ಅಡ್ಡೆ ಮಾಡಬೇಕಂತೇಳಿ ಒಂದಿಬ್ಬರ ಹಂತೇಕ ಬಡ್ಡಿ ಸಾಲಾ ತಂದ. ಕಟಗಿ ಅಡ್ಡೆ ಚಾಲೂ ಮಾಡಿದಾ. ಆದ್ರ ಅವನ ನಶೀಬು ಭಾಳ ಸುಮಾರಿತ್ತ. ಕಟಗಿ ಅಡ್ಡೆ ಉದ್ದಾರ ಆಗಿಲಿಲ್ಲ. ಸಾಲ ಮೈಮ್ಯಾಗ ಬಂತು. ಸಾಲಗಾರರ ಕಾಟಾ ತಾಳಲಾರ್‍ದ ಮನಿ ಬಿಟ್ಟ ಹೊಂಟ ಅಂತ ಒಂದು ವರ್ಶನ್ ಸಿಕ್ಕಿತು. ಆದ್ರ, ಕಾಕಾನ ವಿಚಾರದಲ್ಲಿ ಅದು ಅಷ್ಟೇನೂ ಸರಿ ಅಲ್ಲ ಅನಿಸ್ತು.
ಇನ್ನೊಂದು ವರ್ಶನ್ ಬ್ಯಾರೇನ ಇತ್ತು.
ಚಿಗವ್ವ ಮೂಲಿಮನಿ ಬಾಳಪ್ಪನ ಹೇಣ್ತಿ ಸತ್ಯವ್ವನ ಹೆಸರ್ ಹೇಳ್ದಲೇ ಅಕಿನ್ನ ಎಪರಾ ತಪರಾ ಬೈತಿದ್ಳು. ಅಕಿಯಿಂದಾಗೆನ್‌ಅ ತನಗಂಡ ಊರು ಬಿಟ್ಟು ಹೋಗುವಂಗ ಆಗೇತಿ ಅಂತಿದ್ಲು. ಈ ಜಾಡ ಹಿಡದ್ ಬೆನ್ನ ಹತ್ತಿದಾಗ ಹೊಸ ಸುಳಿವೊಂದ್ ಸಿಕ್ಕಿತು.
ಅದೇನಪಾ ಅಂತಂದ್ರ ಬಾಳಪ್ಪನ ಚೆಂದಾನ ಚೆಲ್ವಿ ಹೆಂಡ್ತಿಯಂಬೋ ಹೆಂಡ್ತೀಗೂ ಕಾಕಾಗೂ ಏನೋ ಮಜಕೂರ ನಡದಿತ್ತಂತ. ಮದಿವಿ ಆಗಿ ಏಳೆಂಟು ವರುಸ ಆದ್ರೂ ಮಕ್ಕಳಾಗದ ಬಾಳಪ್ಪನ ಸತಿಮಣಿ ಸತ್ಯವ್ವಗೂ ಕಾಕಾ ಅಂದ್ರ ಬಾಳ ಪಿರಿತಿ ಉಕ್ಕಿಬಂದಿತ್ತು. ಅದು ಯಾಡಮೂರ ಸಲ ಸಾಬೀತನೂ ಆಗಿತ್ತ… ಆದ್ರ ದೊಡ್ಡ ಮನಿತಣಸ್ಥನಾದ ಬಾಳಪ್ಪ, ಎಲ್ಲಿ ತನ್ನ ಮನಿ ಮರ್ಯಾದೆ ಹರಾಜ್ ಆಗಿ ಹೊಕ್ಕತೇನೋ ಅಂತ ಹೆದರಿಕ್ಯಾರ ತನ್ನ ಹೆಂಡ್ತೀನ ದನಕ್ಕ ಬಡದಂಗ ಬಡದ, ತನ್ನ ಹದ್ದಬಸ್ತ್‌ನ್ಯಾಗ ಇಟಕೊಳ್ಳಾಕ ನೋಡಿದ. ಆದರ, ಕಾಕಾಗೂ ಸತ್ಯವ್ವಗೂ ಇದ್ದ ಫ್ರೆಂಡ್‌ಶಿಪ್‌ಗೆ ಮಾತ್ರ ಏಟೇಟೂ ಮುಕ್ಕಾಗಲಿಲ್ಲ. ಅದು ಹೊಳಿದಂಡಿ ಮ್ಯಾಲಿನ ಕರಿಕಿ ಕುಡಿಯಂಗ ಹಬ್ಬತಾ…ನ ಹೋತು.
ಹಿಂಗಾಗಿ ಲಾಸ್ಟ್‌ಗೆ ಕಾಕಾನ ಓಡ್ಯಾಡಿಸಿ ಬಡಿಗಿ ತಗೊಂಡ ಬಡ್ಯಾಕ ಅವರೆಲ್ಲಾ ಹೊಂಚ್ ಹಾಕಿದ್ರೆಂಬೋ ಸುದ್ದೀನೂ ಇತ್ತ. ಆದ್ರ ಆದು ಸಾಧ್ಯವಾಗದೇ ಇದ್ದಾಗ ಲೋಕಲ್ ಗೂಂಡಾಗಳನ್ನು ಬಿಟ್ಟ, ಅವರಿಗೊಂದಿಷ್ಟ ಸೆರೆ ಕುಡಿಸಿ, ಕಿಸೆ ತುಂಬೋವಷ್ಟ ರೊಕ್ಕಾ ತುಂಬಿ, ಇಂವನ್ನ ಹೊಡಸಾಕಂತ ನೋಡಿದಾರ. ಅದ್ಯಾವುದಕ್ಕೂ ಕಾಕಾ ಮಣಿಲಿಲ್ಲ. ಕಾಕಾನ್ನ ಖೂನೀನ ಮಾಡಬೇಕಂತ ಮೂರನಾಕ ಸರ್ತೆ ಕುಡುಗೋಲು ಮಸದ್‌ಬಿಟ್ಟಿದಾನ ಬಾಳಪ್ಪ. ಕತ್ತಲದಾಗ ಅಡಿಗಿಕೊಂಡ್ ಕಾದ್ ನೋಡಿದಾನ. ಆದ್ರ ಖಿಲಾಡಿ ಕಾಕಾ ಸಿಕ್ಕಿಲ್ಲ. ಆಗ ಅಂವಗ ಬೇರೆ ದಾರಿ ತೋರದೇ, ತನ್ನ ಬಂದೂಕನ್ನ ಹೆಗಲಿಗೆ ಹಾಕ್ಕೊಂಡ ಹೊರಟಾನ. ಕಾಕಾ ಸಿಕ್ಕಾಗ ಗುಂಡ್ ಹಾರಿಸಿದಾನ. ತಪ್ಪಿಸಿಕೊಂಡ ಕಾಕಾ ಬಚಾವಾಗ್ಯಾನ. ಆ ಮ್ಯಾಲ ಸುದ್ದಿ ದೊಡ್ಡ ಅಜ್ಜಾಗ ಗೊತ್ತಾಗಿ ’ಸೂಳಿ ಮಗನ್‌ಅ ಎಲ್ಲೆರೆ ಹಾಳಾಗಿ ಹೋಗ್; ಜೀಂವಾ ಉಳಿಸಿಗೋ; ಇಲ್ಲಾಂದ್ರ ನಾನ್‌ಅ ನಿನ್ನ ಕಾಲ್ಮರಿ ತಗೊಂಡ್ ಹೊಡೀಬೇಕಾಗ್ತದ’ ಅಂತ ಬೈದಾಗ, ಕಾಕಾನ ಸ್ವಾಭಿಮಾನಕ್ಕ ಧಕ್ಕಿ ಬಂದಾಂಗಾಗಿ ಮನಿ ಬಿಟ್ಟಾನ’ ಎಂಬುದು ಇಲ್ಲಿ ವರೆಗೆ ತಿಳಿದುಬಂದ ಇನ್ನೊಂದು ವರ್ಶನ್.
***
’ನಿಮ್ಮ ಕಾಕಾ ಮನಿ ಬಿಟ್ಟ ಹೋಗೂದಷ್ಟ ತಡಾ; ಸಾಲ ಕೊಟ್ಟ ಶೂರರೆಲ್ಲ ಮನಿ ಮುಂದ ಕುಣ್ಯಾಕ ಹತ್ತಿದ್ರು. ಕಾಲ ಕೆದರಿ ಜಗಳಕ್ಕ ನಿಂತ್ರು. ಆದ್ರ, ನಾ ಯಾವುದಕ್ಕೂ ಹೆದರಲಿಲ್ಲ. ನೀವೇನ್ ನನ್ನ ಕೇಳಿ ಸಾಲಾ ಕೊಟ್ಟಿರಿ? ಸಾಲಾ ಕೊಟ್ಟಿದ್ದಕ ಸಾಕ್ಷಿ ಎಲ್ಲೈತಿ? ಹೆಚ್ಚೂ ಕಡಿಮಿ ಆತಂದ್ರ ನಾ ಟೇಶನ್ ಮೆಟ್ಟಲಾ ಹತ್ತಾಕಿ ಅದೇನು ಅಂತ- ನಾಕ್ ಮಂದಿ ಮುಂದ್ ಹೇಳಿದಾಗ; ಈ ಹೆಣಮಗಳ ಅಸನರಿ ಇಲ್ಲ ಬಿಡ್ ಅಂತ ಒಂದೀಟ್ ಮಂದಿ ಸುಮ್ಮನಾದರ. ನನಗ ಗೊತ್ತ್ ಇದ್ದವರ ಸಾಲಾನೆಲ್ಲ ತೀರಸಾಕಂತೇಳಿ ನನ್ನ ಗಂಡನ ಪಾಲಿನ ನಾಕ್ ಎಕರೆ ಹೊಲಾನ್ನ ನನ್ನ ಕಬ್ಞಾಕ್ಕ ತಗೊಂಡಿನಿ. ಅದರಾಗ ಮೂರ್ ಎಕರೆ ಮಾರಿ ಯಾರ್‍ಯಾರು ಬರ್‍ತಾರೋ ಅವರದೆಲ್ಲ ಸಾಲಾ ಕೊಟ್ಟ, ಇನ್ನ ಈ ಕಡೆ ಏನರೆ ಹಾದರೆಂದರ ಪಾಡ ಹರ್‍ಯಾಕಿಲ್ಲ ನೋಡ್ರಿ ಅಂತ ತಾಕೀತು ಮಾಡಿದ್ನಿ. ಆ ಮ್ಯಾಲ ಯಾರೂ ನಮ್ಮ ಸನೇಕ ಬರಲಿಲ್ಲ.
’ಆದ್ರ, ಬಾಳಪ್ಪ ಅನ್ನೋ ಖೊಟ್ಟಿ ಮುಂಡೆ ಮಗ ಸುಮ್ಮನಿರಬೇಕಲ್ಲ. ಏನೇನೂ ಪಿತೂರಿ ಮಾಡಿ ನಮ್ಮ ಮನಿಗೆ ಬಹಿಷ್ಕಾರ ಹಾಕಬೇಕಂತೇಳಿ ಹೊಂಟಿದ್ರು. ಆದ್ರ ದೊಡ್ಡ ಅಜ್ಜಾ ರಾಜಿಕೀದಾಗ ಅದಾನಲ್ಲ; ಅವನ ವಝನ್‌ನಿಂದಾಗಿ ಯಾರೂ ಅಂಥಾ ಕೆಟ್ಟ ಕೆಲಸಕ್ಕ ಕೈ ಹಾಕಲಿಲ್ಲ ಎಂದು ಹೇಳುತ್ತಲೇ ಚಿಗವ್ವ, ಸಂಜೆ ಆದದ್ದು ನೆನಪಾಗಿ, ತನ್ನ ಮನೆ ಎಂಬ ಜನತಾ ಪ್ಲ್ಯಾಟಿನ ಕುಬ್ಜ ಪಡಖಾನೆಯೊಳಗ ಜ್ವಾಳಾ ಹರವಿಕೊಂಡು ಕೇರಾಕ ಶುರು ಮಾಡಿದಳು.
***
ಚಿಗವ್ವ ಈಗ ಕಲ್ಲು ಆಗಿದಾಳ. ಸಾಲ ಹರಿದು ಹೋತು. ಅದರ ಜತಿಗೆ ಹೊಲನೂ ಹೋತು. ಇರೋ ಹೊಲದಾಗ ಪೀಕ ಬರೂದ್‌ಅ ಕಷ್ಟ. ಅಲ್ಲದ, ಅದನ್ನ ನೋಡವರ್‍ಯಾರು? ಹೊಲಕ್ಕ ಹೋಗಬೇಕಂದ್ರ ಮನ್ಯಾಗ ಸಣ್ಣ ಮಕ್ಕಳು. ಇದ್ದದ್ದರಾಗ ಅಟೀಟು ಬರುವ ಜ್ವಾಳಾ, ಕಾಳಿಂದ ಜೀವನ ನಡೀತಿತ್ತು. ತಿನ್ನುವ ಹೊಟ್ಟೆಗಳು ಬಾಳ ಇದ್ದದ್ದರಿಂದ ದೊಡ್ಡ ಮಗನನ್ನ ತಮ್ಮನ ಊರಿಗೆ ಕಳಿಸಿದ್ಳು. ಅಲ್ಲೆರೆ ಸ್ವಲ್ಪ ಸಾಲಿಗೆ ಹೋಗಿಕೋಂತ, ಏನರೆ ಕೆಲಸಾನಾರಾ ಕಲಿತಂದ್ರ ಚಲೋ ಆಕ್ಕೈತಿ ಅಂತ. ಜನತಾ ಮನಿಗೆ ಅರ್ಜಿ ಹಾಕಿದ್ಲ. ಅದೂ ಮಂಜೂರಾಗಿ ಬಂತು. ದೂರದ ಬೆಂಗಳೂರಾಗಿದ್ದ ಅಕ್ಕನ ಮಗನಿಗೆ ಕಾಗದ ಬರದ ಹಾಕಿ, ಜನತಾ ಮನಿ ಕಟ್ಟಸಾಕ ಸೊಲ್ಪ ರೊಕ್ಕಾ ಕೊಡಪಾ ಅಂದ್ಲು. ಆಂವಾ ದೊಡ್ಡ ಮನಸ ಮಾಡಿ ಒಂದೆಂಟು ಸಾವಿರ ರೂಪಾಯಿ ಕೊಟ್ಟ. ಉಳಿದಿದ್ದನ್ನ ಸರ್ಕಾರ ಹಾಕಿ ಮನಿ ಕಟ್ಟಿಸಿಕೊಟ್ಟಿತು. ಬ್ಯಾಂಕಿನ ಸಾಲದ ಮ್ಯಾಲ ಒಂದ್ ಎಮ್ಮಿ ತಂದುಕೊಂಡಳು. ಇದ್ದ ಒಂದೆಕ್ರೆ ಹೊಲದಾಗ ಎಮ್ಮಿ ಮೇಯಿಸಿಕೋಂತ ಹಾಲನ್ನ ಡೇರಿಗೆ ಹಾಕಾಕ ಶುರು ಮಾಡಿದ್ಲ. ಹಾಲಿನ ರೊಕ್ಕದಾಗ ಸಂತಿ ನಡ್ಯಾಕ ಹತ್ತಿತು. ಆದ್ರ…
ಮನ್ಯಾಗ ಐದು ಮಕ್ಕಳು. ಅವರ ಬೇಡಿಕೆ ದಿನಾ ದಿನಾ ಹೆಚ್ಚಾಗಾಕ ಹತ್ತಿತ. ತಾಯಿ ದುಡದದ್ದು ಸಾಲಲಿಲ್ಲ. ಮೂರನೇ ಮಗನನ್ನ ಹುಬ್ಬಳ್ಯಾಗ ಅಕ್ಕನ ಮನ್ಯಾಗ ಬಿಟ್ ಬಂದ್ಲು. ಆದ್ರ ಒಂದ್ ವರ್ಷ್ ತುಂಬೂದ್ರಾಗನೇ ಇಬ್ಬರೂ ಊರಿಗೆ ವಾಪಸ್ ಬಂದ್ ಬಿಟ್ರು. ಹುಬ್ಬಳ್ಯಾಗಿದ್ದ ರಾಜಾ, ದಿನಾ ಮುಸಲರ ಹುಡುಗರ ಜೋಡಿ ಜಗಳಾ ಮಾಡಿ, ಅವರ ಕೈಯಾಗ ಹೊಡಿಸಿಕೊಂಡ್ ಬರತಿದ್ದ. ಹಿಂಗಾಗಿ ಅಕ್ಕ ಅಂವನನ್ನ ನಿಮ್ಮೂರಿಗೆ ಹೋಗ್ ಅಂತೇಳಿ ಬಸ್ ಹತ್ತಿಸಿ, ಕೈಯಾಗ ಐವತ್ ರೂಪಾಯಿ ಕೊಟ್ಟ ಕಳಿಸಿಬಿಟ್ಟಿದ್ಲ. ಇತ್ತ ತಮ್ಮನ ಮನ್ಯಾಗಿದ್ದ ದೊಡ್ಡ ಮಗಾ ಸಿದ್ದ ಮಾವನ ಹೆಂಡತಿ ಕಾಟಾ ತಾಳದೇ ಓಡಿ ಬಂದಿದ್ದ. ಅತ್ತಿಗೆ ದಿನಾಲೂ ಎರಡೆರಡ್ ಕೊಡಾ ಹೊತ್ತ ನೀರ್ ತಂದ್ ಹಾಕತಿದ್ದ. ಅಕೀ ಮಕ್ಕಳ ಮುಕಳಿ ತೊಳದ್, ಅಂಗಿ ತೊಡಿಸಿ ಸಾಲಿಗೆ ಕಳಿಸ್‌ತಿದ್ದ. ಮನಿ ಎಲ್ಲಾ ಕಸ ಹೊಡದು ಝಳ ಝಳ ಮಾಡತಿದ್ದ. ಕಿರಾಣಿ ಅಂಗಡಿಗೆ ಹೋಗೋದು, ಗಿರಣಿಗೆ ಬೀಸಾಕ ಹೋಗೋದು- ಹೀಂಗ್ ಎಲ್ಲಾ ಕೆಲಸಾನೂ ಇವನ ಮ್ಯಾಲ ಬಿದ್ದವು. ದಿನಾಲೂ ಎಲ್ಲಾ ಕಡೆಗೂ ಅಡ್ಯಾಡಿ ಕಾಲ್ ಸವದ್ರೂ ಚೆಪ್ಪಲ್ ಇರಲಿಲ್ಲ. ಒಂದಿನ ತನ್ನ ಮಗನಿಗೆ ಸರಿಯಾಗಿ ಮುಕಳಿ ತೊಳಿಲಿಲ್ಲ ಅಂತೇಳಿ ಮಾವನ ಹೆಂಡತಿ ಕಪಾಳಕ್ಕ ಹೊಡದ್‌ಬಿಟ್ಲು. ಆ ಬರಸಿಡಿಲಿನಂಗ್ ಬಿದ್ದ ಹೊಡತಕ್ಕ ಕಿಂವ್ಯಾಗ್ ರಗುತ ಬಳಾಬಳಾ ಅಂತ ಬೀಳಾಕ್ಹತ್ತಿತ. ಅಂದಿನಿಂದ ಆ ಕಿಂವಿ ಕೇಳೂದ್‌ಅ ಬಂದ್ ಆತು. ಅಂದ್‌ಅ ಕಡಿ, ಅಂವಾ ಆ ಊರ್ ಬಿಟ್ಟ. ಮಾವ ಬರೂದರೊಳಗ ಬಸ್ ಹತ್ತಿ ತಮ್ಮೂರಿಗೆ ಬಂದ್ ಬಿಟ್ಟಿದ್ದ.
ಇಂಥಾ ದುರ್ಬರ ಘಟನೆಗಳು ನಡೆಯುತ್ತಿದ್ದಾಗನ್‌ಅ ಕೊನೆ ಮಗ ಸಂದೀಪು ವಿಪರೀತ ಕಾಲು ನೋವಿನಿಂದ ಬಳಲಾಕ ಹತ್ತಿತ್ತು. ಕಾಲಿಗೆ ಗಾಯ ಆಗಿ ಅದು ಸೋರಾಕ ಹತ್ತಿತ್ತು. ಹೊರಗಿನವರು ಇರ್‍ಲಿ, ಮನ್ಯಾಗಿನವರೇ ಅವನನ್ನ ಮುಟ್ಟಿಸಿಕೊಳ್ಳದಷ್ಟು ಗಬ್ಬು ನಾತ ಹೊಡೀತಿತ್ತು. ಅದನ್ನ ಡಾಕ್ಟರ್ ಹತ್ತಿರ ತೋರಿಸಬೇಕು ಅಂತಂದ್ರ ಚಿಗವ್ವನ ಹಂತೇಕ ರೊಕ್ಕನ ಇರಲಿಲ್ಲ. ಊರಿನ ಡಾಕ್ಟರ್‌ಗೆ ತೋರಿಸಿದರೆ, ಅವನು ತನ್ನ ಕೈಲಾದ ಔಷಧಿ ಕೊಟ್ಟ. ಆದ್ರ, ಈಗ ಸದ್ದೇ ಬೆಳಗಾಂವದ ಸಿವೋಲ್ ದವಾಖಾನಿಗೆ ತಗೊಂಡ್ ಹೋಗ್ರಿ ಅಂತ್ ಹೇಳಿದ. ಅವರಿವರ ಹಂತೇಕ ಒಂದಷ್ಟು ರೊಕ್ಕಾ ಹೊಂದಿಸಿಕೊಂಡ ಸಿವೋಲ್‌ಕ ತಗೊಂಡ್ ಹೋಗೂದ್ರೊಳಗ ಸಂದೀಪುನ ಜೀವದ ದೀಪ ಆರಿ ಹೋಗಿತ್ತು. ಚಿಗವ್ವನ ಜೀವನ ನೌಕೆಗೆ ದೊಡ್ಡ ತೂತ್ ಆಗಿತ್ತು. ಕಂಗಾಲಾದ ಚಿಗವ್ವ ಹಾಸಿಗೆ ಹಿಡಿದ್‌ಬಿಟ್ಟಳು. ಗಂಡ ಮನಿಬಿಟ್ಟ ಓಡಿ ಹ್ವಾದ್ರೂ ಅಷ್ಟ ಚಿಂತಿ ಮಾಡದಾಕಿ ತನ್ನ ಆರನೇ ಮಗ, ಸಂದೀಪು ಸತ್ತಮ್ಯಾಲ ಅಕೀಗೆ ದಿಕ್ಕ್ ತಿಳಿದಂಗಾತು.
***
ಓಡಿ ಹೋಗಿ ಮುಖೇಡಿಯಾದ ಗಂಡನ ನೆನಪಿನಿಂದ ದೂರ ಇದ್ದು, ದೃಢ ಮನಸ್ಸಿನಿಂದ ಚಿಗವ್ವ ಸಂಸಾರ ಮಾಡಾಕ್ಹತ್ತಿದ್ಲ. ಊರೂ ಕೂಡ ಕಾಕಾನ್ನ ಮರತ್ ಬಿಟ್ಟಿತ್ತ. ಚುನಾವಣೆ ನಡದ್ರ ಭಾಷಣಾ ಮಾಡಕ್ ಅಂವ ಬೇಕಾಗಿದ್ದ. ಯಾರ್‍ದರೆ ಮದಿವಿ ನಡೀತಂದ್ರ ಮುಂದ್ ನಿಂತ ಕೆಲಸಾ ಮಾಡಾಕ ಎಲ್ಲಾರೂ ಅಂವ್ನ ಕರೀತಿದ್ರ. ಎಲ್ಲೆರೆ ಯಾರರೆ ಸತ್ತರ ಏನೇನು ಕ್ರಿಯಾ ಕರ್ಮ ಮಾಡಬೇಕಂತ ಕರಾರುವಕ್ಕಾಗಿ ಹೇಳಾಕೂ ಅಂವಾ ಬೇಕಾಗಿದ್ದ. ಏಳೆಂಟು ವರ್ಷದಾಗ ಆರಂದ್ರ ಆರೂ ಗಂಡ್ ಮಕ್ಕಳನ್ನ ಹಡದು, ದೊಡ್ಡ ಮನಿಶ್ಯಾ ಆಗಿಬಿಟ್ಟಿದ್ದ. ಅಂಥ ಸೋಮಪ್ಪ ಮಲ್ಲಪ್ಪ ಕಲ್ಯಾಣಪುರಕರ್ ಅಂತೊಬ್ಬ ಮನುಷ್ಯ ಈ ಊರಾಗ ಬದುಕಿದ್ದ ಅನ್ನೂದ ಜನರ್ ಮನಸಿನಿಂದ ದೂರ ಆಗಿ ಹೋಗಿತ್ತು. ಅಂತಾ ಸಂದರ್ಭದಲ್ಲಿಯೇ ಇನ್ನೊಂದು ಬಿಸಿ ಸುದ್ದಿ ಊರ ತುಂಬ ಹಬ್ಬಿ; ಎಲ್ಲರ ಬಾಯ್ಯಾಗೂ ಎಲಿ ಅಡಿಕಿ ಆಗಿ ಹೋತ್.
ಕಾಕಾನ ಊರ ಬಿಡಸಾಕ ಒಂದ ರೀತಿಯಲ್ಲಿ ಕಾರಣ ಆದ ಬಾಳಪ್ಪನ ಸತಿಮಣಿ ಸತ್ಯವ್ವ ಯಾರೋ ಹೊಸಾ ಗೆಳ್ಯಾನಗೂಡ ಓಡಿ ಹ್ವಾದ್ಲು ಅನ್ನೂದ ಆ ಸುದ್ದಿ. ಪಾಪ ದೇವರಂಥ ಮನಿಶ್ಯಾನ ಮ್ಯಾಲ ಎಲ್ಲಾರೂ ಏನಕೇನರೆ ಹೇಳಿ ಅಂವ್ನ ಊರ ಬಿಡಿಸಿಬಿಟ್ರ ಅಂತ ಕೆಲವರು ಕಾಕಾನ ಮ್ಯಾಲ ತಮ್ಮ ಕಕ್ಕುಲಾತಿ ತೋರಿಸಿದ್ರು. ಇನ್ನೊಂದಿಷ್ಟ್ ಮಂದಿ, “ಅಕಿ ಗುಣಾನ ಹಂತಾದೈತಳ. ಆಗ ಆ ಸ್ವಾಮ್ಯಾ ಬೇಕಾಗಿದ್ದ; ಅಂವಾ ಊರ್‌ಬಿಟ್ಟ ಓಡಿ ಹ್ವಾದ ಮ್ಯಾಲ ಇನ್ನೊಬ್ಬ ಯಾಂವರೆ ಬೇಕಾಗಿದ್ದ- ಅಂತಂದಿತು ಜನಾ. ಇಕಿನ್ನ ಓಡಿಸಿಕೊಂಡ ಹೋಗಾಕ ಅಂವಗ ಧೈರ್ಯ ಇರಲಿಲ್ಲ- ಅದಕ್ಕ ಅಂವ್ನ ಓಡಿ ಹ್ವಾದ. ಈಗ ಇವನ್ಯಾವನೋ ದೊಡ್ಡ ಕುಳ ಅಂತ ಕಾಣಸತೈತಿ- ಗದಿಮಿಕೊಂಡ್ ಹೋಗ್ಯಾನ” ಎಂಬ ಮಾತಗೋಳು ಧಾರವಾಡ ಆಕಾಶವಾಣಿ ಟೇಶನ್ನಿನಾಗ ಪ್ರಸಾರ ಆದಂಗ ಆಗಿಬಿಟ್ವು.
ಹೆಂಗ್ ಓಡಿಸಿಕೊಂಡ್ ಹ್ವಾದ್ನಂತ್‌ಅ? ಗಾಡಿ ತಂದ್ನಿನೇನೋ? ನಸಿಕಿನ್ಯಾಗ ಎದ್ದ್ ಚೆರಿಗಿ ತಗೊಂಡ್ ಹೋಗೂ ನೆಪದಾಗ ಅಕಿ ಓಡಿ ಹೋಗ್ಯಾಳ; ಎಲ್ಯೋ ದೂರದಾಗ ಒಂದ್ ಪಟಪಟಿ ತಂದ್ ನಿಲ್ಲಿಸಿದ್ರಂತ. ಚೆರಿಗಿನ ಅಲ್ಲೇ ಕಂಟ್ಯಾಗ ಒಗದ ಪಟಪಟಿ ಹತ್ತಿ ಓಡಿ ಹ್ಯಾದಳಂತ- ಹೀಂಗ ನೂರಾರು ಅಂತ- ಕಂತ ರೂಮರ್‌ಗಳು ಹಬ್ಬಿ ಮತ್ತ ಕಾಕಾನ ಹೆಸರು ಬೀದಿಗೆ ಬಂದ್ ಬಿಡ್ತು.
ಆದ್ರ, ಆಕಿನ್ನ ಯಾರ, ಯಾಕ ಓಡಿಸಿಕೊಂಡ್ ಹ್ವಾದ್ರು, ಎಲ್ಲಿಗ್ ಹ್ವಾದ್ರು, ಯಾವೂರಿಗೆ ಹ್ವಾದ್ರು ಅನ್ನೂದ್ ಮಾತ್ರ ಗೊತ್ತಾಗಲಿಲ್ಲ. ಬಾಳಪ್ಪ ಅಂದಿನಿಂದ ಊರ ಬಿಟ್ಟ ಗೋಕಾಕ ಸೇರಿದ.
***
ಅಪಾ, ನನ್ ಮಗ್ನ, ನೀ ಹೆಂಗರೆ ಮಾಡ್. ಅಂವಾ ಸೊಲ್ಲಾಪುರದಾಗೋ, ಕೊಲ್ಲಾಪುರದಾಗೋ ಯಾವ್ದೋ ಸಾ ಮಿಲ್‌ನ್ಯಾಗ ಕೆಲಸಾ ಮಾಡ್ತಾನಂತ. ಅಲ್ಲಿಗೆ ಒಂದ್‌ಬರೆ ಹೋಗಿ ನೋಡಿಕೊಂಡ್ ಬಾ. ಅಂವಾ ಎಲ್ಲೆದನಾಂತ ನೀ ಒಂದೀಟ್ ಪತ್ತೆ ಹಚ್ಚಿ ಬಿಡ. ನಾನ್‌ಅ ಬಂದ್ ಅವನನ್ನ ಕರಕೊಂಡ್ ಬರತೇನಿ. ನನ್ನ ಮಾರಿ ಬ್ಯಾಡ; ನಿನ್ನ ಮಕ್ಕಳ ಮಾರಿ ನೋಡ್ಯರೆ ಊರಿಗೆ ಬಾ. ನಿನಗ ಏನೂ ತೊಂದರೆ ಆಗದಂಗ್ ನಾವು ನೋಡಿಕೋತೀವಿ. ಊರಾಗಿನ ’ದೆವ್ವ’ಗಳೆಲ್ಲ ಈಗ ಊರ ಬಿಟ್ಟ ಪರಾರಿ ಆಗ್ಯಾವು. ನೀಯೇನ್ ಚಿಂತಿ ಮಾಡಬ್ಯಾಡ ಅಂತ ನಾ ಹೇಳತೇನಿ. ನನ್ನ ಮಾತ್ ಕೇಳದಿದ್ರ ಇರಪಕ್ಸಿನ್ನ ಕರಕೊಂಡ್ ಹೋಗೂನು. ಇರಪಕ್ಸಿ ಅಂದ್ರ ಅಂವಗ ಭಾಳ ಪ್ರೀತಿ. ಸಣ್ಣಂವ ಇದ್ದಾಗ ಇರಪಕ್ಸಿ ಸತ್ತ್ ಬದಿಕ್ಯಾನ. ಅಂವನ ತೊಡಿಮ್ಯಾಗ ಹಾಕ್ಕೊಂಡ್ ಓಸ್ದಿ ಕುಡಸ್‌ತಿದ್ದ. ಎಸ್ಟೋ ಸಲ ರಾತರ್‌ನ್ಯಾಗ ದವಾಖಾನಿಗಿ ಕರಕೊಂಡ ಹೋಗ್ಯಾನ. ಇಂವ ಉಳಿಲಿ ಅಂತ ಗುಡ್ಡದ ಯಲ್ಲಮ್ಮಗ ಹರಿಕಿ ಹೊತಗೊಂಡಿದ್ದ. ಈಗ ಇರಪಕ್ಸಿ ದೊಡ್ಡಂವ ಆಗ್ಯಾನ ಮತ್ತ್ ಕುಸ್ತಿ ಆಡಾಕ ಹತ್ಯಾನ; ದಿನಾಲೂ ಎಮ್ಮಿ ಹಾಲ ಕುಡದ್ ಕೋಳಿ ತತ್ತಿ ತಿಂದ್ ಗರಡಿ ಮನಿಗಿ ಹೊಕ್ಕಾನ; ಅಂವ್ನ ಮೈ ಭಾಳ ದಾಡಿಸಿ ಆಗೇತಿ, ಮನ್ನಿ ಮನ್ನಿ ದಸರಾದಾಗ ಕುಸ್ತಿ ಒಗದ ಬೆಳ್ಳಿ ಕಡಗಾ ತಂದಾನ ಅನ್ನೂದು ಅಂವಗ ಗೊತ್ತಾದರ ಓಡಿ ಬಂದ್ ಬಿಡತಾನ. ನಡೀ ಮಗನ; ನೀನ ನನ್ನ ದೊಡ್ಡ ಮಗಾ. ನಿಮ್ಮ ಕಾಕಾನ್ನ ಹೆಂಗರೆ ಮಾಡಿ ಹುಡಿಕಿಕೊಂಡ್ ಬಾ. ನನಗಾಗಿ ಅಲ್ಲ; ನಿನ್ ತಮಗೋಳಿಗಾಗಿ, ನನಗೀಗ ಅಂವ್ನ ಅವಶ್ಯಕತಾ ಇಲ್ಲ. ನನ್ನ ಬಾಳ ಮುಗದೈತಿ; ನಿನ್ ತಮಗೋಳಿಗೆ ಅಂವ್ನ ಆಸರಾ ಬೇಕಾಗೇತಿ.. .. .. ಚಿಗವ್ವನ ಮಾತಿನ ಲಹರಿ ಹೀಂಗ್‌ಅ ಮುಂದ್‌ವರಿದಿತ್ತ.
***
ಹಿಂದಿನ ದಿನ ಮಾಮಾ ಫೋನಿನ್ಯಾಗ ಕೆಲ ಸಂಗತಿಗಳನ್ನ ಹೇಳಿದ್ದ. ಅಂವಾ ಹೇಳಿದ ಅಂದಾಜಿನ ಮ್ಯಾಲ, ಕಾಕಾ ಬಾಳಂದ್ರ ಪುಣಾದಾಗ ಇರತಾನ. ಇಲ್ಲಂದ್ರ ಕೊಲ್ಲಾಪುರದಾಗ ಅಥ್ವಾ ಸೊಲ್ಲಾಪುರ. ಹಿಂದಿನ ಸಲ ಮಾಮಾ, ಕಾಕಾನನ್ನ ಭೇಟಿ ಮಾಡಿದ ಕೊಲ್ಲಾಪುರದ ಸಾ ಮಿಲ್‌ನ ಅಡ್ರೆಸ್ ಬರಕೊಂಡ್ ಕಿಸೆದಾಗ ತುರಿಕಿನಿ. ’ನಾ ಒಬ್ಬ ಮದ್ಲ ಹೋಗಿ ಹುಡಿಕಿ ಬರತೇನಿ. ಅಂವಾ ಸಿಕ್ಕಂದ್ರ ಎಲ್ಲಾರೂ ಹೋಗಿ ಕರಕೊಂಡು ಬರೂಣಂತ. ಈಗ್‌ಅ ಇಬ್ಬರು, ಮೂರ್ ಮಂದಿ ಅಂತ ಹ್ವಾದರ ಭಾಳ ಚಲೋ ಆಗೂದಿಲ್ಲ. ಅದೂ ಅಲ್ದ ಈಗ ಬಸ್ ಚಾರ್ಜ್ ಭಾಳೈತಿ. ರಾತ್ರಿ ಆತಂದ್ರ ಇಳಕೊಳ್ಳೂದೆಲ್ಲಿ ಅನ್ನೋ ಪ್ರಶ್ನೆ ಬರ್‍ತದ. ಅದಕ್ಕ ನಾ ಒಬ್ನ ಹೋಗಿ ಬರತೇನಿ ಅಂದ್ರೂ ಚಿಗವ್ವ ಕೇಳಲಿಲ್ಲ. ಇರಪಕ್ಸಿನ ಕರಕೊಂಡ್ ಹೋಗ್. ಒಬ್ಬರ್‌ಕಿಂತ ಇಬ್ಬರ್ ಇರೂದ್ ಬೇಸಿ ಅಂತ ಅಂವನನ್ನೂ ಜತೀಗೆ ಹಚಿಗೊಟ್ಳು.
ಕೊಲ್ಲಾಪುರದಾಗ ಬಸ್ ಇಳದಾಗ ನಸಿಕಿನ್ಯಾಗ ಯೌಳ್ ಗಂಟೆ ಆಗಿತ್ತ. ಚಾದಂಗಡಿಗಿ ಹೋಗಿ ಮಾರಿ ತೊಳದ, ಒಂದ್‌ಕಪ್ ಚಾ ಕುಡದ ಮಾಮಾ ಕೊಟ್ಟಿದ್ದ ಅಡ್ರೆಸ್ ಹುಡಕೋತ ದ್ವಾದ್ವು. ಯಾವ್ದೋ ಒಬ್ಬ ಪುಣ್ಯಾತ್ಮ ಸಾ ಮಿಲ್ ತೋರಿಸ್ದ.
ಕಾಕಾ ಈಗ ಯಾಡ ವರ್ಷದ ಹಿಂದ್‌ಅ ಅಲ್ಲಿಂದ ಬಿಟ್ಟ ಹ್ವಾದ ಅಂತ ಗಾಬರಿ ಬೀಳಿಸುವಂತ ಸುದ್ದಿ ತಿಳೀತು. ಎಲ್ಲಿ ಹೋಗಿರಬೌದು ಅಂತ ಅವರನ್ನ ಕೇಳಿದಾಗ ಮುಂಬೈಕ ಅಂತ ಹೇಳಿದ್ದ. ಗೋರೆಗಾಂವದಾಗಿನ ಒಂದ್ ಫ್ಯಾಕ್ಟರ್‍ಯಾಗ ದಗದ ಸಿಕ್ಕೈತಿ ಅಂತ ಹೇಳಿ ಹೋಗಿದ್ದ- ಅಂತೇಳಿ ಅವರು ಆ ಫ್ಯಾಕ್ಟರಿ ಹೆಸರು, ವಿಳಾಸವನ್ನು ಸೊಲುಪ ಸೊಲುಪಾಗಿ ಹೇಳಿದ್ರು. ಇನ್ನ ನಿರ್ವಾನ್‌ಅ ಇಲ್ಲಂತ ಹೇಳಿ, ಮುಂಬೈಕ ರೈಲ್ ಹತ್ತಬೇಕಾತು.
ಗೊರೆಗಾಂವದಾಗ ಕುಸುಮಾ ಚಿಕ್ಕಿ ಅದಾಳ. ಮದಲ ಅಕಿ ಮನಿಗೆ ಹೋಗಬೇಕಂತೇಳಿ ಕುಸುಮಾ ಚಿಕ್ಕಿಗೆ ಫೋನ್ ಮಾಡಿ, ಅಕಿ ಅಡ್ರೆಸ್ ತಗೊಂಡ್ ಅವರ ಮನಿಗೆ ಹೆಂಗೋ ಹ್ವಾದ್ವಿ. ಭಾಳ್ ವರ್ಷದ್ ಮ್ಯಾಲ ನಮ್ಮನ್ನ ನೋಡಿದ ಚಿಕ್ಕಿ ಮತ್ತ ಗೋಪು ಕಾಕಾಗ ಭಾಳ ಸಂತೋಸ ಆಗಿಬಿಟ್ತ್. ಅವ್ರಿಗೆ ಎಲ್ಲಾ ವಿಚಾರ ಹೇಳಿ ಅಡ್ರೆಸ್ ಚೀಟಿ ತೋರಿಸಿದ್ವು. ಚಿಕ್ಕಿ ತಾನೂ ನಮ್ಮ ಜತಿಗೆ ಬರೂದಾಗಿ ಹೇಳಿದ್ಲು. ತನ್ನ ಎನ್‌ಜಿಓ ಗೆಳತಿಗೆ ಫೋನ್ ಮಾಡಿ ಎಲ್ಲಾ ವಿಚಾರ ಹೇಳಿ, ಹೆಲ್ಪ್ ಮಾಡಬೇಕಂತೇಳಿ ಕೇಳಿಕೊಂಡ್ಳು. ಅಕೀಗೆ ಇಂತಾ ಕಡೆ ಬಂದ್ ನಿಂದರ್; ನಾವ್‌ಅ ಅಲ್ಲಿಗೆ ಬರ್‍ತೇವಿ ಅಂತೇಳಿ; ಹೊಟ್ಟಿ ತುಂಬ ನಾಷ್ಟಾ ತಿನ್ನಾಕ ಕೊಟ್ಟ ನಮ್ಮನ್ನ ಹೊರಡಿಸಿಬಿಟ್ಳು. ಲೋಕಲ್ ಟ್ರೇನ್ ಇಳದ್ ಮ್ಯಾಲ, ಗೆಳತಿನ್ನ ಕರಕೊಂಡ್, ರೀಕ್ಷಾದಾಗ ಕುಂತ್‌ಗೊಂಡ್ ಯಾವ್‌ಯಾವ್‌ದೋ ಚಾಳಿನ್ಯಾಗ, ಗಲ್ಲಿ ಒಳಗ್ ಏಳೂವರಿ ಕಿಲೋ ಮೀಟರ್ ದೂರಕ್ಕ ರೀಕ್ಷಾ ಹೋಗಿ ನಿಂತಿತ್. ಹೊಲಸ್ ಗಬ್ಬ ನಾರ್‌ತಿದ್ದ ಗಟಾರ್. ಅಲ್ಲೇ ಸುತ್ತಿ ಸುಳಿದಾಡ್‌ತಿದ್ದ ಹಂದಿಗೋಳು. ಸಣ್ಣ ಸಣ್ಣ ಪಂಜರದಾಗ ಕುಂತ, ಕೊಕ್ಕಕೊಕ್ಕಕೋ ಎಂದು ಕೂಗ್‌ತಿದ್ದ ಕೋಳಿಗಳು. ಅಲ್ಲಿ ಚಿಕ್ಕಿ ಗೆಳತಿ ಹೋಗಿ ಏನೇನೋ ಕೇಳಿದ್ಳು.
ಊಂಹುಂ. ಅಲ್ಲೂ ನಮಗ್ ಒಳ್ಳೆ ಸುದ್ದಿ ಸಿಗಲಿಲ್ಲ್. ಸೋಮಪ್ಪ ಮಲ್ಲಪ್ಪ ಕಲ್ಯಾಣಪುರಕರ್ ಅಂಬೋ ವ್ಯಕ್ತಿ ಮತ್ತು ಅಂವನ ಜೋಡಿ ಒಬ್ಬಾಕಿ ಹೆಣಮಗಳು- ಇಲ್ಲಿ ಒಂದ್ ವರಸ್- ಆರ್ ತಿಂಗಳಿದ್ರು. ಸಾಂಗಲಿ ಕಡೆ ಅವರ್ ಕಡೆಯವರು ಒಬ್ಬರು ಬಂದ್ ಅವರನ್ನ ಕರಕೊಂಡ್ ಹೋಗ್ಯಾರ- ಅಂತ ಕೇಳಿದಾಗ ಆಕಾಶ ಮ್ಯಾಲ ಬೀಳಬಾರದಾ ಅಂತ ಅನಸಾಕ ಹತ್ತಿತ.
ಇಂವೇನ್ ಸಿಗೂ ಮಾತಲ್ಲ ತಗಿ. ಇನ್ನ್ ಹಿಂದಕ್ ಹೋಗೂದ್‌ಅ ಬೇಸಿ ಅಂತೇಳಿ ವಿಚಾರ ಮಾಡಿ, ಚಿಕ್ಕಿ ಮನೀಗೆ ಬಂದ, ಅಲ್ಲಿಂದ ರಾತ್ರಿ ಟ್ರೇನ್‌ನ್ಯಾಗ ಕುಂತ್ ಬೆಳಗಾಂವದತ್ತ ಹೋಗಬೇಕು ಅಂತ ಲೆಕ್ಕಾ ಹಾಕಿದ್ವು.
ಆದ್ರ ಚಿಕ್ಕಿ ನಮ್ಮನ್ನ ಸುಮ್ಮನ ಬಿಡಲಿಲ್ಲ. ಸಾಂಗಲಿ ಆದ್ರ ಚುಲೋ ಆತು. ಅಲ್ಲಿ ನಮ್ಮ ದೊಡ್ಡಪ್ಪ ಪೊಲೀಸ್ ಪೋಜದಾರ್ ಅದಾನ್. ಅಂವಗ ಒಂದ್ ಮಾತ್ ಹೇಳಿದ್ರ ಅಂವ ಹುಡುಕಿ ಕೊಡ್ತಾನ ಅಂತ ಹೇಳಿ ಆಶೆ ಹುಟ್ಟಿಸಿದಳು. ಇದೂ ಒಂದ್ ಆಗಿ ಬಿಡಲಿ ಅಂತ ಇರಪಕ್ಸಿ, ನಾನು ನಿರ್ಧಾರ ಮಾಡಿ, ಮರುದಿನ ಸಾಂಗಲಿಗೆ ಹೋದ್ವು.
ಚಿಕ್ಕಿ ಹೇಳಿದ ಪೊಲೀಸ್ ಟೇಶನ್‌ಗೆ ಹೋಗಿ ಕೇಳಿದಾಗ ಪೋಜದಾರ ಶಿವಪ್ಪ ಕಣಿವಿಕರೀನ್‌ಕೊಪ್ಪ ರಾತ್ರಿ ಪಾಳೇಕ ಬರತಾರ ಅಂತ ತಿಳೀತು. ನಾವು ಹಿಂಗಿಂಗ್ ಅಂತ್ ಹೇಳಿದಾಗ ಒಬ್ಬ ಪೊಲೀಸ್ ಬಂದು, ತಮ್ಮ ಕ್ವಾಟರ್‍ಸ್‌ನ ಅಡ್ರೆಸ್ ಹೇಳಿ ಕಳಿಸಿದ. ಅಲ್ಲಿ ಹೋಗಿ ಪೋಜದಾರ್ ಶಿವಪ್ಪ ಕಣಿವಿಕರೀನ್‌ಕೊಪ್ಪನ ಮನಿ ಹುಡುಕೋದೇನೂ ತ್ರಾಸ್ ಆಗಲಿಲ್ಲ.
ಚಿಕ್ಕಿ ಹೆಸರೇಳಿದಾಗ ಪೋಜದಾರ್ ತನ್ನ ಗತ್ತನ್ನ ಬಿಟಗೊಟ್ಟ ಸರೇ ಮನಿಶ್ಯಾ ಆಗಿಬಿಟ್ಟ. ಮೀಸಿ ಮ್ಯಾಗ ಕೈ ಹಾಕಿ, ನಮ್ಮನ್ನ ಕರಕೊಂಡ್ ಹೊಂಟ. ’ಸಿಕ್ಕರ ಅಂವಾ ಕಟಗಿ ಅಡ್ಡೆಗೊಳಾಗ ಸಿಗತಾನ’ ಅಂತ ಚಿಗವ್ವ ಹೇಳಿದ್ದನ್ನ ಪೋಜದಾರ ಸಾಹೇಬ್ರಿಗೂ ಹೇಳಿದೆವು. ಪೋಜ್‌ದಾರ್ ತಮ್ಮ ಟೇಶನ್‌ನ್ಯಾಗ ಕುಂತ ಎಲ್ಲಾ ಸಾ ಮಿಲ್‌ಗಳ ಫೋನ್ ನಂಬರ್ ತಗದು ಸರ್ಕಾರಿ ಫೋನ್‌ನ್ಯಾಗ ರಿಂಗ್ ಮಾಡಾಕ ಹತ್ತಿದ. ಐದಾರು ಫೋನ್ ಮಾಡೂದ್ರಾಗ ಪೋಜದಾರ್ ಸಾಹೆಬ್ರಿಗೆ ಸಿಟ್ಟು ಬಂದ್ ಬಿಟ್ಟಿತು. ಹಿಂಗಾಗಿ ನಾನ ಫೋನ್ ನಂಬರ್‌ಗೋಳ್ನ ತಗೊಂಡು ಫೋನ್ ಬೂತ್‌ಗೋಗಿ ಕೇಳಾಕ ಶುರು ಮಾಡಿದ್ನಿ.
ಏನೂ ಪ್ರಯೋಜನಾ ಆಗಲಿಲ್ಲ. ಆ ದಿನಾ ಪೂರ್‍ತ ವೇಸ್ಟ್ ಆತು. ಮರುದಿನಾನೂ ಹಿಂಗ್‌ಅ ಆತು. ಮೂರು ನಾಕು ದಿನಗಳು ಕಳದ್ ಹ್ವಾದ್ವು. ನಾವ್ ತಂದಿದ್ದ ರೊಕ್ಕಾನೆಲ್ಲಾ ತೀರಿ ಹೋಗಿದ್ದರಿಂದ ಮತ್ ಅಲ್ಲೇ ಎಟಿಎಂಗೆ ಹೋಗಿ ರೊಕ್ಕಾ ತರಬೇಕಾತು. ಪೋಜ್‌ದಾರ್ ಒಂದ್ ನೈಟ್ ಡ್ಯೂಟಿ ಮಾಡಿ ಬೆಳಿಗ್ಗೆ ಬಂದ್ ನಿದ್ದೆ ಮಾಡುತ್ತಿದ್ದಾಗ ನಾವಿಬ್ಬರೂ ಕೂಡಿ ಸಾ ಮಿಲ್‌ಗಳ ವಿಳಾಸ ಹಿಡದ್ ಹೋದ್ವಿ. ಸಂಜಿ ಹೊತ್ತಿಗೆ ಶ್ರಿ ಕಾಳಿಕಾದೇವಿ ಸಾ ಮಿಲ್ ಎಂಬೊಂದು ಕನ್ನಡಿಗರ ಕಟಗಿ ಅಡ್ಡೆ ಸಿಕ್ಕಿತು. ಅಲ್ಲಿ ಹೋಗಿ ವಿಚಾರಿಸಿದಾಗ, ಅಲ್ಲಿಂದ ಐದಾರ್ ಓಣಿ ದಾಟಿ ಇರುವ ಮೂರನೇ ಕಟಗಿ ಅಡ್ಡೆದಾಗ ಸೋಮಪ್ಪ ಮಲ್ಲಪ್ಪ ಕಲ್ಯಾಣಪುರಕರ್ ಎಂಬ ಹೆಸರಿನ ಒಬ್ಬ ಮನಿಶ್ಯಾ ಇದ್ದಂಗೈತಿ ಎಂಬ ಹುಲ್ಲಿನ ಆಸರೆ ಸಿಕ್ಕಿತು.
ಕಾಕಾನ ಬಗ್ಗೆ ಅಲ್ಲೆ ಹೋಗಿ ಕೇಳಿದಾಗ ಮರಾಠಿ ಒಳಗ ’ಅದೊ ನೋಡ್ರಿ ಅದ್‌ಅ ಅವುರ್ ಮನಿ’ ಅಂತ ಒಬ್ಬ ವ್ಯಕ್ತಿ ತೋರಸ್ದ. ಆತ ಹೇಳೂದು ತಡಾ ಇಲ್ದಲೇ ಇರಪಕ್ಸಿ ಓಡಿ ಮನಿಗೆ ಹೋಗಿ ದಡಾ ದಡಾ ಬಾಗಲಾ ಬಡದ. ಎಷ್ಟೋ ವರ್ಷಗಳಿಂದ ಬರೇ ನೆನಪಾಗಿ ಇದ್ದ ಅಪ್ಪ ಈಗ ಕಣ್ಣಮುಂದ್ ಬರೂ ಅದ್ಭತ ದೃಶ್ಯಕ್ಕಾಗಿ ಕಾತರದಿಂದ್ ಕಣ್ಣ ಬಿಟ್ಟ ಕಾಯಾಕಹತ್ತಿದ.
ಆದ್ರ, ಕಾಕಾನ ಬದಲಾಗಿ ಒಬ್ಬಾಕಿ ಹೆಣಮಗಳು ಬಂದು ಬಾಗಲಾ ತಗದ್ಳು; ಏನರೆ ಹೇಳಬೇಕಂದ್ರ ಅಂವನ ಬಾಯಿಂದ ಮಾತ್ ಹೊರಡವಲ್ದು. ಬಲೇ ಅಚ್ಚರಿಯಿಂದ ಅಕಿ ಮಕಾನ ನೋಡಿಕೋತ ನಿಂತ್‌ಬಿಟ್ಟ. ಅಕೀನ.. ’ಇರಪಕ್ಸಿ..’ ಅಂತ ಇಂವ್ನ ಮೈದವಿ ಮಾತಾಡ್ಸಿದ್ರೂ ಇರಪಕ್ಸಿ ಮಾತಾಡ್‌ವಲ್ಲ. ಅಷ್ಟರಾಗ, ಹಿಂದಿನಿಂದ ಒಬ್ಬ ಗಣಮಗ ಬಂದ. ಅವನನ್ನು ನೋಡಿ, ಅಯ್ಯ! ಹೌದಲ್ಲ..? ಇಂವ್ನ ನಮ್ಮ ಕಾಕಾ ಅಂತ್ ಅನ್ನೂದರಾಗನ್‌ಅ….
’ಅಪ್ಪಾ.. … …’ ಅಂತ ಇರಪಕ್ಸಿ ಹೋಗಿ ತೆಕ್ಕಿ ಬಡದು ಅಳಾಕ ಹತ್ತಿದ. ಕಾಕಾ ಅಂತ್‌ಅ ನಾನೂ ಓಡಿ ಹೋಗಿ ಅವನನ್ನು ಬಿಗಿದಪ್ಪಿ ಹಿಡಿದೆವು; ಸಿನಿಮಾದಾಗ ಬಿಗಿದಪ್ಪಿ ಹಿಡಿತಾರಲ್ಲ? ಹಂಗ. ನಮ್ಮನ್ನ ನೋಡಿ ಏನೂ ಗೊತ್ತಾಗದ ಕಾಕಾ ಪಿಕಿ ಪಿಕಿ ನೋಡ್‌ತಿದ್ದ. ಆ ಮ್ಯಾಲ ನಾವ್ಯಾರೂಂತ ಗೊತ್ತಾದ ಮ್ಯಾಲ “ಇರಪಕ್ಸಿ?” ಅಂತ ಪಿರೀತಿಯಿಂದ ಅವನ ತಲಿ ಸವರಾಕ ಹತ್ತಿದ. ತಂದಿಯನ್ನ ಬಿಗಿದಪ್ಪಿ ಅತ್ತು ಸಾಕಾಗಿ ಇರಪಕ್ಸಿ ಬಿಟ್ಟು, ಆ ಹೆಣಮಗಳ ಕಡೆ ನೋಡಿದ. ಈಗ ಅಂವನ ಕಣ್ಣೆಂಬೊ ಕಣ್ಣುಗಳಲ್ಲಿ ಆಶ್ಚರ್ಯ ಇರಲಿಲ್ಲ. ಬದಲಾಗಿ ಕೆಂಪನೇ ಕಿಚ್ಚು ತೊಂಬಿತ್ತು. ಅವು ಬೆಂಕಿ ಉಂಡಿ ಆದಾಂಗಾದವು. ಮೈ ಕೈ ಎಲ್ಲ ಥರ ಥರ ನಡಗಾಕ ಹತ್ತಿತು. ಮೈತುಂಬಾ ಬೆವರು ಬಂದು ನೀರಿಳಿಯಾಕ ಶುರು ಮಾಡಿದ್ವು. ಅದೆಲ್ಲಿತ್ತೋ ಅವನ ಸಿಟ್ಟು, ಸಿಟ್ಟಿನಿಂದ ಜೋರಾಗಿ ಹೂಂಕರಿಸುತ್ತ—
”ಇಕಿನವ್ವನ್ ಇಲ್ಯಾಕ್ ಬಂದಾಳಿಕಿ? ಇಲ್ಯಾಕ್ ಬಂದಾಳಿಕಿ? ಇಕೇನ ಸತ್ಯವ್ವ. ಇಕೀನ ಕುತಿಗಿ ಹಿಚಕತೀನಿ ಇಕಿನ್ನ” ಅಂತೇಳಿ ಇರಪಕ್ಸಿ ನುಗ್ಗಿದ.
ಹಾಂ, ಸತ್ಯವ್ವಾ? ಅಂದು ಅನ್ನುದರೊಳಗಾಗಿ ಅಕಿ ಕುತಿಗಿ ಹಿಡದ್ ಹಿಚಕಾಕ ಹತ್ತಿದ್ದ. ನಾನು, ಕಾಕಾ ಓಡಿ ಹೋಗಿ ಬಿಡಸ್‌ಬೇಕಾತು. ’ಏ ನಾಲಾಯಕ್; ಹುಚ್ಚದಿಯೇನ್’ ಅಂತ್ ಚೀರಿದಾಗ ಇರಪಕ್ಸಿ ಎಂಬೋ ೧೫ ವರ್ಷದ ಪೈಲ್ವಾನ ಸತ್ಯವ್ವನ ಕುತಗಿಯ ಕೈ ತೆಗದ. ಕಾಕಾ ಮತ್ತು ಸತ್ಯವ್ವ ಭಯಭೀತರಾಗಿ ನಮ್ಮನ್ನ ನೋಡ್‌ತಿದ್ರು.
ಮನಿ ಒಳಗಿನಿಂದ ಸಣ್ಣ ಹೆಣ್ಣು ಮಗುವೊಂದು ಚೀರಿ ಚೀರಿ ಅಳುವ ಧ್ವನಿ ಕೇಳಿಬಂತು.
*******