ಅವಳು ಯಾರು ಬಲ್ಲೆ ಏನು?

ಫೆಬ್ರವರಿ 28, 2009

ನಮ್ಮ ಕವಿಗಳು ಅವಳನ್ನು ‘ಅವಳು ಯಾರು ಬಲ್ಲೆ ಏನು’ ಎಂದು ಭಾವನಾತ್ಮಕವಾಗಿ ಕೇಳಿದರು. ಯಕ್ಷಗಾನ ಪ್ರಸಂಗವೊಂದರಲ್ಲಿ ‘ಹುಡುಗಿಯರೆಂದರೆ ಆಧುನಿಕ ಕವಿತೆ ಇದ್ದ ಹಾಗೆ; ನೋಡಲು, ಓದಲು ತುಂಬ ಚೆನ್ನಾಗಿರುತ್ತದೆ; ಆದರೆ ಅರ್ಥವೇ ಆಗುವುದಿಲ್ಲ!’ ಎಂದು ಭಾಗವತರೆಂದರು.

ಬೆಂಗಳೂರಿನ ಸ್ನೇಹಿತ ಬಾಲಚಂದ್ರ ಕೆಲವು ಸಾಲುಗಳನ್ನು ಕಳುಹಿಸಿದ್ದಾರೆ. ನಿಮಗಾಗಿ ಅವುಗಳನ್ನು ಇಲ್ಲಿ ಲೋಡ್ ಮಾಡಿದ್ದೇನೆ. ಓದಿ ಮನದೊಳಕ್ಕೆ ಇಳಿಸಿಕೊಳ್ಳುವುದು ನಿಮಗೆ ಬಿಟ್ಟ ವಿಚಾರ.
ವೀರಣ್ಣ

She is a woman

If you kiss her, you are not a gentleman
If you don’t, you are not a man

If you praise her, she thinks you are lying
If you don’t, you are good for nothing

If you agree to all her likes, you are a wimp
If you don’t, you are not understanding
If you visit her often, she thinks it is boring
If you don’t, she accuses you of double-crossing

If you are well dressed, she says you are a playboy
If you don’t, you are a dull boy

If you are jealous, she says it’s bad
If you don’t, she thinks you do not love her

If you attempt a romance, she says you didn’t respect her
If you don’t, she thinks you do not like her

If you are a minute late, she complains it’s hard to wait
If she is late, she says that’s a girl’s way

If you visit another man, you’re not putting in “quality time”
If she is visited by another woman, “oh it’s natural, we are girls”

If you kiss her once in a while, she professes you are cold
If you kiss her often, she yells that you are taking advantage

If you fail to help her in crossing the street, you lack ethics
If you do, she thinks it’s just one of men’s tactics for seduction

She is a woman If you stare at another woman, she accuses you of flirting
If she is stared by other men, she says that they are just admiring

If you talk, she wants you to listen
If you listen, she wants you to talk

In short:
So simple, yet so complex
So weak, yet so powerful
So damning, yet so wonderful
So confusing, yet so desirable……

-ಬಾಲಚಂದ್ರ ರಂಗನಾಥ್, ಬೆಂಗಳೂರು


ಒಂಟಿ ಸಾಲುಗಳು

ಫೆಬ್ರವರಿ 27, 2009

ಒಂಟಿ ಸಾಲು
(ಒಂದೊಂದೇ ಸಾಲಿನ ’ಸಾಲುಮಂಟಪ’ ಮಂಟಪಗಳಿವು).

* ಬಿದ್ದು ಹೋದ ಕಟ್ಟಡಗಳ ಮೇಲೆ ಪಕ್ಷಿಗಳು ಕುಳಿತಿವೆ, ಸಾಕ್ಷಿ ಪ್ರಜ್ಞೆ ಇಲ್ಲದೇ!!

* ಅವಳೆದೆಯ ಕಾವು ಅರ್ಥವಾಗುವ ವೇಳೆಗೆ ಆವಿಯಾಗಿದ್ದೆ!

* ನಾಳೆಯ ಬೆಳಕಿಗಾಗಿ ಹಂಬಲಿಸುತ್ತಾ… ಹಂಬಲಿಸುತ್ತಾ … ಕುರುಡನಾಗಿಬಿಟ್ಟೆ!

* ಹರಿದರಿದ ಸೆರಗಿನೊಳಗೆ ಚಿಂದಿಯಾಗದಿರಲಿ ಬದುಕು…

* ಮೆಲು ಮಾತುಗಳ ಮೃದುತನದಲಿ ಬೆನ್ನು ಸೇರಿದ ಕತ್ತಿಯಿಂದ ಸುರಿಯಲಿಲ್ಲ ರಕ್ತ!

* ಶಾಲೆಯ ಮೈದಾನ, ಸಿಹಿ ನೀರಿನ ಬಾವಿಯ ದಂಡೆ, ಬತ್ತದ ಗದ್ದೆಯ ಕಾಲುರಸ್ತೆಗಳಲ್ಲೆಲ್ಲ ಅವಳದೇ ನಗೆಯ ಕಲವರ; ಎಲ್ಲಡಗಿಹುದೀಗ?!

– ವೀರಣ್ಣ ಕಮ್ಮಾರ


ಮನುಷ್ಯ

ಫೆಬ್ರವರಿ 25, 2009


ಮನುಷ್ಯ!

ಬೆಳಕ ಬೆಳದೂ
ಹೊಳೆ ಜಳಕ ಮಾಡಿಯೂ
ಹೊಳೆ ಹೊಳೆಯುತ
ಹಳೆದಾಗುತ, ಹಳತಾಗುತ
ನಡೆವ ಯಂತ್ರವಿದು!

– ವೀರಣ್ಣ ಕಮ್ಮಾರ


ಏಕೆ ಬೇಕು ಮುಖಮಂಡಲ?

ಫೆಬ್ರವರಿ 18, 2009

ಮುಖವೇಕೆ?

ಎಲ್ಲೂ, ಮತ್ತೆಲ್ಲೂ ನಿಲ್ಲದೇ

ಓಡಲೆರಡು ಕಾಲುಗಳು

ಕಂಡದ್ದನ್ನೆಲ್ಲ ತಿನ್ನಲೊಂದು

ಸದಾ ಹಸಿದ ಹೊಟ್ಟೆ

ಬೇಡಲೆರಡು- ಕೊಡದಿರೆ

ಕಸಿಯಲೆರಡು ಕೈಗಳು

ಹೊಗಳಲು, ಹೊಗಳಿ ಬೇಳೆ

ಬೇಯಿಸಿಕೊಳ್ಳಲು

ಸದಾ ಸಿದ್ಧವಾದ ನಾಲಿಗೆ

ಇವಿಷ್ಟಿದ್ದರೆ ಸಾಕು! ಈ ನಗರದ

ಮನುಷ್ಯನಿಗೆ

ಮುಖವೇಕೆ ಬೇಕು?

-ವೀರಣ್ಣ ಕಮ್ಮಾರ


ಇನ್ನೆಲ್ಲಿಯ ನೆನಪು?

ಫೆಬ್ರವರಿ 18, 2009

ಇನ್ನೆಲ್ಲಿಯ ನಿನ್ನ ನೆನಪು?

ಗೆಳತಿ,
ಕಡುರಾತ್ರಿಯಾಗಿದೆ
ಮುದ ನೀಡಲೊಲ್ಲದು ಬೆಳದಿಂಗಳು
ಸುಳಿ ಸುಳಿದ ಬೀಸುವ ತಂಗಾಳಿ
ಅಲೆ ಅಲೆಯ ಮೊರೆತಗಳಲಿ
ಬರಲೊಲ್ಲದ ನಿನ್ನ ನೆನಪು!

ಮೌನ ಗರ್ಭದಲಿ ಹುದುಗಿದ
ನಿನ್ನ ಸ್ಮೃತಿಗಳ ಮೇಲೆ
ಬರೆ ಹಾಕಿ ಬಿಟ್ಟಿವೆ
ಹಾರ್ಗರೆವ ವಿಮಾನಗಳರ್ಭಟ
ಸಿಡಿ ಗುಂಡುಗಳ ಸದ್ದು
ಲಾಠಿ ಬೂಟುಗಳ ಕರ್ಕಶ ಶಬ್ದ ||

ಎಲ್ಲೋ ಚೀತ್ಕರಿಸಿದ
ಇನ್ನೆಲ್ಲೋ ಪೂತ್ಕರಿಸಿದ
ಗೋರಿಯಲ್ಲೂ ನಡುಗುವ
ಹೆಣಗಳ ನಡುವೆ
ಒಣಗಿದೆ ಬಿಸಿಯುಸಿರ ರಕ್ತ ||

ಪೊತ್ತು ಹೆತ್ತವರನೇ ಇರಿವ
ಕೂಡಿ ಆಡಿದವರನೊರೆವ
ಕಲ್ಲು ಕಬ್ಬಿಣ ಸಿಮೆಂಟ್ ಗಾರೆಯ
ಧಮನಿಗಳಲಿ ಹರಿಯುತಿದೆ ವಿತ್ತ ರಕ್ತ! ||

ಎಲ್ಲೂ ಕಾಣಿಸುತ್ತಿಲ್ಲ ಮುಖ ಮಾಣಿಕ್ಯ
ಬರೀ ಕೈ-ಕಾಲು, ಚಾಚಿದ ನಾಲಿಗೆ
ಥಕ ಥೈ ಥೈ ತೊನೆವ ಓಳಾಟ
ತೆರೆ ಸರಿದ ಬಿರು ಬಿರಿದ ರಾತ್ರಿಗಳಲಿ…
ಇನ್ನೆಲ್ಲಿಯ ನಿನ್ನ ನೆನಪು? ||

-ವೀರಣ್ಣ ಕಮ್ಮಾರ


ಕೆಂಪು ಪತ್ರ

ಫೆಬ್ರವರಿ 9, 2009

blood-letter

ಕೆಂಪು ಪತ್ರ

ಹೇ ಹೇ! ಹೇಗೆ ಬರೆದೆ?
ರಕುತದೀ ಪತ್ರ?
ನಿನ್ನದೇ ಮಾಂಸದೊಳಗಿಂದ
ಎದ್ದು ಬಿದ್ದು ಎದ್ದೋಡಿ ಬಂದದ್ದೇ?
ಎದೆಯ ಕದವ ತೆರೆದು ಬಂತೇ ಈ ರಕುತ?

ಅಥವಾ…? ಅಥವಾ…!!

ಹೆಡೆ ಎತ್ತಿದ ಕೋವಿಗಳಿಂದ
ಅರೆಹೊಟ್ಟೆಯ ಭಿಕ್ಷುಗಳಿಂದ
ಖೊಟ್ಟಿ ನಶೀಬದ ಒಡಲಿನಿಂದ
ಹರಿಹರಿದೋಡಿ ಬಂತೇ…?

ಹಣೆಗೆ ಬಣ್ಣದ ಬಟ್ಟೆ ಕಟ್ಟಿದವರಿಂದ
ಹಣ- ಆಯುಧ ಝಳಪಿಸುವವರಿಂದ
ಮನವಿಲ್ಲದ ಅಮಾನವೀಯ ಗನ್‌ಗಳಿಂದ
ಸಿಡಿ-ಸಿಡಿದು ಬಂತೇ ಲೀಟರ್‌ಗಟ್ಟಲೇ…?

ಬ್ಲೂಲೈನ್ ಟೈರುಗಳ ಸಂದಿಯಿಂದ
ಒಕ್ಕಲೆಬ್ಬಿಸಿದ ಹಕ್ಕಲುಗಳಿಂದ
ನೆತ್ತರು ತುಂಬಿದ ಕಂಗಳಿಂದ
ಒಡೆದು ಹರಿದು ಬಂತೇ ಮಸಿಯಾಗಿ…?

ಕಿತ್ತೊಗೆದ ಸೆರಗುಗಳಡಿಯಿಂದ
ಕತ್ತರಿಸುರುಳಿದ ಪೇಟಗಳ ಕತ್ತುಗಳಿಂದ
ಮೇಲೆಮೇಲೇರಿದ ಬಾವುಟಗಳಡಿಯಿಂದ
ಕುದಿಕುದಿದು ಬಂತೇ…?

ಹೇಗೆ ಬಂತಿದು?
ಬಮಿಯಾನ್ ಬುದ್ಧನ ತಲೆಯಿಂದ
ಗಾಜಾಪಟ್ಟಿಯ ನರಮೇಧದಿಂದ
ಉರುಳಿಬಿದ್ದ ಕೋಟೆ ಕೊತ್ತಲು, ಕಟ್ಟಡ
ಗಳ ಅವಶೇಷಗಳಡಿಯಿಂದ.. ಬಂತೇ?

-ವೀರಣ್ಣ ಕಮ್ಮಾರ


ನಿನ್ನ ಕರೆಗೆ ಓಗೊಡಲೇ?

ಫೆಬ್ರವರಿ 9, 2009

picasso

ನಿನ್ನ ಕರೆಗೆ ಓಗೊಡಲೇ?

ನೂರು ನೋಂಪಿನಲಿ
ಸಾವಿರ ಸೊಂಪಿನಲಿ
ನಾ ಕಾಣ್ವ ನೆನಪಿನಲಿ
ನಿನ್ನದೇ ಝಳಪು!

ಸೊರಗಿದ ಯಮುನೆಯಲಿ
ಕೊಳೆತು ಬೇಯುವ ಗಂಗೆಯಲಿ
ಕರಗುವ ಕಣಿವೆಗಳಲಿ
ಇಣುಕುವುದು ನಿನ್ನದೇ ಹರವು!

ಸುರಿವ ಬೇಸಿಗೆಯಲಿ
ಸುಡುಸುಡುವ ಬೇಗೆಯಲಿ
ಮೊರೆಯದ ಮೋಡಗಳಲಿ
ಕರೆಯುತ್ತವೆ ನಿನ್ನವೇ ಕರಗಳು!!

ಮೂಕವಾಗಿವೆ ಉಲಿವ ಹಕ್ಕಿಗಳು
ನರಕವಾಗಿದೆ ಎದೆ ಬಯಲು

ವೀರಣ್ಣ ಕಮ್ಮಾರ
||


ಕತ್ತಲೆಯ ದಾರಿ!

ಫೆಬ್ರವರಿ 7, 2009

darkness

ಕತ್ತಲೆಯ ದಾರಿ!

ತಳಮಳಿಸಿ, ಹಳಹಳಿಸಿ
ಒಳ ಒಳಗೆಳೆದುಕೊಂಡು
ಸುತ್ತೊ ಯಂತ್ರದಂತೆ
ಹೊರ ಬಿಡುವ ಬಿಸಿಯುಸಿರಿಗೆ
ನಾಳೆಯ ನೂರು ಚಿಂತೆಗಳ ಬೆಂಕಿ!

ಎಲ್ಲೆ ಮೀರಿ ತಿರು ತಿರುಗಿದರೂ
ಎಲ್ಲ ಸವೆ ಸವೆಸಿದರೂ
ಹೆಣ ಬಾರವೆಲ್ಲ ಹೊದ್ದರೂ
ಮೆಟ್ಟಬಾರದ್ದನ್ನೆಲ್ಲ ಗೆದ್ದರೂ
ಚರ್ಮದ ಚೀಲದಲಿ ಆರದ ಆವಿ!

ಕೋಟಿ ಕೋಡಿಗಳ ಹಾಯ್ದರೂ
ಕೆಂಡದುಂಡೆಗಳ ಮೆದ್ದರೂ
ಎದೆ ಏರಿಸಿ ಗಾಣ ತಿರುಗಿಸಿದರೂ
ನೂರು ಬಾಣಗಳ ಮೆಟ್ಟಿ ಎಸೆದರೂ
ಮುಟ್ಟಲಾಗದು ಬೇಡಿಕೆಯ ಪರಿ!

ನರ ನರಗಳ ನಾಡಿಯನರಿಯದೆ
ದಿಕ್ಕು ದಿಕ್ಕಿಗೂ ಹಣಿಕಿ ಹಾಕುತ್ತ
ಬೇಯುತ್ತ, ಕಣ್ಣ ಹನಿ ಜಿನುಗಿಸುತ್ತ
ಎಲ್ಲಿಂದೆಲ್ಲಿಗೋ ಪಯಣ!

ಕತ್ತಲೆಯ ದಾರಿ! ಹೆಡ್ ಲೈಟಿಲ್ಲದ ಪಯಣ!
ಕಂಡರೂ ಕಾಣದೀ ಮುಗಿಯದ ಹಾದಿ!

ವೀರಣ್ಣ ಕಮ್ಮಾರ
* * *