ಸುಖೀ ಸಂಸಾರ

ಏಪ್ರಿಲ್ 17, 2009

ಜಾಗತೀಕರಣ ನಮ್ಮ ಮುಂದೆ ಇರುವ ದೊಡ್ಡ ಪೆಡಂಭೂತ. ಅದು ಒಂದೊಂದಾಗಿ ಎಲ್ಲವನ್ನೂ ಆಹುತಿ ತೆಗೆದುಕೊಳ್ಳುತ್ತಿದೆ. ನಮಗರಿವಿಲ್ಲವೇ ನಾವು ಆ ಮಹಾ ಕೂಪದೊಳಕ್ಕೆ ಸೆಳೆಯಲ್ಪಟ್ಟು, ಎಲ್ಲಿಗೋ ಹೋಗುತ್ತಿದ್ದೇವೆ. ಎಲ್ಲಿಗೆ ಪಯಣ? ಯಾವುದು ದಾರಿ ಎಂಬುದೇ ಗೊತ್ತಿಲ್ಲ. ಈ ದಿಸೆಯಲ್ಲಿ ನನ್ನ ಪ್ರೀತಿಯ ಮೇಷ್ಟ್ರು, ಮೈಸೂರಿನ ವಿ.ಎನ್. ಲಕ್ಷ್ಮಿನಾರಾಯಣ ಅವರು ಬರೆದ ಒಂದು ಸಣ್ಣ ಕಥೆಯನ್ನು ಇಲ್ಲಿ ಕೊಡಲಾಗಿದೆ. ಇನ್ನು ಮುಂದೆ ಆಗಾಗ ಮೇಷ್ಟ್ರು ಇಂಥ ಅನೇಕ ಕಥೆ, ಲೇಖನ, ಬರಹಗಳ ಮೂಲಕ ‘ತಾರೆಗಳಾಚೆ’ ಬೆಳಗಲಿದೆ.

ಇದೋ ನಿಮಗಾಗಿ- ಮೇಷ್ಟ್ರು ವಿಎನ್ಎಲ್ ಅವರ ಕಥೆ:

ಸುಖೀ ಸಂಸಾರ

ಒಂದೂರಿನಲ್ಲಿ ಒಬ್ಬ ಗಂಡ, ಹೆಂಡತಿ ಮತ್ತು ಒಂದು ಮಗು ವಾಸವಾಗಿದ್ದರು. ತಾತನ ಕಾಲದ ಒಂದು ಸಣ್ಣ ಮನೆ. ಮನೆಯ ಮುಂದೆ ಎರಡು ತೆಂಗಿನ ಮರ. ಹಿತ್ತಿಲಲ್ಲಿ ಬಾಳೆ. ಸೀಬೆಮರ. ಗಂಡನಿಗೆ ಯಾವುದೋ ಒಂದು ಆಫೀಸಿನಲ್ಲಿ ಕೆಲಸ. ಹೆಂಡತಿಗೆ, ತಿಂಡಿ, ಅಡಿಗೆ ಊಟ, ಕಸ ಮುಸುರೆ ಮುಂತಾಗಿ ಮಾಡಿದ್ದೆ ಕೆಲಸ. ಬೇಜಾರಾದರೆ ಕಸೂತಿ ಹಾಕುವುದು, ಮ್ಯಾಗಝೈನ್ ಓದುವುದು, ಪಕ್ಕದ ಮನೆಯ ವರ ಜೊತೆ ಹರಟೆ ಹೊಡೆಯುವುದು, ಗಂಡ-ಮಗಳೊಂದಿಗೆ ಸಿನಿಮಾಕ್ಕೆ ಹೋಗುವುದು, ಅಥವಾ ಬೇಜಾರು ಕಳೆಯಲು ಏನೇನು ಮಾಡಲು ಸಾಧ್ಯವೋ ಅದೆಲ್ಲಾ. ಮನೆಯ ಹತ್ತಿರವೇ ಗೌರ್ಮೆಂಟ್ ಸ್ಕೂಲು, ತರಕಾರಿ ಮಾರ್ಕೆಟ್ಟು, ಇಸ್ತ್ರಿ ಅಂಗಡಿ. ಇನ್ನೇನು ಬೇಕು?

ಪಕ್ಕದ ಮನೆಯಲ್ಲಿ ಹಳೆಯ ರೇಡಿಯೋವನ್ನು ಕೊಟ್ಟು ಹೊಸದೊಂದು ಟಿವಿ ತಂದರು. ಮಗಳು ಟಿವಿನೋಡಬೇಕೆಂದು ಹಟಮಾಡಿದಳು. ಎನೋ ಮಗು ಕೇಳುತ್ತಲ್ಲಾ ಎಂದು ಪಕ್ಕದ ಮನೆಗೆ ಕಳಿಸಿದಳು. ಪಕ್ಕದ ಮನೆಯವರು ತುಂಬಾ ಒಳ್ಳೆಯವರು. ಮಗುವಿಗೆ ಟಿವಿ ತೋರಿಸಿ, ತಿಂಡಿ ಕೊಟ್ಟು, ನಿದ್ದೆ ಬಂದರೆ ಅಲ್ಲೇ ಮಲಗಿಸಿರುತ್ತಿದ್ದರು. ಎಷ್ಟು ಹೊತ್ತಾದರೂ ಮಗಳು ಬಾರದಿದ್ದಾಗ ತಾಯಿಯೇ ಪಕ್ಕದ ಮನೆಗೆ ಓಡಿ ಪಕ್ಕದ ಮನೆಯವರ ಬಲಾತ್ಕಾರಕ್ಕೆ ಒಂದು ನಿಮಿಷ ಕುಳಿತು ಟಿವಿ ನೋಡಿದಳು. ತುಂಬಾ ಚನ್ನಾಗಿದೆ ಎನ್ನಿಸಿತು. ಹೆಂಡತಿ ಎಷ್ಟು ಹೊತ್ತಿಗೂ ಬಾರದಿದ್ದಾಗ ಕಾದೂ ಕಾದೂ ಸುಸ್ತಾದ ಗಂಡ ಪಕ್ಕದ ಮನೆಯ ಕಿಟಕಿಯ ಬಳಿ ಬಂದು ಕೆಮ್ಮಿದ. ಒಳಗಿದ್ದ ಮನೆಯ ಯಜಮಾನ ಬನ್ನಿ ಬನ್ನಿ ಎಂದು ಗಂಡನನ್ನು ಒಳಗೆ ಕರೆದರು. ಗಂಡನೂ ಅವರ ಬಲವಂತಕ್ಕೆ ಸ್ವಲ್ಪ ಹೊತ್ತು ಟಿವಿ ನೋಡಿದ. ಅವನಿಗೂ ಟಿವಿ ತುಂಬಾ ಇಷ್ಟವಾಯಿತು.

ಗಂಡ ಹೆಂಡತಿ ಒಂದು ಟಿವಿ ಕೊಂಡುಕೊಂಡರು. ಹೆಂಡತಿ ಕೆಲಸ ಮುಗಿಸಿ ಟಿವಿ ಮುಂದೆ ಕೂರುವಳು. ಟೀವಿಯೊಳಗಿನ ಸಂಸಾರದ ಎಂದಿಗೂ ಮುಗಿಯದ ಸಮಸ್ಯೆಗಳನ್ನು ನೋಡಿ ಕಣ್ಣೀರು ಹಾಕುವಳು. ಮಗಳು ಸ್ಕೂಲಿಂದ ಬಂದವಳೇ ಟೀವಿಯೊಳಗಿನ ನಾಯಿ ಬೆಕ್ಕುಗಳನ್ನು ನೋಡಿ ಸಂತೋಷಿಸುವಳು. ಗಂಡ ಆಫೀಸಿನಿಂದ ಬಂದವನೇ ಟೀವಿಯೊಳಗಿನ ಪ್ರಪಂಚದಲ್ಲಿ ನಡೆಯುವ ಅನ್ಯಾಯಗಳನ್ನು ನೋಡಿ ಹಲ್ಲು ಕಡಿಯುವನು. ಕೊಲೆಗಳನ್ನು ನೋಡಿ ದಿಗ್ಭ್ರಾಂತನಾಗುವನು. ಕೊನೆಗೆ ಎಲ್ಲರೂ ನಗುತ್ತಾ ಊಟಮಾಡಿ ಮಲಗುವರು.

ಈಚೀಚೆಗೆ ಗಂಡ, ಹೆಂಡತಿ ಮತ್ತು ಮಗಳಿಗೆ ಊಟ ಸರಿಯಾಗಿ ರುಚಿಸುವುದಿಲ್ಲ. ತಿಂದಿದ್ದು ಸರಿಯಾಗಿ ಅರಗುವುದಿಲ್ಲ. ಏನೋ ಕೊರೆ, ಬೇಜಾರು. ಯಾವುದಕ್ಕೂ ಟೈಮೇ ಸಿಗುವುದಿಲ್ಲ. ಯಾರಾದರೂ ಮನೆಗೆ ಬಂದರೆ ಯಾಕಾದರೂ ಬರುತ್ತಾರೋ ಎಂದು ಶಪಿಸುವಂತೆ ಆಗು ತ್ತದೆ. ಬಂದವರೂ ಅಷ್ಟೆ. ಮೊದಲಿನಂತೆ ಹರಟುತ್ತಾ ಕೂರುವುದಿಲ್ಲ. ವಾಚುನೋಡಿಕೊಂಡು ಹೊತ್ತಾಯಿತು ಎಂದು ಹೊರಟು ಬಿಡು ತ್ತಾರೆ. ವಾರಕ್ಕೊಮ್ಮೆ ಹೋಟಲಿಗೆ ಹೋಗೋಣ ಎನ್ನುತ್ತಾನೆ ಗಂಡ. ಅದೇ ದುಡ್ಡಿನಲ್ಲಿ ಮನೆಯಲ್ಲೇ ತಿಂಡಿಮಾಡಿಕೊಂಡು ತಿನ್ನಬಹದಲ್ಲಾ ಅಂತ ಹೆಂಡತಿಗೆ ಅನ್ನಿಸುತ್ತದೆ. ಆದರೂ ಆ ಹೋಟಲಿನಲ್ಲಿ ಮಾಡುವ ಹಾಗೆ ದೋಸೆ ಮಾಡಲು ನಮಗೆಲ್ಲಿ ಸಾಧ್ಯ? ಆದರೆ ಅವರು ಎಲ್ಲ ದಕ್ಕೂ ಸೋಡಾ ಹಾಕುತ್ತಾರೆ. ದುಡ್ಡೂ ಹಾಳು, ಹೊಟ್ಟೆಯೂ ಹಾಳು. ಈ ಹುಡುಗಿ ಬೇರೆ ಹೋಮ್ ವರ್ಕ್ ಸರಿಯಾಗಿ ಮಾಡುವುದಿಲ್ಲ. ಈಗಿನ ಮಕ್ಕಳೇ ಹಾಗೆ. ಸ್ವಲ್ಪವೂ ಜವಾಬ್ದಾರಿಯಿಲ್ಲ. ಓದೇ ಅಂದ್ರೆ ಓದಿದ್ರೆ ತಾನೆ ಮಾರ್ಕ್ಸ್ ಬರೋದು? ಕೇಳಿದ್ದೆಲ್ಲಾ ಕೊಡ್ಸಿದ್ರೂ ಓದು ಮಾತ್ರಾ ಇಲ್ಲ. ಮುಂದೆ ಪೀಯೂಸಿಗೆ ಬಂದ್ಮೇಲೆ ಹ್ಯಾಗೆ? ಬರಿ ಸೀಯೀಟಿ ಪಾಸ್ ಮಾಡಿದ್ರೆ ಸಾಕೆ? ರ್‍ಯಾಂಕ್ ಬರಬೇಡ್ವೆ?

ಕಾಫೀ ಕುಡಿಯುತ್ತಾ ಪ್ರಪಂಚದ ಅನ್ಯಾಯಗಳನ್ನು ಟಿವಿಯಲ್ಲಿ ನೋಡಿ ನೋಡಿ ಕುದಿಯುವ ಗಂಡ. ಹೆಣ್ಣು ಮಕ್ಕಳ ಗೋಳನ್ನು ನೋಡಿ ನೋಡಿ ಬೇಸತ್ತ ಹೆಂಡತಿ, ಕುರ್ ಕುರೆ ತಿನ್ನುತ್ತಾ ಪ್ರಾಣಿಗಳ ಚಿನ್ನಾಟಗಳನ್ನು ನೋಡಿ ಸಂತೋಷಿಸುವ ಮಗಳು, ಎಲ್ಲರೂ ಒಟ್ಟಿಗೆ ಯೋಚಿಸಿ ಒಂದು ತೀರ್ಮಾನಕ್ಕೆ ಬಂದು ಒಂದು ಫ್ರಿಜ್ ಕೊಂಡುಕೊಂಡರು. ಕೋಲ, ಪೆಪ್ಸಿ, ಕುಡಿದು, ಅಯ್‌ಸ್ ಕ್ಯಾಂಡಿ ತಿಂದ ಮೇಲೆ ತಲೆ ಎಷ್ಟೋ ತಂಪಾಯಿತು. ಎಸ್ಟೋ ಸಮಸ್ಯೆಗಳು ತಂತಾನೇ ಬಗೆಹರಿದವು. ಈಗ ವಾರಕ್ಕೊಮ್ಮೆ ಅಡುಗೆ ಮಾಡಿದರೆ ಸಾಕು. ಅಡುಗೆ ಮನೆಯಲ್ಲಿ ಹೆಚ್ಚುಕಾಲ ಕಳೆದಷ್ಟೂ ಆಕ್ಸಿಜನ್ ಕಡಿಮೆ. ಮಗಳನ್ನು ಸ್ಕೂಲಿಗೆ ಕಳಿಸಿ, ಗಂಡನಿಗೆ ಕ್ಯಾರಿಯರ್ ಕಳಿಸಿದ ಮೇಲೆ ಏನು ಕೆಲಸ? ಯಾಕೋ ಜೀವನ ಬರೀ ಬೋರು ಅಂದ್ರೆ ಬೋರು. ಯಾವ್‌ದಾದ್ರೂ ಕೆಲಸಕ್ಕೆ ಸೇರಿಕೊಂಡ್ರೆ ಹ್ಯಾಗೆ? ಕಾಷ್ಮೀರಿ ಪಲಾವ್ ತಿಂದ ಮೇಲೆ ಹೆಂಡತಿ ಗಂಡನನ್ನು ಕೇಳಿದಳು. ಗಂಡ ಒಳ್ಳೇನು. ತುಂಬಾ ಅಂಡರ್‌ಸ್ತ್ಯಾಂಡಿಗ್ ಇರೋ ಮನುಷ್ಯ, ಆಗಲಿ ಮೈ ಡಿಯರ್ ಅಂದ.

ಹೆಂಡತಿ ಈಗ ಸ್ಕೂಲ್ ಟೀಚರ್. ಕೊಟ್ಟಷ್ಟು ಕೊಡ್ಲಿ. ಮಗಳೂ ಅದೇ ಸ್ಕೂಲು. ಆ ದೊಡ್ಡಿ ಸ್ಕೂಲು ಬಿಟ್ಟಿದ್ದೆ ಒಳ್ಳೇದಾಯ್ತು. ಏನೂ ಅಂದ್ರೆ ಏನೂ ಹೇಳ್ಕೊಡಲ್ಲಾ ಅಲ್ಲಿ. ಸುಮ್ನೆ ಕೂಢಾಕ್ಕೊಂಡು ಕೂತಿರ್‍ತಾರೆ ಆ ದರಿದ್ರ ಟೀಚರ್‌ಗಳು. ಆದರೆ ಇಲ್ಲಿ ನೋಡಿ. ಮ್ಯೂಸಿಕ್ಕು, ಡ್ಯಾನ್ಸು, ಕ್ವಿಝ್ಝು ಕಂಪ್ಯೂಟರ್ರು ಎಲ್ಲಾ ಹೇಳ್ಕೊಡ್ತಾರೆ. ಫೀ ಸ್ವಲ್ಪ ಜಾಸ್ತಿ ಅಷ್ಟೆ. ತಂದೆ ತಾಯಿ ದುಡಿಯೋದು ಯಾತಕ್ಕೋಸ್ಕ್ರ, ಮಕ್ಕಳಿಗೇ ತಾನೆ?

ಮೊನ್ನೆ ಸ್ಕೂಲ್ ಡೇ ನಲ್ಲಿ ಮಗಳು ಭಾರತಮಾತೆ ಮೇಕಪ್ ಮಾಡ್ಕೊಂಡು ಡ್ಯಾನ್ಸು ಮಾಡಿದ್ಲು. ಅವರಜ್ಜಿ ಅಂತೂ ನೋಡಿ ತುಂಬಾ ಸಂತೋಷಪಟ್ರು. ಮುಂಡೇದು ಥೇಟು ಐಶ್ವರ್ಯ ರೈ ಕಂಡಹಾಗೇ ಕಾಣ್ತಾ ಇದ್ಲು ಅಂತ ಕಣ್ಣೀರು ಹಾಕ್ಕೊಂಡ್ರು. ಅಂದ್ರೆ ಅಂಥ ಡ್ಯಾನ್ಸನ್ನ ಚಿಕ್ಕೋರ್ ಕೈಲಿ ಮಾಡಿಸ್‌ಬಾರ್‍ದು ಅಷ್ಟೆ. ಆದ್ರೆ ನಮ್ ಕಾಲ್‌ದಲ್ಲಿ ಇದೆಲ್ಲಾ ಎಲ್ಲಿತ್ತು?

ಮೊನ್ನೆ ಟೀಚರ್‍ಸ್ ಎಲ್ಲಾ ಸೇರಿ ಫ್ಯಾಷನ್ ಷೋ ಕೊಟ್ರು. ನನ್ನನ್ನ ಇವರು ರ್‍ಯಾಂಪ್ ಮೇಲೆ ನೋಡಿ ಏನು ಹೇಳಿದ್ರು ಗೊತ್ತಾ? ನಮ್ಮೋಳ್ಗೆ ಇಷ್ಟೆಲ್ಲಾ ಟ್ಯಾಲೆಂಟ್ ಇದೇ ಅಂತಾನೇ ಗೊತ್ತಿರ್‍ಲಿಲ್ಲ. ಅದಕ್ಕೇ ಹೇಳೋದು ಯಾವುದಕ್ಕೂ ಸರಿಯಾದ ಎಕ್ಸಪೋಷರ್ ಬೇಕು ಅಂತ. ಪಾಪ ಆ ಸೀರಿಯಲ್‌ನಲ್ಲಿ ಗಂಡ ಎಷ್ಟು ಹೇಳಿದ್ರೂ ಹೆಂಡತಿ ಅವನ ಮಾತು ಕೇಳಲೇ ಇಲ್ಲ. ನನಗೆ ಆಕ್ಟಿಂಗ್ ಲೈನು ಬೇಡವೇ ಬೇಡ ಅಂತ ಬಂದಿದ್ದ ಪ್ರೊಡ್ಯೂಸರ್‌ನ ಮುಖಕ್ಕೇ ಹೇಳಿ ವಾಪ್ಸು ಕಳಿಸೇಬಿಟ್ಲು! ಅಡ್ವಾನ್ಸ್ ದುಡ್ಡನ್ನ ಗಂಡ ಬಳಸ್ಕ್ಕೊಂಬಿಟ್ಟು ಅದನ್ನ ವಸೂಲು ಮಾಡೋಕೆ ಗೂಂಡಾಗಳು ಬಂದ್ರೂ ಅವಳಿಗೆ ಸ್ವಲ್ಪ್ಪ ಆದ್ರೂ ಕರುಣೆ ಬೇಡ್ವಾ? ತಿಳುವಳಿಕೆ ಬೇಡ್ವಾ? ಅಜ್ಜಿ ನಿಟ್ಟುಸಿರು ಬಿಟ್ಟರು.

ಈಗ ಎಲ್ಲಾ ಕಡೆ ರಸ್ತೆ ಅಗಲ ಮಾಡೋಕೋಸ್ಕ್ರ ಮರಗಳನ್ನ ಕಡೀತಾ ಇದಾರೆ. ಮನೆಗಳನ್ನ ಕೆಡುವುತಾ ಇದಾರೆ. ತಾತನ ಕಾಲದ ಮನೆ ಮಧ್ಯಾನೇ ರಸ್ತೆ ಹೋಗಿದೆ. ಪಾಪ! ಅವರು ತಾನೆ ಏನ್ಮಾಡ್ತಾರೆ ವೆಹಿಕಲ್ಸ್ ಓಡಾಡೋಕೆ ಜಾಗ ಬೇಡ್ವೆ?

ಈಗ, ಗಂಡ, ಹೆಂಡತಿ ಮತ್ತು ಮಗಳು ಹೀಗೆ ಎಲ್ಲರಿಗೂ ಒಂದೊಂದು ಸೋಪ್ ಇದೆ. ಷ್ಯಾಂಪೂ ಇದೆ. ವೆಹಿಕಲ್ ಇದೆ. ಕ್ರೆಡಿಟ್ ಕಾರ್ಡ್ ಇದೆ. ಮೊಬೈಲ್ ಇದೆ. ಅವರದೇ ಆದ ಮೈಂಡ್ ಇದೆ. ಆಸೆ ಆಕಾಂಕ್ಷೆಗಳಿವೆ. ಅಕಸ್ಮಾತ್ ಕಾಯಿಲೆ ಬಿದ್ರೆ ಮೆಡಿಕಲ್ ಇನ್ಷೂರೆನ್ಸ್ ಸಹ ಇದೆ. ಸಾಲವೂ ಇದೆ. ಅಂದರೆ, ಎಲ್ಲರೂ ಸುಖವಾಗಿದ್ದಾರೆ.