ಔಷಧಿಗಳ ಬೆಲೆ ಏರಿಕೆ: ರಕ್ಷಿಪರಾರು?

ಔಷಧಿಗಳ ಬೆಲೆ ಏರಿಕೆ: ರಕ್ಷಿಪರಾರು?

-ವೀರಣ್ಣ ಕಮ್ಮಾರ

ಕಳೆದ ೩ ಶತಮಾನಗಳಲ್ಲಿ ಜಾಗತಿಕ ಇತಿಹಾಸದಲ್ಲಿ ಏನೆಲ್ಲ ಅಲ್ಲೋಲ ಕಲ್ಲೋಲಗಳು ಸಂಭವಿಸಿವೆ. ಎಷ್ಟೋ ಸಾಮ್ರಾಜ್ಯಗಳು ಮುಳುಗಿ ಹೋದವು. ಸೂರ್ಯ ಮುಳುಗದ ಸಾಮ್ರಾಜ್ಯ ಎನಿಸಿಕೊಂಡಿದ್ದ ಬ್ರಿಟಿಷ್ ಸಾಮ್ರಾಜ್ಯ ನುಚ್ಚು ನೂರಾಯಿತು. ಅಮೆರಿಕಕ್ಕೆ ಸೆಡ್ಡು ಹೊಡೆದಿದ್ದ? ಸೋವಿಯತ್ ರಷ್ಯಾವನ್ನು ಅಮೆರಕವೇ ಕುತಂತ್ರದಿಂದ ಛಿದ್ರ ಛಿದ್ರವಾಗಿಸಿತು. ಎಷ್ಟೋ ಯುದ್ಧಗಳು ಸಂಭವಿಸಿದವು. ಜನಾಂಗೀಯ ಯುದ್ಧಗಳು, ರಾಜ್ಯ ವಿಸ್ತರಣೆಯ ಭೀಕರ ಯುದ್ಧಗಳು, ಮಹಾ ಮಾರಿ ರೋಗಗಳು- ಏನೆಲ್ಲಾ ಸಂಭವಿಸಿದವು. ೨೦ನೇ ಶತಮಾನದಲ್ಲಿ ಸಂಭವಿಸಿದ ಎರಡು ಮಹಾ ಯುದ್ಧಗಳು, ಒಂದು ಭೀಕರ ಆರ್ಥಿಕ ಹಿನ್ನಡೆ (೧೯೩೦ರ ದಶಕದಲ್ಲಿ) ಹಾಗೂ ೧೯೯೦ರ ದಶಕದಲ್ಲಿ ಸಂಭವಿಸಿದ ಸಣ್ಣ ಆರ್ಥಿಕ ಹಿಂಜರಿತಗಳು- ೧೨೦ಕ್ಕೂ ಅಧಿಕ ದೇಶಗಳಲ್ಲಿ ಉದ್ಭವಿಸಿದ ಪ್ರಜಾಪ್ರಭುತ್ವವಾದಿ ರಾಜ್ಯಗಳು- ಇತ್ಯಾದಿ ಭಾರಿ ’ಸಮುದ್ರ ಮಥನ’ವೇ ಸಂಭಸಿದೆ. ಎಷ್ಟೋ ಉದ್ಯಮ ಸಾಮ್ರಾಜ್ಯಗಳು ಬೆಳೆದಿವೆ. ಅದೆಷ್ಟೋ ಉದ್ಯಮ ಸಾಮ್ರಾಜ್ಯಗಳು ಅಳಿದಿವೆ.

ಏನೆಲ್ಲ ಆದರೂ ಕಳೆದ ಮೂರು ಶತಮಾನಗಳಲ್ಲಿ ಏಕ ರೀತಿಯಿಂದ ಯಾವುದೇ ’ಹಿಂಜರಿತ’ (ರಿಸೆಷನ್) ಇಲ್ಲದೇ ಬೆಳೆಯುತ್ತಿರುವ ಏಕೈಕ ಉದ್ಯಮ ಎಂದರೆ- ಔಷಧೋದ್ಯಮ. ಔಷಧಿಗಳ ಉತ್ಪಾದನೆ, ಹಂಚಿಕೆ, ವಿತರಣೆ, ಮಾರಾಟ- ಈ ಯಾವ ವಿಭಾಗದಲ್ಲಿಯೂ ಹಿಂಜರಿತ ಉಂಟಾಗಿಲ್ಲ. ಔಷಧಿಗಳ ಬೇಡಿಕೆ ಕಡಿಮೆಯಾಗಿಲ್ಲ. ಅವುಗಳ ಉತ್ಪಾದನೆ ಮತ್ತು ಮಾರಾಟದಲ್ಲಿನ ಏರಿಕೆ ಏಕ ರೂಪವಾಗಿದ್ದರೆ, ಅವುಗಳ ಬೆಲೆಗಳಲ್ಲಿನ ಏರಿಕೆ ಇನ್ನೂ ಭೀಕರವಾಗಿದೆ. ಯಾರ ಗಮನಕ್ಕೂ ಬಾರದೇ, ಯಾವ ಸರ್ಕಾರಗಳ ಎಂತೆಂಥ ನಿರ್ಬಂಧಗಳಿಗೂ ಬಗ್ಗದೇ ಔಷಧಿಗಳ ಬೆಲೆಗಳು ಹೆಮ್ಮಾರಿಯಂತೆ ಬೆಳೆದು ನಿಂತಿವೆ. ಸದ್ದಿಲ್ಲದೇ ಏರುತ್ತಲೇ ಇವೆ. ಔಷಧಿಗಳ ಬೆಲೆಗಳ ಏರಿಕೆಯಾಗಿದೆ ಎಂದು ಎಲ್ಲಾದರೂ ಪ್ರತಿಭಟನೆ ನಡೆದಿದೆಯೇ? ಎಲ್ಲಾದರೂ ಔಷಧಿ ತಯಾರಕರ ದುಷ್ಟ ಲಾಭಿಯ ವಿರುದ್ಧ ಯಾರಾದರೂ ಸೆಟೆದು ನಿಂತಿದ್ದಾರೆಯೇ? ಊಹೂಂ. ಇಲ್ಲವೇ ಇಲ್ಲ. ಯಾವ ಅಡೆತಡೆ ಇಲ್ಲದೆಯೇ ಅವ್ಯಾಹತವಾಗಿ ನಡೆಯುತ್ತಲೇ ಇದೆ. ನಿಜವಾದ ಅರ್ಥದಲ್ಲಿ ’ಸೂರ್ಯ ಮುಳುಗದ ಸಾಮ್ರಾಜ್ಯ’ ಎಂದರೆ- ಔಷಧೋದ್ಯಮ ಸಾಮ್ರಾಜ್ಯವೇ ಆಗಿದೆ.

ಮಹಾತ್ಮಾ ಗಾಂಧೀಜಿ ಅವರು ವಿದ್ಯೆ, ಆಹಾರ ಮತ್ತು ಔಷಧಿಗಳು ದೇಶದ ಸರ್ವ ಜನರಿಗೂ ಉಚಿತವಾಗಿ ಸಿಗಬೇಕು ಎಂದು ಹೇಳಿದ್ದರು. ಅದು ಅವರ ಕನಸಾಗಿತ್ತು. ಆದರೆ, ಅವರು ಸತ್ತು ಹೋದ ೬೩ ವರ್ಷಗಳಲ್ಲಿಯೇ ಈ ದೇಶದಲ್ಲಿ ಈ ಮೂರೂ ಕ್ಷೇತ್ರಗಳು ಭಾರೀ ವಾಣಿಜ್ಯೀಕರಣಗೊಂಡಿವೆ. ವಿದ್ಯೆ, ಆಹಾರ ಮತ್ತು ಔಷಧಿಗಳನ್ನು ಈಗ ಎಲ್ಲರಿಗೂ ಉಚಿತವಾಗಿ ಒದಗಿಸಬೇಕು ಎಂದು ಹೇಳಿದರೆ, ನಿಮ್ಮನ್ನು ’ಹುಟ್ಟಲಿಲ್ಲ’ ಎನ್ನಿಸಿ ಬಿಡುತ್ತಾರೆ!! ವಿದ್ಯೆ ಒದಗಿಸುವ ದೊಡ್ಡ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು, ಆಹಾರೋದ್ಯಮ (ಹೋಟೆಲ್ ಉದ್ಯಮ ಸೇರಿದಂತೆ) ಮತ್ತು ಔಷಧಿ ತಯಾರಿಕೆ ಮಾಡುವ ಕಂಪೆನಿಗಳೆಲ್ಲ ನಿಮ್ಮ ಮೇಲೆ ಮುಗಿ ಬೀಳುತ್ತವೆ. ಹೀಗೆ ಭಾರಿ ಪ್ರಮಾಣದಲ್ಲಿ ವಾಣಿಜ್ಯೀಕೃತಗೊಂಡಿರುವ ಔಷಧೋದ್ಯಮದ ಹಿಂದೆ ಬಲಿಷ್ಠ ಕೈಗಳ ಕೈವಾಡವಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಯಾಕೆ ಇಷ್ಟೊಂದು ಬೆಲೆ?

ಔಷಧಿಗಳ ಯಾಕೆ ಇಷ್ಟೊಂದು ದುಬಾರಿ? ಎಂದು ಕೇಳಿದರೆ ನೂರು ಕಾರಣಗಳನ್ನು ಹೇಳುತ್ತಾರೆ. ನಿರ್ದೇಶಿತ ಔಷಧಿ (ಪ್ರಿಸ್ಕ್ರಿಪ್ಶನ್ ಡ್ರಗ್ಸ್) ಉತ್ಪಾದನಾ ಕಂಪೆನಿಗಳ ದುರಾಸೆಯೇ ಇದಕ್ಕೆ ಮೂಲ ಕಾರಣ ಎಂಬುದು ಸ್ಪಷ್ಟ. ಔಷಧಿಗಳನ್ನು ಕೊಳ್ಳಲು ಮುಖ್ಯವಾಗಿ ’ಜೀವಭಯ’ ಸುಪ್ತವಾಗಿ ಕೆಲಸ ಮಾಡುತ್ತದೆ. ಅದರ ನಂತರದ್ದು ತಕ್ಷಣದ ಆರೋಗ್ಯದ ವಿಚಾರ. ಹೀಗಾಗಿ ಔಷಧಿ ಕೊಳ್ಳುಗರಲ್ಲಿ ಯಾವುದೇ ’ಮೀನ ಮೇಷ’ ಎಣಿಸುವ ಪ್ರಮೇಯ ಬರುವುದಿಲ್ಲ. ಮೊದಲು ಆರಾಮಾದರೆ ಸಾಕಪ್ಪ ಎಂಬ ಭಾವವೊಂದೇ ಸ್ಥಾಯಿಯಾಗಿರುತ್ತದೆ. ’ಬದುಕಿದ್ದರೆ ಮುಂದೆ ಬೇಕಾದಷ್ಟು ದುಡ್ಡು ಸಂಪಾದಿಸಬಹುದು’ ಎಂಬ ಭಾವನೆ ಮುಂಚೂಣಿಗೆ ಬಂದು ಔಷಧಿ ಕೊಳ್ಳಲು ಯಾರೂ ಹಿಂದೆ ಮುಂದೆ ನೋಡುವುದಿಲ್ಲ.

ಈ ಭಾವನೆಯನ್ನೇ ಡ್ರಗ್ಸ್ ಉತ್ಪಾದನಾ ಕಂಪೆನಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸುಸ್ಪಷ್ಟ. ಹೀಗಾಗಿ ದಿನ, ವಾರ, ತಿಂಗಳುಗಳ ಲೆಕ್ಕದಲ್ಲಿ ಔಷಧಿಗಳ ಬೆಲೆಗಳನ್ನು ಸದ್ದಿಲ್ಲದೇ ಏರಿಕೆ ಮಾಡಲಾಗುತ್ತಿದೆ. ಗ್ರಾಹಕರ ಉತ್ಪನ್ನಗಳಿಗಿಂತ ಭಾರಿ ವೇಗದಲ್ಲಿ ಔಷಧಿಗಳ ಬೆಲೆಗಳು ಏರುತ್ತಿವೆ. ತೈಲ ಬೆಲೆಗಳನ್ನು ಏರಿಕೆ ಮಾಡಿದರೆ ಸಂಸತ್ತಿನಲ್ಲಿ ಭಾರೀ ಕೋಲಾಹಲ ಉಂಟಾಗುತ್ತದೆ. ಬೀದಿ ಬೀದಿಗಳಲ್ಲಿ ಹರತಾಳಗಳು, ಪ್ರತಿಭಟನೆಗಳು ನಡೆದು ಜನರು ತೈಲ ಬೆಲೆ ಏರಿಕೆ ಮಾಡುವ ಸರ್ಕಾರದ ಕ್ರಮಕ್ಕೆ ಛೀ- ಥೂ ಎನ್ನುತ್ತಾರೆ. ಆದರೆ, ಸದ್ದಿಲ್ಲದೇ ಏರುವ ಈ ಔಷಧಿಗಳ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯಿಸುವುದೇ ಇಲ್ಲ. ಹಾಗೊಂದು ಸಲ ಪ್ರತಿಕ್ರಿಯಿಸಬೇಕು ಎಂದರೆ ಬೆಲೆ ಏರಿಕೆ ವಿಚಾರ ಗೊತ್ತೇ ಆಗುವುದಿಲ್ಲ. ಗೊತ್ತಾದರೂ ಅದು ಅವರ ದೈನಂದಿನ ಜೀವನವನ್ನು ಅಷ್ಟೊಂದು ಪ್ರಖರವಾಗಿ ತೊಂದರೆಗೀಡು ಮಾಡುವುದಿಲ್ಲ. ಸಂಸತ್ತಿನಲ್ಲಿ, ಶಾಸನ ಸಭೆಗಳಲ್ಲಿಯೂ ಯಾರೂ ಈ ಬಗ್ಗೆ ಚಕಾರ ಎತ್ತುವುದಿಲ್ಲ. ಆದ್ದರಿಂದ ಔಷಧಿ ಕಂಪೆನಿಗಳಿಗೆ ಮನಬಂದಂತೆ ಔಷಧಿಗಳ ಬೆಲೆ ಏರಿಸಲು ಏನೂ ಅಡ್ಡಿ ಆತಂಕಗಳಿಲ್ಲ. ಸಾರ್ವಜನಿಕರು ಬಹಿಷ್ಕಾರ ಹಾಕುತ್ತಾರೆಂಬ ಭಯವಿಲ್ಲ. ಸರ್ಕಾರಗಳು ಏನಾದರೂ ಕ್ರಮ ಕೈಗೊಂಡು ಬೆಲೆ ಏರಿಕೆ ಮಾಡುವ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುತ್ತವೆ ಎಂಬ ಭಯವಿಲ್ಲ.

ಕೇಂದ್ರ ಸರ್ಕಾರಿ ನೌಕರರು ಸಿಜಿಎಚ್‌ಎಸ್ (ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ) ಅಡಿ ಬರುವ ಕಾರಣ ಅವರು ಆಸ್ಪತ್ರೆ ಬಿಲ್ ಬಗ್ಗೆ ಯೋಚನೆ ಮಾಡುವುದಿಲ್ಲ. ರಾಜ್ಯ ಸರ್ಕಾರಿ ನೌಕರರೂ ಕೂಡ ಆರೋಗ್ಯ ಯೋಜನೆಯಡಿ ಬರುವ ಕಾರಣ ಅವರು ಖರ್ಚು ಮಾಡಿದ ಬಹುಭಾಗ ಹಣವು ಮರಳಿ ಬರುತ್ತದೆ. ಆದ್ದರಿಂದ ಬಹುಸಂಖ್ಯಾತ ಸರ್ಕಾರಿ ನೌಕರರು ಔಷಧಿಗಳ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಪ್ರಮುಖ ಖಾಸಗಿ ಸಂಸ್ಥೆಗಳೂ ಕೂಡ ತಮ್ಮ ನೌಕರರಿಗೆ ವೈದ್ಯಕೀಯ ಮರುಪಾವತಿ ಯೋಜನೆ ಹಮ್ಮಿಕೊಂಡಿರುತ್ತವೆ. ಕೆಲವು ಸಂಸ್ಥೆಗಳು ತಮ್ಮದೇ ಆದ ವೈದ್ಯಕೀಯ ವ್ಯವಸ್ಥೆ ಹೊಂದಿರುತ್ತವೆ. ಹೀಗಾಗಿ ಅವರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಂತಿಮವಾಗಿ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರು ಮತ್ತು ಇತರ ಶಕ್ತಿರಹಿತ (ಸಂಘಟನೆ ಮತ್ತು ರಾಜಕೀಯ) ವರ್ಗದ ಜನರಿಗೆ ಇವುಗಳ ವಿರುದ್ಧ ದನಿ ಎತ್ತಲು ಸಾಧ್ಯವಿಲ್ಲ. ಅಥವಾ ಈ ಕ್ಷೇತ್ರದಲ್ಲಿ ಯಾರ ವಿರುದ್ಧ ಮಾತಾಡಬೇಕು ಎಂಬುದೂ ಗೊತ್ತಾಗದ ಪರಿಸ್ಥಿತಿ ಇದೆ. ಹೀಗಾಗಿ ಔಷಧಿಗಳ ಬೆಲೆ ಏರಿಕೆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಸ್ಥಿತಿ ಇಲ್ಲ. ಔಷಧಿ ಕೊಂಡುಕೊಳ್ಳಲು ಅಂಗಡಿಗೆ ಹೋದಾಗ, ’ಅಯ್ಯೋ ದೇವರೇ! ಔಷಧಿಗಳ ಬೆಲೆ ಇಷ್ಟೊಂದು!!’ ಎಂದು ಕಣ್ಣರಳಿಸಿ ಬರುವುದಷ್ಟೇ ಉಳಿದಿರುವ ಕೆಲಸ.

ಔಷಧಿಗಳ ಸಂಶೋಧನೆಗೆ ಭಾರಿ ಪ್ರಮಾಣದ ಹಣ ಖರ್ಚಾಗುತ್ತದೆ. ಸಂಶೋಧನೆಗೆ ಅತಿ ಹೆಚ್ಚು ಸಮಯ ಮತ್ತು ಹಣ ಬೇಕಾಗುತ್ತದೆ ಎಂಬ ಅಂಶವೂ ಕೂಡ ಔಷಧಿಗಳ ವಿಪರೀತ ಬೆಲೆಗೆ ಕಾರಣ. ಕಂಪೆನಿಗಳು ಸಂಶೋಧನೆಗಾಗಿ ಪ್ರತಿ ವರ್ಷ ಬಿಲಿಯಾಂತರ ಡಾಲರ್ ಹಣ ಹೂಡುತ್ತವೆ. ಎರಡನೇ ಅಂಶವೆಂದರೆ- ಗ್ರಾಹಕರ ಮನೆಗೆ ಔಷಧಿಗಳನ್ನು ತಲುಪಿಸುವುದಕ್ಕಾಗಿ ಜಾಹೀರಾತುಗಳ ಪೈಪೋಟಿ. ಜಾಹೀರಾತುಗಳ ಮೇಲೆ ಮಿಲಿಯಗಟ್ಟಲೇ ಹಣ ಸುರಿಯುತ್ತವೆ ಕಂಪೆನಿಗಳು. ರೋಗಿಗಳಿಗೆ ಔಷಧಿಗಳ ನಿರ್ದೇಶನ ಮಾಡುವ ಮೂಲ ಪುರುಷರೆಂದರೆ ಮಹಾಮಹಿಮರಾದ ವೈದ್ಯರೇ ಆಗಿದ್ದಾರೆ. ಈ ವೈದ್ಯರ ಮೇಲೆ ಪ್ರಭಾವ ಬೀರಲು ಔಷಧ ತಯಾರಕ ಕಂಪೆನಿಗಳು ಏನೆಲ್ಲಾ ಸಾಹಸ ಮಾಡಿ, ಅವರ ಮೇಲೆ ಕೋಟ್ಯಂತರ ಡಾಲರ್ ವ್ಯಯ ಮಾಡುತ್ತವೆ.

ಔಷಧಿಗಳ ಸಂಶೋಧನೆ (ರೀಸರ್ಚ್ & ಡೆವಲಪ್‌ಮೆಂಟ್), ಮಾರುಕಟ್ಟೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮಾಡುವ ಜಾಹೀರಾತು ಸಮರ- ಇತ್ಯಾದಿಗಳ ನಂತರದ ಖರ್ಚಿನ ಮೂಲವೆಂದರೆ ಪೇಟೆಂಟ್‌ಗಳದ್ದು. ಪೇಟೆಂಟ್ ಪಡೆದುಕೊಳ್ಳಲು ದೊಡ್ಡ ದೊಡ್ಡ ಔಷಧಿ ತಯಾರಕ ಕಂಪೆನಿಗಳು ಕೋಟ್ಯಂತರ ಡಾಲರ್ ಹಣ ಸುರಿದು ಪೇಟೆಂಟ್ ಪಡೆದುಕೊಳ್ಳುತ್ತವೆ. ಅಂತಹ ಕಂಪೆನಿಗಳು ದೊಡ್ಡ ದಂಡೇ ಆಗಿದ್ದು, ಅವುಗಳು ಎಲ್ಲ ದೇಶಗಳ ಸರ್ಕಾರಗಳ ಮೇಲೂ ತಮ್ಮ ಪ್ರಭಾರ ಬೀರಿ, ಪೇಟೆಂಟ್ ಪಡೆಯದ ಔಷಧಿಗಳ (ಇಂಥ ಔಷಧಿಗಳನ್ನು ’ಜನರಿಕ್’ ಔಷಧಿಗಳೆಂದು ಕರೆಯುತ್ತಾರೆ) ವಿರುದ್ಧ ಪಿತೂರಿ ಮಾಡಿ, ಅವುಗಳನ್ನು ನಕಲಿ ಔಷಧಿಗಳೆಂದು ಬಿಂಬಿಸುತ್ತಿವೆ. ಹೀಗಾಗಿ ಜನರಿಕ ಔಷಧಿಗಳನ್ನು ತಯಾರಿಸುವ ಅತಿ ದೊಡ್ಡ ದೇಶವೆಂದರೆ ಭಾರತವೇ ಆಗಿದೆ.

ಬೌದ್ಧಿಕ ಆಸ್ತಿ ಹಕ್ಕುಗಳ (ಟ್ರೇಡ್ ರಿಲೇಟೆಡ್ ಆಸ್ಪೆಕ್ಟ್ಸ್ ಆಫ್ ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್) ಉಲ್ಲಂಘನೆ ಮಾಡಿವೆ ಎಂದು ಬೊಬ್ಬೆ ಹೊಡೆದು ಇಂಥ ಜನರಿಕ್ ಔಷಧಿಗಳನ್ನು ನಿಷೇಧಿಸುವಂತೆ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಒ) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಗಳ ಮೇಲೆ ಒತ್ತಡ ತರುತ್ತವೆ. ಆದ್ದರಿಂದ ಅಗ್ಗದ ದರಕ್ಕೆ ಸಿಕ್ಕುವ ಜನರಿಕ್ ಔಷಧಿಗಳು ಮಾರಾಟವಾಗದಂತೆ ದೊಡ್ಡ ಕಂಪೆನಿಗಳು ತಡೆಯುತ್ತಿವೆ. ಅಲ್ಲದೇ, ಈಗಾಗಲೇ ಕೀನ್ಯಾ, ಮೊರಾಕ್ಕೊ, ಮೆಕ್ಸಿಕೊ ಮತ್ತು ಸಿಂಗಾಪುರಗಳಲ್ಲಿ ಇಂಥ ಜನರಿಕ್ ಔಷಧಿಗಳನ್ನು ನಕಲಿ ಔಷಧಿಗಳೆಂದು ಹೇಳಿ ಅವುಗಳ ಮೇಲೆ ನಿರ್ಬಂಧ ವಿಧಿಸುವ ಕಾನೂನು ಜಾರಿಗೊಳಿಸುವಲ್ಲಿ ಇವು ಯಶಸ್ವಿಯಾಗಿವೆ.

ಪೇಟೆಂಟ್ ಎಂಬ ರಾಕ್ಷಸ ಜಾಲ:

ನಕಲಿ ಔಷಧಿ ವಿರೋಧಿ ಕಾನೂನು ಜಾರಿಗೊಳಿಸಲಾದ ಮತ್ತು ಜಾರಿಗೆ ಹಂತದಲ್ಲಿರುವ ದೇಶಗಳಲ್ಲೆಲ್ಲ ಅಗ್ಗದ ದರದ ಮತ್ತು ಪೇಟೆಂಟ್ ಇಲ್ಲದ ಜನರಿಕ್ ಔಷಧಿಗಳನ್ನು ಆಮದು ಮಾಡಿಕೊಳ್ಳಲಾಗುವುದಿಲ್ಲ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಉತ್ತಮ ಗುಣಮಟ್ಟದ ಔಷಧಿಗಳು ಲಭ್ಯ ಇದ್ದರೂ ಅವುಗಳಿಗೆ ಪೇಟೆಂಟ್ ಇಲ್ಲ ಎಂಬ ಕಾರಣಕ್ಕೆ ಅವುಗಳು ನಕಲಿ ಔಷಧಿಗಳಾಗುತ್ತಿವೆ. ಆದ್ದರಿಂದ ಜನರು ಅನಿವಾರ್ಯವಾಗಿ ಪೇಟೆಂಟ್ ಇರುವ ಔಷಧಿಗಳನ್ನೇ ಕೊಳ್ಳಬೇಕಾಗುತ್ತಿದೆ. ಪೇಟೆಂಟ್ ಉಳ್ಳ ಔಷಧಿಗಳು ಸಹಜವಾಗಿ ದುಪ್ಪಟ್ಟು ಬೆಲೆ ಹೊಂದಿರುತ್ತವೆ. ಕೆಲವು ಜೀವ ರಕ್ಷಕ ಔಷಧಿಗಳು ಜನರಿಕ್ ಔಷಧಿಗಳಿಗಿಂತ ಶೇ. ೩೦೦ರಿಂದ ಶೇ. ೪೦೦ ಪಟ್ಟು ಜಾಸ್ತಿ ಬೆಲೆ ಹೊಂದಿರುತ್ತವೆ. ವೈದ್ಯರೂ ಕೂಡ ಅಂಥದ್ದೇ ಔಷಧಿಗಳನ್ನು ರೋಗಿಗಳಿಗೆ ನಿರ್ದೇಶಿಸಬೇಕು ಎಂಬ ಒತ್ತಡಕ್ಕೊಳಗಾಗಿರುತ್ತಾರೆ. ಆದ್ದರಿಂದ ಅನಿವಾರ್ಯವಾಗಿ ರೋಗಿಗಳು ದುಬಾರಿ ಬೆಲೆ ತೆರಬೇಕಾಗಿದೆ. ಇದು ಪೇಟೆಂಟ್ ಎಂಬ ಭೂತದಿಂದಾಗಿಯೇ ಹೊರತು ಬೇರೇನಕ್ಕೂ ಅಲ್ಲ. ಒಂದು ಬಾರಿ ಔಷಧಿ ಕಂಡು ಹಿಡಿದು ಅದು ಮಾನವ ಉಪಕಾರಕ್ಕಾಗಿ ಬಳಕೆಯಾಗಲಿ ಎಂಬ ದೊಡ್ಡ ಮನಸ್ಸು ಈ ಕಂಪೆನಿಗಳಿಗೆ ಇರುವುದಿಲ್ಲ. ಬದಲಾಗಿ ಬೇರಾರೂ ಈ ಔಷಧಿ ತಯಾರಿಸಿ ಮಾರಬಾರದು; ಅದು ನನ್ನ ಕಂಪೆನಿಗೇ ಬರಬೇಕು ಎಂಬ ಲೆಕ್ಕಾಚಾರ ಇರುತ್ತದೆ? ಇರಲಿ- ಸಂತೋಷ. ಆದರೆ, ಅಂಥ ಔಷಧಿಗಳನ್ನು ತಯಾರಿಸಿದ ಕಂಪೆನಿಗೆ ದೊಡ್ಡ ಮಟ್ಟದಲ್ಲಿ ಲಾಭ ಗಳಿಸುವ ದುರಾಸೆ ಇರುತ್ತದೆ. ಇದರಿಂದ ಔಷಧಿಯ ಬೆಲೆಗಳು ಇನ್ನೂ ಹೆಚ್ಚು ’ತೂಕ’ದ್ದವುಗಳಾಗಿ ಬಡವರ ರಕ್ತ ಹೀರುತ್ತವೆ.

ಔಷಧಿ ಬೆಲೆ ನಿಯಂತ್ರಣ ಮಾಡುವುದಕ್ಕೆ ಸಂಬಂಧಿಸಿದಂತೆ ಎಷ್ಟೆಲ್ಲ ದೇಶಗಳಲ್ಲಿ ಕಾನೂನುಗಳು ಜಾರಿಯಲ್ಲಿವೆ. ಅಮೆರಿಕದ ಬರಾಕ್ ಒಬಾಮಾ ಆಡಳಿತವು ೨೦೦೯ರ ಮಾರ್ಚ್ ೨೪ರಂದು ಪೇಶೆಂಟ್ ಪ್ರೊಟೆಕ್ಷನ್ & ಅಫೋರ್ಡೇಬಲ್ ಆಕ್ಟ್ ಅನ್ನು ಪಾಸು ಮಾಡಿತು. ಇಂಥ ಕಾನೂನುಗಳು ಹಲವಾರು ದೇಶಗಳಲ್ಲಿ ಜಾರಿಯಲ್ಲಿದ್ದರೂ ಸರ್ಕಾರಗಳು ಔಷಧಿಗಳ ಬೆಲೆ ನಿಯಂತ್ರಣ ಮಾಡುವುದನ್ನು ಔಷಧಿ ಕಂಪೆನಿಗಳು ವಿರೋಧಿಸುತ್ತವೆ. ಔಷಧಿಗಳ ಸಂಶೋಧನೆಗೆ ಅಪಾರ ಖರ್ಚಾಗುತ್ತದೆ, ಅವುಗಳ ಪೇಟೆಂಟ್ ಪಡೆಯುವುದು, ಜನಪ್ರಿಯಗೊಳಿಸುವುದು, ಸಾಗಣೆ ವೆಚ್ಚ- ಮುಂತಾದ ಕಾರಣಗಳಿಗಾಗಿ ಖರ್ಚು ಹೆಚ್ಚಾಗುತ್ತದೆ. ಒಂದು ವೇಳೆ ಸರ್ಕಾರಗಳು ಬೆಲೆಗಳ ನಿಯಂತ್ರಣ ಮಾಡಿದರೆ, ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಮಾಡುವ ಖರ್ಚು ಕಡಿಮೆಯಾಗಿ, ಗುಣಮಟ್ಟ ಕುಸಿತ ಉಂಟಾಗುತ್ತದೆ ಎಂದು ಅವು ಬೊಬ್ಬೆ ಹೊಡೆಯುತ್ತವೆ. ಆದ್ದರಿಂದ ಹೆಚ್ಚಿನ ಬೆಲೆ ಇಡುವುದು, ಅದಕ್ಕೆ ಬೇಕಾದರೆ ಸರ್ಕಾರ ಸಬ್ಸಿಡಿ ಕೊಡಲಿ ಎಂಬ ವಾದ ಕಂಪೆನಿಗಳದ್ದು. ಇದು ಎಲ್ಲರೂ ಒಪ್ಪುವಂಥ ವಾದವಲ್ಲ ಎಂಬುದು ಶತಃಸಿದ್ಧ.

ಇಂಥ ಕಂಪೆನಿಗಳು ಯಾವಾಗಲೂ ಶ್ರೀಮಂತರ ಪರ ಇರುತ್ತವೆ ಮತ್ತು ಅವರ ಹಿತರಕ್ಷಣೆ ಮಾಡಲು ಬದ್ಧವಾಗಿರುತ್ತವೆ ಎಂಬುದನ್ನು ನಾವಿಲ್ಲಿ ಒತ್ತಿ ಹೇಳಬೇಕಾಗಿಲ್ಲ. ದುರ್ದೈವ ಎಂದರೆ ಇಂಥ ಔಷಧಿಗಳ ಹಿಂದಿನ ಕುತಂತ್ರದ ಬಗ್ಗೆ ಬಗ್ಗೆ ಯಾರಿಗೂ ಕಾಳಜಿಯೇ ಇಲ್ಲವಲ್ಲ? ಎಂಬುದೇ ಇಲ್ಲಿನ ಕಳಕಳಿ ಅಷ್ಟೇ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: