‘News of the world’: ಕೊಲೆಯೋ? ಆತ್ಮಹತ್ಯೆಯೋ?

ಜುಲೈ 15, 2011

’ನ್ಯೂಸ್ ಆಫ್ ದಿ ವರ್ಲ್ಡ್’ನ ಕೊಲೆಯೋ? ಆತ್ಮಹತ್ಯೆಯೋ?

-ವೀರಣ್ಣ ಕಮ್ಮಾರ

ಆಕೆ ೧೩ ವರ್ಷದ ಬಾಲಕಿ. ಹೆಸರು ಮಿಲಿ ಡಾವ್ಲರ್ ಎಂದು. ೨೦೦೨ರ ಮಾರ್ಚ್ ೨೧ರಂದು ಇಂಗ್ಲೆಂಡ್‌ನ ಸರ್ರೆ ಎಂಬಲ್ಲಿನ ’ವಾಲ್ಟನ್ ಆನ್ ಥೇಮ್ಸ್’ನಲ್ಲಿನ ತನ್ನ ಶಾಲೆಯಿಂದ ಮನೆಗೆ ಮರಳುವಾಗ ಆಕೆಯನ್ನು ಲೆವಿ ಬೆಲ್‌ಫೀಲ್ಡ್ ಎಂಬ ಕಾಮಾಂಧನೊಬ್ಬ ಅಪಹರಿಸಿದನು. ನಂತರ ೨೦೦೨ರ ಸೆಪ್ಟೆಂಬರ್ ೧೮ರಂದು ಇಂಗ್ಲೆಂಡ್‌ನ ಯಾಟೆಲೆ ಎಂಬಲ್ಲಿ ಆಕೆಯ ಹೆಣದ ಅವಶೇಷಗಳು ಸಿಕ್ಕವು. ಆಕೆಯನ್ನು ಅಪಹರಿಸಿದ ಲೆವಿ ಬೆಲ್‌ಫೀಲ್ಡ್, ಕೊಲೆ ಮಾಡಿ ಪರಾರಿಯಾಗಿದ್ದ. ಹೆಣದ ಬಳಿ ಯಾವುದೇ ಬಟ್ಟೆಯಾಗಲೀ, ಪರಿಕರಗಳಾಗಲೀ ಸಿಗಲಿಲ್ಲ. ಹೆಣವನ್ನು ಹೂತಿರಲಿಲ್ಲ. ಸಿಕ್ಕಾಗ ಅದು ಕೊಳೆತು ಹೋಗಿತ್ತು. ಡಿಎನ್‌ಎ ಪರೀಕ್ಷೆಯಿಂದ ಅದು ಮಿಲಿ ಡಾವ್ಲರ್‌ಳ ಹೆಣವೆಂಬುದು ಖಚಿತವಾಯಿತು.
ಇದು ನೊಯ್ಡಾದ ಆರುಷಿ ತಲ್ವಾರ್ ಹಾಗೂ ಹೇಮರಾಜ್ ಜೋಡಿ ಕೊಲೆ ಪ್ರಕರಣದಂತೆ ಇತ್ತು. ಮಿಲಿ ಡಾವ್ಲರ್‌ಳ ಅಪಹರಣದ ವಿಚಾರ ಬಹಿರಂಗ ಆಗುತ್ತಿದ್ದಂತೇ ಬ್ರಿಟನ್ ಪೊಲೀಸರು ಸುಮ್ಮನೇ ಕೂರಲಿಲ್ಲ. ೧೦೦ ಜನ ಪೊಲೀಸರ ತಂಡ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹುಡುಕಿತು. ಹೆಲಿಕಾಪ್ಟರ್‌ರ ಸಹಾಯ ಪಡೆಯಲಾಯಿತು. ಕಾಡಿನಲ್ಲಿ, ನೀರಿನಲ್ಲಿ, ನಗರದ ಸಂದಿಗೊಂದಿಗಳಲ್ಲೆಲ್ಲಾ ಹುಡುಕಲಾಯಿತು. ಆಕೆಯ ಹುಡುಕಾಟ ಆಂಧ್ರದ ವೈ.ಎಸ್.ಆರ್.ರೆಡ್ಡಿ ಹೆಲಿಕಾಪ್ಟರ್ ಹುಡುಕಾಟ ನೆನಪಿಸುವಂತಿತ್ತು. ಆದರೂ, ಏಳು ತಿಂಗಳ ಕಾಲ ಆಕೆಯ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ.
ಆದರೆ, ಬ್ರಿಟನ್‌ನಲ್ಲಿರುವ ’ನ್ಯೂಸ್ ಆಫ್ ದಿ ವರ್ಲ್ಡ್’ ಎಂಬ ಪತ್ರಿಕೆಯ ಸಂಪಾದಕ ಬಳಗದವರು, ವರದಿಗಾರರು ಸುಮ್ಮನೇ ಕೂರಲಿಲ್ಲ. ತಮ್ಮ ವರದಿಗಾರರನ್ನು ವೇಷ ಮರೆಸಿ, ಎಲ್ಲೆಂದರಲ್ಲಿ ಕಳುಹಿಸಿ, ಅತಿ ಖಾಸಗಿಯಾದ ಮಾಹಿತಿಗಳನ್ನೂ ಪಡೆದು, ಪ್ರಕಟಿಸುವಲ್ಲಿ ಮುಂಚೂಣಿಯಲ್ಲಿದ್ದ ಪತ್ರಿಕೆಯು, ಮಿಲಿ ಡಾವ್ಲರ್‌ಳ ಬೆನ್ನು ಹತ್ತಿತು. ಆಕೆಯ ಮೊಬೈಲ್ ಫೋನ್‌ಗೇ ’ಕನ್ನ’ ಹಾಕಿದರು. ಅಂದರೆ ಅದನ್ನು ಹ್ಯಾಕ್ ಮಾಡಿದರು. ಹೀಗೆ ಫೋನ್ ಹ್ಯಾಕ್ ಮಾಡಲು ಖಾಸಗಿ ಗೂಢಚರ ಏಜೆನ್ಸಿಯೊಂದನ್ನು ನೇಮಿಸಿಕೊಂಡಿದ್ದರು. ಆ ಏಜೆನ್ಸಿಯ ಖಾಸಗಿ ಗೂಢಚರ್ಯನಾದ ಗ್ಲೆನ್ ಮುಲ್‌ಕೇರ್ ಎಂಬಾತನು ’ನ್ಯೂಸ್ ಆಫ್ ದಿ ವರ್ಲ್ಡ್’ಗಾಗಿ ಮಿಲಿಯಳ ಫೋನ್‌ನ ಇನ್‌ಬಾಕ್ಸ್‌ಗೆ ಹ್ಯಾಕ್ ಮಾಡಿದನು. ಆಕೆಯ ಫೋನ್‌ನಲ್ಲಿದ್ದ ವಿಡಿಯೊ ಕ್ಲಿಪಿಂಗ್‌ಗಳು, ಎಸ್‌ಎಂಎಸ್‌ಗಳನ್ನು ಪತ್ರಿಕೆಗೆ ವರ್ಗಾವಣೆ ಮಾಡಿದನು. ಅವುಗಳನ್ನು ಪತ್ರಿಕೆಯವರು ಗುಟ್ಟಾಗಿ ನೋಡಿದ್ದಲ್ಲದೇ ಆ ಮಾಹಿತಿ ಬಳಸಿಕೊಂಡು, ಮಿಲಿಯನ್ನು ಅಪಹರಿಸಲಾಗಿದೆ ಎಂಬರ್ಥ ಬರುವಂತೆ ವರದಿ ಪ್ರಕಟಿಸಿತು ಜೊತೆಗೆ, ಹೊಸ ಮೆಸೇಜ್‌ಗಳಿಗೆ ಅವಕಾಶ ಮಾಡಿಕೊಡಲಿಕ್ಕಾಗಿ ಮಿಲಿ ಮೊಬೈಲ್‌ನಲ್ಲಿದ್ದ ಹಳೆಯ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಡಿಲಿಟ್ ಮಾಡಿದರು. ಇದರಿಂದ ಮಿಲಿ ಬದುಕಿದ್ದಾಳೆ ಎಂಬ ಆಸೆ ಆಕೆಯ ತಂದೆ ತಾಯಿಯರಿಗೆ ಉಂಟಾಯಿತು.
ಕೆಲವು ವಿಡಿಯೊಗಳು ಮತ್ತು ಎಸ್‌ಎಂಎಸ್‌ಗಳನ್ನು ಡಿಲಿಟ್ ಮಾಡಿದ್ದರಿಂದಾಗಿ ಆಕೆಯ ಕೊಲೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದಾಗಿದ್ದ ಮಹತ್ವದ ದಾಖಲೆಗಳು ನಾಶವಾದವು. ಮಿಲಿ ಜೀವಂತ ಇರಬಹುದು ಎಂದು ತಂದೆ ಬಾಬ್ ಡಾವ್ಲರ್ ಮತ್ತು ತಾಯಿ ಸ್ಯಾಲಿ ಡಾವ್ಲರ್ ಅವರು ಎಲ್ಲೆಡೆ ಹುಡುಕಾಡತೊಡಗಿದರು. ಆಕೆಯನ್ನು ಹಾಲೆಂಡ್‌ನಲ್ಲಿ ಕೂಡಿಡಲಾಗಿದೆ; ಅಲ್ಲಿನ ವೇಶ್ಯಾವಾಟಿಕೆಗಳಲ್ಲಿ ಆಕೆ ನಗ್ನ ನೃತ್ಯಗಾತಿಯಾಗಿ ಕುಣಿಯುತ್ತಿದ್ದಾಳೆ ಎಂಬ ಸುದ್ದಿಗಳು ಹಬ್ಬಿದವು. ಇದನ್ನು ನಂಬಿದ ತಂದೆ-ತಾಯಿ ತಮ್ಮ ಮಗಳ ಮೊಬೈಲ್‌ಗೆ ಉತ್ತರ ಬಂದೀತೆಂಬ ನಿರೀಕ್ಷೆಯಲ್ಲಿ ಎಸ್‌ಎಂಎಸ್ ಕಳುಹಿಸುತ್ತಲೇ ಇದ್ದರು.
ಆದರೆ, ಅಂತಿಮವಾಗಿ ಆಕೆಯ ಡೀಕಂಪೋಸ್ಡ್ ಬಾಡಿ ೨೦೦೨ರ ಸೆಪ್ಟೆಂಬರ್ ೧೮ರಂದು ಸಿಕ್ಕಿತು. ಹೀಗೆ ಸಿಕ್ಕ ಮಿಲಿಯ ಹೆಣವು ’ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆಯ ಆತ್ಮಹತ್ಯೆಗೆ ನಾಂದಿ ಹಾಡಿತು.
* * *
೧೮೪೩ರ ಅಕ್ಟೋಬರ್ ೧ರ ಭಾನುವಾರ ಪ್ರಾರಂಭವಾದ ’ನ್ಯೂಸ್ ಆಫ್ ದಿ ವರ್ಲ್ಡ್’ ಎಂಬ ಪತ್ರಿಕೆಯು ಇದೇ ಭಾನುವಾರ, ಜುಲೈ, ೧೦, ೨೦೧೧ರಂದು ಕೊನೆಯುಸಿರೆಳೆಯಿತು. ಜಾನ್ ಬ್ರೌನ್ ಬೆಲ್ ಎಂಬಾತ ಹುಟ್ಟುಹಾಕಿದ ಈ ಪತ್ರಿಕೆಯನ್ನು ಮುರ್ಡೋಕ್ ಮುಗಿಸಿದರು. ಇದರ ಕೊನೆಯ ಪ್ರಕಾಶಕನೆಂದರೆ, ನ್ಯೂಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಯುರೋಪ್ – ಏಷ್ಯದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ಮುರ್ಡೋಕ್. ಇಂಗ್ಲೆಂಡ್‌ನಿಂದ ಪ್ರಕಟವಾಗುತ್ತಿದ್ದ ಈ ಪತ್ರಿಕೆ ೧೬೮ ವರ್ಷಗಳ ಕಾಲ ಇಂಗ್ಲೆಂಡಿನ ಜನಜೀವನದಲ್ಲಿ ರಕ್ತದಂತೆ ಹರಿದಾಡುತ್ತಿತ್ತು. ಅನೇಕರಿಗೆ ದುಃಸ್ವಪ್ನವಾಗಿತ್ತು. ಸೆಲೆಬ್ರಿಟಿಗಳ ಕಾಮಕೇಳಿಗಳಿಗೇ ಹೆಚ್ಚು ಮಹತ್ವ ನೀಡುತ್ತಾ, ಅವುಗಳನ್ನೇ ಹೆಚ್ಚಾಗಿ ವರದಿ ಮಾಡುತ್ತಿದ್ದ ಕಾರಣ ಇದಕ್ಕೆ ’ನ್ಯೂಸ್ ಆಫ್ ದಿ ಸ್ಕ್ರಿವ್ಸ್’ (ಕಾಮಕೇಳಿಗಳ ಸುದ್ದಿ) ಎಂಬ ಕುಖ್ಯಾತಿ ಅಂಟಿಕೊಂಡಿತ್ತು. ’ಸ್ಕ್ರೀವ್ಸ್ ಆಫ್ ದಿ ವರ್ಲ್ಡ್’ (ಜಗತ್ತಿನ ಕಾಮಕೇಳಿಗಳು) ಎಂತಲೂ ಇದನ್ನು ಜರೆಯಲಾಗುತ್ತಿತ್ತು. ಆದರೂ, ಇದು ಅತಿ ಜನಪ್ರಿಯ ಮತ್ತು ಅತಿ ಪ್ರಸಾರದ ಪತ್ರಿಕೆಯಾಗಿತ್ತು. ಅದರದ್ದು ಸುದ್ದಿಮಾರ್ಗವಲ್ಲ ’ಕಾಮ’ರಾಜಮಾರ್ಗ. ರಾಜಕಾರಣಿಗಳು, ಉದ್ಯಮಿಗಳು, ಉದ್ಯಮಿಗಳ ಪತ್ನಿಯರು, ಚಿತ್ರ ನಟ-ನಟಿಯರು, ಅವರ ವರ್ಣರಂಜಿತ ಜೀವನ, ಶೃಂಗಾರ ದೇವಿ-ದೇವತೆಯರು, ಅವರ ವಯ್ಯಾರಗಳು, ಅವರ ಲಲ್ಲೆಗಳು, ಕಾಮಕೇಳಿಗಳ ರಸವತ್ತಾದ ವರ್ಣನೆಗಳು, ಕೊಲೆ- ಸುಲಿಗೆಗಳ ಕರಾರುವಾಕ್ ವಿವರಣೆ- ಹೀಗೆ ಒಟ್ಟಿನಲ್ಲಿ ಪಕ್ಕಾ ಮಸಾಲೆ ಪತ್ರಿಕೆಯೇ ಆಗಿತ್ತು. ಅಂಥ ಒಂದು ಪತ್ರಿಕೆಯು ಇದೀಗ ಅಪರಾಧಿ ಸ್ಥಾನದಲ್ಲಿ ನಿಂತಿದೆ. ವಿಶ್ವದ ಪತ್ರಿಕಾ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯವಾಗಿ ಹೊರಹೊಮ್ಮಿದೆ.
ರೂಪರ್ಟ್ ಮುರ್ಡೋಕ್ ಅವರು ಇಂಗ್ಲೆಂಡ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ’ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆ ಕೊಂಡು ತಮ್ಮ ಮಾಧ್ಯಮ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಅದಾದ ನಂತರ ಅವರು ’ದಿ ಸನ್’ ಸೇರಿದಂತೆ ಇನ್ನೂ ಮೂರು ಪತ್ರಿಕೆಗಳನ್ನು ಕೊಂಡರು. ಈ ಪತ್ರಿಕೆಯ ಮಾರಾಟ ವ್ಯಾಪಕವಾಗಿತ್ತು. ೨೮,೧೨,೦೦೫ ಪ್ರತಿಗಳು ಪ್ರತಿ ವಾರ ಮಾರಾಟವಾಗುತ್ತಿದ್ದವು. ಒಟ್ಟು ೭.೫ ದಶಲಕ್ಷ ಓದುಗರು ಪ್ರತಿವಾರ ಈ ಪತ್ರಿಕೆ ಓದುತ್ತಿದ್ದರು.
ಈ ಪತ್ರಿಕೆಯ ಭಾನಗಡಿಗಳು ಗ್ರೇಟ್‌ಬ್ರಿಟನ್‌ನ ಪ್ರಧಾನಿ ಡೇವಿಡ್ ಕೆಮರೂನ್‌ಗೆ ಮಗ್ಗುಲ ಮುಳ್ಳಾಗಿವೆ. ಫೋನ್ ಹ್ಯಾಕಿಂಗ್ ಹಗರಣದ ತನಿಖೆಗೆ ಕೂಡಲೇ ಸೂಕ್ತ ನ್ಯಾಯಮೂರ್ತಿಗಳ ನೇಮಕ ಮಾಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಜೊತೆಗೆ, ಆ ಪತ್ರಿಕೆಯ ಮಾಜಿ ಸಂಪಾದಕನಾದ ಆಂಡಿ ಕೌಲ್ಸನ್ ಎಂಬಾತನನ್ನು ತನ್ನ ಮಾಧ್ಯಮ ಸಲಹೆಗಾರನ್ನಾಗಿ ನೇಮಕ ಮಾಡಿಕೊಂಡಿದ್ದಕ್ಕಾಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಹೀಗಾಗಿ ಎತ್ತ ಹೊರಳಿದರೂ ’ನ್ಯೂಸ್ ಆಫ್ ದಿ ವರ್ಲ್ಡ್’ನ ಸರಣಿ ಕುಕೃತ್ಯಗಳು ಕೆಮರೂನ್‌ಗೆ ಚುಚ್ಚುತ್ತಿವೆ. ರೂಪರ್ಟ್ ಮುರ್ಡೋಕ್‌ನ ’ನ್ಯೂಸ್ ಇಂಟರ್‌ನ್ಯಾಷನಲ್’ ಎಂಬ ಪತ್ರಿಕಾ ಸಮೂಹದ ಈ ದುಷ್ಟ ಪತ್ರಿಕೆಯಿಂದಾಗಿ ಮುರ್ಡೋಕ್‌ರ ಪತ್ರಿಕಾ ಸಾಮ್ರಾಜ್ಯವನ್ನೇ ಇದು ಹಾಫ್ ಮರ್ಡರ್ ಮಾಡಿದಂತಾಗಿದೆ.
* * * *
ಮಿಲಿ ಡಾವ್ಲರ್‌ಳಂತೆ ಇಂಗ್ಲೆಂಡ್‌ನ ಸುಮಾರು ೪,೦೦೦ಕ್ಕೂ ಅಧಿಕ ಜನರ ಮೊಬೈಲ್ ಫೋನ್‌ಗಳಿಗೆ ಈ ಪತ್ರಿಕೆಯು ’ಕನ್ನ’ ಹಾಕಿತು. ೨೦೦೫ರ ಜುಲೈ ೭ರಂದು ಸಂಭವಿಸಿದ ಭಯೋತ್ಪಾದಕ ದಾಳಿಯಲ್ಲಿ ೫೨ ಜನರು ಮೃತರಾದರು. ಹೀಗೆ ಮೃತರಾದ ವ್ಯಕ್ತಿಗಳು ಮತ್ತು ಅವರ ಸಂಬಂಧಿಕರ ಫೋನ್‌ಗಳನ್ನೂ ಇದು ಹ್ಯಾಕ್ ಮಾಡಿತು. ಇಂಗ್ಲೆಂಡ್‌ನ ಪ್ರಖ್ಯಾತ ವ್ಯಕ್ತಿಗಳು, ರಾಜಕಾರಣಿಗಳು, ಚಿತ್ರ ನಟ-ನಟಿಯರು, ಫುಟ್‌ಬಾಲ್ ಆಟಗಾರರು, ಸಮಾಜದ ಗಣ್ಯರು, ಇರಾಕ್ ಯುದ್ಧದಲ್ಲಿ ಮೃತ ಯೋಧರ ಕುಟುಂಬದವರು, ವಿಕೃತ ಕಾಮಿಗಳು, ಅವರಿಂದ ಅಪಹರಣಕ್ಕೆ ಒಳಗಾಗಿ ಕೊಲೆಯಾದವರು- ಹೀಗೇ ಸುಮಾರು ೪೦೦೦ಕ್ಕೂ ಅಧಿಕ ವ್ಯಕ್ತಿಗಳ ಮೊಬೈಲ್ ಫೋನ್ ಅಕೌಂಟ್‌ಗೇ ಕನ್ನ ಹಾಕಿ (ಹ್ಯಾಕ್ ಮಾಡಿ) ಅದರಲ್ಲಿ ಅವರ ವೈಯಕ್ತಿಕ ವಿಚಾರಗಳು, ಪ್ರೇಮ ಸಲ್ಲಾಪಗಳು, ಬ್ಯಾಂಕ್‌ನೊಂದಿಗಿನ ಹಣಕಾಸು ವ್ಯವಹಾರಗಳು, ತಂತಮ್ಮ ಕಂಪೆನಿ ವ್ಯವಹಾರಗಳು, ಗುಪ್ತ ಮಾತುಕತೆಗಳು, ಇ-ಮೇಲ್ ವಿನಿಮಯಗಳು, ಆಸ್ತಿಪಾಸ್ತಿಯ ಮಹತ್ವದ ದಾಖಲೆಗಳು- ಮುಂತಾದವುಗಳನ್ನು ’ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆಯ ವರದಿಗಾರರು ವಾಮಮಾರ್ಗದಿಂದ ಪಡೆದುಕೊಂಡರು. ಹೀಗೆ ಪಡೆದುಕೊಂಡ ಮಾಹಿತಿಗಳಲ್ಲಿ ವಿಡಿಯೊ ಕ್ಲಿಪಿಂಗ್‌ಗಳು, ಬ್ಯಾಂಕ್ ಅಕೌಂಟ್ ದಾಖಲೆಗಳು, ವೈಯಕ್ತಿಕ ಗುಟ್ಟಿನ ವಿಚಾರಗಳು ಸೇರಿದ್ದವು. ಹೀಗೆ ಅಪರಾಧ ಮಾರ್ಗದಿಂದ ಸುದ್ದಿ ಮಾಹಿತಿ ಪಡೆಯುವ ದುಷ್ಕೃತ್ಯವನ್ನು ಬಹಳ ಹಿಂದಿನಿಂದಲೇ ಅದು ನಡೆಸುತ್ತಿತ್ತು. ಅದಕ್ಕಾಗಿ ಒಂದು ಖಾಸಗಿ ಡಿಟೆಕ್ಟಿವ್ ಏಜೆನ್ಸಿಯನ್ನೇ ನೇಮಕ ಮಾಡಿಕೊಳ್ಳಲಾಗಿತ್ತು.
೨೦೦೩ರಿಂದ ೨೦೦೭ರ ಅವಧಿಯಲ್ಲಿ ಪತ್ರಿಕೆಯ ಸಹ ಸಂಪಾದಕನಾಗಿದ್ದ ಮತ್ತು ಬ್ರಿಟನ್‌ನ ಪ್ರಧಾನಿಯ ಮಾಧ್ಯಮ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದ (೨೦೧೧ರ ಜನವರಿಯಲ್ಲಿ ಆ ಸ್ಥಾನಕ್ಕೆ ರಾಜೀನಾಮೆ) ಆಂಡಿ ಕೌಲ್ಸನ್ ಮತ್ತು ಅದಕ್ಕಿಂತ ಮೊದಲು ಪತ್ರಿಕೆಯ ಸಂಪಾದಕಿಯಾಗಿದ್ದ ರೆಬೆಕ್ಕಾ ಬ್ರೂಕ್ಸ್ ಎಂಬಾಕೆಯೇ ಫೋನ್ ಹ್ಯಾಕಿಂಗ್ ಸ್ಕ್ಯಾಂಡಲ್‌ನ ರೂವಾರಿಗಳು ಎನ್ನಲಾಗಿದೆ. ರೆಬ್ಬೆಕ್ಕಾ ಬ್ರೂಕ್ಸ್ ಮತ್ತು ಆಂಡಿ ಕೌಲ್ಸನ್ ಅವರಿಗಿಂತಲೂ ಮೊದಲು ಪತ್ರಿಕೆಯ ವರದಿಗಾರನಾಗಿದ್ದ ಕ್ಲೈವ್ ಗುಡ್‌ಮನ್ ಎಂಬಾತನು ಖಾಸಗಿ ಗೂಢಚರ್ಯ ಗ್ಲೆನ್ ಮುಲ್‌ಕೇರ್‌ನಿಂದ ಮಾಹಿತಿ ಪಡೆಯುತ್ತಿದ್ದನು. ಬ್ರಿಟಿಷ್ ರಾಜಮನೆತನದವರ ಫೋನ್‌ಗಳನ್ನು ಹ್ಯಾಕ್ ಮಾಡಿ ಮಾಹಿತಿ ಸಂಗ್ರಹಿಸಿದ ಆರೋಪದ ಮೇಲೆ ಆತನನ್ನು ೨೦೦೭ರಲ್ಲಿ ಬಂಧಿಸಿ ಜೈಲಿಗೆ ತಳ್ಳಲಾಗಿತ್ತು.
ಲಂಚ ನೀಡಿತೇ ಮುರ್ಡೋಕ್ ಪತ್ರಿಕೆ?
ಫೋನ್ ಕದ್ದಾಲಿಕೆ, ಸೆಲ್‌ಫೋನ್‌ಗಳ ಹ್ಯಾಕಿಂಗ್ ಮಾಡಿದ್ದಲ್ಲದೇ ಅದನ್ನು ಮುಚ್ಚಿ ಹಾಕಲು ಪೊಲೀಸರಿಗೆ ಈ ಪತ್ರಿಕೆ ಭಾರಿ ಮೊತ್ತದ ಲಂಚ ನೀಡಿದೆ. ಹ್ಯಾಕಿಂಗ್ ಆರೋಪದಿಂದ ಮುಕ್ತವಾಗಲು ಕೋರ್ಟ್‌ನ ಹೊರಗೆ ಸೆಟಲ್‌ಮೆಂಟ್ ಮಾಡಿಕೊಳ್ಳುವ ಉದ್ದೇಶದಿಂದ ಒಂದು ದಶಲಕ್ಷ ಪೌಂಡ್‌ಗಿಂತಲೂ ಅಧಿಕ ಮೊತ್ತದ ಹಣ ಪಾವತಿಸಲಾಗಿದೆ. ಹೀಗೆ ಕೋರ್ಟ್‌ನ ಹೊರಗೆ ಪ್ರಕರಣ ಇತ್ಯರ್ಥ ಮಾಡಿಕೊಂಡವರಲ್ಲಿ ಪ್ರೊಫೆಷನಲ್ ಫುಟ್‌ಬಾಲರ‍್ಸ್ ಅಸೋಷಿಯೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋರ್ಡಾನ್ ಟೇಲರ್ ಪ್ರಮುಖರು. ಹಾಗೆಯೇ ಸಂಸದ ಸೈಮನ್ ಹಗ್ಸ್, ಸೆಲೆಬ್ರಿಟಿಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಮ್ಯಾಕ್ಸ್ ಕ್ಲಿಫರ್ಡ್, ಖ್ಯಾತ ಮಾಡೆಲ್ ಎಲೇ ಮ್ಯಾಕ್‌ಫರ‍್ಸನ್, ಫುಟ್‌ಬಾಲ್ ಏಜೆಂಟ್ ಸ್ಕೈ ಆಂಡ್ರೂ ಮುಂತಾದವರೊಂದಿಗೆ ಕೋರ್ಟ್‌ನ ಹೊರಗೆ ಒಪ್ಪಂದ ಮಾಡಿಕೊಂಡಿತು.
ಈ ಬಗ್ಗೆ ನ್ಯೂಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ನ್ಯಾಯಾಲಯಕ್ಕೆ ಆಗ ಲಿಖಿತ ಹೇಳಿಕೆ ನೀಡಿ, ಇಂಥ ಯಾವುದೇ ಹ್ಯಾಕಿಂಗ್ ಅನ್ನು ’ನ್ಯೂಸ್ ಆಫ್ ದಿ ವರ್ಲ್ಡ್’ ಪತ್ರಿಕೆಯಾಗಲೀ, ಪತ್ರಿಕೆಯಲ್ಲಿನ ಪತ್ರಕರ್ತರಾಗಲೀ ಮಾಡಿಲ್ಲ ಎಂದು ಹೇಳಿದ್ದರು. ಆದರೆ, ಈಗ ಎಲ್ಲವೂ ಹೊರ ಬಂದಿದೆ. ಆ ಪತ್ರಿಕೆಯ ಪತ್ರಕರ್ತರು ಎಷ್ಟು ಕೊಳಕರಿದ್ದರು ಎಂಬುದು ಬಹಿರಂಗವಾಗಿದೆ. ಪತ್ರಿಕೆಯ ಸಂಪಾದಕಿಯಾಗಿದ್ದ ರೆಬೆಕ್ಕಾ ಬ್ರೂಕ್ಸ್ ಅವರ ಕಾಲದಲ್ಲಿ ಈ ರೀತಿ ಲಂಚ ನೀಡಲಾಗಿಲ್ಲ ಎಂದು ಜೇಮ್ಸ್ ಮುರ್ಡೋಕ್ ಸಮರ್ಥಿಸಿಕೊಂಡರು.
ಅನೈತಿಕ ಮತ್ತು ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ಸುದ್ದಿ ಸಂಗ್ರಹ ಮಾಡುವಲ್ಲಿ ಎತ್ತಿದ ಕೈ ಎನಿಸಿದ್ದ ಪತ್ರಿಕೆಯು, ಸುದ್ದಿ ಸಂಗ್ರಹಿಸಲು ಹಲವಾರು ವಾಮಮಾರ್ಗಗಳನ್ನು ಅನುಸರಿಸುತ್ತಿತ್ತು. ಗೂಢಚರ್ಯರ ನೇಮಕ ಮಾಡಿಕೊಳ್ಳುತ್ತಿತ್ತು. ಕೆಲವು ಪತ್ರಕರ್ತರು ವೇಷ ಮರೆಸಿಕೊಂಡು ಹೋಗಿ ಉಪಾಯವಾಗಿ ಸುದ್ದಿ ಸಂಗ್ರಹಿಸುತ್ತಿದ್ದರು. ಹೋಟೆಲ್‌ಗಳಲ್ಲಿ ಮಾಣಿಗಳಾಗಿದ್ದು ಅಲ್ಲಿನ ವಿದ್ಯಮಾನಗಳನ್ನು ಸಂಗ್ರಹಿಸಿ ವರದಿ ಮಾಡುತ್ತಿದ್ದರು. ಪತ್ರಿಕೆಯು ಅದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲೂ ಅಂಡರ್‌ಕವರ್ ವರದಿಗಾರರ ಜಾಲ ಹೊಂದಿತ್ತು ಎಂಬುದು ಬಹಿರಂಗವಾಗಿದೆ. ಅದಕ್ಕೆ ಪಾಕ್ ಕ್ರಿಕೆಟ್ ತಂಡದ ೨೦೧೦ರ ಸ್ಪಾಟ್ ಫಿಕ್ಸಿಂಗ್ ಹಗರಣ ಪ್ರಮುಖ ಉದಾಹರಣೆ. ಮಜಹರ್ ಮಹಮೂದ್ ಎಂಬಾತನು ’ಫೇಕ್ ಶೇಕ್’ ಎಂಬ ಹೆಸರಿನಲ್ಲಿ ಹೋಗಿ ಮುಜಹರ್ ಮಜೀದ್ ಎಂಬ ಬುಕ್ಕಿಯೊಬ್ಬನ ಕುಕೃತ್ಯಗಳನ್ನು ಬಹಿರಂಗಗೊಳಿಸಿದ್ದನು. ಸಾರ್ವಜನಿಕ ವ್ಯಕ್ತಿಗಳ ವೈಯಕ್ತಿಕ ಸಂಬಂಧಗಳು, ಕಾಮಕೇಳಿಗಳ ವಿವರಗಳನ್ನು ಸಂಗ್ರಹಿಸಲೂ ಕೂಡ ಇದೇ ರೀತಿಯಲ್ಲಿ ಗೂಢಚರ್ಯರನ್ನು ಪತ್ರಿಕೆ ನೇಮಕ ಮಾಡಿಕೊಂಡಿತ್ತು. ಒಂದರ್ಥದಲ್ಲಿ ಇದೆಲ್ಲವೂ ಕನ್ನಡದ ಅಂಬರೀಷ್ ಅಭಿನಯದ ’ನ್ಯೂಡೆಲ್ಲಿ’ ಚಿತ್ರಕಥೆಯಂತೆ ಇದೆ.
* * * *
ಇಂಥದ್ದೊಂದು ದೊಡ್ಡ ಹಗರಣ ಪತ್ರಿಕಾ ಕ್ಷೇತ್ರದ ಹೊರತಾಗಿ ಬೇರೆ ಕ್ಷೇತ್ರದಲ್ಲಿ ಆಗಿದ್ದರೆ ಅದನ್ನು ವಿಶ್ವದ ಎಲ್ಲಾ ಪತ್ರಿಕೆಗಳು/ ಮಾಧ್ಯಮಗಳು ’ವಿಶ್ವದ ಅತಿದೊಡ್ಡ ಹಗರಣ’ ಎಂಬಂತೆ ಬಿಂಬಿಸುತ್ತಿದ್ದವು. ಇಷ್ಟು ಕ್ಷುದ್ರ ಹಗರಣಕ್ಕೆ ಕಾರಣವಾದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ, ಅವರು ತಂತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುವಂತೆ ಒತ್ತಾಯಿಸುತ್ತಿದ್ದವು. ಹಗರಣಕ್ಕೆ ಕಾರಣರಾದ ವ್ಯಕ್ತಿಗಳ ಪೂರ್ವಾಪರವನ್ನೆಲ್ಲ ದಿನದ ೨೪ ತಾಸೂ ಸುದ್ದಿ ವಾಹಿನಿಯಲ್ಲಿ ಬಿತ್ತರಿಸಿ, ಅವರ ಮಾನ- ಮರ್ಯಾದೆ ಎಲ್ಲವನ್ನೂ ಹರಾಜು ಹಾಕಲಾಗುತ್ತಿತ್ತು. ಆದರೆ, ಇದು ಪತ್ರಿಕೆಗಳೇ ಮಾಡಿದ ವಿಶ್ವ ಕಂಡ ಅತ್ಯಂತ ಅಮಾನವೀಯ ಮತ್ತು ಅನೈತಿಕ ಕಾರ್ಯವಾದರೂ ಸಹ ಸುದ್ದಿ ಮಾಧ್ಯಮ ಜಗತ್ತು ಬಹುತೇಕ ಮೌನವಾಗಿದೆ. ಅದಕ್ಕೆ ಯಾವುದೇ ಪ್ರಖರ ಪ್ರತಿಕ್ರಿಯೆಗಳು ಬರುತ್ತಿಲ್ಲ. ’ದಿ ಗಾರ್ಡಿಯನ್’ ಬಿಟ್ಟು ಬೇರೆ ಯಾವುದೇ ಸುದ್ದಿ ಮಾಧ್ಯಮವೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ.
ರೂಪರ್ಟ್ ಮುರ್ಡೋಕ್ ಸಾಮ್ರಾಜ್ಯ ವಿಶ್ವದಾದ್ಯಂತ ಇರುವ ಕಾರಣ, ಅವರು ತಮ್ಮ ಯಾವುದೇ ಸುದ್ದಿ ಮಾಧ್ಯಮದಲ್ಲಿ ಇದರ ಬಗ್ಗೆ ಹೆಚ್ಚಿಗೆ ಪ್ರಸಾರ ಪ್ರಚಾರ ಆಗದಂತೆ ನೋಡಿಕೊಂಡಿದ್ದಾರೆ. ಹಗರಣವು ಕೇವಲ ಇಂಗ್ಲೆಂಡ್‌ಗೆ ಸೀಮಿತವಾದುದು ಎಂಬಂತೆ ಬಿಂಬಿಸಲಾಗಿದೆ. ಆದರೆ, ಇಡೀ ಹಗರಣವು ಪತ್ರಿಕಾ ಕ್ಷೇತ್ರಕ್ಕೆ ಸಂಬಂಧಿಸಿದುದಾಗಿದೆ. ಮುರ್ಡೋಕ್ ಸಾಮ್ರಾಜ್ಯದ ಇನ್ನೂ ನೂರಾರು ಸುದ್ದಿ ಪತ್ರಿಕೆಗಳು, ಮಾಧ್ಯಮ ಸಂಸ್ಥೆಗಳು ಇಂಥದ್ದೇ ಕೆಲಸ ಮಾಡುತ್ತಿರಬಹುದು. ಬೇರೆ ಪತ್ರಿಕೆಗಳು ಇಂಥದ್ದೇ ಅಥವಾ ಇದೇ ಮಾದರಿಯ ಭಾನಗಡಿಗಳನ್ನು ಮಾಡುತ್ತಿರಬಹುದು. ಆದರೆ, ಅವುಗಳು ಬಹಿರಂಗಗೊಂಡಿಲ್ಲ.
ಬ್ರೂಕ್ಸ್ ಕಡೆ ಬೆರಳು?
’ನ್ಯೂಸ್ ಆಫ್ ದಿ ವರ್ಲ್ಡ್’ ಅಂತಿಮ ಸಂಚಿಕೆ ಭಾನುವಾರ ಬೆಳಿಗ್ಗೆ ಹೊರಬಂದ ನಂತರ ಕೆಲಸ ಕಳೆದುಕೊಂಡ ೨೦೦ ಜನ ಪತ್ರಕರ್ತರು ಪತ್ರಿಕೆಯ ಮಾಜಿ ಸಂಪಾದಕಿ ರೆಬೆಕ್ಕಾ ಬ್ರೂಕ್ಸ್ ಕಡೆ ಬೆರಳು ತೋರಿಸುತ್ತಿದ್ದಾರೆ. ಈ ಹಗರಣದಲ್ಲಿ ಭಾಗಿಯಾದವರೆಲ್ಲರೂ ಇದೀಗ ಪತ್ರಿಕೆಯಲ್ಲಿಲ್ಲ. ಆದರೆ, ೧೬೮ ವರ್ಷಗಳ ಪತ್ರಿಕೆಯೊಂದನ್ನು ಮುಚ್ಚುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಹಲವು ಉದ್ಯೋಗಿಗಳು ಮುರ್ಡೋಕ್‌ರ ಪತ್ರಿಕೆ ಮುಚ್ಚುವ ನಿರ್ಧಾರದ ವಿರುದ್ಧ ಕಿಡಿಕಾರಿದರು.
ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿರುವ ಪತ್ರಿಕಾ/ಮಾಧ್ಯಮ ರಂಗವು ಇಷ್ಟೊಂದು ಪ್ರಮಾಣದಲ್ಲಿ ದಿವಾಳಿಯೆದ್ದು, ಪತ್ರಿಕೋದ್ಯಮದ ನೀತಿ ನಿಯಮಗಳನ್ನೆಲ್ಲ ಗಾಳಿಗೆ ತೂರಿದ್ದು ದೊಡ್ಡ ದುರಂತವೇ ಸರಿ.