ಏಕೆ ಬೇಕು ಮುಖಮಂಡಲ?

ಫೆಬ್ರವರಿ 18, 2009

ಮುಖವೇಕೆ?

ಎಲ್ಲೂ, ಮತ್ತೆಲ್ಲೂ ನಿಲ್ಲದೇ

ಓಡಲೆರಡು ಕಾಲುಗಳು

ಕಂಡದ್ದನ್ನೆಲ್ಲ ತಿನ್ನಲೊಂದು

ಸದಾ ಹಸಿದ ಹೊಟ್ಟೆ

ಬೇಡಲೆರಡು- ಕೊಡದಿರೆ

ಕಸಿಯಲೆರಡು ಕೈಗಳು

ಹೊಗಳಲು, ಹೊಗಳಿ ಬೇಳೆ

ಬೇಯಿಸಿಕೊಳ್ಳಲು

ಸದಾ ಸಿದ್ಧವಾದ ನಾಲಿಗೆ

ಇವಿಷ್ಟಿದ್ದರೆ ಸಾಕು! ಈ ನಗರದ

ಮನುಷ್ಯನಿಗೆ

ಮುಖವೇಕೆ ಬೇಕು?

-ವೀರಣ್ಣ ಕಮ್ಮಾರ

Advertisements

ಇನ್ನೆಲ್ಲಿಯ ನೆನಪು?

ಫೆಬ್ರವರಿ 18, 2009

ಇನ್ನೆಲ್ಲಿಯ ನಿನ್ನ ನೆನಪು?

ಗೆಳತಿ,
ಕಡುರಾತ್ರಿಯಾಗಿದೆ
ಮುದ ನೀಡಲೊಲ್ಲದು ಬೆಳದಿಂಗಳು
ಸುಳಿ ಸುಳಿದ ಬೀಸುವ ತಂಗಾಳಿ
ಅಲೆ ಅಲೆಯ ಮೊರೆತಗಳಲಿ
ಬರಲೊಲ್ಲದ ನಿನ್ನ ನೆನಪು!

ಮೌನ ಗರ್ಭದಲಿ ಹುದುಗಿದ
ನಿನ್ನ ಸ್ಮೃತಿಗಳ ಮೇಲೆ
ಬರೆ ಹಾಕಿ ಬಿಟ್ಟಿವೆ
ಹಾರ್ಗರೆವ ವಿಮಾನಗಳರ್ಭಟ
ಸಿಡಿ ಗುಂಡುಗಳ ಸದ್ದು
ಲಾಠಿ ಬೂಟುಗಳ ಕರ್ಕಶ ಶಬ್ದ ||

ಎಲ್ಲೋ ಚೀತ್ಕರಿಸಿದ
ಇನ್ನೆಲ್ಲೋ ಪೂತ್ಕರಿಸಿದ
ಗೋರಿಯಲ್ಲೂ ನಡುಗುವ
ಹೆಣಗಳ ನಡುವೆ
ಒಣಗಿದೆ ಬಿಸಿಯುಸಿರ ರಕ್ತ ||

ಪೊತ್ತು ಹೆತ್ತವರನೇ ಇರಿವ
ಕೂಡಿ ಆಡಿದವರನೊರೆವ
ಕಲ್ಲು ಕಬ್ಬಿಣ ಸಿಮೆಂಟ್ ಗಾರೆಯ
ಧಮನಿಗಳಲಿ ಹರಿಯುತಿದೆ ವಿತ್ತ ರಕ್ತ! ||

ಎಲ್ಲೂ ಕಾಣಿಸುತ್ತಿಲ್ಲ ಮುಖ ಮಾಣಿಕ್ಯ
ಬರೀ ಕೈ-ಕಾಲು, ಚಾಚಿದ ನಾಲಿಗೆ
ಥಕ ಥೈ ಥೈ ತೊನೆವ ಓಳಾಟ
ತೆರೆ ಸರಿದ ಬಿರು ಬಿರಿದ ರಾತ್ರಿಗಳಲಿ…
ಇನ್ನೆಲ್ಲಿಯ ನಿನ್ನ ನೆನಪು? ||

-ವೀರಣ್ಣ ಕಮ್ಮಾರ


ಕೆಂಪು ಪತ್ರ

ಫೆಬ್ರವರಿ 9, 2009

blood-letter

ಕೆಂಪು ಪತ್ರ

ಹೇ ಹೇ! ಹೇಗೆ ಬರೆದೆ?
ರಕುತದೀ ಪತ್ರ?
ನಿನ್ನದೇ ಮಾಂಸದೊಳಗಿಂದ
ಎದ್ದು ಬಿದ್ದು ಎದ್ದೋಡಿ ಬಂದದ್ದೇ?
ಎದೆಯ ಕದವ ತೆರೆದು ಬಂತೇ ಈ ರಕುತ?

ಅಥವಾ…? ಅಥವಾ…!!

ಹೆಡೆ ಎತ್ತಿದ ಕೋವಿಗಳಿಂದ
ಅರೆಹೊಟ್ಟೆಯ ಭಿಕ್ಷುಗಳಿಂದ
ಖೊಟ್ಟಿ ನಶೀಬದ ಒಡಲಿನಿಂದ
ಹರಿಹರಿದೋಡಿ ಬಂತೇ…?

ಹಣೆಗೆ ಬಣ್ಣದ ಬಟ್ಟೆ ಕಟ್ಟಿದವರಿಂದ
ಹಣ- ಆಯುಧ ಝಳಪಿಸುವವರಿಂದ
ಮನವಿಲ್ಲದ ಅಮಾನವೀಯ ಗನ್‌ಗಳಿಂದ
ಸಿಡಿ-ಸಿಡಿದು ಬಂತೇ ಲೀಟರ್‌ಗಟ್ಟಲೇ…?

ಬ್ಲೂಲೈನ್ ಟೈರುಗಳ ಸಂದಿಯಿಂದ
ಒಕ್ಕಲೆಬ್ಬಿಸಿದ ಹಕ್ಕಲುಗಳಿಂದ
ನೆತ್ತರು ತುಂಬಿದ ಕಂಗಳಿಂದ
ಒಡೆದು ಹರಿದು ಬಂತೇ ಮಸಿಯಾಗಿ…?

ಕಿತ್ತೊಗೆದ ಸೆರಗುಗಳಡಿಯಿಂದ
ಕತ್ತರಿಸುರುಳಿದ ಪೇಟಗಳ ಕತ್ತುಗಳಿಂದ
ಮೇಲೆಮೇಲೇರಿದ ಬಾವುಟಗಳಡಿಯಿಂದ
ಕುದಿಕುದಿದು ಬಂತೇ…?

ಹೇಗೆ ಬಂತಿದು?
ಬಮಿಯಾನ್ ಬುದ್ಧನ ತಲೆಯಿಂದ
ಗಾಜಾಪಟ್ಟಿಯ ನರಮೇಧದಿಂದ
ಉರುಳಿಬಿದ್ದ ಕೋಟೆ ಕೊತ್ತಲು, ಕಟ್ಟಡ
ಗಳ ಅವಶೇಷಗಳಡಿಯಿಂದ.. ಬಂತೇ?

-ವೀರಣ್ಣ ಕಮ್ಮಾರ


ನಿನ್ನ ಕರೆಗೆ ಓಗೊಡಲೇ?

ಫೆಬ್ರವರಿ 9, 2009

picasso

ನಿನ್ನ ಕರೆಗೆ ಓಗೊಡಲೇ?

ನೂರು ನೋಂಪಿನಲಿ
ಸಾವಿರ ಸೊಂಪಿನಲಿ
ನಾ ಕಾಣ್ವ ನೆನಪಿನಲಿ
ನಿನ್ನದೇ ಝಳಪು!

ಸೊರಗಿದ ಯಮುನೆಯಲಿ
ಕೊಳೆತು ಬೇಯುವ ಗಂಗೆಯಲಿ
ಕರಗುವ ಕಣಿವೆಗಳಲಿ
ಇಣುಕುವುದು ನಿನ್ನದೇ ಹರವು!

ಸುರಿವ ಬೇಸಿಗೆಯಲಿ
ಸುಡುಸುಡುವ ಬೇಗೆಯಲಿ
ಮೊರೆಯದ ಮೋಡಗಳಲಿ
ಕರೆಯುತ್ತವೆ ನಿನ್ನವೇ ಕರಗಳು!!

ಮೂಕವಾಗಿವೆ ಉಲಿವ ಹಕ್ಕಿಗಳು
ನರಕವಾಗಿದೆ ಎದೆ ಬಯಲು

ವೀರಣ್ಣ ಕಮ್ಮಾರ
||


ಕತ್ತಲೆಯ ದಾರಿ!

ಫೆಬ್ರವರಿ 7, 2009

darkness

ಕತ್ತಲೆಯ ದಾರಿ!

ತಳಮಳಿಸಿ, ಹಳಹಳಿಸಿ
ಒಳ ಒಳಗೆಳೆದುಕೊಂಡು
ಸುತ್ತೊ ಯಂತ್ರದಂತೆ
ಹೊರ ಬಿಡುವ ಬಿಸಿಯುಸಿರಿಗೆ
ನಾಳೆಯ ನೂರು ಚಿಂತೆಗಳ ಬೆಂಕಿ!

ಎಲ್ಲೆ ಮೀರಿ ತಿರು ತಿರುಗಿದರೂ
ಎಲ್ಲ ಸವೆ ಸವೆಸಿದರೂ
ಹೆಣ ಬಾರವೆಲ್ಲ ಹೊದ್ದರೂ
ಮೆಟ್ಟಬಾರದ್ದನ್ನೆಲ್ಲ ಗೆದ್ದರೂ
ಚರ್ಮದ ಚೀಲದಲಿ ಆರದ ಆವಿ!

ಕೋಟಿ ಕೋಡಿಗಳ ಹಾಯ್ದರೂ
ಕೆಂಡದುಂಡೆಗಳ ಮೆದ್ದರೂ
ಎದೆ ಏರಿಸಿ ಗಾಣ ತಿರುಗಿಸಿದರೂ
ನೂರು ಬಾಣಗಳ ಮೆಟ್ಟಿ ಎಸೆದರೂ
ಮುಟ್ಟಲಾಗದು ಬೇಡಿಕೆಯ ಪರಿ!

ನರ ನರಗಳ ನಾಡಿಯನರಿಯದೆ
ದಿಕ್ಕು ದಿಕ್ಕಿಗೂ ಹಣಿಕಿ ಹಾಕುತ್ತ
ಬೇಯುತ್ತ, ಕಣ್ಣ ಹನಿ ಜಿನುಗಿಸುತ್ತ
ಎಲ್ಲಿಂದೆಲ್ಲಿಗೋ ಪಯಣ!

ಕತ್ತಲೆಯ ದಾರಿ! ಹೆಡ್ ಲೈಟಿಲ್ಲದ ಪಯಣ!
ಕಂಡರೂ ಕಾಣದೀ ಮುಗಿಯದ ಹಾದಿ!

ವೀರಣ್ಣ ಕಮ್ಮಾರ
* * *


ಸೀಳಿದ ಬಿಂದಿಗೆ!

ಜನವರಿ 26, 2009

pots

ಸೀಳಿದ ಬಿಂದಿಗೆ

ಸುಂದರ ಹಸಿರು ಬೆಟ್ಟಗಳು. ರಸ್ತೆಯ ಅಕ್ಕ ಪಕ್ಕದಲ್ಲಿ ನಳನಳಿಸುವ ಗಿಡ ಮರ ಬಳ್ಳಿಗಳು. ಎಲ್ಲಿಂದಲೋ ಕೇಳಿ ಬರುವ ಪಕ್ಷಿಗಳ ಚಿಲಿಪಿಲಿ ನಿನಾದ. ಚೀನಾದ ಅಜ್ಜಿ ಬಿದಿರು ಕೋಲಿನ ಎರಡು ಕೊನೆಗಳಿಗೆ ಹಗ್ಗ ಕಟ್ಟಿ, ಹಗ್ಗಕ್ಕೆ ಮಣ್ಣಿನ ಎರಡು ಹೊಸ ಬಿಂದಿಗೆಗಳನ್ನು ಕಟ್ಟಿಕೊಂಡು, ಬಿದಿರು ಕೋಲನ್ನು ಹೆಗಲ ಮೇಲೆ ಇಟ್ಟುಕೊಂಡು, ನೀರಿಗೆ ಹೋಗುತ್ತಿದ್ದಳು.
ಪ್ರಕೃತಿ ಮಡಿಲಿನಲ್ಲಿ ಪ್ರಶಾಂತವಾಗಿರುವ ತನ್ನ ಮನೆಯಿಂದ ಆ ಅಜ್ಜಿ ಪ್ರತಿ ದಿನವೂ ಹೀಗೆ ಕೋಲಿಗೆ ನೇತುಬಿದ್ದ ಮಡಿಕೆಗಳನ್ನು ಹೊತ್ತುಕೊಂಡು ಹತ್ತಿರದ ನದಿಗೆ ನೀರು ತರಲು ಹೋಗುತ್ತಿದ್ದುದು ತಪಸ್ಸಿನಂತಿತ್ತು.
ಅದೊಂದು ದಿನ ಅಜ್ಜಿ ಎರಡು ಹೊಸ ಬಿಂದಿಗೆಗಳನ್ನು ತಂದಳು. ಜುಳು ಜುಳು ಹರಿಯುವ ನದಿಗೆ ಅತ್ಯಂತ ಸಂಭ್ರಮದಿಂದ ಇಳಿದು ಹೊಸ ಬಿಂದಿಗೆಗಳನ್ನು ನೀರು ತುಂಬಲು ಅಜ್ಜಿ ಮುಂದಾದಳು. ಆದರೆ, ಆಶ್ಚರ್ಯ! ಆಗಲೇ ಒಂದು ಬಿಂದಿಗೆ ಸ್ವಲ್ಪ ಸೀಳಿ ಬಿಟ್ಟಿದೆ. ಅದನ್ನು ಆಚೆ ಈಚೆ ಹೊರಳಿಸಿ, ನಿರ್ವಿಕಾರ ಭಾವನೆಯಿಂದ ನೋಡಿದ ಅಜ್ಜಿ ಏನೂ ಲೊಚಗುಡಲಿಲ್ಲ. ಬಿಂದಿಗೆಗಳನ್ನು ತುಂಬುವಾಗ ಡುಬು ಡುಬು ನೀರಿನ ಸದ್ದು ಕೇಳಿ ಮತ್ತಷ್ಟು ಉಲ್ಲಸಿತಳಾಗಿ ಎರಡೂ ಬಿಂದಿಗೆಗಳನ್ನು ತುಂಬಿಕೊಂಡು ತನ್ನ ಕೋಲಿಗೆ ಅವುಗಳನ್ನು ಕಟ್ಟಿಕೊಂಡು ಎಡ-ಬಲಕ್ಕೆ ಬರುವಂತೆ ಹೆಗಲ ಮೇಲಿಟ್ಟುಕೊಂಡು ಹೊರಟಳು. ಸ್ವಲ್ಪ ಸೀಳಿದ್ದ ಬಿಂದಿಗೆಯನ್ನು ತನ್ನ ಎಡಡೆಗೆ ಬರುವಂತೆ ನೋಡಿಕೊಂಡಿದ್ದಳು.
ನದಿಯಿಂದ ಮನೆಗೆ ಬರುವಷ್ಟರಲ್ಲಿ ಸೀಳಿದ್ದ ಬಿಂದಿಗೆಯಿಂದ ಅರ್ಧಕ್ಕರ್ಧ ನೀರು ಸೋರಿ ಹೋಗಿತ್ತು. ಆದರೆ, ಇನ್ನೊಂದು ಬಿಂದಿಗೆಯ ತುಂಬ ಒಂದು ಹನಿ ನೀರು ಬಿದ್ದಿರಲಿಲ್ಲ.
ಅಜ್ಜಿ ಮತ್ತು ಈ ಬಿಂದಿಗೆಗಳ ಸಹವಾಸ ಹೀಗೆಯೇ ಮುಂದುವರಿಯಿತು. ಅಜ್ಜಿ ಎಂದೂ ಸೀಳಿದ್ದ ಬಿಂದಿಗೆಯನ್ನು ಕಡಿಮೆ ಎಂದು ಭಾವಿಸಲಿಲ್ಲ. ತನ್ನ ಬಿದಿರು ಕೋಲಿನ ತಕ್ಕಡಿಯಲ್ಲಿ ಎರಡೂ ಬಿಂದಿಗೆಗಳಿಗೂ ಸಮಾನ ಅವಕಾಶ ಕೊಟ್ಟಿದ್ದಳು. ಸೋರಿ ಹೋಗುವ ಕೊಡ ಅರ್ಧ ಮಾತ್ರ ನೀರನ್ನು ಕೊಡುತ್ತದೆ ಎಂದು ಅರ್ಧ ನೀರನಷ್ಟೇ ಅದರಲ್ಲಿ ತುಂಬುತ್ತಿರಲಿಲ್ಲ. ಪೂರ್ತಿ ನೀರನ್ನು ತುಂಬುತ್ತಿದ್ದಳು. ಸೋರಿದರೆ ಸೋರಲಿ- ಏನೀಗ? ಎಂಬಂಥ ಭಾವ ಅಜ್ಜಿಯದು.
ಆದರೆ, ಎರಡೂ ಬಿಂದಿಗೆಗಳ ನಡುವೆ ಮೇಲು ಕೀಳುತನ ಬೆಳೆಯಿತು. ಪೂರ್ತಿ ನೀರನ್ನು ತುಂಬಿಕೊಂಡು ಹೋಗುತ್ತಿದ್ದ ಬಿಂದಿಗೆ ಹೆಮ್ಮೆಯಿಂದ ಬೀಗುತ್ತಿತ್ತು. ಅರ್ಧ ಮಾತ್ರ ನೀರನ್ನು ಮನೆವರೆಗೆ ಕೊಂಡೊಯ್ಯುತ್ತಿದ್ದ ಬಿಂದಿಗೆ ಅವಮಾನದಿಂದ ಕುಗ್ಗುತ್ತಿತ್ತು. ಅದು ನಾಚಿಕೆಯಿಂದ ತಲೆ ತಗ್ಗಿಸಿಕೊಳ್ಳುತ್ತಿತ್ತು. ತಾನು ಇಡೀ ಕೊಡದ ತುಂಬ ನೀರನ್ನು ತರಲು ನಿರ್ಮಾಣಗೊಂಡಿದ್ದೇನೆ. ಆದರೆ, ಕೇವಲ ಅರ್ಧ ನೀರನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಇದು ನನಗೆ ಅವಮಾನ! ನನ್ನ ಕುಲಕ್ಕೆ ಅವಮಾನ! ಎಂದು ಆ ಸೀಳಿಹೋಗಿದ್ದ ಬಿಂದಿಗೆ ವೇದನೆ ಪಡುತ್ತಿತ್ತು.
ಅಂದು ಅಜ್ಜಿ ನೀರು ತರಲೆಂದು ಹೆಜ್ಜೆ ಇಡುತ್ತಿದ್ದಳು. ಪಕ್ಕದಲ್ಲಿ ಯಾರೋ ನಿಧಾನವಾಗಿ ಮಾತಾಡಿದ ಹಾಗಾಯಿತು. ಅಜ್ಜಿ ಅತ್ತಿತ್ತ ನೋಡಿದಳು. ಆದರೆ, ಯಾರೂ ಹತ್ತಿರದಲ್ಲಿ ಕಾಣಿಸಲಿಲ್ಲ. ಮತ್ತೆ ಧ್ವನಿ ಬಂದತ್ತ ನೋಡಿದಳು. ತನ್ನ ಎಡ ಪಕ್ಕದ ಬಿಂದಿಗೆ ಮಾತಾಡುತ್ತಿತ್ತು. ಅದು ನಿಧಾನಕ್ಕೆ ಹೇಳಿತು- ಅಜ್ಜಿ, ನಾನು ಸೀಳಿ ಹೋದ ಬಿಂದಿಗೆ. ನಾನು ತುಂಬ ನೀರನ್ನು ತೆಗೆದುಕೊಂಡು ಹೋಗಲು ಅಶಕ್ತ. ನನ್ನಿಂದ ನೀರಿನಲ್ಲಿ ಅರ್ಧದಷ್ಟು ಸೋರಿ ಹೋಗುತ್ತದೆ. ಇದು ನನಗೆ ಹಿಂಸೆ ಎನಿಸುತ್ತದೆ. ಆದರೂ ನೀನು ಯಾಕೆ ಛಲ ಬಿಡದ ತ್ರಿವಿಕ್ರಮನಂತೆ ನನ್ನನ್ನೇ ಹೊತ್ತುಕೊಂಡು ಹೋಗುತ್ತೀಯಾ?
ಅಜ್ಜಿ ನಸು ನಕ್ಕಳು. ಬಿಂದಿಗೆಗೆ ಇನ್ನೂ ಅವಮಾನವಾದಂತಾಯಿತು. ಅಜ್ಜಿ ಬಿಂದಿಗೆಗಳನ್ನು ಕೆಳಗೆ ಇಳಿಸಿ, ಸೀಳಿ ಹೋದ ಬಿಂದಿಗೆಯತ್ತ ನೋಡುತ್ತ ’ದಾರಿಯಲ್ಲಿ ನೋಡಿದೆಯಾ? ನೀನಿರುವ ಕಡೆಯಲ್ಲಿ ಎಷ್ಟೊಂದು ಹೂವುಗಳು ಬೆಳೆದಿವೆಯಂತ? ಇನ್ನೊಂದು ಕಡೆಯ ರಸ್ತೆ ಬದಿಯಲ್ಲಿ ನೋಡು ಅಲ್ಲಿ ಹೂವುಗಳೇ ಬೆಳೆದಿಲ್ಲ.’
ಸೀಳು ಬಿಂದಿಗೆ ಮೂಕವಿಸ್ಮಿತವಾಯಿತು. ಹೌದಲ್ಲ! ಎಂದುಕೊಂಡಿತು. ಅಜ್ಜಿ ಮಾತು ಮುಂದುವರಿಸಿದಳು. ’ನನಗೆ ಮೊದಲ ದಿನವೇ ನೀನು ಸೀಳು ಬಿಂದಿಗೆ ಎಂಬುದು ಗೊತ್ತಾಯಿತು. ಆದ್ದರಿಂದ ಮರು ದಿನದಿಂದಲೇ ನೀನಿರುವ ಕಡೆ ಹೂವಿನ ಸಸಿಗಳನ್ನು ನೆಡಲು ಪ್ರಾರಂಭಿಸಿದೆ. ಪ್ರತಿ ದಿನ ನಾನು ನಿನ್ನನ್ನು ಹೊತ್ತುಕೊಂಡು ಹೋಗುವಾಗ ನಿನ್ನಿಂದ ನೀರು ಸೋರಿ ಆ ಗಿಡಗಳಿಗೆ ಬಿದ್ದಿದೆ. ಅವುಗಳೆಲ್ಲ ನೀನು ಪ್ರತಿ ದಿನವೂ ಸುರಿಸುವ ನೀರಿಗಾಗಿಯೇ ಭಗೀರಥನಂತೆ ಕಾಯುತ್ತಿದ್ದವು. ನೀನುಣಿಸಿದ ನೀರನ್ನುಂಡು ಅವುಗಳೆಲ್ಲ ಎಷ್ಟೊಂದು ಸೊಗಸಾಗಿ ಬೆಳೆದಿವೆ ನೋಡು. ಅವುಗಳಲ್ಲಿ ಈಗ ಸಾಕಷ್ಟು ಹೂವುಗಳು ಬೆಳೆದಿವೆ. ಆ ಸುಂದರ, ಸುಗಂಧಭರಿತ ಹೂವುಗಳನ್ನು ನಾನು ದಿನವೂ ತೆಗೆದುಕೊಂಡು ಹೋಗಿ ಮನೆಯಲ್ಲಿ ಅಲಂಕರಿಸುತ್ತೇನೆ. ಇಷ್ಟು ದಿನಗಳಿಂದಲೂ ಅವು ನನಗೆ ಅಪಾರ ಸಂತಸ ನೀಡುತ್ತಿವೆ. ನೀನು ಕೂಡ ಉತ್ತಮ ಕೊಡವೇ ಆಗಿದ್ದು, ಒಂದಿನಿತೂ ನೀರನ್ನು ಚೆಲ್ಲದೇ ಹೋಗಿದ್ದರೆ, ಇಲ್ಲಿ ಈ ಹೂವುಗಳೇ ತಲೆ ಎತ್ತುತ್ತಿರಲಿಲ್ಲ. ನಾನು ಅವುಗಳನ್ನು ಪ್ರತಿದಿನವೂ ಮನೆತುಂಬ ಅಲಂಕರಿಸುತ್ತಲೂ ಇಲ್ಲ’.

’ಪ್ರತಿಯೊಬ್ಬರಿಗೂ ಅವರದೇ ಆದ ಕುಂದು ಕೊರತೆ ಇರುತ್ತದೆ. ನಿನಗೆ ಅದು ಆ ಸೀಳಿನ ರೂಪದಲ್ಲಿ ಇದೆ. ಇನ್ನೂ ಅನೇಕರಿಗೆ ಬೇರೆ ಬೇರೆ ರೂಪದಲ್ಲಿರುತ್ತದೆ. ಇಂತಹ ಸೀಳು, ಅಂತಹ ಕೊರತೆಗಳೇ ನಮ್ಮನ್ನು ಅತ್ಯಂತ ವಿಶಿಷ್ಟವನ್ನಾಗಿ ಮಾಡುತ್ತವೆ; ಅವುಗಳೇ ನಮಗೆ ಸಾಕಷ್ಟು ಪುರಸ್ಕಾರಗಳನ್ನು ಮರ್ಯಾದೆಯನ್ನು ತಂದುಕೊಡುತ್ತವೆ ಎಂಬುದನ್ನು ಮರೆಯಬೇಡ’

ಅಜ್ಜಿಯ ಮಾತಿನಿಂದ ಆನಂದ ತುಂದಿಲವಾದಂತೆ ಕಂಡು ಬಂದ ಬಿಂದಿಗೆಯು ಅಜ್ಜಿಯನ್ನು ಆದರತೆಯಿಂದ ನೋಡುತ್ತಿತ್ತು. ಅಜ್ಜಿ ಮಾತು ಮುಂದುವರಿಸಿದಳು.
’ನಾವು ಪ್ರತಿಯೊಬ್ಬ ವ್ಯಕ್ತಿಗಳನ್ನು ಅವರೇನಾಗಿದ್ದಾರೆ ಮತ್ತು ಅವರಲ್ಲಿ ಯಾವ ಒಳ್ಳೆಯ ಗುಣಗಳಿವೆ ಎಂಬುದನ್ನು ಹುಡುಕಬೇಕು. ಒಳ್ಳೆಯತನವನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹಿಸಬೇಕು’ ಎಂದು ಹೇಳುತ್ತಿದ್ದಂತೇ ಸೀಳು ಬಿಂದಿಗೆ ಕೂಗಿ ಹೇಳಿತು- ’ಓ ನನ್ನೆಲ್ಲ ಸೀಳು ಬಿಂದಿಗೆಗಳೇ, ನಮಗಿರುವುದು ಒಂದು ಕೊರತೆ ಎಂದು ಭಾವಿಸಬೇಡಿ. ಅದು ನಮ್ಮ ವಿಶೇಷ ಗುಣ. ಇಂತಹ ಒಳ್ಳೆಯ ಮತ್ತು ವಿಶೇಷ ಗುಣಗಳನ್ನು ಇತರಲ್ಲಿದ್ದರೆ ಅವುಗಳನ್ನು ಪತ್ತೆ ಹಚ್ಚಿರಿ ಮತ್ತು ಅದಕ್ಕೆ ಪ್ರೋತ್ಸಾಹವನ್ನು ನೀಡಿರಿ. ಬಿಂದಿಗೆಯಲ್ಲಿ ಸೀಳಿದ್ದರೆ ಅದರಿಂದ ಒಳ್ಳೆಯ ಹೂವುಗಳು ಬರಲು ಸಾಧ್ಯವಿದೆ, ಎಲ್ಲರೂ ಉತ್ತಮ ಸುಗಂಧವನ್ನು ಸವಿಯಲು ಸಾಧ್ಯವಿದೆ’!
ಆ ಕ್ಷಣದಲ್ಲಿ ಎಲ್ಲೆಲ್ಲಿಯೋ ಅಡಗಿದ್ದ ಕುಂದು ಕೊರತೆಗಳಿದ್ದ ನೂರಾರು ಬಿಂದಿಗೆಗಳು ಅಲ್ಲಿ ಸೇರಿದವು. ತಮ್ಮತನವನ್ನು ಸಾರಲು ಅವು ಎಲ್ಲ ದಿಕ್ಕುಗಳಿಗೂ ಹೊರಟವು.

* * *
ಇದು ಇಂಟರ್ ನೆಟ್ ಕತೆ

e mail: veerannakumar@gmail.com


ಇ-ಮೇಲ್ ಇಲ್ಲದ ಯುವಕ

ಜನವರಿ 26, 2009

mail ಆ ಯುವಕನ ಮನೆಯ ತುಂಬೆಲ್ಲ ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆಗಳು. ಕಾಲು ಚಾಚಿದರೆ ತೊಡರುಕೊಳ್ಳುತ್ತಿದ್ದವು. ಅಂಥವುಗಳಿಂದ ಹೊರ ಬರಬೇಕೆಂದರೆ ಒಂದೇ ದಾರಿ- ಅದು ಉದ್ಯೋಗವನ್ನು ಹುಡುಕುವುದು ಎಂದು ನಿರ್ಧರಿಸಿದ ಆತ ಅಂದಿನ ಪತ್ರಿಕೆಗಳ ’ಸಿಚುವೇಷನ್ ವೆಕೆಂಟ್’ ಕಾಲಂನತ್ತ ಕಣ್ಣು ಹಾಯಿಸಿದ. ವಿಶ್ವ ವಿಖ್ಯಾತ ಮೈಕ್ರೊಸಾಫ್ಟ್ ಕಂಪೆನಿಯಲ್ಲಿ ’ಆಫೀಸ್ ಬಾಯ್’ ಹುದ್ದೆಗೆ ಕರೆ ಮಾಡಿದ್ದರು. ತಕ್ಷಣ ಅದಕ್ಕೆ ಅರ್ಜಿ ಗುಜರಾಯಿಸಿದ.
ಅಲ್ಲಿನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮ್ಯಾನೇಜರ್ ಉದ್ಯೋಗಾಕಾಂಕ್ಷಿಯನ್ನು ಅಡಿಯಿಂದ ಮುಡಿಯವರೆಗೆ ನೋಡಿದ. ಹಲವಾರು ಪ್ರಶ್ನೆಗಳನ್ನು ಕೇಳಿದ. ಕಚೇರಿಯ ನೆಲವನ್ನು ಗುಡಿಸಿ ಒರೆಸಲು ಹಚ್ಚಿದ. ಯುವಕನ ಕೆಲಸದಲ್ಲಿನ ತನ್ಮಯತೆ ಮತ್ತು ಅಚ್ಚುಕಟ್ಟುತನಗಳನ್ನು ಕಂಡು ಮೆಚ್ಚುಗೆ ಕಂಗಳಂದಿ ಆತನನ್ನು ನೋಡಿದ.
’ನಿನ್ನನ್ನು ನಮ್ಮ ಕಚೇರಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಮ್ಯಾನೇಜರ್ ಹೇಳಿದ. ’ನೀನು ನಿನ್ನ ಇ ಮೇಲ್ ವಿಳಾಸ ಕೊಡು. ಕೂಡಲೇ ನಾನು ನಿನಗೆ ಅರ್ಜಿ ಫಾರ್‍ಮ್ ಕಳುಹಿಸಿಕೊಡುತ್ತೇನೆ. ನೀನು ಅದರಲ್ಲಿಯೇ ಅರ್ಜಿ ಭರ್ತಿ ಮಾಡಿಕೊಡಬೇಕು. ನಂತರ ನಾನು ನಿನಗೆ ಇ ಮೇಲ್‌ನಲ್ಲಿ ನೇಮಕಾತಿ ಪತ್ರ ಕಳುಹಿಸಿಕೊಡುತ್ತೇನೆ. ಅದರಲ್ಲಿ ನೀನು ಯಾವತ್ತಿನಿಂದ ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ದಿನಾಂಕ ಮತ್ತು ವೇಳೆಯನ್ನು ನಮೂದಿಸಿರುತ್ತೇವೆ. ಆ ದಿನ ಬಂದು ಕೆಲಸಕ್ಕೆ ಹಾಜರಾದರೆ ಸಾಕು’ ಎಂದ.
’ಆದರೆ… ’, ಆ ಯುವಕ ತಡವರಿಸಿ ಹೇಳಿದ. ’ಆದರೆ, ನನ್ನ ಬಳಿ ಕಂಪ್ಯೂಟರೂ ಇಲ್ಲ; ಇಮೇಲೂ ಇಲ್ಲ’ ಎಂದ.
’ಹಾಗಿದ್ದರೆ ಕ್ಷಮಿಸು’ ಎಂದಬಿಟ್ಟ ಮ್ಯಾನೇಜರ್.
’ನಿನ್ನ ಬಳಿ ಒಂದು ಇ ಮೇಲ್ ಐಡಿ ಇಲ್ಲ ಅಂದರೆ ನೀನು ಈ ಭೂಮಿಯಲ್ಲಿ ಬದುಕಿಲ್ಲವೆಂದೇ ಅರ್ಥ ಅಥವಾ ನಿನ್ನ ಅಸ್ತಿತ್ವವೇ ಇಲ್ಲ ಎಂದರ್ಥ. ಯಾರ ಅಸ್ತಿತ್ವವು ಈ ಭೂಮಿಯಲ್ಲಿ ಇರುವುದಿಲ್ಲವೋ ಅವರಿಗೆ ನಮ್ಮ ಸಂಸ್ಥೆಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ನೀನಿನ್ನು ಹೋಗಬಹುದು’ ಎಂದು ಖಡಾಖಂಡಿತವಾಗಿ ಹೇಳಿದ.
ಆ ಯುವಕ ಕೆಲಸ ಸಿಗುವುದೆಂಬ ತನ್ನ ಆಶಾ ಗೋಪುರ ಕಳಚಿ ಬಿದ್ದುದಕ್ಕಾಗಿ ತೀವ್ರ ದುಃಖಿತನಾಗಿ ಅಲ್ಲಿಂದ ಮನಸ್ಸಿಲ್ಲದ ಮನಸ್ಸಿನಿಂದ ಹೊರಗೆ ಬಂದ. ಎಲ್ಲಿ ಹೋಗುವುದು? ಏನು ಮಾಡುವುದು? ಎಂದು ಚಿಂತಿಸುತ್ತ ಜೇಬಿನಲ್ಲಿ ಹಣಕ್ಕಾಗಿ ತಡಕಾಡಿದ. ೧೦ ಡಾಲರಿನ ಒಂದು ನೋಟು ಇದ್ದುದು ಲಕ್ಷ್ಯಕ್ಕೆ ಬಂದಿತು. ಮತ್ತೆ ಮತ್ತೆ ಅದನ್ನು ಮುಟ್ಟಿ ಮುಟ್ಟಿ ನೋಡಿದ. ಹೌದು ತನ್ನ ಬಳಿ ೧೦ ಡಾಲರ್ ಹಣ ಇದೆ ಎಂದು ಖುಷಿಯಿಂದ ಅಲ್ಲಿಂದ ಹೊರ ಬಂದು, ಹತ್ತಿರದ ಒಂದು ಮಾರುಕಟ್ಟೆಗೆ ಬಂದ. ಟೊಮೆಟೊ ಹಣ್ಣು ತುಂಬಿದ ಕ್ರೆಟ್‌ಗಳು ಕಂಡುಬಂದವು. ತನ್ನ ೧೦ ಡಾಲರ್‌ಗೆ ಎಷ್ಟು ಟೊಮೆಟೊ ಬರುತ್ತದೆ ಎಂದು ಕೇಳಿದ. ೧೦ ಕೆ.ಜಿ. ಟೊಮೆಟೊಗಳ ಒಂದು ಕ್ರೆಟ್ ಸಿಗುತ್ತದೆ ಎಂದು ವಿಚಾರ ಗೊತ್ತಾದ ಕೂಡಲೇ ತನ್ನ ದುಡ್ಡನ್ನೆಲ್ಲ ಕೊಟ್ಟು ಆ ಟೊಮೆಟೊ ಕ್ರೆಟ್ ಕೊಂಡುಕೊಂಡ.
ಆ ಟೊಮೆಟೊ ಕ್ರೆಟ್ ಹಿಡಿದು ಮನೆ ಮನೆ ಅಲೆದು ಟೊಮೆಟೊವನ್ನೆಲ್ಲ ಮಾರಿದ. ಕೇವಲ ಎರಡು ಘಂಟೆಯಲ್ಲಿ ಹತ್ತು ಕೆ.ಜಿ. ಟೊಮೆಟೊ ಮಾರಿದ್ದ. ಅದರಿಂದ ೨೦ ಡಾಲರ್ ಹಣ ಬಂದಿತ್ತು. ತನ್ನ ಬಂಡವಾಳ ಒಂದಿದ್ದದ್ದು ಎರಡು ಪಟ್ಟು ಆಗಿತ್ತು. ಅದೇ ದಿನ ಮತ್ತೆ ಎರಡು ಬಾರಿ ಒಂದೊಂದೊ ಕ್ರೆಟ್ ಟೊಮೆಟೊ ಖರೀದಿಸಿದ. ಒಟ್ಟಾರೆಯಾಗಿ ೬೦ ಡಾಲರ್ ಮತ್ತು ಮೂರು ಖಾಲಿ ಕ್ರೆಟ್‌ಗಳನ್ನು ಸಂಪಾದಿಸಿ ಮನೆಗೆ ನಡೆದ. ರಾತ್ರಿ ಮನೆಯಲ್ಲಿ ಮಲಗಿದಾಗ ತುಂಬ ಸಮಾಧಾನವಾಗಿ ಯೋಚಿಸಿದ. ಈ ರೀತಿ ಮಾಡಿದರೆ ತಾನು ಬದುಕಬಹುದು ಎಂದುಕೊಂಡ. ಕಾಲು ಚಾಚಿದಾಗ ಸಮಸ್ಯೆಗಳೆಲ್ಲ ಸ್ವಲ್ಪ ದೂರ ಹೋಗಿವೆ ಎಂದೆನಿಸಿತು. ಕಣ್ಣು ಮುಚ್ಚಿ ನಿದ್ದೆಹೋದ.
ನೋಡನೋಡುತ್ತಿದ್ದಂತೆಯೇ ತನ್ನ ಈ ವಹಿವಾಟನ್ನು ವಿಸ್ತರಿಸಿದ. ಪ್ರತಿದಿನವೂ ಬೆಳಿಗ್ಗೆ ಬೇಗ ಹೋಗುತ್ತಿದ್ದ. ಸಂಜೆ ತಡವಾಗಿ ಮನೆಗೆ ವಾಪಸಾಗುತ್ತಿದ್ದ. ಪ್ರತಿದಿನವೂ ಆತನ ಹಣ ಎರಡು ಪಟ್ಟು ಮೂರು ಪಟ್ಟು ಹೆಚ್ಚಾಗತೊಡಗಿತು.
ಸ್ವಲ್ಪ ದಿನದಲ್ಲಿಯೇ ಆತ ಒಂದು ಬಂಡಿ ಖರೀದಿಸಿದ. ಅದರಿಂದ ವ್ಯಾಪಾರ ಮಾಡತೊಡಗಿದ. ನಂತರದ ದಿನಗಳಲ್ಲಿ ಒಂದು ಲಾರಿ. ಆಮೇಲೆ ಅಂಥ ಹಲವಾರು ವಾಹನಗಳನ್ನು ಖರೀದಿಸಿ ತನ್ನ ವ್ಯಾಪಾರವನ್ನು ಇಡೀ ನಗರದಾದ್ಯಂತ ವಿಸ್ತರಿಸಿದ. ಆ ಮೇಲೆ ಪಕ್ಕದ ನಗರಗಳಿಗೂ. ಐದು ವರ್ಷಗಳ ನಂತರ ಆತ ಅಮೆರಿಕದ ದೊಡ್ಡ ಆಹಾರ ಉತ್ಪನ್ನಗಳ ರಿಟೇಲರ್‌ಗಳಲ್ಲಿ ಒಬ್ಬನೆನಿಸಿದ.
ಒಂದು ದಿನ ತನ್ನ ಕುಟುಂಬ ಜೀವನವನ್ನು ಅತ್ಯಂತ ಯೋಜನಾಭದ್ಧವಾಗಿ ನಡೆಸಬೇಕು ಎಂದು ತೀರ್ಮಾನಿಸಿ ಜೀವ ವಿಮೆ ಮಾಡಿಸಬೇಕು ಎಂದು ಆತ ಯೋಚಿಸಿ, ಒಬ್ಬ ವಿಮಾ ಏಜೆಂಟ್‌ನನ್ನು ಕರೆಯಿಸಿದ. ಏಜೆಂಟ್‌ನೊಂದಿಗೆ ಯಾವ ಪ್ಲಾನು ಬೇಕೆಂದು ಚರ್ಚಿಸಿ ತೀರ್ಮಾನಿಸಿದ. ಎಲ್ಲ ಮಾತುಕತೆಗಳು ಮುಗಿದ ನಂತರ, ಏಜೆಂಟನು, ನಿಮ್ಮ ಇ ಮೇಲ್ ಐಡಿ ಹೇಳಿ, ವಿವರಗಳನ್ನೆಲ್ಲ ಕಳುಹಿಸುತ್ತೇನೆ’ ಎಂದ. ಅದಕ್ಕೆ ಯುವಕ ’ನನ್ನ ಬಳಿ ಇ-ಮೇಲ್ ಐಡಿ ಇಲ್ಲ’ ಎಂದ.
’ನಿಮ್ಮ ಬಳಿ ಇ ಮೇಲ್ ಐಡಿ ಇಲ್ವಾ? ಮತ್ತೆ ಹೇಗೆ ಇಷ್ಟೊಂದು ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದಿರಿ? ಕೇವಲ ಒಂದು ಇ-ಮೇಲ್ ಐಡಿ ಇಲ್ಲದೆಯೂ ನೀವು ಇಷ್ಟೊಂದು ಹಣ ಸಂಪಾದನೆ ಮಾಡಿದ್ದೀರಿ ಎಂದರೆ ನಂಬಲು ಸಾಧ್ಯವಾಗುವುದಿಲ್ಲ’ ಎಂದು ತನ್ನ ಆಶ್ಚರ್ಯವನ್ನು ತಡೆಯಲಾಗದೇ ಆ ಏಜೆಂಟ್ ಕೇಳಿದ.
ಯುವಕ ತಣ್ಣನೆಯ ದನಿಯಲ್ಲಿ, ’ನನ್ನ ಬಳಿ ಇ-ಮೇಲ್ ಐಡಿ ಇದ್ದಿದ್ದರೆ ನಾನು ಮೈಕ್ರೊಸಾಫ್ಟ್ ಕಚೇರಿಯಲ್ಲಿ ಒಬ್ಬ ’ಆಫೀಸ್ ಬಾಯ್’ ಆಗಿರುತ್ತಿದ್ದೆ. ಅದು ಇಲ್ಲದಿದ್ದುದರಿಂದಲೇ ನಾನು ಇಷ್ಟೆಲ್ಲ ಸಂಪಾದನೆ ಮಾಡಲು ಸಾಧ್ಯವಾಯಿತು’ ಎಂದ. ಏಜೆಂಟ್‌ಗಾದ ಅಚ್ಚರಿಯಿಂದ ಆತನ ಬಾಯಿ ತೆರೆದೇ ಇತ್ತು.

ಇದು ಇಂಟರ್ ನೆಟ್ ಕತೆ
***
e mail: veerannakumar@gmail.com